ಭಾವೈಕ್ಯತೆ, ಸಹಬಾಳ್ವೆ ಮೂಡಿಸಲು ರಾಷ್ಟ್ರಧ್ವಜ ಗೌರವ ಯಾತ್ರೆ ಹಮ್ಮಿಕೊಂಡ ಪ್ರಜಾಧ್ವನಿ ಕರ್ನಾಟಕ

Most read

ಸುಳ್ಯ: ರಾಷ್ಟ್ರೀಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಜಾಧ್ವನಿ ಕರ್ನಾಟಕ ರಾಷ್ಟ್ರಧ್ವಜ ಗೌರವ ಯಾತ್ರೆ ಹಮ್ಮಿಕೊಂಡಿದೆ. 1949 ನವಂಬರ್ 26 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಈ ಸಂವಿಧಾನದ ಸಮರ್ಪಣಾ ದಿನದ ನೆನಪಿಗಾಗಿ ಈ ಯಾತ್ರೆಯನ್ನು ಹಮ್ಮಿಕೊಂಡಿದೆ.
ರಾಷ್ಟ್ರಧ್ವಜ ಗೌರವ ಯಾತ್ರೆ ಸುಳ್ಯ ತಾಲೂಕಿನಾದ್ಯಂತ ನಡೆಯಲಿದ್ದು, ಯಾತ್ರೆಯನ್ನು 27ರಂದು ಸಂಪಾಜೆ ಗೇಟಿನ ಬಳಿ ಬೆಳಿಗ್ಗೆ 8.30ಕ್ಕೆ ಸುಳ್ಯ ತಹಶೀಲ್ದಾರರಾದ ಮಂಜುಳಾ ಎಂ. ಅವರು ನೆರವೇರಿಸಲಿದ್ದಾರೆ.

ಉದ್ಘಾಟನೆಯ ನಂತರ ರಾಷ್ಟ್ರಧ್ವಜ ಯಾತ್ರೆಯು ಕಲ್ಲುಗುಂಡಿ, ಆರಂತೋಡು, ಮರ್ಕಂಜ, ಎಲಿಮಲೆ, ಗುತ್ತಿಗಾರು, ಸುಬ್ರಹ್ಮಣ್ಯ, ಪಂಜ, ನಿಂತಿಕಲ್ಲು, ಬೆಳ್ಳಾರೆ, ಐವರ್ನಾಡು, ಸೋಣಂಗೇರಿ, ಪೈಚಾರು ಮಾರ್ಗವಾಗಿ ಸಂಚರಿಸಲಿದೆ. ಅಂದು ಸಂಜೆ 5 ಗಂಟೆಗೆ ಸುಳ್ಯದಲ್ಲಿ ಸಮಾವೇಶಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಸುಳ್ಯ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ, ಖ್ಯಾತ ವಾಗ್ಮಿ ನಿಕೇತ್ ರಾಜ್ ಮೌರ್ಯ, ಸ್ಥಳಿಯ ಮುಖಂಡರಾದ ಹರಿಪ್ರಸಾದ್ ತುದಿಯಡ್ಕ, ಸಯದ್ ಆತಾಹ್ವಿರ್ ಸಾದಿ, ಫಾ. ವಿಕ್ಟರ್ ಡಿಸೋಜಾ ಹಾಗೂ ಪ್ರಜಾಧ್ವನಿ ಸಂಚಾಲಕ ಗೋಪಾಲ್ ಪೆರಜೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಗಾಂಧಿನಗರದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ನಡೆಯಲಿದೆ.
ಯಾತ್ರೆಯುದ್ದಕ್ಕೂ ಸಾರ್ವಜನಿಕರು, ಸಾಮಾಜಿಕ ಧುರೀಣರು ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಂದ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ನಡೆಯಲಿದೆ. ಯಾತ್ರೆಯುದ್ದಕ್ಕೂ ಸಂವಿಧಾನದ ಕುರಿತು ಗಣ್ಯರು ಭಾಷಣ ಮಾಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಯಾತ್ರೆ ಸಾಗಿ ಬರುವ ಸ್ಥಳಗಳಲ್ಲಿ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಬೇಕು ಎಂದು ಪ್ರಜಾಧ್ವನಿ ಸಂಘಟನೆ ಕೋರಿದೆ. ಈ ಸಂಘಟನೆಯು ಪಕ್ಷಾತೀತವಾಗಿದ್ದು ಯಾವುದೇ ರಾಜಕೀಯ ಪಕ್ಷ ಅಥವಾ ಧಾರ್ಮಿಕ ಸಂಘಟನೆಗಳಿಂದ ಹೊರತಾಗಿದೆ. ಕೇವಲ ಸಾರ್ವಜನಿಕರ ಮಧ್ಯೆ ರಾಷ್ಟ್ರೀಯತೆ ಮತ್ತು ಭಾವೈಕ್ಯತೆಯ ಕೊಂಡಿಯಾಗಲು ಮಾತ್ರ ಸಂಘಟನೆ ಬಯಸುತ್ತದೆ. ಸಂವಿಧಾನ ಕುರಿತು ಇನ್ನಷ್ಟು ವಿಚಾರಗಳನ್ನು ಅರಿಯುವ ಮುಖಾಂತರ ರಾಷ್ಟ್ರೀಯತೆಯನ್ನು ಬಲಗೊಳಿಸೋಣ ಎಂದು ಸಂಘಟನೆ ಮನವಿ ಮಾಡಿಕೊಂಡಿದೆ.

More articles

Latest article