ರಾಜ್ಯಸಭೆಯಲ್ಲಿ ಅಧಿಕಾರಾವಧಿ ಕೊನೆಗೊಳ್ಳುತ್ತಿರುವ ಸದಸ್ಯರನ್ನು ಬೀಳ್ಕೊಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸದನ ಮತ್ತು ದೇಶಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.
ಸಂಸದರ ಬೀಳ್ಕೊಡುಗೆ ಕುರಿತು ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿ, ಪ್ರಮುಖ ಶಾಸನದ ಮೇಲೆ ಮತ ಚಲಾಯಿಸಲು ಮನಮೋಹನ್ ಸಿಂಗ್ ಅವರು ಗಾಲಿಕುರ್ಚಿಯಲ್ಲಿ ಸಂಸತ್ತಿಗೆ ಆಗಮಿಸಿದನ್ನು ಪ್ರಧಾನಿಯವರು ನೆನಪಿಸುತ್ತಾ, ಮುಂದೆ ಪ್ರಜಾಪ್ರಭುತ್ವದ ಬಗ್ಗೆ ಚರ್ಚಿಸಿದಾಗಲೆಲ್ಲಾ ಅವರ ಅನುಪಸ್ಥಿತಿ ನಮ್ಮನ್ನು ಕಾಡಲಿದೆ ಎಂದು ಹೇಳಿದ್ದಾರೆ.
ಈ ಸದನದಲ್ಲಿ ಮನಮೋಹನ್ ಸಿಂಗ್ ವಿಶೇಷ ಕೊಡುಗೆ ನೀಡಿದ್ದಾರೆ. ಅವರಿಗೆ ಎಂದಿಗೂ ವಿದಾಯ ಹೇಳುವುದಿಲ್ಲ. ಮನಮೋಹನ್ ಸಿಂಗ್ ಜಾಗರೂಕ ಸಂಸದರು ಅವರ ಮಾರ್ಗದರ್ಶನವನ್ನು ನಾವು ಸ್ವೀಕರಿಸಿದ್ದೇವೆ. ನಿವೃತ್ತಿಯಾದ ಎಲ್ಲಾ ಸಂಸದರು ಅಮೂಲ್ಯವಾದ ಪರಂಪರೆಯನ್ನು ಬಿಟ್ಟು ಹೋಗುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಮಾಜಿ ಪ್ರಧಾನಿ ಮತ್ತು ನಿವೃತ್ತ ಸಂಸದ ಮನಮೋಹನ್ ಸಿಂಗ್ ಅವರು 6 ಬಾರಿ ಸದನದ ಸದಸ್ಯರಾಗಿದ್ದರು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ, ಆದರೆ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಸದನಕ್ಕೆ ಹಲವು ಬಾರಿ ಮಾರ್ಗದರ್ಶನ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಸದನದಲ್ಲಿ ಮತದಾನದ ಸಮಯ ನನಗಿನ್ನು ನೆನಪಿದೆ, ಆಡಳಿತ ಪಕ್ಷ ಗೆಲ್ಲುತ್ತದೆ ಎಂದು ತಿಳಿದಿದ್ದರೂ ಡಾ. ಮನಮೋಹನ್ ಸಿಂಗ್ ಅವರು ತಮ್ಮ ಗಾಲಿಕುರ್ಚಿಯ ಮೇಲೆ ಬಂದು ಮತ ಚಲಾಯಿಸಿದರು. ಸಿಂಗ್ ಯಾರನ್ನು ಬೆಂಬಲಿಸುತ್ತಿದ್ದಾರೆ ಎಂಬುದರ ಹೊರತಾಗಿ ಇದು ಸದಸ್ಯರೊಬ್ಬರು ತಮ್ಮ ಕರ್ತವ್ಯಗಳ ಬಗ್ಗೆ ಎಷ್ಟು ಗಟ್ಟಿಯಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಅವರು ಪ್ರಜಾಪ್ರಭುತ್ವವನ್ನು ಬಲಪಡಿಸಲು ಬಂದವರು. ಅವರ ಈ ನಡೆ ಎಲ್ಲರಿಗೂ ಸ್ಫೂರ್ತಿದಾಯಕ ಉದಾಹರಣೆ. ಅವರು ದೀರ್ಘಕಾಲ ಬದುಕಲಿ ಮತ್ತು ನಮಗೆ ಮಾರ್ಗದರ್ಶನ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದರು.
ಆಗಸ್ಟ್‌ನಲ್ಲಿ, ದೆಹಲಿ ಸರ್ಕಾರಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಪ್ರಮುಖ ಮಸೂದೆಯ ಚರ್ಚೆಯ ಸಂದರ್ಭದಲ್ಲಿ ಸಿಂಗ್ ಅವರು ಗಾಲಿಕುರ್ಚಿಯಲ್ಲಿ ಸಂಸತ್ತಿಗೆ ಬಂದಿದ್ದರು. ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲೂ ಅವರು ಮತ ಚಲಾಯಿಸಲು ವ್ಹೀಲ್‌ಚೇರ್‌ನಲ್ಲಿ ಆಗಮಿಸಿದ್ದರು.