01
‘ಆ ನಿಗೂಢ ಸ್ಥಳದಲ್ಲಿ
ಘಟಸರ್ಪಗಳು
ಪಾರಿವಾಳಗಳ ನುಂಗುತ್ತಿವೆ’
ನಾಗರಿಕರು ಫಿರ್ಯಾದು ಕೊಟ್ಟರು
ಅರಣ್ಯ ಪಾಲಕರು
‘ಹೌದೇ, ನಮಗೆ ಗೊತ್ತೇ ಇಲ್ಲ’
02
ರೋದನವೇ ಅರಣ್ಯವಾಗಿ
ಹೆಣ್ಣು ಹೆತ್ತ ಒಡಲುಗಳ ಸಂಕಟ
ರಕ್ತಗಂಬನಿಯಾಗಿ
ಆಡಿದ ಮಾತುಗಳೆಲ್ಲ
ಸಿಡಿಲಾಗಿ ಬಡಿಯುತಿರುವಾಗ
ಪೇಟಗಳು
ಮುಗುಮ್ಮಾಗಿ ಹೇಳಿದವು
‘ನಮಗೇನೂ ಗೊತ್ತಿಲ್ಲ’
03
ದಂಡಕಾರಣ್ಯದ ಮರಗಳು
ಕಾಳ್ಗಿಚ್ಚಿನಿಂದ ಸುಟ್ಟುಕೊಳ್ಳಲು
ಅನುಮತಿ ಕೇಳಿದವು
ಕಾರ್ಮೋಡಗಳೆಲ್ಲ ಒಟ್ಟಾಗಿ ಸೇರಿ
ಬೆಂಕಿಯ ಹೊತ್ತಗೊಡದಿರಲು ತಯಾರಾದವು
ಹತ್ತಿರವೇ ಇದ್ದ ಪೇಟಗಳು
ನಸುನಕ್ಕು ಹೇಳಿದವು
‘ನಮಗೇನೇನೂ ಗೊತ್ತಿಲ್ಲ’
04
ನೇತ್ರಾವತಿಯು
ಕಣ್ಣೀರು ಹರಿಸುತ್ತಿದ್ದಾಳೆ
ದಂಡೆಯಲ್ಲಿ ಅಸ್ತವ್ಯಸ್ತವಾಗಿ ಬಿದ್ದ
ಜೀವಗಳ ಕಂಡು
ಸಿಟ್ಟಿನಿಂದ ಪ್ರವಹಿಸುತ್ತಿದ್ದಾಳೆ
ಸುದ್ದಿ ತಿಳಿದ ಪೀಠಗಳದ್ದು ಒಂದೇ ದನಿ
‘ಹೌದೇ ನಮಗೆ ಗೊತ್ತಿರಲಿಲ್ಲ’
05
ಆ ಪೇಟಗಳು
ಈ ಪೀಠಗಳ ಸಾಕುತಿವೆ
ಈ ಪೀಠಗಳು ಆ ಪೇಟಗಳ ಕಾಯುತಿವೆ
ನೂರಾರು ಸೌಜನ್ಯರ ಅತ್ಯಾಚಾರವಾಯಿತಲ್ಲ
ಎಂದು ಪ್ರಶ್ನಿಸಿದರೆ
ಪೀಠ ಪೇಟಗಳು
ಒಕ್ಕೊರಲಿನಿಂದ ಹೇಳಿದವು
‘ಗೊತ್ತಿಲ್ಲ, ಗೊತ್ತಿಲ್ಲ, ಗೊತ್ತಿಲ್ಲ’
06
ಅದು ಸ್ಥಳವಲ್ಲ
ಬಲಿಪೀಠ
ಎಂದು ಹಕ್ಕಿಗಳು
ದೂರು ನೀಡಿದವು
ಸ್ಥಳದ ಮಾಲೀಕ ಹೇಳಿದ
‘ಅಂಥದೇನೂ ನಡೆದಿಲ್ಲ
ನನಗೇನೂ ಗೊತ್ತಿಲ್ಲ’
07
ಸುದ್ದಿಗೋಷ್ಠಿಯಲ್ಲಿ
ಮಹಾಮಾತೊಂದು ಕೇಳಿಬಂತು
‘ತಿಳಿದೂ ತಿಳಿದೂ ನಾವು
ಒಂದು ಇರುವೆಯನ್ನೂ ಸಾಯಿಸುವುದಿಲ್ಲ’
ಗೋರಿಗಳ ಕಾಯುತ್ತಿರುವ
ಇರುವೆಗಳು ಹೇಳಿದವು
‘ಪಾಪ, ಅವರಿಗೇನೂ ಗೊತ್ತಿಲ್ಲ’
08
ಕಾಡಿನಲ್ಲಿ ಅಸ್ತವ್ಯಸ್ತವಾಗಿ ರಕ್ತಸಿಕ್ತವಾಗಿ
ಬಿದ್ದಿದ್ದ ಬಟ್ಟೆಗಳು ಹೇಳಿದವು
‘ಆ ಪೇಟದ ಒಂದೊಂದು ನೂಲುಗಳು
ನಮ್ಮ ನೇಣು ಬಿಗಿದ ಹಗ್ಗಗಳು’
ಎಲ್ಲಿಂದಲೋ ಬಂದ ಜೋರುದನಿಯೊಂದು
ಕೂಗಾಡಿತು
ಆಕ್ರೋಶದಿಂದ
‘ಯಾವನವ ಹೇಳಿದವ
ನನಗೇನೂ ಗೊತ್ತಿಲ್ಲ’
09
‘ಎಂದಾದರೊಂದು ದಿನ
ಮಂಜುನಾಥ
ಗಾಢನಿದಿರೆಯಿಂದೆದ್ದ ದಿನ
ಣಮೋಕಾರ ಮಂತ್ರಕ್ಕೆ
ಅರ್ಥ ಬರುತ್ತದೆ
ಸೌಜನ್ಯಳಿಗೆ ನ್ಯಾಯ ಸಿಕ್ಕುತ್ತದೆ’
ಸ್ಥಳದ ಬೀದಿಯಲ್ಲಿ
ಜನ ಮಾತನಾಡಿಕೊಂಡರು
ಯಾರೋ ದೂರದಿಂದ ಕೂಗಿದರು
‘ಹಾಗೆಯೇ ಆಗಲಿ
ನಮಗೇನೂ ಗೊತ್ತಿಲ್ಲ’
10
ಬಲಿಪೀಠದ ಮೇಲೆ
ವಿರಾಜಮಾನವಾದ ಪೇಟಕ್ಕೆ
ಹಸಿವೇ ನೀಗುತಿಲ್ಲ
ಹುಡುಕಿ ಹುಡುಕಿ ಬೇಸತ್ತ ಬೇಟೆಗಾರರು
ಬಲಿ ಸಿಗುತಿಲ್ಲ ಎಂದರೆ
ಪೀಠ ಆರ್ಭಟಿಸಿತು
‘ಎಲ್ಲಿಂದಲಾದರೂ ತನ್ನಿ
ನನಗೇನೂ ಗೊತ್ತಿಲ್ಲ’
ವೀರಣ್ಣ ಮಡಿವಾಳರ
ಕವಿ, ನಾಟಕಕಾರರು.
ಇದನ್ನೂ ಓದಿ- ಕುದಿಯುವರು ಒಳಗೊಳಗೆ ಸ್ವಾತಂತ್ರ್ಯವಿಲ್ಲೆನುತ