ಬಹಳ ಆತಂಕಕಾರಿ ಎಂದರೆ ಜಾತ್ರೆಯ ಹೆಸರಿನಲ್ಲಿ ಸಾಲದ ಶೂಲಕ್ಕೆ ಒಳಗಾಗುವ ದುಡಿಯುವ ವರ್ಗ. ವಾರ -ಹದಿನೈದು ದಿನದಲ್ಲಿ ಮುಗಿಯುವ ಜಾತ್ರೆಗೆ ಒಂದಿಷ್ಟು ದುಡಿಯುವ ವರ್ಗದ ಜನರು ಪೂಜೆ, ಹರಕೆ, ಮಾಂಸದ ಊಟ, ನೆಂಟರ ಆತಿಥ್ಯದ ಹೆಸರಿನಲ್ಲಿ ಸಾಲ ಮಾಡಿಕೊಂಡು ನಂತರ ಅದನ್ನು ತೀರಿಸಲು ಒದ್ದಾಡುತ್ತವೆ. ಸಾವಿರಾರು ರೂ.ಗಳ ಬಡ್ಡಿಯನ್ನು ತೆರುತ್ತಾರೆ. ವಾರ ಒಪ್ಪತ್ತಿನಲ್ಲಿ ಜಾತ್ರೆ ಕೊಟ್ಟ ಖುಷಿ, ಸಂಭ್ರಮವನ್ನು ಮಾಡಿದ ಸಾಲ ತಿಂದು ಹಾಕುತ್ತದೆ. ಹೀಗಾಗಿ ಜಾತ್ರೆಯೆಂಬ ಗದ್ದಲದಲ್ಲಿ ನಾವು ವಿವೇಕವನ್ನು ಕಳೆದುಕೊಳ್ಳಬಾರದು – ಚಾರ್ವಾಕ ರಾಘು, ಸಾಗರ.
ದೇವರು ಧರ್ಮ ಆಹಾರ ವ್ಯಕ್ತಿಗಳ ವೈಯಕ್ತಿಕ ಆಯ್ಕೆ. ಯಾರು ಕೂಡ ಹೀಗೆ ಇಂತಹ ಧರ್ಮವನ್ನೆ, ದೇವರನ್ನೆ ಮತ್ತು ಆಹಾರವನ್ನೆ ಪಾಲಿಸಬೇಕು ಎಂದು ಒತ್ತಾಯ ಮಾಡುವ ಹಾಗೆ ಇಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಈ ವಿಚಾರವನ್ನೆ ಪ್ರಧಾನವಾಗಿ ಇಟ್ಟುಕೊಂಡು ಹಿಂಸೆಗಳು ನಡೆಯುತ್ತಿವೆ . ಆದರೂ ಜನ ಈ ವಿಚಾರದಲ್ಲಿ ತಮ್ಮ ಆಯ್ಕೆಯನ್ನು ಬದಲಿಸಿಲ್ಲ. ಅದು ನಿಜವಾದ ವೈವಿಧ್ಯತೆಯ ತಾಕತ್ತು.
ನಮ್ಮ ಸಾಗರದಲ್ಲಿ ಮೂರು ವರ್ಷಗಳಿಗೊಮ್ಮೆ ಮಾರಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಎಲ್ಲ ಧರ್ಮದವರು ವಿವಿಧ ರೀತಿಯಲ್ಲಿ ಭಾಗಿಯಾಗುತ್ತಾರೆ. ಈ ಜಾತ್ರೆ ಎಂಬ ವ್ಯವಸ್ಥೆಗೆ ಎಲ್ಲರನ್ನೂ ಒಳಗೊಳ್ಳುವ ದೊಡ್ಡ ಶಕ್ತಿಯಿದೆ. ಹಣ್ಣು ಮಾರುವವನಿಂದ ಹಿಡಿದು ವಿವಿಧ ರೀತಿಯ ವ್ಯವಹಾರಗಳನ್ನು ಎಲ್ಲ ಧರ್ಮದವರು ಈ ಸಂದರ್ಭದಲ್ಲಿ ಮಾಡುತ್ತಾರೆ. ಜಾತ್ರೆಯ ಸಮಯದಲ್ಲಿ ದೇವರಿಗೆ ಭಕ್ತಿ ಅರ್ಪಿಸುವ ಜನರು ಅದೇ ಹೊತ್ತಿನಲ್ಲಿ ಏನು ಮಾಡಿದರೆ ನಾಲ್ಕು ಕಾಸು ಮಾಡಬಹುದು ಎಂದು ಯೋಚಿಸಿ ಕಾರ್ಯಪ್ರವೃತ್ತರಾಗುತ್ತಾರೆ. ತಮಗೆ ಗೊತ್ತಿರುವ ಕೆಲಸವನ್ನು ಇಲ್ಲಿ ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ಯೋಚಿಸುತ್ತಾರೆ. ಇಲ್ಲಿ ನೇರ ಮಾರ್ಗ, ವಾಮ ಮಾರ್ಗ ಎರಡೂ ನಡೆಯುತ್ತದೆ. ಮಳಿಗೆ ಹರಾಜು ಎನ್ನುವ ಪಕ್ರಿಯೆಯಲ್ಲಿ ದೊಡ್ಡ ಮಾಫಿಯಾ ಇರುತ್ತದೆ. ಇವರು ಒಂದು ಸಿಂಡಿಕೇಟ್ ಮಾಡಿಕೊಂಡು ಹರಾಜು ಪ್ರಕ್ರಿಯೆ ದಿನ ಜಿದ್ದಿಗೆ ಬಿದ್ದು ಹರಾಜು ಪಡೆಯುವುದನ್ನು ನಿಯಂತ್ರಿಸುತ್ತಾರೆ. ಹರಾಜು ಆದ ಮೇಲೆ ತಾವು ಹಿಡಿದ ಮಳಿಗೆಯನ್ನು ವ್ಯವಹಾರಸ್ಥರಿಗೆ ದುಪ್ಪಟ್ಟು ದರಕ್ಕೆ ಮಾರಿ ಕೊಳ್ಳುತ್ತಾರೆ. ಇಲ್ಲಿ ಭಕ್ತಿಯ ಜಾಗದಲ್ಲಿ ವ್ಯವಹಾರ ಪ್ರಮುಖವಾಗಿ ಮುಂದೆ ಬರುತ್ತದೆ. ಭಕ್ತಿ ಮುನ್ನೆಲೆಗೆ ಬಂದಾಗ ವ್ಯವಹಾರ ಹಿನ್ನೆಲೆಗೆ ಹೋಗುತ್ತದೆ. ವ್ಯವಹಾರ ಮುನ್ನೆಲೆಗೆ ಬಂದಾಗ ಭಕ್ತಿ ಹಿನ್ನೆಲೆಗೆ ಹೋಗುತ್ತದೆ. ಇದು ಜಾತ್ರೆಗಳ ಶಕ್ತಿ ಮತ್ತು ಮಿತಿ ಕೂಡ.

ಜಾತ್ರೆ ಎಂದೊಡನೆ ಹಲವು ತರಹದ ಲಾಭಗಳು ಬಹು ಸಂಖ್ಯಾತ ದುಡಿಯುವ ವರ್ಗಕ್ಕೆ ಲಭಿಸುತ್ತವೆ. ಹಾಗೆ ನಷ್ಟವೂ ಇದೆ. ಲಾಭವೆಂದರೆ ಈ ಜನಗಳು ಜಾತ್ರೆಯ ಸಮಯದಲ್ಲಿ ತಾವು ವಾಸಿಸುವ ಮನೆಗೆ ಒಂದಿಷ್ಟು ಹೊಸತನ ಬೇಕು ಎನ್ನುವ ಕಾರಣಕ್ಕೆ ಬಹಳ ದಿನಗಳಿಂದ ಮಾಡಬೇಕು ಎಂದುಕೊಂಡಿರುವ ಕೆಲಸವನ್ನು ಮಾಡಿಸುತ್ತಾರೆ. ಸುಣ್ಣ ಬಣ್ಣ, ಸಣ್ಣ ಪುಟ್ಟ ರಿಪೇರಿ ಹೀಗೆ ಸಾಗುತ್ತದೆ ತರಾತುರಿಯಲ್ಲಿ ಕೆಲಸ. ಜಾತ್ರೆಗೆ ತಿಂಗಳು ಇರುವಾಗಲೇ ಈ ಕೆಲಸಗಳು ಆರಂಭವಾಗುತ್ತವೆ. ಜಾತ್ರೆಯ ಹಿಂದೆ ಮುಂದಿನ ದಿನಗಳಲ್ಲಿ ಬೇರೆ ರೀತಿಯ ಕೆಲಸಗಳು ಆಗುವುದಿಲ್ಲ. ಜಾತ್ರೆಯದೆ ಮಾತು. ನೀನು ಎಷ್ಟು ಕುರಿ ತರ್ತಿಯಾ, ನಿಮ್ಮದು ಹರಕೆ ಇದೆಯಾ… ಹೀಗೆ ಪರಸ್ಪರ ಚರ್ಚೆ ಮಾಡಿಕೊಳ್ಳುತ್ತಾರೆ. ಇನ್ನೊಂದೆಡೆ ಜಾತ್ರೆ ಸಮಿತಿಯವರು ವಿವಿಧ ಸಮಿತಿ ಮಾಡಿ ಜವಾಬ್ದಾರಿಯನ್ನು ಹಂಚುತ್ತಾರೆ. ಮಾರಮ್ಮನಿಗೆ ಬಾಗೀನ, ಸೀರೆ, ಬಾಸಿಂಗ ,ರಥ, ಪೂಜೆ ಹೀಗೆ ಸಂಪ್ರದಾಯಗಳನ್ನು ನಿರ್ವಹಿಸುವ ಕೆಲಸವನ್ನು ಮಾಡುವಲ್ಲಿ ಈ ಸಮಿತಿಯವರು ತಲ್ಲೀನರಾಗುತ್ತಾರೆ.
ಇನ್ನು ಜಾತ್ರೆಗಳಲ್ಲಿ ಹಲವು ತರಹದ ಗೃಹೋಪಯೋಗಿ ವಸ್ತುಗಳು ಅಗ್ಗದ ದರದಲ್ಲಿ ದೊರೆಯುತ್ತವೆ. ಇಂತಹ ಅವಕಾಶವನ್ನು ಬಹುಸಂಖ್ಯಾತ ದುಡಿಯುವ ವರ್ಗ ಸಮರ್ಥವಾಗಿ ಬಳಸಿಕೊಳ್ಳುತ್ತದೆ. ಅದೇ ಹೊತ್ತಿನಲ್ಲಿ ವರ್ಷವಿಡೀ ದುಡಿಯುವ ಜನರಿಗೆ ಜಾತ್ರೆಯ ನೆಪದಲ್ಲಿ ಮನರಂಜನೆ ಕೂಡ ಸಿಗುವುದು ಜಾತ್ರೆಯ ವಿಶೇಷ. ಸಾವಿರಾರು ಜನ ಸೇರುವ ಜಾತ್ರೆಯಲ್ಲಿ ಹಲವು ತರಹದ ಜನರು, ಯುವಕ ಯುವತಿಯರ ಓಡಾಟ, ಖುಷಿ ,ತುಂಟಾಟ, ಕಿಡಿಗೇಡಿತನ ಎಲ್ಲವೂ ಇಲ್ಲಿ ಸಾಧ್ಯ.
ಇನ್ನು ಜಾತ್ರೆಯನ್ನು ಈ ವರ್ಷ ಯಾವ ರೀತಿ ಮಾಡುವುದು ಎನ್ನುವುದರತ್ತ ದೊಡ್ಡವರ ಚಿತ್ತವಿರುತ್ತದೆ. ಆಧುನಿಕಗೊಂಡಿರುವ ವರ್ತಮಾನದ ಈ ಸಮಾಜ ದೇವರು ಧರ್ಮವನ್ನು ನಂಬುತ್ತಲೇ ಹೊಸತನ್ನು ಹುಡುಕುವ ಹುಡುಕಾಟದಲ್ಲಿ ನಿರತವಾಗಿರುವುದರಿಂದ ಹೊಸ ಹೊಸ ಆಟಗಳು, ತಿಂಡಿ ತಿನಿಸುಗಳು ಜಾತ್ರೆಯಲ್ಲಿ introduce ಆಗುತ್ತವೆ. ಅದಕ್ಕೆ ನಾವು ಮರುಳಾಗುತ್ತೇವೆ. ಅದು ನೋಡಿ ಅನುಭವಿಸಿ ಆದ ಮೇಲೆ kick and thrill ಗೆ ಒಳಗಾಗುತ್ತೇವೆ. ಹಾಗೆ ಇದು ಉಪಯೋಗವಿಲ್ಲ ,ಸುಮ್ನೆ ದುಡ್ಡು ದಂಡ ಎನ್ನುತ್ತಾರೆ. ಚಿಕ್ಕ ಮಕ್ಕಳು ಅದು ಇದು ಬೇಕು ,ಇದನ್ನು ಆಡಿಸು,ಅದನ್ನು ಆಡಿಸು ಎಂದು ಪೋಷಕರಲ್ಲಿ ಹಠಕ್ಕೆ ಬೀಳುತ್ತಾರೆ.
ಇನ್ನು ಜಾತ್ರೆಗಳು ಸಂಬಂಧಗಳನ್ನು ಬೆಸೆಯುವ ದೊಡ್ಡ ಸೇತುವೆ. ಹಳೆ ಗೆಳೆಯರ ಭೇಟಿ, ನೆಂಟರ ಭೇಟಿ, ಒಟ್ಟಿಗೆ ಊಟ, ಹಳೆ ಘಟನೆಗಳ ಮೆಲಕು ಇವೆಲ್ಲ ಜಾತ್ರೆಗಳ ಸಕಾರಾತ್ಮಕ ಸಾಧ್ಯತೆಗಳು.
ಹಾಗೆಯೇ ಮಿತಿಗಳೂ ಬಹಳಷ್ಟಿವೆ. ಅತಿಯಾದ ಮೌಢ್ಯ, ಅದು ಪಾಲನೆಯಾಗಿಲ್ಲ, ಇದು ಪಾಲನೆಯಾಗಿಲ್ಲ ಎನ್ನುವ ತಕರಾರು, ಗಲಾಟೆ ಮುನಿಸುಗಳು ನಡೆಯುತ್ತವೆ. ದೇವರ ಹೆಸರಿನಲ್ಲಿ ಆಡಳಿತ ಮಂಡಳಿಯವರು ಹಣ ಕೊಳ್ಳೆ ಹೊಡೆಯುವುದೂ ಇದೆ. ಆದರೆ ಸಂಪನ್ನತೆಯ ಮುಖವಾಡ ಹಾಕಿರುತ್ತಾರೆ. ಪಾಪಪ್ರಜ್ಞೆಗೆ ಒಳಗಾದವರು ಬಳಲುತ್ತಾರೆ, ಬಂಡು ಬಿದ್ದವರು ದೋಚುತ್ತಲೇ ಇರುತ್ತಾರೆ. ಆದರೆ ಲಕ್ಷಾಂತರ ಜನರಿಂದ ಪೂಜಿಸಿಕೊಳ್ಳುವ ದೇವರಿಗೆ ಏನೂ ಮಾಡಲು ಆಗುವುದಿಲ್ಲ. ಬಂಡು ಬಿದ್ದವರ ಎದರು ದೇವರು ದುರ್ಬಲ. ದೇವರು ಧರ್ಮದ ಹೆಸರಿನ ದಂಧೆ, ಮೋಸ, ಅತ್ಯಾಚಾರ ಇವುಗಳು ನಿರಂತರ ನಡೆಯುತ್ತಿದ್ದರು ದೇವರ ಉತ್ಸವಗಳಿಗೆ ಜನರ ಪಾಲ್ಗೊಳುವಿಕೆ ಕಡಿಮೆಯಾಗುವುದಿಲ್ಲ. ದಂಧೆಕೋರರ ಜೇಬು ತುಂಬುವುದು ನಿಲ್ಲುವುದಿಲ್ಲ. ಧರ್ಮದ ಹೆಸರಿನ ಜಾತ್ರೆಯ ಅತಿ ದೊಡ್ಡ ಮಿತಿ ಇದು.
ಇನ್ನು ಬಹಳ ಆತಂಕಕಾರಿ ಎಂದರೆ ಜಾತ್ರೆಯ ಹೆಸರಿನಲ್ಲಿ ಸಾಲದ ಶೂಲಕ್ಕೆ ಒಳಗಾಗುವ ದುಡಿಯುವ ವರ್ಗ. ವಾರ -ಹದಿನೈದು ದಿನದಲ್ಲಿ ಮುಗಿಯುವ ಜಾತ್ರೆಗೆ ಒಂದಿಷ್ಟು ದುಡಿಯುವ ವರ್ಗದ ಜನರು ಪೂಜೆ, ಹರಕೆ, ಮಾಂಸದ ಊಟ, ನೆಂಟರ ಆತಿಥ್ಯದ ಹೆಸರಿನಲ್ಲಿ ಸಾಲ ಮಾಡಿಕೊಂಡು ನಂತರ ಅದನ್ನು ತೀರಿಸಲು ಒದ್ದಾಡುತ್ತವೆ. ಸಾವಿರಾರು ರೂ. ಗಳ ಬಡ್ಡಿಯನ್ನು ತೆರುತ್ತಾರೆ. ವಾರ ಒಪ್ಪತ್ತಿನಲ್ಲಿ ಜಾತ್ರೆ ಕೊಟ್ಟ ಖುಷಿ, ಸಂಭ್ರಮವನ್ನು ಮಾಡಿದ ಸಾಲ ನಂತರದ ದಿನಗಳಲ್ಲಿ ತಿಂದು ಹಾಕುತ್ತದೆ. ಹೀಗಾಗಿ ಜಾತ್ರೆಯೆಂಬ ಗದ್ದಲದಲ್ಲಿ ನಾವು ವಿವೇಕವನ್ನು ಕಳೆದುಕೊಳ್ಳಬಾರದು. ಹಾಗೆ ನಾಸ್ತಿಕರಂತೆ ಇದ್ದು ದೂರವಾಗಿ ಜಾತ್ರೆ ಕೊಡುವ ಖುಷಿಯನ್ನು ಅನುಭವಿಸದೆ ಏಕಾಂಗಿಯಾಗಬಾರದು. ಜಾತ್ರೆಯಲ್ಲಿನ ಬೆಂಡು ಬತ್ತಾಸು, ಜಿಲೇಬಿ, ಮುಂತಾದವುಗಳ ಸವಿಯನ್ನು ಅನುಭವಿಸಬೇಕು. ಬಾವಿಯೊಳಗಿನ ಬೈಕ್ ಕಾರಿನ ಸಾಹಸದ ಜೊತೆಗೆ ಇತರೆ ಆಟಗಳನ್ನು ಗೆಳೆಯರೊಂದಿಗೆ, ಕುಟುಂಬದೊಂದಿಗೆ ಅನುಭವಿಸುವುದನ್ನು ತಪ್ಪಿಸಿಕೊಳ್ಳ ಬಾರದು.
ಬನ್ನಿ, ನಮ್ಮೂರ ಮಾರಿ ಜಾತ್ರೆ ಆರಂಭವಾಗಿದೆ. ಅಚಾನಕ್ ಸಿಗೋಣ. ಪರಸ್ಪರ ಮಾಹಿತಿ ಹಂಚಿಕೊಂಡು ಭೇಟಿಯಾಗಿ ಜಾತ್ರೆಯಲ್ಲಿ ಓಡಾಡೋಣ. ಕುಳಿತು ಹರಟೆ ಹೊಡೆಯುತ್ತಾ ಊಟ ಮಾಡೋಣ. ಸಾಗರ ಮಾರಿ ಜಾತ್ರೆಗೆ ಬರುವ ಎಲ್ಲ ಗೆಳೆಯ ಗೆಳತಿಯರಿಗೆ ನೆಂಟರಿಗೆ, ಶತ್ರುಗಳಿಗೆ ಎಲ್ಲರಿಗೂ ಚಾರ್ವಾಕ ಬಳಗದ ಸ್ವಾಗತ.
ಚಾರ್ವಾಕ ರಾಘು, ಸಾಗರ
ಪತ್ರಕರ್ತರು, ವಕೀಲರು
ಇದನ್ನೂ ಓದಿ- ಅದೊಂದು ದೊಡ್ಡ ಕಥೆ, ಆತ್ಮಕಥನ ಸರಣಿ- 15 -ಎಸ್ ಎಸ್ ಎಲ್ ಸಿ ಮುಗಿಯಿತು


