ಉದ್ಯೋಗ, ಏಜೆನ್ಸಿಯಲ್ಲಿ ಕನ್ನಡಿಗರಿಗೆ ಆದ್ಯತೆ; ಕರವೇ ಆಶ್ರಯದಲ್ಲಿ ನಾಳೆ ಪ್ರತಿಭಟನೆ; ಅಧ್ಯಕ್ಷ  ನಾರಾಯಣಗೌಡ ಹೇಳಿಕೆ

Most read

ಬೆಂಗಳೂರು: ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳ ಮೇಲೆ ಕನ್ನಡ ಭಾಷೆಯಲ್ಲಿ ಉತ್ಪನ್ನದ ಹೆಸರು, ವಿವರಗಳನ್ನು ಮುದ್ರಿಸಬೇಕು, ಈ ಉತ್ಪನ್ನಗಳ ಏಜೆನ್ಸಿಗಳನ್ನು ಕನ್ನಡಿಗರಿಗೆ ಮಾತ್ರ ನೀಡಬೇಕು, ಎಲ್ಲ ಬಗೆಯ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮಾತ್ರ ಉದ್ಯೋಗ ನೀಡಬೇಕು ಎಂಬ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲಿ `ಮಹಾಸಂಘರ್ಷ ಯಾತ್ರೆ ಹಮ್ಮಿಕೊಂಡಿದೆ. ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಮತ್ತು ಯಾತ್ರೆಯ ಉದ್ಘಾಟನೆಯನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.  

ಮೊದಲನೆಯದಾಗಿ ಕರ್ನಾಟಕದಲ್ಲಿ ಮಾರಾಟವಾಗುವ/ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಮೇಲೆ ಶೇ 60ರಷ್ಟು ಮುದ್ರಿತ ಮಾಹಿತಿ ಕನ್ನಡದಲ್ಲೇ ಇರಬೇಕು. ವಸ್ತುವಿನ ಹೆಸರು, ಪ್ರಮಾಣ ಮೊದಲಾದ ಮಾಹಿತಿ ಕನ್ನಡದಲ್ಲಿ ಮುದ್ರಿಸಿರಬೇಕು. ಅಂತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ (ಐಎಸ್‌ ಓ) ಉತ್ಪನ್ನಗಳ ಮೇಲೆ ಮುದ್ರಿಸುವ ಭಾಷೆ ಸ್ಥಳೀಯದ್ದೇ ಆಗಿರಬೇಕು, ಸ್ಥಳೀಯ ಜನರು ಓದಿ ಅರ್ಥ ಮಾಡಿಕೊಳ್ಳುವಂಥ ಭಾಷೆ ಆಗಿರಬೇಕು ಎಂದು ಶಿಫಾರಸು ಮಾಡುತ್ತದೆ. ಇದನ್ನು ಜಾರಿಗೊಳಿಸಲು ನೋಡಲ್‌ ಅಧಿಕಾರಿಗಳನ್ನು ನೇಮಿಸಬೇಕು ಮತ್ತು ನಿಯಮ ಉಲ್ಲಂಘಿಸುವ ಉತ್ಪನ್ನಗಳ ಮಾರಾಟವನ್ನು ಕರ್ನಾಟಕದಲ್ಲಿ ನಿಷೇಧಿಸುವಂತಹ ಕಾನೂನು ರೂಪಿಸಬೇಕು ಎಂದು ಕರವೇ ಆಗ್ರಹಪಡಿಸುತ್ತದೆ.

ಎರಡನೆಯದಾಗಿ ಕರ್ನಾಟಕದಲ್ಲಿ ಮಾರಾಟವಾಗುವ/ ಬಳಕೆಯಾಗುವ ಎಲ್ಲ ಬಗೆಯ ಉತ್ಪನ್ನಗಳ ಏಜೆನ್ಸಿಗಳು ಕನ್ನಡಿಗರಿಗೇ ಸಿಗಬೇಕು. ಅಥವಾ ಈ ಏಜೆನ್ಸಿಗಳಲ್ಲಿ ಕನ್ನಡಿಗರು ಪಾಲುದಾರರಾಗಿರಬೇಕು. ರಾಜ್ಯದಲ್ಲಿ ಮಾರಾಟವಾಗುವ ಉತ್ಪನ್ನಗಳ ಏಜೆನ್ಸಿಗಳನ್ನು ಕನ್ನಡೇತರರಿಗೆ ನೀಡಲಾಗುತ್ತಿದೆ. ಏಜೆನ್ಸಿಗಳನ್ನು ನಡೆಸಲು ಅರ್ಹ ಕನ್ನಡಿಗರು ಇಲ್ಲವೇ? ಇರುತ್ತಾರೆ. ಆದ್ದರಿಂದ ಎಲ್ಲ ಏಜೆನ್ಸಿಗಳು ಕನ್ನಡಿಗರಿಗೆ ದಕ್ಕಬೇಕು.

ಮೂರನೆಯದಾಗಿ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ಬಗೆಯ ರಾಷ್ಟ್ರೀಯ/ ಖಾಸಗಿ/ ಗ್ರಾಮೀಣ /ಸಹಕಾರಿ ಬ್ಯಾಂಕ್ ಗಳು, ಫೈನಾನ್ಸ್ ಗಳು, ಚಿನ್ನದ ಅಡಮಾನ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳು ಮತ್ತು ಇತರ ಯಾವುದೇ ಸ್ವರೂಪದ ಹಣಕಾಸು ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ‌. 100ರಷ್ಟು ಹುದ್ದೆಗಳು ಮತ್ತು ಇತರೆ ಉನ್ನತ ಹುದ್ದೆಗಳಲ್ಲಿ ಶೇ. 60ರಷ್ಟು ಹುದ್ದೆಗಳು ಕನ್ನಡಿಗರಿಗೆ ಮೀಸಲಾಗಿಡಬೇಕು. ಈ ಎಲ್ಲ ಸಂಸ್ಥೆಗಳು ಬಳಸುವ/ಗ್ರಾಹಕರಿಗೆ ನೀಡುವ ಎಲ್ಲ ದಾಖಲೆಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಕನ್ನಡ ಇಲ್ಲಿನ ಆಡಳಿತ ಭಾಷೆ ಎಂಬುದನ್ನು ಮರೆತು ವ್ಯವಹರಿಸುತ್ತಿವೆ. ಅದರ ಜೊತೆಗೆ ಖಾಸಗಿ/ಗ್ರಾಮೀಣ/ ಸಹಕಾರಿ ಬ್ಯಾಂಕ್‌ ಗಳು, ಫೈನಾನ್ಸ್ ಗಳು, ಚಿನ್ನದ ಅಡಮಾನ ಸಂಸ್ಥೆಗಳು, ಜೀವವಿಮಾ ಸಂಸ್ಥೆಗಳು, ಆರೋಗ್ಯ ವಿಮಾ ಸಂಸ್ಥೆಗಳಲ್ಲೂ ಕನ್ನಡ ಬಳಕೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಕರವೇ ಹೋರಾಟದ ಫಲವಾಗಿ ಈಗೀಗ ಚಲನಚಿತ್ರಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್‌ ಜೊತೆಗೆ ಕನ್ನಡಕ್ಕೂ ಆದ್ಯತೆ ನಡಲಾಗುತ್ತಿದೆ. ಆದರೂ  ಕೆಲವು ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಬರೆದ ಚೆಕ್‌ಗಳನ್ನು ತಿರಸ್ಕರಿಸಿದ ಉದಾಹರಣೆಗಳಿವೆ. ಮೇಲೆ ಹೇಳಿದ ಎಲ್ಲ ಹಣಕಾಸು ಸಂಸ್ಥೆಗಳಲ್ಲಿ ಕನ್ನಡೇತರ ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ಉತ್ತರ ಭಾರತೀಯರೇ ತುಂಬಿಕೊಂಡಿರುವುದು ಇಂತಹ ಅಚಾತುರ್ಯಗಳಿಗೆ  ಮುಖ್ಯ ಕಾರಣವಾಗಿದೆ. ಇವರು ಹಿಂದಿಯಲ್ಲೇ ಕನ್ನಡಿಗರೊಂದಿಗೆ ವ್ಯವಹಾರ ನಡೆಸುತ್ತಿದ್ದಾರೆ. ಹಿಂದಿ ಬಾರದ ಗ್ರಾಹಕರು ಇದರಿಂದಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕನ್ನಡ ಬಾರದ ಸಿಬ್ಬಂದಿಯನ್ನೇ ನೇಮಿಸಿಕೊಳ್ಳುತ್ತಿರುವುದರಿಂದ ಎಲ್ಲೆಡೆ ಗ್ರಾಹಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಬ್ಯಾಂಕುಗಳು/ಹಣಕಾಸು ಸಂಸ್ಥೆಗಳು ಹಿಂದಿಯನ್ನು ಬಳಸದೆ ಕನ್ನಡ ಮತ್ತು ಇಂಗ್ಲಿಷ್ ಎರಡೇ ಭಾಷೆಯಲ್ಲಿ ವ್ಯವಹರಿಸಬೇಕು. ಆಡಳಿತ ಭಾಷೆ ಮತ್ತು ನಾಡಭಾಷೆಯಾಗಿ ಕನ್ನಡವಿರುತ್ತದೆ, ಕನ್ನಡ ಬಾರದವರಿಗೆ ಇಂಗ್ಲಿಷ್ ಇರುತ್ತದೆ. ಮೂರನೇ ಭಾಷೆಯ ಅವಶ್ಯಕತೆ ಕನ್ನಡಿಗರಿಗೆ ಇರುವುದಿಲ್ಲ.

ಅತ್ಯಂತ ಮುಖ್ಯವಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕುಗಳ ಸಿಬ್ಬಂದಿ ಕರ್ನಾಟಕದವರೇ ಆಗಿರಬೇಕು. ಹೊರರಾಜ್ಯದ, ಕನ್ನಡ ಬಾರದ ಸಿಬ್ಬಂದಿ ಇದ್ದರೆ ಕೂಡಲೇ ಅವರನ್ನು ಬೇರೆ  ರಾಜ್ಯಗಳಿಗೆ ವರ್ಗಾಯಿಸಬೇಕು. ಭವಿಷ್ಯದಲ್ಲೂ ಕನ್ನಡಿಗರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು. ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಸಹ ಡಾ.ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ವರದಿಯ ಶಿಫಾರಸಿನಂತೆ ಶೇ. ನೂರಕ್ಕೆ ನೂರು ಕನ್ನಡಿಗರಿಗೇ ನೀಡಬೇಕು ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ಅವರು ಆಗ್ರಹಪಡಿಸಿದ್ದಾರೆ. ಇಂತಹ ವಿಷಯಗಳ ಮೇಲೆ ಸರ್ಕಾರವನ್ನು ಎಚ್ಚರಿಸುವ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶನಿವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.                                                                                                                

ಈ ಮೂರೂ ಹಕ್ಕೊತ್ತಾಯಗಳನ್ನು ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ ಕಾರ್ಪೊರೇಟ್‌ ಸಂಸ್ಥೆಗಳು/ಹಣಕಾಸು ಸಂಸ್ಥೆಗಳು ಈಡೇರಿಸಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಂತಹಂತವಾಗಿ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದೆ. ಒಂದು ವೇಳೆ ನಮ್ಮ ಹಕ್ಕೊತ್ತಾಯಗಳು ಈಡೇರದಿದ್ದಲ್ಲಿ ನಾವು ಉಗ್ರ ಸ್ವರೂಪದ ಚಳವಳಿ ಹಮ್ಮಿಕೊಳ್ಳಲಿದ್ದೇವೆ./

 ಮಹಾಪ್ರತಿಭಟನೆಗೆ ತಮ್ಮ ಮಾಧ್ಯಮದ ವರದಿಗಾರರು/ಛಾಯಾಗ್ರಾಹಕರನ್ನು ನಿಯೋಜಿಸಿ ಈ ಚಳವಳಿಯ ಕುರಿತ ವರದಿಗಳನ್ನು ತಮ್ಮ ಮಾಧ್ಯಮದಲ್ಲಿ ಪ್ರಸಾರಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

More articles

Latest article