ಬೆಂಗಳೂರು: ಯಾವುದೇ ಸಮಕಾಲೀನ ರಾಜಕೀಯ, ಸಾಮಾಜಿಕ ವಿದ್ಯಮಾನಗಳ ಕುರಿತು ನಿರ್ಭಿಡೆಯಿಂದ ಪ್ರತಿಕ್ರಿಯಿಸುವ ಚಿತ್ರನಟಿ ರಮ್ಯಾ, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕುರಿತು ಮೊದಲು ಧ್ವನಿ ಎತ್ತಿದ ಸೆಲೆಬ್ರಿಟಿ ನಟಿ.
ಇದೀಗ ಅವರು ಕಾಮಕಾಂಡದ ಆರೋಪಿ ಪ್ರಜ್ವಲ್ ರೇವಣ್ಣ, ಕೊಲೆ ಆರೋಪಿ ದರ್ಶನ್, ಪೋಕ್ಸೋ ಪ್ರಕರಣದ ಆರೋಪಿ ಬಿ.ಎಸ್.ಯಡಿಯೂತಪ್ಪ ಮತ್ತು ಯುವಕನಿಗೆ ಲೈಂಗಿಕ ಹಿಂಸೆ ನೀಡಿದ ಸೂರಜ್ ರೇವಣ್ಣ ಅವರುಗಳನ್ನು ಟ್ಯಾಗ್ ಮಾಡಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
ಈಗ ಸುದ್ದಿಯಲ್ಲಿರುವ ಕಾನೂನು ಭಂಜಕ ಬಲಾಢ್ಯರು, ಸಿರಿವಂತರು ನಡೆಸುವ ಹಿಂಸೆಯಲ್ಲಿ ಬಳಲುತ್ತಿರುವವರು ನಾಡಿನ ಬಡವರು, ಮಹಿಳೆಯರು ಮತ್ತು ಮಕ್ಕಳು. ಈ ಅಪರಾಧಗಳನ್ನು ಹೊರತಂದ ಪೊಲೀಸರಿಗೆ ಮತ್ತು ಮಾಧ್ಯಮದವರಿಗೆ ಹ್ಯಾಟ್ಸಾಫ್ ಎಂದು ರಮ್ಯ ಬರೆದಿದ್ದಾರೆ.
ತ್ವರಿತಗತಿಯಲ್ಲಿ ವಿಚಾರಣೆ ನಡೆಸಿದರೆ, ಪ್ರಕರಣಗಳನ್ನು ಅವುಗಳ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದರೆ ನಿಜಕ್ಕೂ ನೊಂದವರಿಗೆ ನ್ಯಾಯ ದೊರೆಯಲಯ ಸಾಧ್ಯ. ಇಂಥ ಪ್ರಕರಣಗಳು ಆದಾಗ ನ್ಯಾಯವು ಮೇಲುಗೈ ಸಾಧಿಸದಿದ್ದರೆ, ನಾವು ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತೇವೆ? ಎಂದು ಅವರು ಹೇಳಿದ್ದಾರೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರನ್ನು ಅತ್ಯಾಚಾರ ಮಾಡಿರುವ ಆರೋಪ ಹೊತ್ತಿರುವುದಲ್ಲದೆ, ತನ್ನ ಕಾಮಕಾಂಡದ ವಿಡಿಯೋ ಚಿತ್ರೀಕರಣ ನಡೆಸಿದ ಪರಿಣಾಮವಾಗಿ ಹಲವಾರು ಹೆಣ್ಣುಮಕ್ಕಳ ಬದುಕು ನುಚ್ಚುನೂರಾಗಿದೆ. ಗೆಳತಿಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂಬ ಕಾರಣಕ್ಕೆ ಚಿತ್ರದುರ್ಗದ ಯುವಕನ ಕೊಲೆ ಮಾಡಿದ ಆರೋಪವನ್ನು ಚಿತ್ರನಟ ದರ್ಶನ್ ಹೊತ್ತಿದ್ದಾರೆ.
ಸಹಾಯ ಕೇಳಿಕೊಂಡು ಬಂದ ಮಹಿಳೆಯೊಬ್ಬರ ಅಪ್ರಾಪ್ತ ವಯಸ್ಸಿನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎದುರಿಸುತ್ತಿದ್ದಾರೆ. ನಿನ್ನೆಯಷ್ಟೇ ಪ್ರಜ್ವಲ್ ಅಣ್ಣನೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ, ವಿಧಾನಪರಿಷತ್ ಸದಸ್ಯ ಯುವಕನಿಗೆ ಲೈಂಗಿಕ ಹಿಂಸೆ, ಕೊಲೆ ಬೆದರಿಕೆ ಒಡ್ಡಿದ ಪ್ರಕರಣ ಸಂಬಂಧ ದೂರು ದಾಖಲಾಗಿದೆ.
ಈ ನಾಲ್ಕೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಿತ್ರನಟಿ ರಮ್ಯಾ ಪೋಸ್ಟ್ ಹಾಕಿದ್ದು, ನೊಂದವರಿಗೆ ನ್ಯಾಯ ಸಿಗಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ.