ಹಗರಣಗಳು ಹೆಚ್ಚಾದಷ್ಟೂ, ಲೂಟಿಯಲ್ಲಿ ಪಾಲುದಾರಿಕೆಗಾಗಿ ವಿರೋಧ ಅತಿಯಾದಷ್ಟೂ, ಮಾಡಿದ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಳ್ಳುವ ಸರಕಾರಗಳು ಅಸ್ತಿತ್ವಕ್ಕೆ ಬಂದಷ್ಟೂ, ಸಂವಿಧಾನದ ಸಮಾನತೆಯ ಆಶಯಗಳು ಸೋಲುತ್ತವೆ. ಡೆಮಾಕ್ರಸಿ ಎನ್ನುವುದು ಡ್ಯಾಮೇಜ್ ಆಗುತ್ತಾ ಶಿಥಿಲ ಗೊಳ್ಳುತ್ತದೆ- ಶಶಿಕಾಂತ ಯಡಹಳ್ಳಿ, ಪತ್ರಕರ್ತರು.
ಸಂಸತ್ತು ಸದನಗಳ ಅಧಿವೇಶನಗಳು ಅಂದರೆ ಹೀಗೆ. ಪರಸ್ಪರರು ಕಿರುಚಾಡಿ, ಕಿಚಾಯಿಸಿ ಕಾಲೆಳೆದು ಕೆಸರೆರಚಾಟ ಮಾಡುವುದನ್ನು ನೋಡುವುದಾದರೂ ಹೇಗೆ?
ಹಗರಣ, ಹಗರಣ ಮತ್ತು ಹಗರಣಗಳ ಕುರಿತ ಆರೋಪ ಪ್ರತ್ಯಾರೋಪಗಳ ಕದನಕ್ಕೆ ಅಧಿವೇಶನವೇ ಸಾಕ್ಷಿ. ಆಳುವ ಪಕ್ಷದ ಹಗರಣದ ವಿರುದ್ಧ ಪ್ರತಿಪಕ್ಷಗಳ ಅಸ್ತ್ರ. ವಿರೋಧ ಪಕ್ಷದ ಸರಕಾರ ಇದ್ದಾಗ ನಡೆದ ಹಗರಣಗಳ ಬಗ್ಗೆ ಆಳುವ ಪಕ್ಷದವರ ಪ್ರತ್ಯಾಸ್ತ್ರ. ಮಾತಿಗೆ ಮಾತು, ಆರೋಪಕ್ಕೆ ಪ್ರತ್ಯಾರೋಪ, ಅವರ ಮೇಲೆ ಇವರ, ಇವರ ಮೇಲೆ ಅವರ ಕೋಪ ಪ್ರಕೋಪ ಆಟಾಟೋಪ.
ಇವರನ್ನೆಲ್ಲಾ ಮತದಾನದ ಮೂಲಕ ಆಯ್ಕೆ ಮಾಡಿ ಕಳುಹಿಸಿದ ಮಹಾಜನತೆ ಇವರ ಕೆಸರೆರಚಾಟವನ್ನು ಮಾಧ್ಯಮಗಳ ಮೂಲಕ ಗಮನಿಸುತ್ತಿದ್ದಾರೆ ಎಂಬ ಕನಿಷ್ಠ ಪ್ರಜ್ಞೆಯಾದರೂ ಈ ಸದನ ಕಲಿಗಳಾದ ಶಾಸಕರಿಗೆ ಇದ್ದಿದ್ದರೆ ಹೀಗೆ ಕಚ್ಚಾಡುತ್ತಿರಲಿಲ್ಲ. ಈ ಆಳುವ ವರ್ಗದವರಿಗೆ ಚೆನ್ನಾಗಿ ಗೊತ್ತಿದೆ ಮತ ಹಾಕಿದ ನಂತರ ಜನರ ಹಂಗೇತಕೆ ಎಂದು. ಜನರಿಗೆ ಬೇರೆ ಆಯ್ಕೆಯಾದರೂ ಎಲ್ಲಿದೆ?. ಕಮಲ ಪಕ್ಷದ ಹಗರಣಗಳಿಂದ ಬೇಸತ್ತರೆ ಕೈ ಪಕ್ಷದ ಕೈ ಹಿಡಿಯುತ್ತಾರೆ. ಕೈ ಪಕ್ಷದ ಹಗರಣಗಳಿಂದ ಭ್ರಮ ನಿರಸನ ಗೊಂಡರೆ ಕಮಲ ಪಕ್ಷಕ್ಕೆ ಮತ ಒತ್ತುತ್ತಾರೆ. ಚುನಾವಣೆಗಳ ನಂತರ ಸರಕಾರದ ಸಾರಥ್ಯ ವಹಿಸಿಕೊಳ್ಳುವ ಪಕ್ಷಗಳು ಅದಲು ಬದಲಾಗುತ್ತವೆಯೇ ಹೊರತು ಈ ಪರಸ್ಪರ ಕೆಸರೆರಚಾಟ ಹಾಗೂ ತೌಡು ಕುಟ್ಟುವ ಆಟ ನಿಲ್ಲುವುದಿಲ್ಲ.
ಈಗ ನಡೆಯುತ್ತಿರುವ ಅಧಿವೇಶನದಲ್ಲೂ ಸಹ ಹಗರಣಗಳದ್ದೇ ಏರು ಧ್ವನಿ.. ವಾಲ್ಮೀಕಿ ನಿಗಮ ಹಗರಣ, ಮೂಡಾ ನಿವೇಶನ ಹಗರಣಗಳು ಟ್ರೆಂಡಿಂಗ್ ನಲ್ಲಿವೆ. ಈ ಸ್ಕ್ಯಾಮ್ ಗಳ ಕುರಿತು ಪ್ರತಿಪಕ್ಷಗಳ ಆರ್ಭಟ. ವಿರೋಧ ಪಕ್ಷಗಳ ಆರೋಪ, ಆಳುವ ಪಕ್ಷದ ಸಮರ್ಥನೆಗಳದ್ದೇ ದರ್ಬಾರು.
ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಹಗರಣಗಳು ಇಲ್ಲದ ಸರಕಾರಗಳಿಲ್ಲ, ಭ್ರಷ್ಟಾಚಾರಗಳಲ್ಲಿ ಭಾಗಿಯಾಗದ ಪಕ್ಷಗಳಿಲ್ಲ. ಅವಕಾಶ ಸಿಕ್ಕಾಗ ಬಾಚಿಕೊಂಡವರೇ ಇಲ್ಲಿ ನಾಯಕರು. ಪ್ರಜಾಪ್ರಭುತ್ವದ ಮೂರು ಮತ್ತೊಂದು ಅಂಗಗಳು ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿವೆ. ಕಾರ್ಯಾಂಗ ಮತ್ತು ಶಾಸಕಾಂಗಗಳಂತೂ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಲೂಟಿಗಿಳಿದಿವೆ. ಇಲ್ಲಿ ಯಾರೂ ಶುದ್ಧ ಹಸ್ತರಲ್ಲ, ಇಲ್ಲಿ ಯಾರೂ ಪ್ರಾಮಾಣಿಕರಲ್ಲ, ಎಲ್ಲರೂ ಜಿಗಣೆಗಳೇ ಜನರ ನೆತ್ತರಿಗೆ ಎನ್ನುವುದು ಬಹುಜನರ ಅನಿಸಿಕೆಯಾಗಿದೆ.
ಹಗರಣವೊಂದು ಹೊರಬಿದ್ದಾಗ ವಿರೋಧ ಪಕ್ಷಗಳು ಆಳುವ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುವುದು, ತನಿಖೆಗೆ ಒತ್ತಾಯಿಸುವುದು ಅಪೇಕ್ಷಣೀಯ. ಆದರೆ ವಿರೋಧ ವ್ಯಕ್ತಪಡಿಸುವ ವಿರೋಧ ಪಕ್ಷದ ನಾಯಕರುಗಳೇ ಈ ಹಿಂದಿನ ಸರಕಾರದಲ್ಲಿದ್ದಾಗ ಯಾವುದ್ಯಾವುದೋ ಹಗರಣಗಳಲ್ಲಿ ಭಾಗಿಯಾಗಿ ಹೆಸರು ಕೆಡಿಸಿ ಕೊಂಡಿರುವಾಗ, ಭ್ರಷ್ಟಾಚಾರದ ಆರೋಪ ಹೊತ್ತಿರುವಾಗ ಬೇರೆ ಪಕ್ಷದ ಹಗರಣಗಳ ಬಗ್ಗೆ ಧ್ವನಿ ಎತ್ತುವ ನೈತಿಕತೆ ಎಲ್ಲಿರುತ್ತದೆ? ಮಸಿಯೊಂದು ಇದ್ದಿಲನ್ನು ನೋಡಿ ನಕ್ಕು ‘ಲೇ ಕರಿಯಾ’ ಎಂದು ಮೂದಲಿಸಿದಂತೆ, ಅವಕಾಶ ಸಿಕ್ಕಾಗ ಮಾಡಬಾರದ್ದನ್ನು ಮಾಡಿ ಈಗ ಅಂತಹುದ್ದನ್ನೇ ಮಾಡಿದ ಬೇರೆಯವರತ್ತ ಬೆರಳೆತ್ತಿ ತೋರುವುದು ಹಾಸ್ಯಾಸ್ಪದ ಸಂಗತಿ. ರಾಜಕಾರಣ ಅಂದರೆ ಹೀಗೆ ನೈತಿಕತೆಗೆ ಬೆಲೆಯಿಲ್ಲ, ಮೌಲ್ಯಗಳಿಗೆ ಗೌರವವಿಲ್ಲ, ನೀತಿ ನಿಯತ್ತುಗಳಿಗಿಲ್ಲಿ ಅರ್ಥವೇ ಇಲ್ಲ.
ಹೋಗಲಿ.. ಹಗರಣಗಳು ಬಹಿರಂಗವಾದಾಗ ತನಿಖೆ ಆಗಲೇ ಬೇಕು. ಆಗಲೇ ಸತ್ಯ ಹೊರಗೆ ಬರಲು ಸಾಧ್ಯ. ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಸಾಧ್ಯ. ಆದರೆ ಜನರಿಗೆ ಯಾವುದೇ ತನಿಖಾ ಸಂಸ್ಥೆಗಳ ಮೇಲೆಯೂ ನಂಬಿಕೆ ಇಲ್ಲವಾಗಿದೆ. ಯಾಕೆಂದರೆ ಎಲ್ಲಾ ತನಿಖಾ ಸಂಸ್ಥೆಗಳು ಆಯಾ ಪ್ರಭುತ್ವದ, ಆಳುವ ಸರಕಾರಗಳ ನಿಯಂತ್ರಣದಲ್ಲಿರುತ್ತವೆ. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರವು ಐಟಿ, ಈಡಿ, ಸಿಬಿಐ ಯಂತಹ ತನಿಖಾ ಸಂಸ್ಥೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ತಮ್ಮ ಪರವಾಗಿರುವವರನ್ನು ರಕ್ಷಿಸಲು ಹಾಗೂ ವಿರೋಧಿಯಾದವರನ್ನು ಹಿಡಿದು ಹಣಿಯಲು ಬಳಕೆಯಾಗಿವೆ, ಆಗುತ್ತಿವೆ. ಅದೇ ರೀತಿ ರಾಜ್ಯ ಸರಕಾರದ ಆಧೀನದಲ್ಲಿರುವ ಪೊಲೀಸ್, ಎಸ್ ಐ ಟಿ, ಸಿಐಡಿ ಮುಂತಾದ ತನಿಖಾ ಸಂಸ್ಥೆಗಳು ರಾಜ್ಯ ಸರಕಾರದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುತ್ತವೆ. ಹೀಗಾಗಿ ಯಾವುದೇ ರೀತಿಯ ಭ್ರಷ್ಟಾಚಾರ, ಅನಾಚಾರ, ಹಾಗೂ ಅಧಿಕಾರ ದುರುಪಯೋಗದಂತಹ ಪ್ರಕರಣಗಳಲ್ಲಿ ಸಕ್ರಿ ಯವಾಗಿದ್ದವರಿಗೆ ನ್ಯಾಯವಾದ ರೀತಿಯಲ್ಲಿ ತನಿಖೆಯಾಗುತ್ತದೆ, ವಿಚಾರಣೆಯ ನಂತರ ಶಿಕ್ಷೆಯಾಗುತ್ತದೆ ಎನ್ನುವ ಭರವಸೆಯಂತೂ ಇಲ್ಲವಾಗಿದೆ. ಹೀಗಾಗಿ ಆಳುವ ಸರಕಾರದ ರಕ್ಷಣೆಯಲ್ಲಿದ್ದ ಭ್ರಷ್ಟರು ಎಗ್ಗು ಸಿಗ್ಗಿಲ್ಲದೇ ಅಧಿಕಾರ ದುರುಪಯೋಗ ಪಡಿಸಿಕೊಂಡು ಲೂಟಿಗೆ ಮುಂದಾಗುತ್ತಾರೆ. ಸಿಕ್ಕಿದ್ದರಲ್ಲಿ ಇತರ ಭ್ರಷ್ಟರಿಗೂ ಹಂಚುತ್ತಾರೆ. ಹೀಗಾಗಿ ಕಳ್ಳರು ಕಳ್ಳರು ಒಂದಾಗಿ ಒಬ್ಬರನ್ನೊಬ್ಬರು ಸಮರ್ಥನೆ ಮಾಡಿಕೊಳ್ಳುತ್ತಾ ಹಗಲು ದರೋಡೆಗಿಳಿಯುತ್ತಾರೆ. ಯಾರಿಗೆ ಲೂಟಿಯಲ್ಲಿ ಪಾಲು ಸಿಕ್ಕಿಲ್ಲವೋ, ಯಾರಿಗೆ ಲೂಟಿ ಮಾಡಲು ಅಧಿಕಾರ ಇಲ್ಲವೋ ಅಂತವರು ಹಗರಣಗಳ ವಿರುದ್ಧ ರೋಷಾವೇಶ ತೋರಿಸುತ್ತಾರೆ. ಮಾಧ್ಯಮಗಳ ಮುಂದೆ ಅವಲತ್ತು ಕೊಳ್ಳುತ್ತಾರೆ. ಅಧಿವೇಶನಗಳಲ್ಲಿ ಅರಚಾಡುತ್ತಾರೆ. ಮತ್ತೆ ಮುಂದೆ ಜನರು ಇಂತವರಿಗೆ ಅಧಿಕಾರ ಕೊಟ್ಟಾಗ ಇವರೂ ಮಾಡುವುದು ಬ್ರಹ್ಮಾಂಡ ಭ್ರಷ್ಟಾಚಾರವನ್ನೇ. ಹೀಗಾಗಿ ಈ ಆಳುವ ಪಕ್ಷ ಹಾಗೂ ಪ್ರತಿಪಕ್ಷಗಳ ಆರೋಪ ಪ್ರತ್ಯಾರೋಪಗಳ ಬೃಹನ್ನಾಟಕದ ಹಿಂದೆ ಜನರನ್ನು ಯಾಮಾರಿಸುವ ತಂತ್ರಗಾರಿಕೆ ಇದೆಯೇ ಹೊರತು ಜನರ ಹಿತಾಸಕ್ತಿಯೇನಿಲ್ಲ.
ಹೀಗೆ ಹಗರಣಗಳು ಹೆಚ್ಚಾದಷ್ಟೂ, ಲೂಟಿಯಲ್ಲಿ ಪಾಲುದಾರಿಕೆಗಾಗಿ ವಿರೋಧ ಅತಿಯಾದಷ್ಟೂ, ಮಾಡಿದ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಳ್ಳುವ ಸರಕಾರಗಳು ಅಸ್ತಿತ್ವಕ್ಕೆ ಬಂದಷ್ಟೂ, ಸಂವಿಧಾನದ ಸಮಾನತೆಯ ಆಶಯಗಳು ಸೋಲುತ್ತವೆ. ಡೆಮಾಕ್ರಸಿ ಎನ್ನುವುದು ಡ್ಯಾಮೇಜ್ ಆಗುತ್ತಾ ಶಿಥಿಲ ಗೊಳ್ಳುತ್ತದೆ. ಇದೇ ಅವಕಾಶವನ್ನು ಬಳಸಿಕೊಳ್ಳುವ ಸರ್ವಾಧಿಕಾರಿ ಫ್ಯಾಸಿಸ್ಟ್ ಶಕ್ತಿಗಳು ಹಿಂದುತ್ವದ ಹೆಸರಲ್ಲಿ ಜನರನ್ನು ಭ್ರಮಾಧೀನಗೊಳಿಸಿ ಸರ್ವಾಧಿಕಾರವನ್ನು ಘೋಷಿಸುತ್ತವೆ. ಅಲ್ಲಿಗೆ ಅಂಬೇಡ್ಕರ್ ರವರ ಸಂವಿಧಾನ ಸರ್ವನಾಶವಾಗುತ್ತದೆ. ಬಹುಜನರ ಬದುಕು ಮತ್ತೆ ಮೇಲ್ವರ್ಗದವರ ದಬ್ಬಾಳಿಕೆಗೆ, ಪುರೋಹಿತಶಾಹಿಗಳ ತಾರತಮ್ಯಕ್ಕೆ ಈಡಾಗುತ್ತದೆ.
ಶಶಿಕಾಂತ ಯಡಹಳ್ಳಿ
ಪತ್ರಕರ್ತರು, ರಂಗಕರ್ಮಿ.
ಇದನ್ನೂ ಓದಿ- ಪಂಚೆ ತೊಟ್ಟ ರೈತನಿಗೆ ಮಾಲ್ ಪ್ರವೇಶ ನಿಷೇಧ | ಮಾರಿಕೊಂಡ ಮಾಧ್ಯಮಗಳ ಮೊಸಳೆ ಕಣ್ಣೀರು