ಬೆಂಗಳೂರು: ಖ್ಯಾತ ನಟ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಸುದೀಪ್ ಅವರಿಗೆ ಪತ್ರ ಬರೆದು ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 23ರಂದೇ ಬರೆದಿದ್ದ ಪತ್ರವನ್ನು ಸುದೀಪ್ ಅವರು ಇಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ನಿಮ್ಮ ಸಾಂತ್ವನವು ನನ್ನ ಹೃದಯ ತಟ್ಟಿದೆ ಎಂದು ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ನಿಮ್ಮ ತಾಯಿಯವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ತಾಯಿಯನ್ನು ಕಳೆದುಕೊಂಡರೆ ಪ್ರತಿಯೊಬ್ಬರಿಗೂ ತುಂಬಲಾರದ ನಷ್ಟ ಎನ್ನುವುದು ನನಗೆ ತಿಳಿದಿದೆ ಎಂದು ಪತ್ರದಲ್ಲಿ ಮೋದಿ ಅವರು ಹೇಳಿದ್ದಾರೆ.
ಜಗತ್ತಿನಲ್ಲಿ ತಾಯಿ ವಾತ್ಸಲ್ಯದ ಮುಂದೆ ಯಾವುದೂ ದೊಡ್ಡದಿಲ್ಲ. ನೀವು ನಿಮ್ಮ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದೀರೆಂದು ತಿಳಿದುಕೊಂಡಿದ್ದೇನೆ. ನೀವು ನಿಮ್ಮ ತಾಯಿಯನ್ನು ತುಂಬಾ ಹಚ್ಚಿಕೊಂಡಿದ್ದಿರೆಂದು ಕೇಳಿ ತಿಳಿದುಕೊಂಡೆವು.
ಅವರಿಲ್ಲದ ಕ್ಷಣಗಳು ನಿಮಗೆ ನಿಮ್ಮ ಕುಟುಂಬಕ್ಕೂ ತುಂಬ ಕಠಿಣವಾಗಿರುತ್ತವೆ. ಅವರ ನೆನಪುಗಳು ಸದಾ ನಿಮ್ಮೊಂದಿಗೆ ಇರಲಿವೆ. ಹಾಗೇ ನಮ್ಮೆಲ್ಲರಿಗೂ ಅವರು ಪ್ರೇರಣೆಯಾಗಲಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ನಿಮ್ಮ ತಾಯಿ ಅವರ ನಿಧನಕ್ಕೆ ನಮ್ಮ ಸಂತಾಪಗಳು. ಆ ದುಃಖದಿಂದ ನೀವು, ನಿಮ್ಮ ಕುಟುಂಬದವರು ಆದಷ್ಟು ಬೇಗ ಹೊರಗೆ ಬರಲೆಂದು ಪ್ರಾರ್ಥಿಸುತ್ತೇನೆ
ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸುದೀಪ್ ಅವರು, ನಿಮ್ಮ ಸಂತಾಪ ಪತ್ರಕ್ಕಾಗಿ ನನ್ನ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಕಷ್ಟದ ಸಮಯದಲ್ಲಿ ಸಾಂತ್ವನದ ಮೂಲಸೆಲೆಯನ್ನು ನೀಡಿವೆ. ನಿಮ್ಮ ಸಾಂತ್ವನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಆಭಾರಿ ಎಂದು ಹೇಳಿದ್ದಾರೆ.
ನಟ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ಅ ವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಕ್ಟೋಬರ್ 20 ರಂದು ನಿಧನರಾಗಿದ್ದರು.