ಹಾಸನ: ರಾಜಕಾರಣಿಗಳು ತಮ್ಮ ಮುಂದೆ ನಿಂತ ಅನುಯಾಯಿಗಳನ್ನು ಮೆಚ್ಚಿಸಲು ಏನೋ ಒಂದು ಹೇಳಿ, ಯಾರನ್ನೋ ನಿಂದಿಸಿ ಚಪ್ಪಾಳೆ ಗಿಟ್ಟಿಸಿಬಿಡುತ್ತಾರೆ. ಇಂದಿನ ಡಿಜಿಟಲ್ ಕಾಲಮಾನದಲ್ಲಿ ಹೀಗೆ ಮಾತಾಡಿದಾಗ ತಾವು ಆಡಿದ ಮಾತನ್ನು ತಾವೇ ನುಂಗುವ ಸನ್ನಿವೇಶ ಒದಗಿಬರುತ್ತದೆ ಎಂಬುದನ್ನು ಅವರು ಮರೆತುಬಿಟ್ಟಿರುತ್ತಾರೆ.
ನಿನ್ನೆ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಇಂಥದ್ದೇ ಉಡಾಫೆಯ ಮಾತು ಆಡಿ ತಾನೇ ಬಕ್ರಾ ಆಗಿದ್ದಾರೆ.
ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಸನ ಜಿಲ್ಲೆಯ ಪ್ರವಾಸದಲ್ಲಿದ್ದರು. ಸಕಲೇಶಪುರದಲ್ಲಿ ಅವರು ಪ್ರಚಾರ ಸಭೆ ನಡೆಸಿದ ನಂತರ ಪ್ರಜ್ವಲ್ ರೇವಣ್ಣ ಬಂದು ಪ್ರಚಾರ ಮಾಡಿದರು. ಭಾಷಣ ಮಾಡುವ ಸಂದರ್ಭದಲ್ಲಿ ʻʻನಿನ್ನೆಯಿಂದ ಮಳೆ ಬರುವ ಹಾಗೆ ಕಾಣ್ತಾ ಇತ್ತು. ಸಿದ್ಧರಾಮಯ್ಯ ಬಂದ ಬಿಸಿಲು ಹೊಡೀತಾ ಇದೆʼʼ ಎಂದು ಪ್ರಜ್ವಲ್ ಉಡಾಫೆಯಿಂದ ಮಾತಾಡಿ ಚಪ್ಪಾಳೆ ಗಿಟ್ಟಿಸಿದ್ದರು.
ತಮಾಶೆಯೆಂದರೆ ಸ್ವಲ್ಪ ಹೊತ್ತಿಗೇ ಸಕಲೇಶಪುರದಲ್ಲಿ ಮಳೆ ಸುರಿಯಿತು. ಇನ್ನೂ ವಿಶೇಷವೆಂದರೆ ಸಿದ್ಧರಾಮಯ್ಯ ಹೋದಲ್ಲೆಲ್ಲ ಮಳೆ ಸುರಿಯಿತು. ಹೊಳೆನರಸೀಪುರದಲ್ಲಿ ಧಾರಾಕಾರ ಸುರಿಯುವ ಮಳೆಯ ನಡುವೆಯೇ ಸಿದ್ಧರಾಮಯ್ಯ ಪ್ರಚಾರ ಭಾಷಣ ನಡೆಸಿದರು. ನಂತರ ಅರಕಲಗೂಡಿನಲ್ಲೂ ಹಾಗೇ ಆಯಿತು. ಅಲ್ಲೂ ಮಳೆಯ ನಡುವೆಯೇ ಅವರು ಭಾಷಣ ನಡೆಸಬೇಕಾಯಿತು.
ಮಳೆ ಬಿಸಿಲು ಚಳಿ ಇತ್ಯಾದಿಗಳಿಗೂ ಚುನಾವಣಾ ರಾಜಕಾರಣಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದು ಒಮ್ಮೆ ಲೋಕಸಭಾ ಸದಸ್ಯರಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಯಾರೋ ಬರ್ತಾರೆ, ಯಾರೋ ಹೋಗ್ತಾರೆ ಎಂಬ ಕಾರಣಕ್ಕೆ ಮಳೆ ಬರುವುದಿಲ್ಲ, ಬರುವ ಮಳೆ ನಿಲ್ಲುವುದೂ ಇಲ್ಲ. ಯಾರನ್ನೋ ಮೆಚ್ಚಿಸಲು ಉಡಾಫೆಯ ಮಾತುಗಳನ್ನು ಆಡಿದರೆ ನಂತರ ಟ್ರಾಲ್ ಆಗುವುದು ತಾವೇ ಎಂಬುದು ಪ್ರಜ್ವಲ್ ಅಂಥವರು ಅರ್ಥ ಮಾಡಿಕೊಳ್ಳಬೇಕಲ್ಲವೇ ಎಂದು ಸಾಮಾನ್ಯ ಜನರೇ ಮಾತಾಡಿಕೊಳ್ಳುವಂತಾಗಿದೆ.