ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಕೋವಿಡ್-19 ನಿರ್ವಹಣೆಯಲ್ಲಿ ನಡೆಸಿದೆ ಎನ್ನಲಾದ ಹಗರಣದ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರನ್ನು ಕುರಿತು ತಾವು ಆಡಿದ ಮಾತುಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ನಾನು ನೀಡಿದ ಹೇಳಿಕೆಗಳು ಉದ್ದೇಶಪೂರ್ವಕವಾಗಿ ನಿಮಗೆ ಯಾವುದೇ ನೋವು ಅಥವಾ ಅವಮಾನವನ್ನು ಉಂಟುಮಾಡಿದ್ದರೆ ಅದಕ್ಕಾಗಿ ನಾನು ವಿಷಾದಿಸುತ್ತೇನೆ ಮತ್ತು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ. ತಮ್ಮ ನೇತೃತ್ವದ ಆಯೋಗಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನೀಡಿದ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರಿಗೆ ಪತ್ರ ಬರೆದಿದ್ದಾರೆ.
ಕೋವಿಡ್ -19 ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದ ಅಕ್ರಮಗಳನ್ನು ಕುರಿತು ಭ್ರಷ್ಟಾಚಾರ ನಡೆದಿದೆ ಎಂದು ಕುನ್ಹಾ ವರದಿ ಮಧ್ಯಂತರ ವರದಿ ನೀಡಿದ್ದು, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವ ಬಿ ಶ್ರೀರಾಮುಲು ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ. ಕಡಿಮೆ ಬೆಲೆಗೆ ಲಭ್ಯವಿದ್ದರೂ ದುಬಾರಿ ಬಲೆ ತೆತ್ತು ಪಿಪಿಇ ಕಿಟ್ ಗಳನ್ನು ಅಂದಿನ ಬಿಜೆಪಿ ಸರ್ಕಾರ ಖರೀದಿಸಿದೆ ಎಂದು ವರದಿ ಆರೋಪಿಸಿದೆ.
ಶಿಗ್ಗಾಂವ್ ಉಪ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ್ದ ಸಚಿವ ಜೋಶಿ, ನ್ಯಾಯಮೂರ್ತಿ ಡಿ ಕುನ್ಹಾ ಅವರನ್ನು ಏಜೆಂಟ್ ಎಂದು ಜರಿದಿದ್ದರು. ಈ ಹೇಳಿಕೆ ಸಾಕಷ್ಟು ಗದ್ದಲಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಪ್ರಹ್ಲಾದ ಜೋಷಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ನನ್ನ ಸುದೀರ್ಘ ವರ್ಷಗಳ ಸಾರ್ವಜನಿಕ ಜೀವನದಲ್ಲಿ ನಾನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ, ಹಿಂದಿನ ಹಾಗೂ ಪ್ರಸ್ತುತ ನ್ಯಾಯಾಂಗದ ಸದಸ್ಯರ ಖ್ಯಾತಿಯನ್ನು ತಗ್ಗಿಸುವ ಪ್ರವೃತ್ತಿಯನ್ನು ಹೊಂದಿರುವ ಯಾವುದೇ ಟೀಕೆ ಅಥವಾ ಹೇಳಿಕೆಯನ್ನು ಯಾವುದೇ ಸಂದರ್ಭಗಳಲ್ಲಿ ನೀಡಿಲ್ಲ. ನ್ಯಾಯಾಂಗ ಮತ್ತು ಎಲ್ಲ ಗೌರವಾನ್ವಿತ ನ್ಯಾಯಾಧೀಶರು ನಮ್ಮ ಸಂವಿಧಾನದ ಕಾರ್ಯನಿರ್ವಹಣೆಯ ಕವಚವನ್ನು ರೂಪಿಸುತ್ತಾರೆ ಎಂದು ನಾನು ನಂಬುತ್ತೇನೆ. ನ್ಯಾಯವನ್ನು ನಿರ್ವಹಿಸುವ ಪವಿತ್ರ ಕರ್ತವ್ಯದಲ್ಲಿ ಅವರು ನಿಸ್ಸಂದೇಹವಾಗಿ ಪ್ರಮುಖ ಪಾತ್ರವನ್ನು ಹೊಂದಿದ್ದಾರೆ. ನನ್ನ ಹೇಳಿಕೆಗಳು ನ್ಯಾಯಮೂರ್ತಿ ಡಿ ಕುನ್ಹಾ ಅಥವಾ ಆಯೋಗವನ್ನು ದೂಷಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಜೋಶಿ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. ನಿಮ್ಮನ್ನು ಅಥವಾ ಆಯೋಗವನ್ನು ಯಾವುದೇ ಅಪಖ್ಯಾತಿಗೆ ಒಳಪಡಿಸಲು ಅಥವಾ ನಿಮ್ಮ ಗೌರವವನ್ನು ಕಡಿಮೆ ಮಾಡುವುದು ನನ್ನ ಉದ್ಧೇಶವಾಗಿರಲಿಲ್ಲ ಎಂದು ಪತ್ರದಲ್ಲಿ ಸ್ಪಷ್ಟನೆ ನೀಡಿದ್ದಾರೆ.