ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಸ್ಟಾರ್ ಗಳ ಸಿನಿಮಾಗಳಿಲ್ಲದೆ, ಒಳ್ಳೊಳ್ಳೆ ಕಂಟೆಂಟ್ ಸಿನಿಮಾಗಳು ಬರದೆ ಸಮಸ್ಯೆಯನ್ನು ಎದುರಿಸುತ್ತಿದೆ. ಈಗಾಗಲೇ ನಿರ್ಮಾಪಕರು ಕೂಡ ಆ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಸ್ಟಾರ್ ಗಳ ಸಿನಿಮಾಗಳು ವರ್ಷಕ್ಕೆ ಎರಡಾದರೂ ರಿಲೀಸ್ ಆದರೆ ಥಿಯೇಟರ್ ಸಮಸ್ಯೆ, ನಿರ್ಮಾಪಕರ ಸಮಸ್ಯೆ ಬಗೆಹರಿಯುತ್ತದೆ ಎಂಬುದಾಗಿ ಮನವಿ ಕೂಡ ಮಾಡಿದ್ದಾರೆ. ಆದರೆ ಪ್ರಿಯಾಂಕ ಉಪೇಂದ್ರ ಇದೀಗ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ.
ರೆಡ್ ರಾಕ್ ಸ್ಟುಡಿಯೋ ಉದ್ಘಾಟನೆ ಮಾಡಿ ಮಾತನಾಡಿದ ಪ್ರಿಯಾಂಕ ಉಪೇಂದ್ರ, ನಮ್ಮ ಹತ್ರ ಸಾಕಷ್ಟು ಕತೆಗಳಿವೆ. ಐಡಿಯಾ ಇದಾವೆ. ಆದರೆ ಅದನ್ನೆಲ್ಲ ಚೆನ್ನಾಗಿ ತೆರೆಗೆ ತರಲು ಬೇಕಾದ ಬಜೆಟ್ ಕೊರತೆ ಕೆಲವು ನಿರ್ದೇಶಕರನ್ನು ಕಾಡುತ್ತಿವೆ. ಕೆಲವು ಹಿರಿಯ ನಿರ್ದೇಶಕರಿಗೆ ಬಜೆಟ್ ಇರುತ್ತದೆ. ಆದರೆ ಅವರು ಕಥೆಯ ಮೇಲೆ ಹೆಚ್ಚು ಗಮನ ಹರಿಸುವುದಿಲ್ಲ. ದೊಡ್ಡ ಸ್ಟಾರ್ ಒಬ್ಬರನ್ನು ತೆಗೆದುಕೊಂಡು, ಮೇಕಿಂಗ್ ಬಗ್ಗೆ ಮಾತ್ರವೇ ಗಮನ ಹರಿಸುತ್ತಾರೆ. ಕಂಟೆಂಟ್ ಇರುವವರಿಗೆ ಬಜೆಟ್ ಇರುವುದಿಲ್ಲ, ರಿಸೋರ್ಸ್ ಇರುವುದಿಲ್ಲ. ಇದು ನಮ್ಮ ಮುಖ್ಯ ಸಮಸ್ಯೆಯಾಗಿದೆ.
ಇವತ್ತು ಮಲಯಾಳಂ ಇಂಡಸ್ಟ್ರಿ ಎಷ್ಟು ಹೆಸರು ಮಾಡುತ್ತಿದೆ. ನಾಲ್ಕೈದು ಸಿನಿಮಾಗಳು ಸಾಕಷ್ಟು ಕಲೆಕ್ಷನ್ ಮಾಡುತ್ತಿದೆ. ನಾನು ಕೂಡ ಆ ಸಿನಿಮಾಗಳನ್ನು ನೋಡಿದೆ. ಒಂದು ಸಬ್ಜೆಕ್ಟ್ ತೆಗೆದುಕೊಂಡು ಎಷ್ಟು ಡೀಪ್ ಆಗಿ ತೋರಿಸುತ್ತಾರೆ. ಮೇಕಿಂಗ್ ಅದ್ಭುತವಾಗಿ ಮಾಡುತ್ತಾರೆ. ನಾವೂ ಕೂಡ ಮೇಕಿಂಗ್ ಚೆನ್ನಾಗಿ ಮಾಡಿದರೆ ಖಂಡಿತ ಸಿನಿಮಾಗಳು ಗೆಲ್ಲುತ್ತವೆ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲೂ ಕಂಟೆಂಟ್ ಇರುವಂತ ಸಿನಿಮಾಗಳನ್ನು ತೆಗೆಯಬೇಕು ಎಂದಿದ್ದಾರೆ.