ಬೆಂಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರು ಎಸ್ ಟಿ ಮೀಸಲು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. P- MARQ ಮತ್ತು ರಿಪಬ್ಲಿಕ್ ಮತಗಟ್ಟೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ನ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಲಿದ್ದಾರೆ. ಕನ್ನಡದ ಬಹುತೇಕ ಚಾನೆಲ್ ಗಳೂ ಇದೇ ಸಮೀಕ್ಷೆಯನ್ನು ಪುಷ್ಟಿಕರಿಸಿವೆ. ಸಂಡೂರಿನಲ್ಲಿ ಅನ್ನಪೂರ್ಣ ವಿರುದ್ಧ ಬಿಜೆಪಿಯಿಂದ ಬಂಗಾರು ಹನುಮಂತ ಸ್ಪರ್ಧಿಸಿದ್ದಾರೆ. ಅನ್ನಪೂರ್ಣ ಅವರ ಪತಿ ತುಕಾರಾಂ ಅವರು ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಮರು ಚುನಾವಣೆ ನಡೆದಿದೆ.
ಅನ್ನಪೂರ್ಣ ತುಕಾರಾಂ ಶೇ. 43 ರಷ್ಟು ಮತ ಗಳಿಸಿ ಆಯ್ಕೆಯಾಗಲಿದ್ದಾರೆ ಎಂದು ರಿಪಬ್ಲಿಕ್ ಕನ್ನಡ ಚಾನೆಲ್ ಸಮೀಕ್ಷೆ ಹೇಳಿದೆ. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಶೇ. 40 ರಷ್ಟು ಮತ ಗಳಿಕೆ ಮಾಡಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಸಂಡೂರು ಕ್ಷೇತ್ರದಲ್ಲಿ 1,18,279 ಮಹಿಳಾ 1,17,739 ಪುರುಷ ಸೇರಿ ಒಟ್ಟು 2,36,047 ಮತದಾರರಿದ್ದಾರೆ. ಎಸ್ ಸಿ( 41,676), ಎಸ್ ಟಿ (59,312), ಲಿಂಗಾಯತ (30,024), ಕುರುಬ (24,701), ಮುಸ್ಲಿಂ (24,588), ಹಿಂದುಳಿದ ವರ್ಗ(41,506) ಮತ್ತು ಇತರೆ ಸಮುದಾಯಗಳ 15,000 ಮತದಾರರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕ್ಷೇತ್ರವನ್ನು ಶತಾಯ ಗತಾಯ ಗೆಲ್ಲಲು ನಿರ್ಧರಿಸಿದ್ದರು. ಇದುವರೆಗೂ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ ಈ ಭಾರಿ ಗೆಲ್ಲಲೇಬೇಕೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಪಾರ ಶ್ರಮ ಹಾಕಿದ್ದರು. ಈ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಪರವಾಗಿ ನಿಂತಿದೆ. ತುಕಾರಾಂ ಅವರೂ ನಾಲ್ಕು ಬಾರಿ ಜಯ ಸಾಧಿಸುವ ಮೂಲಕ ಕ್ಷೇತ್ರದ ಮೇಲೆ ಹಿಡಿತ ಹೊಂದಿರುವುದನ್ನು ತೋರಿಸುತ್ತದೆ.