ಪ್ರಜೆಗಳ ಪರದಾಟ; ಪ್ರಭುಗಳ ಬೃಹನ್ನಾಟಕ

Most read

ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸರಕಾರವೇ ಆಳುತ್ತಿರುವಾಗ ಯಾಕೆ ಪಾಕಿಸ್ತಾನವನ್ನು ಶತ್ರುದೇಶ ಎಂದು ಇಲ್ಲಿಯವರೆಗೂ ಘೋಷಿಸಿಲ್ಲ?. ಮುಸ್ಲಿಂ ಬಾಹುಳ್ಯದ ದೇಶ ಎನ್ನುವ ಕಾರಣಕ್ಕಾಗಿ ಪಾಕಿಸ್ತಾನವನ್ನು ದ್ವೇಷಿಸುವ ಸಮಸ್ತ ಬಿಜೆಪಿಗರು ಹಾಗೂ ಸಂಘದ ನಾಯಕರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಪಾಕಿಸ್ತಾನವನ್ನು ಶತ್ರುರಾಷ್ಟ್ರ ಎಂದು ಘೋಷಿಸುವಂತೆ ಒತ್ತಾಯಿಸಲಿಲ್ಲ?. ಪಾಕಿಸ್ತಾನದ ಪರವಾಗಿ ಯಾರಾದರೂ ಘೋಷಣೆ ಕೂಗಿದರೆ, ಅಂತವರಿಗೆ ದೇಶದ್ರೋಹದ ಅಪರಾಧದಲ್ಲಿ ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೊಳಿಸಲಿಲ್ಲ?- ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇ಼ಷಕರು

ವಿಧಾನಸೌಧದ ಒಳಾಂಗಣದ ಪ್ರಾಂಗಣದಲ್ಲಿ ಫೆ. 27 ರಂದು “ಪಾಕಿಸ್ತಾನ ಜಿಂದಾಬಾದ್” ಘೋಷಣೆ ಕೂಗಿದ ಪ್ರಕರಣ ದಿನದಿನಕ್ಕೆ ರಾಜಕೀಯ ಕೆಸರಾಟಕ್ಕೆ ಕಾರಣವಾಗುತ್ತಲೇ ಇದೆ. ರಾಜ್ಯಸಭೆ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ಸಿನ ನಾಸಿರ್ ಹುಸೇನ್ ರವರ ಗೆಲುವಿನ ಸಂಭ್ರಮಾಚರಣೆಯ ಅಮಲಿನಲಿ ಯಾರೋ ಕೆಲವು ಹಿಂಬಾಲಕರು ನಾಸಿರ್‌ ಸಾಬ್‌ ಜಿಂದಾಬಾದ್ ಜೊತೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದರು ಎಂಬುದೇ ದೊಡ್ಡ ಸುದ್ದಿಯಾಗಿ ಮಾಧ್ಯಮಗಳಲಿ ಮಾರ್ದನಿಸಿತು. ‘ಹಾಗೆ ಯಾರೂ ಕೂಗಿಯೇ ಇಲ್ಲ’ ಎಂದು ಕಾಂಗ್ರೆಸ್ ನಾಯಕರ ವಾದ. ‘ದೇಶವಿರೋಧಿ ಘೋಷಣೆ ಕೂಗಲಾಗಿದ್ದು ಅದನ್ನು ಕಾಂಗ್ರೆಸ್ ಸರಕಾರ ಮುಚ್ಚಿಹಾಕಿ ಮುಸಲ್ಮಾನರ ತುಷ್ಟೀಕರಣ ಮಾಡುತ್ತಿದೆ’ ಎಂಬುದು ಪ್ರತಿಪಕ್ಷಗಳ ಉಗ್ರ ವಿರೋಧ.

ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಕಂಡುಹಿಡಿದು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು, ಗಲ್ಲಿಗೆ ಹಾಕಬೇಕು, ಉಗ್ರ ಶಿಕ್ಷೆ ಕೊಡಿಸ ಬೇಕು ಎಂದು ಹೇಳುವ ಮೂಲಕ ಬಿಜೆಪಿ ಪಕ್ಷದ ನಾಯಕರು ಯಥಾಪ್ರಕಾರ ಜನರಲ್ಲಿ ದೇಶಭಕ್ತಿಯನ್ನು ಕೆರಳಿಸಿ ಧರ್ಮದ್ವೇಷವನ್ನು ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡತೊಡಗಿದರು. ಕಾಂಗ್ರೆಸ್ ಪಕ್ಷದ ಕೆಲವರು, ಸ್ವತಃ ಸಭಾಪತಿ ಖಾದರ್ ಸಾಹೇಬರು ಅಷ್ಟೇ ಯಾಕೆ ಮುಸ್ಲಿಂ ಸಮಾಜದ ಕೆಲವು ಮುಖಂಡರೂ ಜೊತೆಗೆ ಸಮಸ್ತ ಸುದ್ದಿ ಮಾಧ್ಯಮಗಳೂ ಸಹ ದೇಶವಿರೋಧಿ ಘೋಷಣೆ ಕೂಗಿದ್ದು ಸಾಬೀತಾದರೆ ಉಗ್ರ ಶಿಕ್ಷೆ ಕೊಡಬೇಕು ಎಂದು ಹೇಳುತ್ತಾ ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸಿದರು. ಶತ್ರು ದೇಶದ ಪರ ಘೋಷಣೆ ಕೂಗಿದವರ ವಿರುದ್ಧ ಕಾನೂನಾತ್ಮಕ ವಿಚಾರಣೆಗೆ ಮುನ್ನವೇ ಇವರೆಲ್ಲಾ ಶಿಕ್ಷೆಯನ್ನೂ ನಿರ್ಧರಿಸಿ ಕೂಡಲೇ ಜಾರಿಗೆ ಮಾಡಬೇಕೆಂದು ಆಗ್ರಹಿಸತೊಡಗಿದರು.

ಆದರೆ.. ಈ ಯಾರಿಗೂ ಸಹ ಕಾನೂನಿನ ಅರಿವು ಇಲ್ಲವೆಂಬುದೇ ಸಮಕಾಲಿನ ದುರಂತ. ಈ ದೇಶದಲ್ಲಿ ಸಂವಿಧಾನ ಎನ್ನುವುದು,  ಕಾನೂನು ಎಂಬುದು ಈ ರಾಜಕೀಯ ಪಕ್ಷ, ಆ ಸುದ್ದಿ ಮಾಧ್ಯಮಗಳೆಲ್ಲವನ್ನೂ ಮೀರಿದ್ದು. ಅದಕ್ಕೆ ತನ್ನದೇ ಆದ ನೀತಿ ನಿಯಮಗಳಿವೆ. ಅವುಗಳನ್ನು ಅರ್ಥ ಮಾಡಿಕೊಳ್ಳದೆ ಜನರಲ್ಲಿ ಭಾವಪ್ರಚೋದನೆ ಮಾಡುವುದೇ ಕಾನೂನಾತ್ಮಕವಾದ ಅಪರಾಧ.‌

ಇಷ್ಟಕ್ಕೂ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವುದು ಭಾರತ ದೇಶದಲ್ಲಿ ಶಿಕ್ಷಾರ್ಹ ಅಪರಾಧವೇ? ಇಲ್ಲಾ,  ಹಾಗಂತಾ ಯಾವುದೇ ಕಾನೂನು ಇಲ್ಲ. ಹಾಗೆ ಕೂಗಿದವರಿಗೆ ಉಗ್ರ ಶಿಕ್ಷೆ ಕೊಡುವ ಇಲ್ಲವೇ ಗಲ್ಲಿಗೆ ಹಾಕುವ ಅವಕಾಶ ಕಾನೂನಲ್ಲಿ ಇದೆಯಾ? ಸಾಧ್ಯವೇ ಇಲ್ಲ.

ಈ ಹಿಂದೆ ದೇಶವಿರೋಧಿ ಘೋಷಣೆ ಕೂಗಿದ್ದಾರೆಂದು ಆರೋಪಿಸಲಾದ ದೆಹಲಿಯ ಜೆ ಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಕನ್ನಯ್ಯಕುಮಾರ್ ಮೇಲೆ ಬಿಜೆಪಿ ದೇಶದ್ರೋಹದ ಆರೋಪ ಮಾಡಿದ್ದರಿಂದ ಬಂಧಿಸಲಾಗಿತ್ತಾದರೂ ನ್ಯಾಯಾಲಯಕ್ಕೆ ಶಿಕ್ಷೆ ವಿಧಿಸಲಾಗಲಿಲ್ಲ. ಬೆಂಗಳೂರಲ್ಲಿ ಸಿಎಎ ವಿರುದ್ಧ ನಡೆದ ಹೋರಾಟದಲ್ಲಿ ಭಾಷಣ ಮಾಡುತ್ತಾ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದ ಅಮೂಲ್ಯ ಲಿಯೋನಾ ಎನ್ನುವ ಕಾಲೇಜು ವಿದ್ಯಾರ್ಥಿನಿಯನ್ನೂ ಸಹ ಅವಮಾನಕಾರಿಯಾಗಿ ಬಂಧಿಸಲಾಗಿತ್ತು. ಆದರೆ ನ್ಯಾಯಾಲಯ ಜಾಮೀನು ನೀಡಿತು. ನಿಜವಾದ ದೇಶದ್ರೋಹ ಪ್ರಕರಣ ಆಗಿದ್ದರೆ ಯಾರಿಗೂ ಜಾಮೀನು ಸಿಗುವ ಸಾಧ್ಯತೆಯೇ ಇಲ್ಲ. ಇಲ್ಲಿಯವರೆಗೂ ಭಾರತದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಯಾರಿಗೂ ಶಿಕ್ಷೆಯಾಗಿಲ್ಲ. ಆಗುವುದೂ ಇಲ್ಲ. ಯಾಕೆಂದರೆ ಮತ್ತೊಂದು ದೇಶಕ್ಕೆ ಜಿಂದಾಬಾದ್ ಕೂಗುವುದು ಭಾರತದ ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಲ್ಲ.

ಯಾಕೆಂದರೆ.. ಈ ಹಿಂದೆ ಕೇದಾರನಾಥ ಸಿಂಗ್ ವರ್ಸಸ್ ಬಿಹಾರ್ ರಾಜ್ಯದ ಕೇಸೊಂದು ಸುಪ್ರೀಂ ಕೋರ್ಟ್ ಲ್ಲಿ ದಾಖಲಾಗಿತ್ತು. ಆಗ ಸುಪ್ರೀಂ ಕೋರ್ಟಿನ ಐವರು ಜಜ್ ಗಳಿದ್ದ ಪಂಚಪೀಠವು “ಸಾರ್ವಜನಿಕ ಶಾಂತಿಭಂಗ ಮಾಡದೆ ಹೋದರೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವುದು ದೇಶವಿರೋಧಿ, ದೇಶದ್ರೋಹ ಇಲ್ಲವೇ ರಾಜದ್ರೋಹ ಆಗುವುದಿಲ್ಲ” ಎಂದು ಐತಿಹಾಸಿಕ ತೀರ್ಪನ್ನು ಕೊಟ್ಟಿತ್ತು. ಹೀಗಾಗಿ ಪಾಕಿಸ್ತಾನವೂ ಸೇರಿದಂತೆ ಯಾವುದೇ ದೇಶದ ಪರ ಘೋಷಣೆ ಕೂಗುವುದಷ್ಟೇ ಅಲ್ಲಾ ಭಾರತ ವಿರೋಧಿ ಘೋಷಣೆ ಕೂಗುವುದೂ ಕಾನೂನಾತ್ಮಕವಾಗಿ ಶಿಕ್ಷಾರ್ಹ ಅಪರಾಧ ಅಲ್ಲ.  

“ಪಾಕಿಸ್ತಾನ ಭಾರತದ ಶತ್ರು ದೇಶ, ಭಾರತದ ಮೇಲೆ ಯುದ್ಧ ಮಾಡಿದೆ, ಭಯೋತ್ಪಾದಕ ದಾಳಿ ಮಾಡುತ್ತಲೇ ಇದೆ, ಆದ್ದರಿಂದ ಆ ದೇಶದ ಪರವಾಗಿ ಹೇಳಿಕೆ ಕೊಡುವುದು, ಘೋಷಣೆ ಕೂಗುವುದು ಅಕ್ಷಮ್ಯ ಅಪರಾಧ ಹಾಗೂ ದೇಶದ್ರೋಹ” ಎಂದು ಭಾರತದ ದೇಶಭಕ್ತರು ಹೇಳುತ್ತಾರೆ. ಹಾಗೂ ಹಾಗೆ ಅಭಿಪ್ರಾಯ ವ್ಯಕ್ತಪಡಿಸುವಂತಹ ವಾತಾವರಣವನ್ನು ಸಂಘ ಪರಿವಾರ ಸೃಷ್ಟಿಸಿದೆ. ಪಾಕಿಸ್ತಾನದ ಪರ ಮಾತಾಡಿದರೆ ಅದು ಭಾರತದ ವಿರುದ್ಧ ಇದ್ದಂತೆ ಎಂದು ಭಾರತೀಯರನ್ನು ನಂಬಿಸಲಾಗಿದೆ. ಆದರೆ ಇಲ್ಲಿಯವರೆಗೂ ಪಾಕಿಸ್ತಾನವನ್ನು ಅಧಿಕೃತವಾಗಿ ಶತ್ರುದೇಶ ಎಂದು ಭಾರತ ಸರಕಾರ ಘೋಷಿಸಿಲ್ಲ. ಈಗಲೂ ಪರಸ್ಪರ ಎರಡೂ ದೇಶಗಳಲ್ಲಿ ಹೈಕಮಿಷನರ್ ಕಚೇರಿಗಳಿವೆ. ಕೆಲವು ಮಾಹಿತಿ ವಿನಿಮಯ, ಸರಕುಗಳ ಆಮದು ಹಾಗೂ ರಫ್ತು ವ್ಯವಹಾರ ನಡೆಯುತ್ತಲೇ ಇದೆ. ಬಿಜೆಪಿಯ ಅತ್ಯುನ್ನತ ನಾಯಕರಾದ ನರೇಂದ್ರ ಮೋದಿಯವರು ಪ್ರೊಟೋಕಾಲ್ ಮೀರಿ ಪಾಕಿಸ್ತಾನಕ್ಕೆ ದಿಢೀರ್ ಭೇಟಿಕೊಟ್ಟು ಬಂದಿದ್ದಾರೆ. ಅಡ್ವಾಣಿಯವರು ಲಾಹೋರಿಗೆ ಹೋಗಿ ಮಹಮದ್ ಅಲಿ ಜಿನ್ನಾರ ಸಮಾಧಿಯ ಮುಂದೆ ನಿಂತು ಜಿನ್ನಾರನ್ನು ಹಾಡಿ ಹೊಗಳಿ ಬಂದಿದ್ದಾರೆ. ವಾಜಪೇಯಿಯವರು ಪ್ರಧಾನಿಗಳಾಗಿದ್ದಾಗ ಪಾಕಿಸ್ತಾನಕ್ಕೆ ಬಸ್ ಸಂಚಾರ ಆರಂಭಿಸಿದ್ದರು. ವಾಸ್ತವ ಹೀಗಿರುವಾಗ ಪಾಕಿಸ್ತಾನವನ್ನು ಭಾರತದ ಶತ್ರುದೇಶ ಎಂದು ಹೇಗೆ ಹೇಳಲು ಸಾಧ್ಯ? ಪಾಕಿಸ್ತಾನ ದೇಶದ ಮೇಲಿನ ದ್ವೇಷೋತ್ಪಾದನೆಯೇ ಆರೆಸ್ಸೆಸ್ ಹಾಗೂ ಅದರ  ರಾಜಕೀಯ ಅಂಗ ಬಿಜೆಪಿಯ ಅಸ್ತಿತ್ವದ ಬುನಾದಿ ಆಗಿದ್ದರೂ, ಕೇಂದ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸರಕಾರವೇ ಆಳುತ್ತಿರುವಾಗ ಯಾಕೆ ಪಾಕಿಸ್ತಾನವನ್ನು ಶತ್ರುದೇಶ ಎಂದು ಇಲ್ಲಿಯವರೆಗೂ ಘೋಷಿಸಿಲ್ಲ. ಮುಸ್ಲಿಂ ಬಾಹುಳ್ಯದ ದೇಶ ಎನ್ನುವ ಕಾರಣಕ್ಕಾಗಿ ಪಾಕಿಸ್ತಾನವನ್ನು ದ್ವೇಷಿಸುವ ಸಮಸ್ತ ಬಿಜೆಪಿಗರು ಹಾಗೂ ಸಂಘದ ನಾಯಕರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಪಾಕಿಸ್ತಾನವನ್ನು ಶತ್ರುರಾಷ್ಟ್ರ ಎಂದು ಘೋಷಿಸುವಂತೆ ಒತ್ತಾಯಿಸಲಿಲ್ಲ. ಪಾಕಿಸ್ತಾನದ ಪರವಾಗಿ ಯಾರಾದರೂ ಘೋಷಣೆ ಕೂಗಿದರೆ, ಮಾತಾಡಿದರೆ, ಉಸಿರೆತ್ತಿದರೆ ಅಂತವರಿಗೆ ದೇಶದ್ರೋಹದ ಅಪರಾಧದಲ್ಲಿ ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೊಳಿಸಲಿಲ್ಲ.

ಯಾಕೆಂದರೆ, ಇದನ್ನೆಲ್ಲಾ ಮಾಡಲು ಭಾರತದ ವಿದೇಶಾಂಗ ನೀತಿ ಅನುಮತಿಸುವುದಿಲ್ಲ.  ಅಪಾಯಕಾರಿ ವಿನಾಶಕಾರಿ ಶಕ್ತಿಗಳಿರುವ ನೆರೆಹೊರೆಯ ದೇಶದ ಜೊತೆ ಶತ್ರುತ್ವವನ್ನು ಬೆಳೆಸಿಕೊಂಡಷ್ಟೂ ಭಾರತಕ್ಕೆ ಅಪಾಯಕಾರಿ ಎಂಬುದು ಕೇಂದ್ರ ಸರಕಾರಕ್ಕೆ ಗೊತ್ತಿದೆ. ಪಾಕಿಸ್ತಾನ ಕೂಡಾ ಪರಮಾಣು ಬಾಂಬ್ ಗಳುಳ್ಳ ಅರಾಜಕ ದೇಶ ಎಂಬ ಅರಿವೂ ಭಾರತದ ನೀತಿ ನಿರೂಪಕರಿಗಿದೆ. ಪಾಕಿಸ್ತಾನಕ್ಕೆ ಚೀನಾ ಎನ್ನುವ ಬಲಿಷ್ಠ ದೇಶದ ಬೆಂಬಲವೂ ಇದೆ. ಹಾಗಂತ ಭಾರತವು ದುರ್ಬಲ ದೇಶವೇನಲ್ಲ. ಆದರೂ ಅನಗತ್ಯವಾಗಿ ಶತ್ರುದೇಶವೆಂದು ಘೋಷಿಸಿ ಅಪಾಯವನ್ನು ಆಹ್ವಾನಿಸಿಕೊಳ್ಳುವುದು ಸೂಕ್ತವಲ್ಲ. ಹೀಗಾಗಿ ಪಾಕಿಸ್ತಾನದ ಭಯೋತ್ಪಾದನೆ ಹಾಗೂ ದುಷ್ಟ ಮಿಲಿಟರಿಯ ಮೇಲೆ ಅದೆಷ್ಟೇ ದ್ವೇಷ ಇದ್ದರೂ ಸಹ ಸಹನೆಯ ಮಿತಿಯಲ್ಲಿಯೇ ವಿಶ್ವದ ಮುಂದೆ ಪಾಕಿಸ್ತಾನದ ಮುಖವಾಡವನ್ನು ಬಯಲುಗೊಳಿಸಿ ಒಂಟಿಯಾಗಿಸುವುದೇ ಭಾರತದ ವಿದೇಶಿ ನೀತಿಯಾಗಿದೆ.

ಇದೆಲ್ಲವೂ ಗೊತ್ತಿದ್ದೋ ಗೊತ್ತಿಲ್ಲದೇನೋ ಪಾಕಿಸ್ತಾನದ ಮೇಲೆ ಹಾಗೂ ಆ ಮೂಲಕ ಮುಸ್ಲಿಂ ಸಮುದಾಯದ ಮೇಲೆ ದ್ವೇಷೋತ್ಪಾದನೆ ಮಾಡುವ ಯಾವುದೇ  ಕಾರಣ ಅಕಾರಣವನ್ನೂ ಸಂಘ ಪರಿವಾರ ಬಿಡುವುದಿಲ್ಲ. ದೇಶಭಕ್ತಿಯ ಹೆಸರಲ್ಲಿ ದ್ವೇಷವನ್ನು ಹೆಚ್ಚಿಸುವುದೇ ಸಂಘದವರ ಕ್ಷೇತ್ರಕಾರ್ಯವಾಗಿದೆ. ಹಿಂದೂಗಳನ್ನು ಮುಸ್ಲಿಂ ವಿರುದ್ಧ ಎತ್ತಿಕಟ್ಟಿ ಭಾರತವನ್ನು ಹಿಂದುತ್ವವಾದಿ ರಾಷ್ಟ್ರವನ್ನಾಗಿಸುವುದೇ ಸಂಘದ ಉದ್ದೇಶವಾಗಿದೆ.

ಹೋಗಲಿ.. ‘ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಲಾಗಿದೆ’ ಎಂದು FSL   ವರದಿಯಲ್ಲಿ ಸಾಬೀತಾಗಿದೆಯಂತೆ. ಮೂವರನ್ನು ಬಂಧಿಸಲಾಗಿದೆಯಂತೆ. ಪಾಕಿಸ್ತಾನ ಅಧಿಕೃತವಾಗಿ ಶತ್ರುರಾಷ್ಟ್ರವೇ ಅಲ್ಲದಿರುವಾಗ, ಪಾಕಿಸ್ತಾನದ ಪರ ಘೋಷಣೆ ಕೂಗುವುದೇ ದೇಶದ್ರೋಹದ ವ್ಯಾಪ್ತಿಯಲ್ಲಿ ಶಿಕ್ಷಾರ್ಹ ಅಪರಾಧ ಅಲ್ಲದೇ ಇರುವಾಗ ಯಾರನ್ನು ಬಂಧಿಸಿ ಪ್ರಯೋಜನವೇನು? ಕೋರ್ಟಲ್ಲಿ ಜಾಮೀನು ಸಿಗುತ್ತದೆ, ಮುಂದೆ ಕೇಸೂ ಬಿದ್ದು ಹೋಗುತ್ತದೆ. ಆದರೆ ಶಿಕ್ಷೆ ಕೊಡಿಸಬೇಕು ಎನ್ನುವ ಉದ್ದೇಶಕ್ಕಿಂತಲೂ ದ್ವೇಷದ ಬೆಂಕಿ ಹತ್ತಿಸಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವುದೇ ಬಿಜೆಪಿಯವರ ಉದ್ದೇಶವಾಗಿದೆ. ಯಾರಿಗೆ ಶಿಕ್ಷೆ ಆಗಲಿ ಬಿಡಲಿ ಹಿಂದೂಗಳಲ್ಲಿ ದೇಶಭಕ್ತಿಯ ಭಾವೋತ್ಪಾದನೆ ಮಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದೂಗಳ ಮತಗಳನ್ನು ಕ್ರೋಢೀಕರಿಸಿ ರಾಜಕೀಯ ಲಾಭ ಮಾಡಿಕೊಳ್ಳುವುದಷ್ಟೇ ಈ ಬಿಜೆಪಿ ಪ್ರಾಯೋಜಿತ ಹೋರಾಟ ಹಾರಾಟಗಳ ಹಿಂದಿನ ಉದ್ದೇಶ.

ಆರೋಪ ಬಂದ ಕೂಡಲೇ ಘೋಷಣೆಯನ್ನೇ ಕೂಗಿಲ್ಲ ಎಂದು ಕಾಂಗ್ರೆಸ್ ಸರಕಾರ ಸಮರ್ಥನೆಗೆ ಇಳಿಯುವ ಬದಲಾಗಿ “ಆಯ್ತು ವಿಚಾರಣೆ ಮಾಡಿ ತಪ್ಪಿತಸ್ಥರನ್ನು ಕಾನೂನಿಗೆ ಒಪ್ಪಿಸಲಾಗುತ್ತದೆ” ಎಂದು ಹೇಳಿಕೆ ಕೊಟ್ಟಿದ್ದರೆ ಸಮಸ್ಯೆ ಇಷ್ಟೊಂದು ಉಲ್ಬಣ ಆಗುತ್ತಿರಲಿಲ್ಲ. ಆದರೆ ಕಾಂಗ್ರೆಸ್ ಸರಕಾರಕ್ಕೆ ಈ ಸಮಸ್ಯೆಯನ್ನು ಬೇಗನೇ ಶಮನಗೊಳಿಸುವುದು ಬೇಕಾಗಿರಲಿಲ್ಲ. ಯಾಕೆಂದರೆ  ಜಾತಿಗಣತಿಯ ಕುರಿತ ಸಂಘರ್ಷವು ಕಾಂಗ್ರೆಸ್ ಪಕ್ಷದೊಳಗೆ ಅಸಮಾಧಾನ ಹೆಚ್ಚಿಸಿದೆ. ದಲಿತ ಹಿಂದುಳಿದ ವರ್ಗದ ಶಾಸಕರು ಜಾತಿಗಣತಿ ಬೇಕೆಂದರೆ ಪ್ರಬಲ ಸಮುದಾಯದ ಶಾಸಕರು ವಿರೋಧಿಸುತ್ತಿದ್ದಾರೆ. ಬಹುತೇಕ ಆಳುವ ಪಕ್ಷದ ಶಾಸಕರು ತಮ್ಮ ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲವೆಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಾಗಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ. ಮಳೆಯಾಗದೇ ರಾಜ್ಯದಲ್ಲಿ ತೀವ್ರವಾದ ಬರ ಇದ್ದು ನೀರಿಗಾಗಿ ಪರದಾಡುತ್ತಿರುವ ಜನರು ಸರಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಸುದ್ದಿ ಮಾಧ್ಯಮಗಳೂ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸ್ವಪಕ್ಷೀಯರ, ವಿರೋಧ ಪಕ್ಷದವರ, ನಾಡಿನ ಜನರ ಹಾಗೂ ಪ್ರಮುಖವಾಗಿ ಸುದ್ದಿ ಮಾಧ್ಯಮಗಳ ಗಮನವನ್ನು ಬೇರೆಡೆಗೆ ತಿರುಗಿಸಲು ಈ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣ ಆಳುವ ಸರಕಾರಕ್ಕೆ ವರದಾನವಾಗಿ ಬಂದಂತಿದೆ. ಒಂದೇ ಒಂದು ಹೇಳಿಕೆ ಮೂಲಕ ಶಮನಗೊಳಿಸಬಹುದಾದ ಈ ಸಮಸ್ಯೆಯನ್ನು ಉದ್ದೇಶಪೂರ್ವಕವಾಗಿ ಸರಕಾರ ಉಲ್ಬಣವಾಗುವಂತೆ ನೋಡಿಕೊಂಡಿದೆ. ಸುದ್ದಿ ಮಾಧ್ಯಮಗಳನ್ನೂ ಕೆರಳಿಸಿ ದಿನದ 24 ಗಂಟೆಯೂ ಜಿಂದಾಬಾದ್ ಸುತ್ತಲೇ ಗಿರಿಕಿ ಹೊಡೆಯುವಂತೆ ಕಾಂಗ್ರೆಸ್ ನಾಯಕರೇ ಪ್ರಚೋದಿಸಿದ್ದಾರೆ. ಬಿಜೆಪಿಗರನ್ನೂ ಕೆರಳಿಸಿದ್ದಾರೆ. ಆಳುವ ಸರಕಾರ ಡೈವರ್ಟಿಫಿಕೇಶನ್ ತಂತ್ರದಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ-http://ಈಗಲೂ ಹೇಳ್ತೆನೆ ಅಲ್ಲಿ 100% ಪಾಕ್ ಪರ ಘೋಷಣೆ ಕೂಗಿಲ್ಲ; ಸುಳ್ಳು ಸುದ್ದಿಗಳನ್ನು ಎದುರಿಸುವ ರೀತಿಯೇ ಕಾಂಗ್ರೆಸ್ ಗೆ ಗೊತ್ತಿಲ್ಲ- ಮಹಮದ್ ಜುಬೇರ್ https://kannadaplanet.com/mohammad-zubair-said-about-pak-slogan-fake-news/

ದೇಶವೆಂದರೆ ಅಲ್ಲಿ ವಾಸಿಸುವ ಪ್ರಜೆಗಳು. ಅವರ ಯೋಗಕ್ಷೇಮ ಮತ್ತು ಅನುಕೂಲಗಳನ್ನು ನೋಡಿಕೊಳ್ಳುತ್ತಾ ಜನರ ಹಿತಾಸಕ್ತಿಗೆ ಪೂರಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುವುದು ಆಳುವ ಸರಕಾರಗಳ ಜವಾಬ್ದಾರಿ. ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ಸರಕಾರ ನಿರ್ಲಕ್ಷ್ಯವಹಿಸಿದರೆ ಪ್ರತಿಪಕ್ಷಗಳು ಹೋರಾಟಗಳ ಮೂಲಕ ಸರಕಾರವನ್ನು ಎಚ್ಚರಿಸಬೇಕು. ಆದರೆ ಈಗ ಆಳುವ ಮತ್ತು ವಿರೋಧ ಪಕ್ಷಗಳು ತಮ್ಮ ಸಾಂವಿಧಾನಿಕ ಹೊಣೆಗಾರಿಕೆಯನ್ನು ಮರೆತು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಬಾಧೆಗೊಳಗಾದ ಬಹುಜನರ ಬದುಕನ್ನು ಸುಧಾರಿಸುವ ಬದಲಾಗಿ ಭಾವನಾತ್ಮಕ ಸಂಗತಿಗಳಿಗೆ ಹೆಚ್ಚು ಒತ್ತುಕೊಟ್ಟು ಸಮಾಜದ ಸ್ವಾಸ್ಥ್ಯವನ್ನು ಕದಡಲು ಪ್ರಯತ್ನಿಸಲಾಗುತ್ತಿದೆ. ಸಮುದಾಯಗಳ ನಡುವೆ ದ್ವೇಷೋತ್ಪಾದನೆ ಹುಟ್ಟು ಹಾಕಿ ಸೌಹಾರ್ದತೆಯನ್ನು ಹಾಳು ಮಾಡಲಾಗುತ್ತಿದೆ. ಇಲ್ಲಿ ಹಿಜಾಬ್, ಹಲಾಲ್, ಆಜಾನ್, ಹನುಮಧ್ವಜ, ಮಂದಿರಗಳ ಕುರಿತ ವಿವಾದಗಳೇ ಅತಿಯಾಗಿ ಜನಜೀವನವೇ ಅಸ್ತವ್ಯಸ್ತ ಆಗುವಂತೆ ಮಾಡಲಾಗುತ್ತಿದೆ. ರಾಜಕೀಯದ ಈ ಬ್ರಹನ್ನಾಟಕವನ್ನು ಜನರೇ ವಿರೋಧಿಸಬೇಕಿದೆ. ಭಾವಪ್ರಚೋದನೆಯ ಮೂಲಕ ಒಡೆದಾಳುವ ಶಕ್ತಿಗಳನ್ನು ಸೋಲಿಸಬೇಕಿದೆ. ಸಂವಿಧಾನದ ಸಮಾನತೆ ಹಾಗೂ ಧರ್ಮನಿರಪೇಕ್ಷತೆಯ ಆಧಾರದಲ್ಲಿ ದೇಶ ಮುನ್ನಡೆಯಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article