ಲೋಕಸಭಾ ಚುನಾವಣೆಯಲ್ಲಿ ಡಾ.ಕೆ. ಸುಧಾಕರ್ ಗೆದ್ದರೆ ರಾಜೀನಾಮೆ ಕೊಡುವುದಾಗಿ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದರು. ಈಗ ಸುಧಾಕರ್ ಗೆಲುವಿನ ಬೆನ್ನಲ್ಲಿಯೇ ಪ್ರದೀಪ್ ಈಶ್ವರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಪತ್ರ ವೈರಲ್ ಆಗುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಡಾ.ಕೆ. ಸುಧಾಕರ್ ಅವರು ಸೋಲುತ್ತಾರೆ. ಅವರೇನಾದರೂ ಚಿಕ್ಕಬಳ್ಳಾಪುರದಲ್ಲಿ ಒಂದೇ ಒಂದು ಮತ ಲೀಡ್ ತೆಗೆದುಕೊಂಡರೆ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರದೀಪ್ ಈಶ್ವರ್ ತಿಳಿಸಿದ್ದರು. ನನ್ನ ಸವಾಲನ್ನು ಸ್ವೀಕರಿಸುವ ಒಪ್ಪಿದರೆ ಸುಧಾಕರ್ ಬಂದು ಭೋಗ ನಂದೀಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡಲಿ ಎಂದು ಹೇಳಿದ್ದರು.
ಈಗ ಲೋಕಸಭಾ ಫಲಿತಾಂಶದಲ್ಲಿ ಡಾ.ಕೆ. ಸುಧಾಕರ್ ಗೆಲುವು ಖಚಿತವಾಗುತ್ತಿದ್ದಂತೆಯೇ ಈ ಹಿಂದೆ ಪ್ರದೀಪ್ ಈಶ್ವರ್ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲಿಯೇ ಈಗ ಪ್ರದೀಪ್ ಈಶ್ವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆಂಬ ಪತ್ರ ವೈರಲ್ ಆಗುತ್ತಿದೆ.
ಆದರೆ, ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿರುವ ಶಾಸಕ ಪ್ರದೀಪ್ ಈಶ್ವರ್, ಇದೆಲ್ಲ ಯಾರೋ ಕಿಡಿಗೇಡಿಗಳು ಮಾಡಿರುವ ಫೇಕ್ ಲೆಟರ್. ಆ ರೀತಿ ಯಾವುದೇ ರಾಜೀನಾಮೆ ಪತ್ರವನ್ನು ನಾನು ನೀಡಿಲ್ಲ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.