ಮುಂಡಗೋಡ: ರೈತರ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಆದಾಯ ಡಬಲ್ ಮಾಡುತ್ತೇವೆಂದು ಹೇಳಿ ರೈತರಿಗೆ ಮರಳು ಮಾಡಿದೆ. ಅತಿಕ್ರಮಣದಾರರ ವಿಚಾರದಲ್ಲಿಯೂ ರಾಜಕೀಯ ಮಾಡಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಇಲ್ಲಿ ಹಮ್ಮಿಕೊಂಡಿರುವ ಪ್ರಜಾಧ್ವನಿ- 2 ಸಮಾವೇಶದಲ್ಲಿ ಮಾತನಾಡಿ ಉತ್ತರ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಅವರ ಪರವಾಗಿ ಮತಯಾಚನೆ ಮಾಡಿದ ಅವರು, ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅರಣ್ಯ ಅತಿಕ್ರಮಣದಾರರಿಗೆ ಪಟ್ಟ ಕೊಡಿಸಲಿದೆ. ಈ ಬಗ್ಗೆ ಯಾರೂ ಹೆದರುವ ಅಗತ್ಯವಿಲ್ಲ. ಅರಣ್ಯ ಅತಿಕ್ರಮಣದಾರರ ಪರ ಹೋರಾಟ ನಡೆಸುತ್ತಿರುವ ರವೀಂದ್ರ ನಾಯ್ಕರಿಗೆ ಸಹ ಸೂಕ್ತ ಸ್ಥಾನಮಾನ ನೀಡಲಿದೆ ಎಂದರು.
ರಾಜ್ಯದಲ್ಲಿ ಬರ ಬಂದಿದೆ. 200 ತಾಲೂಕುಗಳಲ್ಲಿ ಬರಗಾಲದಲ್ಲಿ ಇದೆ. ಬರ ಪರಿಹಾರದಲ್ಲಿ ಕೇಂದ್ರ ಸರಕಾರ ರಾಜ್ಯಕ್ಕೆ ಸಹಾಯ ಮಾಡಿಲ್ಲ. ಕೇಂದ್ರ ಸರಕಾರ ಸತ್ತು ಹೋಗಿದೆ. ಕೊರೋನಾ ಸಂದರ್ಭದಲ್ಲಿ ಕೇಂದ್ರದ ಮುಂದೆ ಹೋಗಿ ಪರಿಹಾರ ಕೇಳಿದ್ದೆವು. ಆದರೆ ಆವಾಗಲೂ ಕೇಂದ್ರ ಸರಕಾರ ಸಹಾಯ ಮಾಡಿಲ್ಲ. ಕಾಂಗ್ರೆಸ್ ಸರಕಾರದಿಂದ ಬಡವರಿಗೆ ಭಾರೀ ಸಹಾಯವಾಗಿದೆ ಎಂದರು.
ನಾವೇನು ದೇವಸ್ಥಾನ ಕಟ್ಟಿಲ್ವಾ? ನಾವೆಲ್ಲರು ಹಿಂದು. ಬಿಜೆಪಿ ಹಿಂದುತ್ವದ ರಾಜಕಾರಣ ಮಾಡುತ್ತಿದೆ. ಬಂಗಾರಪ್ಪರ ಕಾಲದಲ್ಲೆ ನಾವು ನೂರಾರು ದೇವಸ್ಥಾನ ಕಟ್ಟಿದ್ದೇವೆ. ಧರ್ಮದಲ್ಲಿ ರಾಜಕಾರಣ ಮಾಡುವ ಬಿಜೆಪಿಗೆ ಹಿಂದುತ್ವ ರಾಜಕಾರಣ ಮಾಡುವ ಹಕ್ಕಿಲ್ಲ ಎಂದ ಅವರು, ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರಕಾರವನ್ನ ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ, ದೇಶದಲ್ಲಿ ಬದಲಾವಣೆಗೆ ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ. ಬಿಜೆಪಿ ಅಧಿಕಾರಕ್ಕೆ ಬಂದು ಜನರ ಬದುಕಿನಲ್ಲಿ ಏನೂ ಬದಲಾವಣೆ ತಂದಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜನರ ಬದುಕನ್ನ ಬದಲಿಸುವ ಕಾರ್ಯ ಮಾಡಿದೆ. ಕಾಂಗ್ರೆಸ್ ರೈತರಿಗೆ ಉಚಿತ ವಿದ್ಯುತ್ ನೀಡಿತು. ಬಡವರಿಗಾಗಿ ನರೇಗಾ ಅಡಿ ಉದ್ಯೋಗ ನೀಡಿತು. ನಾವು ಅಧಿಕಾರಕ್ಕೆ ಬಂದ ನಂತರ ನರೇಗಾ ಕೂಲಿಯನ್ನ ಇನ್ನು ಹೆಚ್ಚಿಸುತ್ತೇವೆ. ಕೊರೋನಾ ಸಂಧರ್ಭದಲ್ಲಿ 22 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳಿತು. ಆದರೆ ಯಾವುದೇ ಹಣ ಬರಲಿಲ್ಲ ಎಂದರು.
ರಾಜ್ಯದಲ್ಲಿ ಐದು ಸಾವಿರ ಹಣ ಕೊಡುತ್ತೇವೆಂದು ನಾಲ್ಕೈದು ಜನಕ್ಕೆ ನೀಡಿ ಸುಮ್ಮನಾದರು. ಕೋವಿಡ್ ವ್ಯಾಕ್ಸಿನ ನಿಂದ ದೇಹಕ್ಕೆ ಸಮಸ್ಯೆ ಆಗುತ್ತಿದೆ ಎಂದು ವರದಿ ನೋಡಿದೆ. ಇದಕ್ಕೆ ಹೊಣೆ ಯಾರು? ಔಷಧಿ ನೀಡಿದ ಕಂಪನಿ ಎಲೆಕ್ಷನ್ ಬಾಂಡ್ ನಲ್ಲಿ ಬಿಜೆಪಿಗೆ ಹಣ ನೀಡಿದೆ. ಆ ಮೂಲಕ ಕೊರೋನಾದಲ್ಲೂ ಮಾಫಿಯಾ ಮಾಡಿದರು ಎಂದು ಬಿಜೆಪಿಗೆ ಜರಿದರು.
ಹೆಬ್ಬಾರ್ ಮಗ ನಮ್ಮ ಹುಡುಗ. ಆತ ನಮ್ಮ ಪಾರ್ಟಿಗೆ ಸೇರಿರುವುದು ಖುಷಿ ನೀಡಿದೆ. ಜೊತೆಗೂಡಿ ಕೆಲಸ ಮಾಡಿ ಒಗ್ಗಟ್ಟಿನಿಂದ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸೋಣ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನ ಇನ್ನೂ ಗಟ್ಟಿಗೊಳಿಸೋಣ ಎಂದು ಅವರು ಕರೆನೀಡಿದರು.