ಚಿತ್ರದುರ್ಗ: ಡಿ ಗ್ಯಾಂಗ್ ನಿಂದ ಬರ್ಬರವಾಗಿ ಕೊಲೆಯಾದ ರೇಣುಕಾಸ್ವಾಮಿ ನಿವಾಸಕ್ಕೆ ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್, ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಲಿದ್ದಾರೆ.
ಇಂದು ಬೆಳಿಗ್ಗೆ 10.45ಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ರೇಣುಕಾಸ್ವಾಮಿಯ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇಲ್ಲಿಗೆ ಆಗಮಿಸಲಿದ್ದು, ಕುಟುಂಬ ಸದಸ್ಯರನ್ನು ಭೇಟಿಯಾಗಲಿದ್ದಾರೆ.
ಈ ನಡುವೆ ರೇಣುಕಾಸ್ವಾಮಿ ಹತ್ಯೆಗೂ ಮುನ್ನ ರಾಜರಾಜೇಶ್ವರಿನಗರದ ಸ್ಟೋನಿಬ್ರೂಕ್ ಹೋಟೆಲ್ ನಲ್ಲಿ ಪಾರ್ಟಿ ಮಾಡುತ್ತಿದ್ದ ಮತ್ತೊಬ್ಬ ಸಿನಿಮಾ ನಟ ಯಶಸ್ ಸೂರ್ಯ ಅವರಿಗೆ ಕಾಮಾಕ್ಷಿಪಾಳ್ಯ ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ. ನಿನ್ನೆಯಷ್ಟೇ ಇದೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಹಾಸ್ಯನಟ ಚಿಕ್ಕಣ್ಣ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ದರ್ಶನ್ ಅವರು ಊಟಕ್ಕೆ ಕರೆದಿದ್ದರು, ಅದಕ್ಕೆ ನಾನು ಹೋಟೆಲ್ ಗೆ ಬಂದಿದ್ದೆ, ಕೊಲೆಗೂ ನನಗೂ ಸಂಬಂಧವಿಲ್ಲ ಎಂದು ಚಿಕ್ಕಣ್ಣ ಪೊಲೀಸರಿಗೆ ಹೇಳಿಕೆ ನೀಡಿದ್ದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಒಟ್ಟು 27 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಈ ಪೈಕಿ 17 ಮಂದಿ ಕೊಲೆ ಆರೋಪಿಗಳಾಗಿದ್ದರೆ ಉಳಿದ 10 ಮಂದಿಯನ್ನು ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ.