ಬೆಂಗಳೂರು: ಸಂವಿಧಾನವೇ ಗೊತ್ತಿಲ್ಲದ ಮೂರ್ಖ ಮಾಜಿ ಸಂಸದರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಮುಖಂಡ, ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರೇಳದೆ ಸಿಎಂ ಸಿದ್ದರಾಮಯ್ಯ ಟೀಕಿಸಿದರು. ನಾವು ಜಾತ್ಯತೀತ ವ್ಯವಸ್ಥೆಯಲ್ಲಿದ್ದು, ಮೈಸೂರು ದಸರಾವನ್ನು ಸಾಹಿತಿ ಬಾನು ಮುಷ್ತಾಕ್ ಉದ್ಘಾಟಿಸಬಾರದು ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದೂ ತಿಳಿಸಿದರು.
ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಕೆಲವು ಪಟ್ಟಭದ್ರರು ಮತಾಂಧರಂತೆ ವರ್ತಿಸಿ ಸಮಾಜವನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಇತ್ತೀಚಿಗೆ ಇಂತಹವರ ಸಂಖ್ಯೆ ಹೆಚ್ಚುತ್ತಿದೆ ಎಂದರು. ರಾಜಕೀಯ ಮಾಡುವುದು ತಪ್ಪಲ್ಲ. ಆದರೆ ಇದರ ಹೆಸರಿನಲ್ಲಿ ಸಾಮಾನ್ಯ ಜನರನ್ನು ದಾರಿ ತಪ್ಪಿಸಬಾರದು ಎಂದು ತಿರುಗೇಟು ನೀಡಿದರು.
ಬಾನು ಮುಷ್ತಾಕ್ ಅವರನ್ನು ದಸರಾಕ್ಕೆ ಆಹ್ವಾನಿಸಿರುವುದು ಸರ್ಕಾರದ ತೀರ್ಮಾನ. ಅದರ ವಿರುದ್ಧ ಪ್ರತಾಪ ಸಿಂಹ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಪೀಠದಿಂದ ನ್ಯಾಯ ಸಿಕ್ಕಿದೆ
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಸಂವಿಧಾನದಲ್ಲಿ ಎಲ್ಲ ಧರ್ಮಗಳಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಹಾಗಿರುವಾಗ ಚಾಮುಂಡೇಶ್ವರಿ ಬೆಟ್ಟಕ್ಕೆ ಬರಬೇಡಿ ಎಂದು ಹೇಗೆ ಹೇಳಲು ಸಾಧ್ಯ? ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ನಾಯಕರು ಸಂವಿಧಾನವನ್ನು ಸರಿಯಾಗಿ ಓದಿಕೊಳ್ಳಬೇಕು. ಬಿಜೆಪಿಯವರಿಗೆ ಸಂವಿಧಾನಕ್ಕೆ ಗೌರವ ಕೊಟ್ಟು ಅಭ್ಯಾಸ ಇಲ್ಲ ಎಂದರು.