ಕನ್ನಡದ ಹಿರಿಯ ಕತೆಗಾರ್ತಿ, ಸಾಮಾಜಿಕ ಹೋರಾಟಗಾರ್ತಿ ಹಾಗೂ ಹಿರಿಯ ಪತ್ರಕರ್ತೆ ಬಾನು ಮುಷ್ತಾಕ್ ಅವರ ಆಯ್ದ ಕತೆಗಳ ಇಂಗ್ಲಿಷ್ ಅನುವಾದ ಕೃತಿಯಾದ ʼಹಾರ್ಟ್ ಲ್ಯಾಂಪ್” (ಅನುವಾದಕಿ- ದೀಪಾ ಬಸ್ತಿ) ಗೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ (International Booker Prize) ಲಭಿಸಿದೆ. ಈ ಪ್ರಶಸ್ತಿಯ ಮೊತ್ತ ಐವತ್ತು ಸಾವಿರ ಪೌಂಡುಗಳಾಗಿದ್ದು (57,42,000ರೂಪಾಯಿ) ಈ ಪ್ರಶಸ್ತಿ ಮೊತ್ತವನ್ನು ಮೂಲ ಲೇಖಕಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಬಸ್ತಿ ಸಮನಾಗಿ ಹಂಚಿಕೊಳ್ಳುವರು.
ಬಾನು ಮುಷ್ತಾಕ್ ಅವರು ಕಳೆದ ನಾಲ್ಕು ದಶಕಗಳಿಂದಲೂ ಬರೆಹದ ಬೇಸಾಯ ಕೈಗೊಂಡಿದ್ದು ಇದುವರೆಗೆ ಅವರ ಹಲವು ಕಥಾ ಸಂಕಲನಗಳು ಪ್ರಕಟವಾಗಿವೆ. ʼಹೆಜ್ಜೆ ಮೂಡಿದ ಹಾದಿʼ, ʼಬೆಂಕಿ ಮಳೆʼ, ʼಎದೆಯ ಹಣತೆ, ಸಫೀರಾʼ, ʼಬಡವರ ಮಗಳು ಹೆಣ್ಣಲ್ಲʼ ಅವರ ಕಥಾ ಸಂಕಲನಗಳಾಗಿದ್ದು “ಹಸೀನಾ ಮತ್ತು ಇತರ ಕತೆಗಳು” ಅವರ ಸಮಗ್ರ ಕಥಾ ಸಂಕಲವಾಗಿದೆ. ಇದನ್ನು ಅಭಿರುಚಿ ಪ್ರಕಾಶನ ಪ್ರಕಟಿಸಿದೆ. 1990 ರಿಂದ 2023ರ ವರೆಗೆ ಪ್ರಕಟವಾಗಿರುವ ಬಾನು ಮುಷ್ತಾಕ್ ಅವರ ಆರು ಕತಾ ಸಂಕಲನಗಳಿಂದ ಆಯ್ದ 11 ಕತೆಗಳನ್ನು ಅವರ ಹಾರ್ಟ್ ಲ್ಯಾಂಪ್ ಕೃತಿ ಒಳಗೊಂಡಿದೆ. ಈಗ ಈ ಕೃತಿಗೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ.
ಈ ಮೂಲಕ ಕನ್ನಡದ ಕೃತಿಯೊಂದಕ್ಕೆ ಲಭಿಸಿರುವ ಚೊಚ್ಚಲ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಇದಾಗಿದೆ. ಈ ಹಿಂದೆ ಕೆಲವಾರು ಭಾರತೀಯ ಲೇಖಕ ಲೇಖಕಿಯರು ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರಲ್ಲಿ ಲೇಖಕಿ ಅರುಂಧತಿ ರಾಯ್ (God of the Small things, 1997 ), ಕಿರಣ್ ದೇಸಾಯಿ (The Inheritance of Loss, 2006), ಅರವಿಂದ್ ಆಡಿಗ (The White Tiger, 2008), ಭಾರತೀಯ ಟ್ರಿನಿಡಾಡ್ ಬ್ರಿಟಿಷ್ ಲೇಖಕ ವಿ ಎಸ್ ನೈಪೌಲ್ (In a Free State, 1971), ಭಾರತೀಯ ಮೂಲಕದ ಬ್ರಿಟಿಷ್ ಅಮೆರಿಕನ್ ಕಾದಂಬರಿಕಾರ ಸಲ್ಮಾನ್ ರಷ್ದೀ (Midnight’s Children, 1981), ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅನುವಾದಗೊಂಡ ಕೃತಿಗಳಿಗೆ ಸಂದಿರುವ ಪ್ರಶಸ್ತಿಗಳಲ್ಲಿ 2022ರಲ್ಲಿ ಹಿಂದಿ ಲೇಖಕಿ ಗೀತಾಂಜಲಿ ಶ್ರೀಯವರಿಗೆ ಅವರ ರೇತ್ ಸಮಾಧಿ (Tomb of Sand) ಕೃತಿಗೆ ಅಂತರರಾಷ್ಟ್ರೀಯ ಬೂಕರ್ ದೊರೆದಿತ್ತು. ನಂತರದಲ್ಲಿ ಕನ್ನಡದ ಲೇಖಕಿಯಾಗಿ ಬಾನು ಮುಷ್ತಾಕ್ ಈ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಕನ್ನಡಿಗರೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ.
ಸಿ ಎಂ ಸಿದ್ದರಾಮಯ್ಯ ಅಭಿನಂದನೆ
ಹಿರಿಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಸಂದಿರುವ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಈ ಕುರಿತು ಎಕ್ಸ್ ಮತ್ತು ಫೇಸ್ಬುಕ್ ಗಳಲ್ಲಿ ಹಂಚಿಕೊಂಡಿರುವ ಅವರು “ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ. ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ” ಎಂದು ಹಾರೈಸಿದ್ದಾರೆ.
ಬೂಕರ್ ಪ್ರಶಸ್ತಿಯ ಹಿನ್ನೆಲೆ
ಬೂಕರ್ ಪ್ರಶಸ್ತಿಯನ್ನು 1969 ರಲ್ಲಿ “ಬುಕ್ಕರ್ ಮೆಕ್‌ಕಾನ್ನೆಲ್ ಲಿಮಿಟೆಡ್” (Booker McConnell Ltd) ಎಂಬ ಕಂಪನಿ ಸ್ಥಾಪಿಸಿತು. ಇದು ಇಂಗ್ಲಿಷ್ ಕೃತಿಗಳಿಗೇ ಮಾತ್ರವಿದ್ದ ಪ್ರಶಸ್ತಿ. 2005ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಅನುವಾದಿತ ಇಂಗ್ಲಿಷ್ ಕೃತಿಗಳಿಗೆ ಸ್ಥಾಪಿಸಲಾಯಿತು. ಈ ಪ್ರಶಸ್ತಿಯನ್ನು ಪಡೆದಿರುವವರಲ್ಲಿ ನೈಜೀರಿಯಾದ ಚಿನಾವಾ ಅಚಿಬೆ, ಅಮೆರಿಕದ ಅಲೈಸ್ ಮುನ್ರೋ, ಲಿಡಿಯಾ ಡೇವಿಸ್, ಅಲ್ಬೇನಿಯಾದ ಇಸ್ಮಾಯಿಲ್ ಕದಾರೆ, ದ. ಕೊರಿಯಾದ ಹಾನ್ ಕಾಂಗ್, ಪೊಲೆಂಡ್ ನ ಓಲ್ಗಾ ತೊಕಾರ್ಜುಕ್ ಮೊದಲಾದವರಿದ್ದಾರೆ.