ನಾಳೆ ( ಡಿ.13) ನಡೆಯಲಿರುವ ಸಕಲೇಶಪುರ ತಾಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ಹಿರಿಯ ರಂಗಕರ್ಮಿ, ಪರಿಸರವಾದಿ, ಸಾಹಿತಿ ಪ್ರಸಾದ್ ರಕ್ಷಿದಿ ಅವರದು. ಬೆಳ್ಳೇಕೆರೆ ಎಂಬ ಪುಟ್ಟಹಳ್ಳಿಯನ್ನು ಕನ್ನಡ ರಂಗಭೂಮಿಯ ಭೂಪಟದಲ್ಲಿ ತಂದು ನಿಲ್ಲಿಸಿ ಒಂದು ಬಗೆಯಲ್ಲಿ ಸಾಂಸ್ಕೃತಿಕ ಪವಾಡ ಸೃಷ್ಟಿಸಿದ ರಕ್ಷಿದಿಯವರಿಗೆ ಕನ್ನಡ ಪ್ಲಾನೆಟ್ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಅವರ ಕ್ರಿಯಾಶೀಲತೆ, ಸೃಜನಶೀಲತೆಗಳ ಅನಾವರಣ ಮಾಡಿದ್ದಾರೆ ದಿನೇಶ್ ಕುಮಾರ್ ಎಸ್.ಸಿ.
ಸಕಲೇಶಪುರದಲ್ಲೀಗ ಸಾಹಿತ್ಯ ಸಮ್ಮೇಳನದ ಕಲರವ. ನಾಳೆ ( ಡಿ.13) ನಡೆಯಲಿರುವ ನುಡಿಜಾತ್ರೆಗೆ ಊರು ಸಿದ್ಧವಾಗಿದೆ. ಈಗ ನಡೆಯುತ್ತಿರುವುದು ತಾಲ್ಲೂಕು ಮಟ್ಟದ ಸಮ್ಮೇಳನ. ತಾಲ್ಲೂಕು, ಜಿಲ್ಲೆ ಇತ್ಯಾದಿ ಉಪಾದಿಗಳೆಲ್ಲ ಇಲ್ಲಿ ಗೌಣ. ಸಮ್ಮೇಳನವೆಂದರೆ ಸಾಕು, ಊರೇ ಸಂಭ್ರಮಿಸುತ್ತದೆ. ಹಿಂದೆ ಇಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನವು ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಮೀರಿಸುವಂತೆ ನಡೆದಿತ್ತು. ಸಾಹಿತ್ಯ, ಸಂಸ್ಕೃತಿ ಎಂದರೆ ಸಕಲೇಶಪುರ ಬರಸೆಳೆದು ಅಪ್ಪಿಕೊಳ್ಳುತ್ತದೆ.
ಈ ಬಾರಿಯ ವಿಶೇಷವೆಂದರೆ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವುದು ಹಿರಿಯ ರಂಗಕರ್ಮಿ, ನಾಟಕಕಾರ, ಪರಿಸರವಾದಿ, ಸಾಹಿತಿ ರಕ್ಷಿದಿ ಪ್ರಸಾದ್ ಅವರು. ಬೆಳ್ಳೇಕೆರೆ ಎಂಬ ಪುಟ್ಟಹಳ್ಳಿಯಲ್ಲಿ ಕೂಲಿ ಮಾಡುವ, ಸಣ್ಣಪುಟ್ಟ ಕೆಲಸ ಮಾಡುವ ಶ್ರಮಿಕ ವರ್ಗಕ್ಕೆ ಅಕ್ಷರದ, ಓದಿನ, ಸಾಹಿತ್ಯದ, ನಾಟಕದ ಹುಚ್ಚು ಹಿಡಿಸಿ ಅಸಾಧ್ಯವನ್ನು ಸಾಧ್ಯ ಮಾಡಿದವರು. ಹೀಗಾಗಿ ತಾಲ್ಲೂಕು ಸಮ್ಮೇಳನಕ್ಕೆ ಹೆಚ್ಚಿನ ತೂಕ ಮತ್ತು ಕಳೆ ಬಂದು ಒದಗಿದೆ.
ಬೆಳ್ಳೇಕೆರೆ ಜೈ ಕರ್ನಾಟಕ ಸಂಘದ ಮೂಲಕ ಇಡೀ ಜಗತ್ತಿನ ತಲ್ಲಣಗಳಿಗೆ ಮುಖಾಮುಖಿಯಾಗಿ, ಹಳ್ಳಿಹುಡುಗರ ಅಭಿವ್ಯಕ್ತಿಗಳಿಗೆ ದನಿಯಾದವರು ರಕ್ಷಿದಿ ಪ್ರಸಾದ್. ಇದು ಒಂದು ಬಗೆಯಲ್ಲಿ ಸಾಂಸ್ಕೃತಿಕ ಪವಾಡ! ಒಂದು ಪುಟ್ಟ ಹಳ್ಳಿಯನ್ನು ಅಲ್ಲಿಯ ಎಲ್ಲ ಸಂವೇದನೆಗಳು ಹಾಗು ಜೀವದ್ರವ್ಯದ ಮೂಲಕವೇ ಹೊರಜಗತ್ತಿಗೆ ತೆರೆದು ಯಾರೂ ತುಳಿಯದ ಮಾರ್ಗವನ್ನು ಹುಟ್ಟುಹಾಕಿದವರು ಪ್ರಸಾದ್.
ಸಕಲೇಶಪುರದಿಂದ ಮೂಡಿಗೆರೆಗೆ ಸಾಗುವ ಹಾದಿಯಲ್ಲಿ ಸಿಗುವುದೇ ಬೆಳ್ಳೇಕೆರೆ. ಅಲ್ಲೀಗ ಪೂರ್ಣಚಂದ್ರ ತೇಜಸ್ವಿ ಅವರ ಹೆಸರಿನ ಬಯಲುರಂಗ ಮಂದಿರ ನಿಮ್ಮನ್ನು ಆಕರ್ಷಿಸುತ್ತದೆ. ಗ್ರೀಕ್ ಮಾದರಿಯ ಈ ರಂಗಮಂದಿರದಲ್ಲಿ ಎಂಟುನೂರು ಜನರು ಒಟ್ಟಿಗೆ ಕುಳಿತು ನಾಟಕ ನೋಡಬಹುದು. ಅದು ದಿಢೀರನೆ ಆಗಿದ್ದೇನಲ್ಲ. ಬೆಳ್ಳೇಕೆರೆ ಹುಡುಗರ ರಂಗಸಾಹಸಗಳ ಒಂದು ಸಂಕೇತವಾಗಿ ಮೈದಳೆದಿರುವ ರಂಗಮಂದಿರದ ಒಂದೊಂದು ಇಟ್ಟಿಗೆಯನ್ನೂ ಕಳೆದ ಮೂರು ನಾಲ್ಕು ದಶಕಗಳಿಂದ ಇಡುತ್ತ ಬರಲಾಗಿದೆ. ವರ್ಷಕ್ಕೆ ನೂರೈವತ್ತು- ಇನ್ನೂರು ಇಂಚು ಮಳೆಬೀಳುವ ಮಲೆನಾಡಿನ ಹಳ್ಳಿಯಲ್ಲಿ ಇಂಥದ್ದೊಂದು ರಂಗಭೂಮಿ ಇದೆ ಎಂಬುದೇ ಒಂದು ವಿಸ್ಮಯವಲ್ಲವೇ?
ಪ್ರಸಾದ್ ರಕ್ಷಿದಿ ಅವರ ಸಾಹಸಗಾಥೆ ಶುರುವಾಗುವುದು ಅವರು ಎಸ್ಟೇಟ್ ಒಂದರಲ್ಲಿ ರೈಟರ್ ಆಗಿ ಕೆಲಸ ಮಾಡಲು ಅಡಿಯಿಟ್ಟಾಗಿನಿಂದ. ಅದಕ್ಕೂ ಮುನ್ನ ತಂದೆ ಎಸ್ಟೇಟ್ ಉದ್ಯೋಗಿಯಾಗಿದ್ದರು. ಅವರ ಗರಡಿಯಲ್ಲೇ ಪಳಗುತ್ತ ಸಾಹಿತ್ಯ, ರಂಗಭೂಮಿಯ ಅಭಿರುಚಿಯನ್ನೂ ಅಂಟಿಸಿಕೊಂಡಿದ್ದರು. ಹಾರ್ಲೆ ಎಸ್ಟೇಟ್ ನ ಡೈರಿ ಫಾರಂನ ಉಸ್ತುವಾರಿ ನೋಡಿಕೊಳ್ಳುತ್ತ ತಮ್ಮ ಸಾಮಾಜಿಕ ಪ್ರಯೋಗಗಳನ್ನು ಆರಂಭಿಸುತ್ತಾರೆ. ಡೈರಿ ಫಾರಂನಲ್ಲಿ ಕೆಲಸ ಮಾಡುವವರಿಗೆ ಸಹಿ ಮಾಡಲು ಬರುವುದಿಲ್ಲ, ಅವರೆಲ್ಲರೂ ಅನಕ್ಷರಸ್ಥರು ಎಂಬುದು ಗೊತ್ತಾಗುತ್ತಿದ್ದಂತೆ ಅವರಿಗೆ ಅಕ್ಷರದ ಗೀಳು ಹಚ್ಚಿಸುತ್ತಾರೆ. ಅವರಿಗಾಗಿ ರಾತ್ರಿ ಶಾಲೆ ಆರಂಭಿಸುತ್ತಾರೆ. ನೋಡನೋಡುತ್ತಿದ್ದಂತೆ ಆ ಶ್ರಮಜೀವಿಗಳು ಓದಲು, ಬರೆಯಲು ಕಲಿಯುತ್ತಾರೆ.
ಪ್ರಸಾದ್ ಇಲ್ಲಿಗೆ ನಿಲ್ಲಿಸಲಿಲ್ಲ. ಅವರಿಗೆ ನಿಧಾನವಾಗಿ ಸಾಹಿತ್ಯದ, ರಂಗಭೂಮಿಯ ಗೀಳು ಅಂಟಿಸುತ್ತಾರೆ. ಜೊತೆಗೆ ಕೆಲಸ ಮಾಡುವವರೂ ಸೇರಿದಂತೆ ಊರಿನ ಹಲವರನ್ನು ಸೇರಿಸಿಕೊಂಡು ಒಂದು ನಾಟಕ ತಂಡ ಕಟ್ಟುತ್ತಾರೆ. ತಾವೇ ನಾಟಕ ಬರೆದು, ನಿರ್ದೇಶಿಸುತ್ತಾರೆ. ಬೆಳ್ಳೇಕೆರೆಯ ಜೈ ಕರ್ನಾಟಕ ಸಂಘವು ಕರ್ನಾಟಕದ ಹವ್ಯಾಸಿ ರಂಗಭೂಮಿಯಲ್ಲಿ ಗಮನ ಸೆಳೆಯುವ ನಾಟಕ ತಂಡವಾಗಿ ಗುರುತಿಸಿಕೊಳ್ಳುತ್ತದೆ. ನಾಟಕ ತಂಡ ಮಾಡಿದರೆ ಸಾಲದು, ರಾಜ್ಯದ ಬೇರೆ ಬೇರೆ ನಾಟಕ ತಂಡಗಳು ಆಡುವ ನಾಟಕಗಳ ಬಗ್ಗೆ ಇಲ್ಲಿನ ಜನರಿಗೆ ಅರ್ಥ ಮಾಡಿಸಬೇಡವೇ? ಇದಕ್ಕಾಗಿ ಪ್ರತಿವರ್ಷ ನಾಟಕ ಪ್ರದರ್ಶನಗಳನ್ನೂ ಏರ್ಪಡಿಸುತ್ತಾರೆ. ನೀನಾಸಂ ತಿರುಗಾಟದ ತಂಡ ಸೇರಿದಂತೆ ಹಲವು ನಾಟಕಗಳ ಪ್ರದರ್ಶನ ಆಗಿಂದಾಗ್ಗೆ ನಡೆಯುತ್ತ ಬರುತ್ತದೆ. ಬೆಳ್ಳೇಕೆರೆ, ರಕ್ಷಿದಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಸಾಂಸ್ಕೃತಿಕವಾಗಿ ಬೆಳೆಯುತ್ತ ಹೋಗುತ್ತಾರೆ.
ಕರ್ನಾಟಕ ನಾಟಕ ಅಕಾಡೆಮಿ ಏರ್ಪಡಿಸಿದ್ದ ಗ್ರಾಮೀಣ ರಂಗೋತ್ಸವದಲ್ಲಿ ಪ್ರಸಾದ್ ಬರೆದ ಮಾಯಾಮೃಗ ನಾಟಕವನ್ನು ಬೆಳ್ಳೇಕರೆಯ ಜೈ ಕರ್ನಾಟಕ ಸಂಘದವರು ಆಡಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸುತ್ತಾರೆ.
ನಾಟಕ ತಂಡದಲ್ಲಿ ಇದ್ದವರ ಪೈಕಿ ಮೂವರು ಬಡಗಿಗಳು, ಇಬ್ಬರು ಗಾರೆಯವರು, ನಾಲ್ಕು ಜನ ಕೂಲಿಕಾರ್ಮಿಕರು. ಒಬ್ಬ ಟೈಲರ್, ಇಬ್ಬರು ಡ್ರೈವರ್‌ಗಳು, ಒಬ್ಬರು ಶಾಲಾ ಶಿಕ್ಷಕರು-ಉಳಿದವರು ಇಂಥದೇ ಬೇರೆ ಬೇರೆ ವೃತ್ತಿಗಳಲ್ಲಿ ಇದ್ದವರು, ಜತೆಯಲ್ಲಿ ಒಂದಿಬ್ಬರು ಶಾಲಾ ಮಕ್ಕಳು!
ಇಂಥದ್ದೊಂದು ರಂಗತಂಡ ರಾಜ್ಯದ ಇನ್ಯಾವ ಮೂಲೆಯಲ್ಲಾದರೂ ಇರಬಹುದೇ? ಇದ್ದರೂ ಹತ್ತಾರು ವರ್ಷಗಳಿಂದ ಹೀಗೆ ಕ್ರಿಯಾಶೀಲವಾಗಿ ಇದ್ದಿರಲು ಸಾಧ್ಯವೇ? ಪ್ರಸಾದ್ ಮಲೆನಾಡಿನ ಪುಟ್ಟ ಹಳ್ಳಿಯಲ್ಲಿ ಕುಳಿತು ಏನನ್ನು ಸಾಧಿಸಿದರು ಎಂಬುದಕ್ಕೆ ಇದೊಂದು ಪುಟ್ಟ ಉದಾಹರಣೆ ಅಷ್ಟೆ.
ಪ್ರಸಾದ್ ರಕ್ಷಿದಿ ಮೂಡಿಗೆರೆಯ ಮಾಯಾವಿ ಪೂರ್ಣಚಂದ್ರ ತೇಜಸ್ವಿಯವರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಇಬ್ಬರೂ ಕಾಫಿನಾಡಿನವರು. ಸಮಾನ ಸುಖಿಗಳು, ಸಮಾನ ದುಃಖಿಗಳು. ತೇಜಸ್ವಿಯವರೊಂದಿಗಿನ ಒಡನಾಟದ ಕುರಿತು ಪ್ರಸಾದ್ ಒಂದು ಸೊಗಸಾದ ಪುಸ್ತಕವನ್ನೂ ಬರೆದಿದ್ದಾರೆ. ಪ್ರಸಾದ್ ಹಲವಾರು ನಾಟಕಗಳನ್ನು ಬರೆದರು. ಅವರ ಗದ್ಯ ಬರೆಹಗಳು ಬಹಳ ಬೇಗ ಓದಿಸಿಕೊಳ್ಳುತ್ತವೆ. ‘ಬೆಳ್ಳೇಕೆರೆ ಹಳ್ಳಿ ಥೇಟರ್’ ಎಂಬ ಕೃತಿ ಅವರ ಬದುಕಿನ ಕಥೆಯನ್ನು ಹೇಳುತ್ತದೆ. ಗ್ರಾಮೀಣ ರಂಗಭೂಮಿಯ ಆತ್ಮಕಥನ ಎಂದು ಅವರು ಆ ಕೃತಿಯನ್ನು ವರ್ಣಿಸುತ್ತಾರೆ. ಅದು ಪ್ರಸಾದ್ ಅವರ ಆತ್ಮಕಥನವೂ ಹೌದು. ಬೆಳ್ಳೇಕೆರೆ ಎಂಬ ಪುಟ್ಟ ಹಳ್ಳಿಯ ಆತ್ಮಕಥನವೂ ಹೌದು. ಅಲ್ಲಿಂದಾಚೆಗೂ ಅದು ಇಡೀ ಮಲೆನಾಡಿನ (ಮಲಯಾದ್ರಿ) ಕಥೆಗಳನ್ನು ಹೇಳುತ್ತದೆ.
ಪ್ರಸಾದ್ ತಮ್ಮನ್ನು ತಾವು ಸಾಹಿತಿ ಎಂದೋ ರಂಗಕರ್ಮಿ ಎಂದೋ ಕರೆದುಕೊಂಡವರಲ್ಲ. ಅವರು ಎಲ್ಲವನ್ನು ಮೀರಿ ಹೆಜ್ಜೆಗಳನ್ನು ಇಡುತ್ತ ಬಂದವರು. ವರ್ತಮಾನದ ಸಂಕಟಗಳಿಗೆ ಅವರು ಧ್ವನಿಯಾಗುತ್ತ ಬಂದವರು. ರೈತ ಸಂಘದಲ್ಲಿ ಅವರು ಕ್ರಿಯಾಶೀಲರಾಗಿದ್ದರು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ವ್ಯವಸ್ಥೆಯ ವಿರುದ್ಧ ಸೆಣಸಾಡಿದ್ದರು. ಕಳೆದೊಂದು ದಶಕಗಳಲ್ಲಿ ಸಕಲೇಶಪುರ ಭಾಗದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯನಾಶದ ವಿರುದ್ಧ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತ ಬಂದಿದ್ದಾರೆ. ಅವರ ‘ಆನೆದಾರಿಯಲ್ಲಿ ಅಲ್ಲೋಲ ಕಲ್ಲೋಲ’, ‘ಯೆತ್ನಳ್ಳ ಎತ್ತಿನಹೊಳೆಯಾದ ಬಗ್ಗೆ’ ಕೃತಿಗಳು ಇದಕ್ಕೆ ಸಾಕ್ಷಿ. ಇದೆಲ್ಲದರ ನಡುವೆ ದಶಕಗಳಿಂದ ಅವರು ಕಾಫಿನಾಡಿನ ಕೃಷಿಬಿಕ್ಕಟ್ಟುಗಳ ಕುರಿತು ಮಾತನಾಡುತ್ತ ಬಂದಿದ್ದಾರೆ, ಬೆಳೆಗಾರರ ಸಂಘದಲ್ಲೂ ಕ್ರಿಯಾಶೀಲ ಪಾತ್ರ ವಹಿಸುತ್ತ ಬಂದಿದ್ದಾರೆ. ಹೀಗಾಗಿ ಅವರು ಆಳದಲ್ಲಿ ಆಕ್ಟಿವಿಸ್ಟ್ ಆಗಿಯೇ ನಮಗೆ ಕಾಣಿಸುತ್ತಾರೆ.
ಪ್ರಸಾದ್, ಬೆಳ್ಳೇಕೆರೆಯ ಶಾಲೆಗೆ ಒಂದೆಕರೆ ಜಾಗ ಕೊಡಲು ಅರಣ್ಯ ಇಲಾಖೆಯವರು ಕಿರಿಕಿರಿ ಮಾಡುತ್ತಿದ್ದಾಗ ಆಗಿನ ಮುಖ್ಯಮಂತ್ರಿ ಎಚ್.ಡಿ.ದೇವೇಗೌಡರು ಸಹಾಯ ಮಾಡಿದ್ದು, ಕೇವಲ ಪತ್ರವೊಂದನ್ನು ಬರೆದದ್ದಕ್ಕೆ ರಂಗಮಂದಿರ ನಿರ್ಮಾಣಕ್ಕೆ ಬಂಗಾರಪ್ಪ ತಾವು ಮುಖ್ಯಮಂತ್ರಿಯಾಗಿದ್ದಾಗ ಜಾಗ ನೀಡಿದ್ದನ್ನು ಅವರು ‘ಬೆಳ್ಳೇಕೆರೆ ಹಳ್ಳಿ ಥೇಟರ್’ ಕೃತಿಯಲ್ಲಿ ಸ್ಮರಿಸಿಕೊಂಡಿದ್ದಾರೆ. ಚಳವಳಿ, ಹೋರಾಟಗಳಲ್ಲಿ ಮುಳುಗಿದವರಿಗೆ ಅಧಿಕಾರ ರಾಜಕಾರಣದಿಂದ ಏನೂ ಸಾಧ್ಯವಿಲ್ಲ ಎಂಬ ಸಿನಿಕತನ ಆವರಿಸಿರುತ್ತದೆ. ಈ ಎರಡು ಘಟನೆಗಳಲ್ಲದೆ, ತಮ್ಮೂರಿನ ಶಾಲೆ, ರಸ್ತೆ, ನೀರು, ಬಸ್‌ನಿಲ್ದಾಣ ಇತ್ಯಾದಿಗಳಿಗಾಗಿ ಪ್ರಸಾದ್ ಮತ್ತು ಗೆಳೆಯರು ಪೊಲಿಟಿಕಲ್ ಆಕ್ಟಿವಿಸಮ್‌ಗೆ ಮೊರೆ ಹೋಗುತ್ತಾರೆ; ಯಶಸ್ವಿಯೂ ಆಗುತ್ತಾರೆ.
ತಮ್ಮ ಮನಸಿನ ಮಾತುಗಳನ್ನು ಆಡಲು ಪ್ರಸಾದ್ ಎಂದೂ ಮಡಿವಂತಿಕೆ ಇಟ್ಟುಕೊಂಡವರಲ್ಲ. ಸಮಾಜ, ಸುತ್ತಲಿನ ಪರಿಸರ ಒಡ್ಡುವ ಸವಾಲುಗಳಿಂದ ಪಲಾಯನ ಮಾಡಿದವರೂ ಅಲ್ಲ. ಒಂದು ಸಣ್ಣ ಬದಲಾವಣೆ ಸಾಧ್ಯ ಎನಿಸಿದರೂ ಅವರು ಅಲ್ಲಿರುತ್ತಾರೆ. ಅವರಿಗೆ ಯಾವ ವಿಷಯವೂ ಕ್ಷುಲ್ಲಕವಲ್ಲ. ಒಮ್ಮೊಮ್ಮೆ ಅವರು ನಿರ್ಲಿಪ್ತರಂತೆ ಕಾಣಿಸಿದರೂ ಅವರು ನಿರ್ಲಿಪ್ತರಲ್ಲ. ಅವರೊಂದಿಗೆ ನೀವು ಜಗತ್ತಿನ ಯಾವುದೇ ವಿದ್ಯಮಾನಗಳ ಕುರಿತೂ ಗಂಟೆಗಟ್ಟಲೆ ಮಾತನಾಡಬಹುದು.
ವೈಯಕ್ತಿಕ ಬದುಕಿನಲ್ಲಿ ಪ್ರಸಾದ್ ಅಪಾರ ನೋವನ್ನುಂಡಿದ್ದಾರೆ. ಮುದ್ದಾದ ಮಗಳು ಅಮೃತ ಸ್ಕಿಜೋಫ್ರೇನಿಯಾದಿಂದ ಥರಗುಟ್ಟಿ ಹೋದಳು. ಸಾಯುವ ಮುನ್ನ ಆಕೆ ತನ್ನ ಬೆಚ್ಚಿಬೀಳಿಸುವ ಆತ್ಮಕಥೆ ಬರೆದಿಟ್ಟೇ ಹೋದಳು. ಅಂಥ ಆತ್ಮಕಥೆ ಕನ್ನಡದಲ್ಲಿ ಇನ್ನೊಂದಿಲ್ಲ. ಆಕೆಗೆ ಅಂಟಿದ್ದ ಸ್ಕಿಜೋಫ್ರೇನಿಯಾದ ಜೊತೆ ಅಮೃತ ಮಾತ್ರವಲ್ಲ, ಪ್ರಸಾದ್ ಮತ್ತು ಅವರ ಪತ್ನಿ ರಾಧಾ ವರ್ಷಗಟ್ಟಲೆ ಬಡಿದಾಡಿದರು. ಆ ಸಂಕಟಗಳು ಅವರನ್ನು ವೈಯಕ್ತಿಕವಾಗಿ ಘಾಸಿಗೊಳಿಸಿದವು. ಅಮೃತ ಬದುಕಿದ್ದರೆ ಅಪ್ಪನನ್ನು ಮೀರಿಸುತ್ತಿದ್ದಳೇನೋ, ಅಂಥ ಅದ್ಭುತ ಪ್ರತಿಭೆ ಆಕೆ.
ಸಕಲೇಶಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಸುಬ್ಬು ಹೊಲೆಯಾರ್ ಅವರ ಸರ್ವಾಧ್ಯಕ್ಷತೆಯಲ್ಲಿ ಹಿಂದೆಂದೂ ನಡೆಯದ ರೀತಿಯಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆಯಿತು. ಪ್ರಸಾದ್ ಕ್ರಿಯಾಶೀಲತೆಗೆ ಇದು ಸಾಕ್ಷಿ. ಈಗ ಮತ್ತೊಂದು ಸಮ್ಮೇಳನಕ್ಕೆ ಅವರೇ ಸರ್ವಾಧ್ಯಕ್ಷರಾಗಿದ್ದಾರೆ. ಸಮ್ಮೇಳನದಲ್ಲಿ ನಿಶ್ಚಿತವಾಗಿಯೂ ಅವರು ಮಲೆನಾಡಿನ ಬಿಕ್ಕಟ್ಟುಗಳ ಬಗ್ಗೆಯೇ ಪ್ರಧಾನವಾಗಿ ಮಾತನಾಡುತ್ತಾರೆ ಎಂಬ ನಂಬುಗೆ ನನ್ನದು. ಅವರಿಗೆ ಕನ್ನಡ ಪ್ಲಾನೆಟ್ ಪರವಾಗಿ ಹಾರ್ದಿಕ ಅಭಿನಂದನೆಗಳು.
ದಿನೇಶ್ ಕುಮಾರ್ ಎಸ್.ಸಿ. (ದಿನೂ)
ಈ ಸುದ್ದಿಯನ್ನೂ ಓದಿ –ನಾಳೆ ಸಕಲೇಶಪುರ ತಾಲ್ಲೂಕು ಕಸಾಪ ಸಮ್ಮೇಳನ; ಸಮ್ಮೇಳನಾಧ್ಯಕ್ಷರಾಗಿ ರಂಗಕರ್ಮಿ ಪ್ರಸಾದ್ ರಕ್ಷಿದಿ ಆಯ್ಕೆ