ಹೆಚ್ಚು ಆದಾಯವಿರುವ 250 ಎ ಗ್ರೇಡ್ ದೇವಸ್ಥಾನಗಳನ್ನು ಗಮನದಲ್ಲಿಟ್ಟುಕೊಂಡು ಮುಜರಾಯಿ ಇಲಾಖೆಯ ನಿಯಂತ್ರಣದಿಂದ ಎಲ್ಲಾ ದೇವಸ್ಥಾನಗಳನ್ನು ಮುಕ್ತಗೊಳಿಸಿದ್ದೇ ಆದರೆ ಲಾಭದಾಯಕವಲ್ಲದ, 30 ಸಾವಿರಕ್ಕೂ ಹೆಚ್ಚಿರುವ ಸಿ ಮತ್ತು ಡಿ ಗ್ರೇಡ್ ದೇವಸ್ಥಾನಗಳನ್ನು ನಡೆಸುವ ಹೊಣೆಗಾರಿಕೆಯನ್ನು ಹೊರುವವರು ಯಾರು? – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿಜನ್ಯ ಕೊಬ್ಬು ಕಲಬರಕೆಯಾಗಿದೆ ಎನ್ನುವ ಪ್ರಕರಣ ಈಗ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದೆ. ಇದೇ ಸನ್ನಿವೇಶವನ್ನು ಬಳಸಿ ತಮ್ಮ ಬಹುದಿನಗಳ ಬೇಡಿಕೆಯಾದ ದೇವಸ್ಥಾನಗಳ ಸ್ವಾಯತ್ತತೆ ಬಗ್ಗೆ ಕೆಲವು ಹಿಂದುತ್ವವಾದಿಗಳು, ಮಠದ ಸ್ವಾಮಿಗಳು ಧ್ವನಿ ಎತ್ತಿದ್ದಾರೆ. “ಹಿಂದೂ ಶ್ರದ್ಧಾ ಕೇಂದ್ರಗಳಾದ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಿ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಡಬೇಕು” ಎಂಬುದು ಧಾರ್ಮಿಕ ಪಟ್ಟಭದ್ರರ ಆಗ್ರಹವಾಗಿದೆ.
ಇದೇನು ಈಗ ಹುಟ್ಟಿದ ವಾದವೇನಲ್ಲ. ಹಿಂದಿನಿಂದಲೂ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ತೆರವುಗೊಳಿಸಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕೆಂದು ಪುರೋಹಿತಶಾಹಿ ವರ್ಗ ಪ್ರಯತ್ನಿಸುತ್ತಲೇ ಇದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತಲೇ ಇದೆ. ಈ ಹಿಂದೆ 2022 ರಲ್ಲಿ ಬೊಮ್ಮಾಯಿಯವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಹಿಂದೂ ದೇವಸ್ಥಾನಗಳಿಗೆ ಸ್ವಾಯತ್ತತೆ ಕೊಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಆದರೆ ಅದು ಕೇವಲ ಮತಬ್ಯಾಂಕ್ ಗಿಮಿಕ್ ಆಗಿತ್ತು ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿತ್ತು. ದೇವಸ್ಥಾನಗಳ ಸ್ವಾಯತ್ತತೆಗೆ ಆಗ್ರಹಿಸುವವರ ಸದ್ದಡಗಿತ್ತು. ಈಗ ತಿರುಪತಿ ಲಡ್ಡು ಕಲಬೆರಕೆ ಪ್ರಕರಣದ ನೆಪದಲ್ಲಿ ಮತ್ತೆ ಸ್ವಾಯತ್ತತೆಯ ಕೂಗು ಅಲ್ಲಲ್ಲಿ ಕೇಳಿಬರತೊಡಗಿದೆ. ಪುರೋಹಿತಶಾಹಿಗಳ ಕಣ್ಣಲ್ಲಿ ಆಶಾಕಿರಣವೊಂದು ಹೊಳೆಯುತ್ತಿದೆ. ಹೀಗಾಗಿ, ದೇವಾಲಯಗಳ ಸ್ವಾಯತ್ತತೆಗಾಗಿ ಚಿತ್ರ ವಿಚಿತ್ರ ತರ್ಕಗಳನ್ನು ಹರಿಬಿಡಲಾಗುತ್ತಿದೆ.
ಸ್ವಾಯತ್ತತೆಗಾಗಿ ಚಿತ್ರ ವಿಚಿತ್ರ ತರ್ಕಗಳು…
* ಸರಕಾರದ ನಿಯಂತ್ರಣದಿಂದಾಗಿ ದೇವಸ್ಥಾನಗಳು ಅಭಿವೃದ್ಧಿ ಹೊಂದುತ್ತಿಲ್ಲ.
* ಶ್ರೀಮಂತ ದೇವಸ್ಥಾನಗಳ ಆದಾಯವನ್ನು ಸರಕಾರ ಬಳಸಿಕೊಳ್ಳುತ್ತಿದೆ.
* ದೇವಸ್ಥಾನಗಳ ಜಮೀನು ಹಾಗೂ ಆಸ್ತಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ.
* ದೇವಸ್ಥಾನಗಳಿಂದ ಬಂದ ಆದಾಯವನ್ನು ಅನ್ಯ ಧರ್ಮೀಯ ಪ್ರಾರ್ಥನಾ ಸ್ಥಳಗಳಿಗೆ ಹಂಚಲಾಗುತ್ತಿದೆ.
* ಮಸೀದಿ ಚರ್ಚುಗಳು ಸ್ವತಂತ್ರವಾಗಿರುವಾಗ ಹಿಂದೂ ದೇವಸ್ಥಾನಗಳನ್ನು ಮಾತ್ರ ಯಾಕೆ ಸರಕಾರ ನಿಯಂತ್ರಿಸುತ್ತಿದೆ.
* ಸನಾತನ ಧರ್ಮದ ಪೂಜಾ ವಿಧಾನಗಳ ಮೇಲೆ ಸರಕಾರ ಅಡೆತಡೆ ಒಡ್ಡುತ್ತಿದೆ.
* ಭಕ್ತರು ದೇವಸ್ಥಾನಗಳಿಗೆ ನೀಡಿದ ಸಂಪತ್ತು ಭಕ್ತರಿಗಾಗಿ ಬಳಕೆಯಾಗಬೇಕೆ ಹೊರತು ಸರಕಾರಕ್ಕಲ್ಲ.
ಹೀಗೆ ಅನೇಕ ರೀತಿಯ ಸುಳ್ಳು ಆರೋಪಗಳನ್ನು ಸತ್ಯವೆಂಬಂತೆ ಪ್ರಚಾರ ಮಾಡುವ ಕೆಲಸಗಳು ಪುರೋಹಿತಶಾಹಿ ಹಿತಾಸಕ್ತಿಗಳು ಹರಡುತ್ತಾ ಭಕ್ತರ ಭಾವನೆಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿವೆ.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ಒತ್ತಾಯ..
“ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡಿ ಸರಕಾರದ ಹಿಡಿತದಿಂದ ಮುಕ್ತಿ ನೀಡುವ ತುರ್ತು ಅಗತ್ಯವಿದೆ. ಸರಕಾರದ ಕಣ್ಗಾವಲಿನಿಂದ ಹಿಂದೂ ದೇವಾಲಯಗಳು ಮುಕ್ತವಾಗಬೇಕಿವೆ” ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ಸರಕಾರವನ್ನು ಒತ್ತಾಯಿಸಿದ್ದಾರೆ. ಮತ್ತೂ ಮುಂದುವರೆದು ” ಭಕ್ತರು ನೀಡಿದ ಸಂಪತ್ತು ಬಳಕೆಯಾಗಬೇಕು. ಆಗ ದೇವಸ್ಥಾನಗಳಿಂದ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸಾಧ್ಯ” ಎಂಬುದೂ ಸ್ವಾಮಿಗಳ ಉವಾಚ. ಅವರ ಈ ಹೇಳಿಕೆಯಲ್ಲೇ ವ್ಯಾಪಾರಿ ಸಂಸ್ಕೃತಿಯ ಹಿತಾಸಕ್ತಿ ಅಡಗಿದೆ. ತಮ್ಮ ದೇವಸ್ಥಾನ ಸರಕಾರದ ನಿಯಂತ್ರಣದಲ್ಲಿದ್ದರೆ ಮುಕ್ತವಾಗಿ ಶಿಕ್ಷಣ ವ್ಯಾಪಾರೀ ಕರಣ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸರಕಾರಿ ನಿಯಂತ್ರಣದಿಂದ ಹೊರಗೆ ಬಂದರೆ ಮೆಡಿಕಲ್ ಕಾಲೇಜುಗಳನ್ನು ಪ್ರಾರಂಭಿಸಿ ಬೇಕಾದಷ್ಟು ಹಣವನ್ನು ಬಾಚಬಹುದು ಎಂಬುದು ಸ್ವಾಯತ್ತತೆಯ ಬೇಡಿಕೆಯ ಹಿಂದಿರುವ ಸ್ವಾಮಿಗಳ ಹಿಡನ್ ಅಜೆಂಡಾ ಆದಂತಿದೆ.
ಯಾವ ಸರಕಾರ ಯಾವ ದೇವಸ್ಥಾನಗಳ ಸ್ವಾತಂತ್ರ್ಯವನ್ನು ಹರಣ ಮಾಡಿದೆ?
ಹಾಗೇನಾದರೂ ಆಗಿದ್ದರೆ ವೈದಿಕಶಾಹಿಗಳು ಸುಮ್ಮನಿರಲು ಸಾಧ್ಯವೇ? ಸಂಘ ಪರಿವಾರ ಬೀದಿಗಿಳಿದು “ಹಿಂದೂ ಧರ್ಮದ ಮೇಲೆ ಸರಕಾರದ ಆಕ್ರಮಣ” ಎಂದು ಬೊಬ್ಬೆ ಹೊಡೆಯದೇ ಇರಲು ಸಾಧ್ಯವೇ? ದೇವರು ಧರ್ಮ ದೇವಸ್ಥಾನಗಳನ್ನೇ ಕೇಂದ್ರವಾಗಿಟ್ಟುಕೊಂಡು ಶತಮಾನಗಳಿಂದ ಪುರೋಹಿತ ಕುಲ ದುಡಿಯುವ ಜನರನ್ನು ಭಾವನಾತ್ಮಕವಾಗಿ ನಿಯಂತ್ರಿಸುತ್ತಲೇ ಬಂದಿದೆ. ಮನುವಾದಿ ನಂಬಿಕೆಗಳನ್ನು ಭಕ್ತರ ಮೆದುಳಲ್ಲಿ ಉತ್ತಿ ಬಿತ್ತಿ ಭಯ ಭಕ್ತಿಯ ಬೆಳೆಯನ್ನು ಹುಲುಸಾಗಿ ಬೆಳೆಸುತ್ತಾ ಬಂದಿದೆ. ಯಾವ ಸರಕಾರ ತಾನೇ ಈ ದೇವರು ಧರ್ಮದ ಗುತ್ತಿಗೆದಾರರನ್ನು ಎದುರು ಹಾಕಿಕೊಳ್ಳಲು ಸಾಧ್ಯ?. ಎಲ್ಲಾ ಸರಕಾರಗಳು ಸರಕಾರದ ಖಜಾನೆಯಿಂದ ದೇವಸ್ಥಾನ ಮಠ ಮಾನ್ಯಗಳಿಗೆ ಜನರ ತೆರಿಗೆಯ ಕೋಟ್ಯಂತರ ಹಣವನ್ನು ಕೊಡುತ್ತಲೇ ಬಂದಿವೆ.
ಆದರೂ ಸ್ವಾಯತ್ತತೆಯ ಕೂಗು ಯಾಕೆಂದರೆ …
* ಬಹುತೇಕ ಪ್ರಸಿದ್ದ ಹಿಂದೂ ದೇವಸ್ಥಾನಗಳು ಈಗ ಶ್ರದ್ಧಾ ಭಕ್ತಿ ಕೇಂದ್ರಗಳಾಗಿ ಉಳಿದಿಲ್ಲ. ಅದಕ್ಕೆ ಬದಲಾಗಿ ವ್ಯಾಪಾರಿ ಕೇಂದ್ರಗಳಾಗಿ ಬದಲಾಗಿ ಎಷ್ಟೋ ವರ್ಷಗಳಾಗಿವೆ.
* ದೇವಸ್ಥಾನಕ್ಕೆ ಭಕ್ತರು ಕೊಡುವ ಹಣ ಕನಕ ಕಾಣಿಕೆಗಳು ಅರ್ಚಕರ ಪಾಲಾಗದಂತೆ ಸರಕಾರ ಈ ಹುಂಡಿ ವ್ಯವಸ್ಥೆ ಜಾರಿ ಮಾಡಿದ್ದು ಪುರೋಹಿತರಿಗೆ ಅತೀ ದೊಡ್ಡ ತೊಡಕಾಗಿದೆ.
* ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಅವ್ಯವಹಾರಗಳು ಆದಾಗೆಲ್ಲಾ ಸರಕಾರ ತನಿಖೆ ಮಾಡಲು ಮುಂದಾಗುವುದು ವಿಪ್ರರಿಗೆ ಸಹಿಸದಾಗಿದೆ.
* ದೇವಸ್ಥಾನಗಳ ಆಸ್ತಿಗಳ ಲೇವಾದೇವಿ ವ್ಯವಹಾರವನ್ನು ಸರಕಾರಿ ವ್ಯವಸ್ಥೆ ದೇವಸ್ಥಾನದ ಆಡಳಿತಕ್ಕೆ ಬಿಟ್ಟುಕೊಡದೇ ಇರುವುದು ಅವರ ಕೈಕಟ್ಟಿ ಹಾಕಿದೆ.
* ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಯಾವುದೇ ಬೇಧ ಭಾವ ತಾರತಮ್ಯ ಇಲ್ಲದೇ ಎಲ್ಲಾ ಜಾತಿ ಧರ್ಮ ವರ್ಗ ವರ್ಣಗಳ ಜನರಿಗೂ ಪ್ರವೇಶ ಕೊಡಬೇಕಾಗಿರುವುದು ಶ್ರೇಷ್ಠತೆಯ ವ್ಯಸನ ಪೀಡಿತ ಅರ್ಚಕ ಸಂತತಿಯವರಿಗೆ ಸಂಕಟ ತರುವಂತುಹುದಾಗಿದೆ.
* ಶ್ರೀಮಂತ ದೇವಸ್ಥಾನಗಳಿಂದ ಬರುವ ಆದಾಯದ ಒಂದಿಷ್ಟು ಪಾಲನ್ನು ಬಡ ದೇವಾಲಯಗಳ ಅಭಿವೃದ್ಧಿಗಾಗಿ ಸರಕಾರ ಬಳಸುವ ನಿಯಮ ಮಾಡಿದ್ದರಿಂದಾಗಿ ಪ್ರಬಲ ದೇವಾಲಯಗಳ ಮುಖ್ಯಸ್ಥರುಗಳಿಗೆ ಸಹಿಸದಾಗಿದೆ.
ಮೇಲೆ ತಿಳಿಸಿದ ಎಲ್ಲಾ ಕಾರಣಗಳಿಗಾಗಿ ಸರಕಾರದ ನಿಯಂತ್ರಣದಿಂದ ದೇವಸ್ಥಾನಗಳು ಮುಕ್ತಿ ಪಡೆದು ಸ್ವಾಯತ್ತವಾಗಬೇಕು ಎಂದು ಆಗ್ರಹಿಸುತ್ತಾ ಭಕ್ತರನ್ನು ಸರಕಾರದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಜಾರಿಯಲ್ಲಿದೆ.
ಸರಕಾರದ ಕಣ್ಗಾವಲಿನಿಂದ ಬಿಡುಗಡೆ ಮಾಡುವುದರಿಂದ ಆಗುವ ಅಪಾಯಗಳು…
* ಸಾರ್ವಜನಿಕರ ದುಡಿಮೆಯ ಹಣದಿಂದ ದೇವರ ಹೆಸರಲ್ಲಿ ಬಂದ ಕಾಣಿಕೆ ಆದಾಯ ಸರಕಾರದ ಬದಲಾಗಿ ದೇವಸ್ಥಾನದ ಪುರೋಹಿತ ಮಂಡಳಿಯ ನಿಯಂತ್ರಣಕ್ಕೆ ಒಳಪಡುತ್ತದೆ.
* ಭಕ್ತರ ಹಣ ದೇವಸ್ಥಾನದ ಆಡಳಿತ ಮಂಡಳಿಯಿಂದ ಅಕ್ರಮವಾಗಿ ಬಳಕೆಯಾದರೆ ಪ್ರಶ್ನಿಸುವವರೇ ಇಲ್ಲವಾಗಿ ಮಠದೊಳಗಿನ ಬೆಕ್ಕುಗಳು ಹಣವ ಕಂಡು ಪುಟಿನೆಗೆದಂತಾಗುತ್ತದೆ.
* ದೇವಸ್ಥಾನಗಳ ಆಡಳಿತದ ಜವಾಬ್ದಾರಿಯು ಶ್ರೇಷ್ಠತೆಯ ವ್ಯಸನ ಪೀಡಿತರಾದ ಒಂದು ವರ್ಗದ ಹಿಡಿತಕ್ಕೆ ಒಳಗಾಗಿ ನಿರ್ದಿಷ್ಟ ಜಾತಿಯ ನಿಯಂತ್ರಣಕ್ಕೆ ದೇವಸ್ಥಾನಗಳು ಈಡಾಗುತ್ತವೆ.
* ದೇವಸ್ಥಾನಗಳ ಪ್ರವೇಶಕ್ಕೆ ಯಾರು ಅರ್ಹರು ಯಾರು ಅನರ್ಹರು ಎಂಬುದನ್ನು ದೇವಸ್ಥಾನಗಳ ಪುರೋಹಿತರು ನಿರ್ಧರಿಸುವಂತಾಗಿ ಕೆಳ ತಳ ಸಮುದಾಯದವರಿಗೆ ದೇಗುಲದೊಳಗಿನ ಮುಕ್ತ ಪ್ರವೇಶ ನಿರ್ಬಂಧಿಸಲ್ಪಡುವ ಸಾಧ್ಯತೆಯೇ ಹೆಚ್ಚಾಗುತ್ತದೆ.
* ದೇವಸ್ಥಾನದ ಆಸ್ತಿಗಳನ್ನು ದೇವಸ್ಥಾನದ ಟ್ರಸ್ಟಿಗಳು ಪರಭಾರೆ ಮಾಡುವ ಸಾಧ್ಯತೆಗಳು ಬೇಕಾದಷ್ಟಿವೆ.
* ದೇವಸ್ಥಾನಗಳ ಆಡಳಿತ ಮಂಡಳಿಯು ಆಯಾ ದೇಗುಲಗಳಲ್ಲಿ ಅತ್ಯಂತ ಕಡಿಮೆ ಸಂಬಳಕ್ಕೆ ಅರ್ಚಕರನ್ನು ಬಳಸಿಕೊಂಡು ಶೋಷಿಸುವುದು ಮುಂದುವರೆಯುತ್ತದೆ.
* ಅಸಮಾನ ಸಾಮಾಜಿಕ ವ್ಯವಸ್ಥೆಯಲ್ಲಿ ಶೂದ್ರ ದಲಿತ ಸಮುದಾಯವನ್ನು ದೇವಸ್ಥಾನಗಳಿಂದ ಹೊರಗಿಡುವ ಮನುವ್ಯಾಧಿ ವ್ಯವಸ್ಥೆ ಮತ್ತೆ ಜಾರಿಗೆ ಬರುವ ಅಪಾಯವೂ ಇದೆ.
* ದೇವಸ್ಥಾನಗಳು ಆಯಾ ಪ್ರದೇಶದ ಪ್ರಭಾವಿಗಳ ನಿಯಂತ್ರಣಕ್ಕೊಳಗಾಗಿ, ಪ್ರಭಾವಶಾಲಿ ಸಂಪ್ರದಾಯಕ್ಕೆ ಮಣೆ ಹಾಕಲಾಗುತ್ತದೆ.
* ಶ್ರೀಮಂತ ದೇವಸ್ಥಾನಗಳ ಆದಾಯದಲ್ಲಿ ಯಾವ ಪಾಲೂ ದೊರೆಯದೇ ಪ್ರಸಿದ್ದವಲ್ಲದ ದೇವಸ್ಥಾನಗಳ ಅರ್ಚಕರಿಗೆ ಸಂಬಳ ಕೊಡಲೂ ಹಣವಿಲ್ಲದೇ ಸಿ ಹಾಗೂ ಡಿ ದರ್ಜೆಯ ದೇವಸ್ಥಾನಗಳು ನಿರ್ವಹಣೆಯಾಗದೇ ಪಾಳು ಬೀಳುವ ಅವಕಾಶಗಳೂ ಬೇಕಾದಷ್ಟಿವೆ.
* ದೇವಸ್ಥಾನಗಳ ಆದಾಯ ಹಾಗೂ ನಿಯಂತ್ರಣದಲ್ಲಿ ಪಾರದರ್ಶಕತೆಯೇ ಇಲ್ಲದಂತಾಗಿ ಅವ್ಯವಹಾರಗಳು ಹೆಚ್ಚಾಗುತ್ತಲೇ ಹೋಗುತ್ತವೆ.
ಹೀಗೆ.. ದೇವಸ್ಥಾನಗಳನ್ನು ಸರಕಾರದ ಕಣ್ಗಾವಲಿನಿಂದ ಮುಕ್ತಮಾಡಿ ಸ್ವಾಯತ್ತತೆ ನೀಡಿದರೆ ಅಲ್ಪಸಂಖ್ಯಾತ ವೈದಿಕರಿಗೆ ಹಾಗೂ ಪ್ರಭಾವಿ ಮೇಲ್ಜಾತಿಯವರಿಗೆ ಲಾಭದಾಯಕವಾಗಬಹುದೇ ಹೊರತು ಬಹುಸಂಖ್ಯಾತ ಭಕ್ತಗಣಗಳಿಗಲ್ಲ. ಈಗ ಸರಕಾರದ ಮುಜರಾಯಿ ಇಲಾಖೆಯಿಂದ ರಾಜ್ಯದಲ್ಲಿರುವ 35 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ನಿರ್ವಹಣೆ ಹಾಗೂ ಅರ್ಚಕರ ಸಂಬಳಕ್ಕೆ ವಾರ್ಷಿಕ 350 ಕೋಟಿ ಹಣ ಬಿಡುಗಡೆಯಾಗುತ್ತಿದೆ. ಪುರೋಹಿತಶಾಹಿಗಳ ಒತ್ತಾಯಕ್ಕೆ ಒಳಗಾಗಿ ಸರಕಾರವೇನಾದರೂ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳನ್ನು ಸ್ವಾಯತ್ತವೆಂದು ಘೋಷಿಸಿ ಸರಕಾರಿ ಅನುದಾನವನ್ನು ನಿಲ್ಲಿಸಿದರೆ ಅದೆಷ್ಟೋ ದೇವಸ್ಥಾನಗಳು ಬಾಗಿಲು ಮುಚ್ಚಬೇಕಾಗುತ್ತದೆ. ಹೆಚ್ಚು ಆದಾಯವಿರುವ 250 ಎ ಗ್ರೇಡ್ ದೇವಸ್ಥಾನಗಳನ್ನು ಗಮನದಲ್ಲಿಟ್ಟುಕೊಂಡು ಮುಜರಾಯಿ ಇಲಾಖೆಯ ನಿಯಂತ್ರಣದಿಂದ ಎಲ್ಲಾ ದೇವಸ್ಥಾನಗಳನ್ನು ಮುಕ್ತಗೊಳಿಸಿದ್ದೇ ಆದರೆ ಲಾಭದಾಯಕವಲ್ಲದ, 30 ಸಾವಿರಕ್ಕೂ ಹೆಚ್ಚಿರುವ ಸಿ ಮತ್ತು ಡಿ ಗ್ರೇಡ್ ದೇವಸ್ಥಾನಗಳನ್ನು ನಡೆಸುವ ಹೊಣೆಗಾರಿಕೆಯನ್ನು ಹೊರುವವರು ಯಾರು? ತಿರುಪತಿ ದೇವಸ್ಥಾನದಲ್ಲಿ ಅರ್ಚಕರು ಅವ್ಯವಹಾರ ಮಾಡಿ ಸಿಕ್ಕಾಕಿಕೊಂಡಾಗ, ಮೇಲುಕೋಟೆಯ ಅರ್ಚಕರೇ ಚೆಲುವನಾರಾಯಣಸ್ವಾಮಿಯ ಆಭರಣ ಕದ್ದು ಹಗರಣವಾದಾಗ ವಿಚಾರಿಸಲು ದೇವರಂತೂ ಬರುವುದಿಲ್ಲ, ಪ್ರಶ್ನಿಸುವ ಭಕ್ತರನ್ನು ದೇವಸ್ಥಾನದೊಳಗೆ ಬಿಟ್ಟುಕೊಳ್ಳುವುದಿಲ್ಲ. ಆಗ ಅವ್ಯವಹಾರಗಳ ಕುರಿತು ಕೇಳುವವರು ಯಾರು?
ದೇವಸ್ಥಾನಗಳು ಮುಜರಾಯಿ ಇಲಾಖೆಯ ಸುಪರ್ದಿಯಲ್ಲಿರುವುದೇ ದೇವಸ್ಥಾನಗಳ ಒಳಿತಿಗೆ ಒಳ್ಳೆಯದು. ಸ್ವಾಯತ್ತತೆ ಹೆಸರಲ್ಲಿ ದೇವಸ್ಥಾನಗಳ ನಿಯಂತ್ರಣ ಪುರೋಹಿತರ ಇಲ್ಲವೇ ಪ್ರಭಾವಿಗಳ ಕೈಗೆ ಹಸ್ತಾಂತರವಾದರೆ ಅಪಾಯ ಹಾಗೂ ಅನಾನುಕೂಲಗಳೇ ಹೆಚ್ಚು. ಇದನ್ನು ಭಕ್ತರು ಅರಿಯಬೇಕಿದೆ. ದೇವಸ್ಥಾನಗಳನ್ನು ವ್ಯಾಪಾರಿ ಕೇಂದ್ರಗಳನ್ನಾಗಿಸಿ ದೇವರ ಹೆಸರಲ್ಲಿ ಸುಲಿಗೆ ಮಾಡುತ್ತಿರುವುದನ್ನು ಭಕ್ತಗಣಗಳೇ ವಿರೋಧಿಸಬೇಕಿದೆ. ಯಾವುದೇ ಸರಕಾರ ಇದ್ದರೂ ಅದನ್ನು ಪ್ರಶ್ನಿಸಬಹುದಾಗಿದೆ. ದೇವಸ್ಥಾನಗಳ ನಿರ್ವಹಣೆ ಖಾಸಗಿ ಗುಂಪಿನವರದ್ದಾದರೆ ಪ್ರಶ್ನಿಸುವ ಅವಕಾಶವನ್ನೂ ಭಕ್ತರು ಕಳೆದುಕೊಳ್ಳುತ್ತಾರೆ. ಧಾರ್ಮಿಕ ಶೋಷಣೆಗೆ ಒಳಗಾಗುತ್ತಾರೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ಪತ್ರಕರ್ತರು
ಇದನ್ನೂ ಓದಿ- ಲಾಡು ಪ್ರಕರಣ | ಚಿಲ್ಲರೆ ರಾಜಕಾರಣ?