Thursday, July 25, 2024

ಅಗ್ನಿಪತ್ ಯೋಜನೆ ಒಂದು ಬೋಗಸ್ ಯೋಜನೆ, ನಿರುದ್ಯೋಗ ಎಂಬ ಅತ್ಯಂತ ದೊಡ್ಡ ವಿಪತ್ತು ಎದುರಾಗಲಿದೆ : ಅಂಶುಲ್ ಅವಿಜಿತ್

Most read

ಈ ದೇಶದಲ್ಲಿ ಎದುರಾಗಿರುವ ಅತ್ಯಂತ ದೊಡ್ಡ ವಿಪತ್ತು ಎಂದರೆ ನಿರುದ್ಯೋಗ. ಈ ಸಮಸ್ಯೆಯಿಂದ ಯುವಕರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಅವರ ಯೋಜನೆಗಳು ವಿಫಲವಾಗಿವೆ ಎಂದು ಕೇಂದ್ರ ಸರ್ಕಾರದ ವಿರುದ‌್ಧ ಎಐಸಿಸಿ ವಕ್ತಾರರಾದ ಅಂಶುಲ್ ಅವಿಜಿತ್ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಎಐಸಿಸಿ ವಕ್ತಾರರಾದ ಅಂಶುಲ್ ಅವಿಜಿತ್ ಅವರು,  1.50 ಲಕ್ಷ ಅಗ್ನಿಪತ್ ಪರೀಕ್ಷೆ ಬರೆದ ಯುವಕರಿಗೆ ನ್ಯಾಯ ಒದಗಿಸಲು ನಾವು ಆಂದೋಲನ ಆರಂಭಿಸಿದ್ದೇವೆ. ರಾಹುಲ್ ಗಾಂಧಿ ಅವರು ಭಾರತ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಯುವ ನ್ಯಾಯ ಆಂದೋಲನ ಆರಂಭಿಸಿದ್ದಾರೆ.

ನಿರುದ್ಯೋಗ ಸಮಸ್ಯೆ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಪ್ರಸ್ತಾಪ ಮಾಡಿಯೇ ಇಲ್ಲ. ಸದ್ಯ ದೇಶದಲ್ಲಿ 4 ಕೋಟಿ ನಿರುದ್ಯೋಗಿ ಯುವಕರಿದ್ದಾರೆ. ಅದರಲ್ಲಿ 15ರಿಂದ 29 ವಯೋಮಾನದೊಳದಿನ ನಿರುದ್ಯೋಗಿಗಳ ಪ್ರಮಾಣ 10% ಇದ್ದು, 25 ವರ್ಷದೊಳಗಿನ ಪದವೀಧರ ನಿರುದ್ಯೋಗಿಗಳ ಪ್ರಮಾಣ 40% ರಷ್ಟಿದೆ. ಯುವಕರು ಪದವೀಧರರಾದರೆ ಅವರಿಗೆ ಕೆಲಸ ಸಿಗುವ ಖಚಿತತೆ ಇಲ್ಲ. ನಿರುದ್ಯೋಗಿ ಯುವಕರ ನೆರವಿಗೆ ಕೇಂದ್ರ ಬಜೆಟ್ ನಲ್ಲಿ ಅನುದಾನವನ್ನೇ ಮೀಸಲಿಟ್ಟಿಲ್ಲ. ಎಂಎಸ್ಎಂಇಗಳು ಕುಂಠಿತವಾಗಿವೆ. ಕೋವಿಡ್ ಸಮಯದ ಮುನ್ನವೂ ದೇಶದಲ್ಲಿ ನಿರುದ್ಯೋಗದ ಪ್ರಮಾಣ 45 ವರ್ಷಗಳಲ್ಲೇ ಅತಿ ಹೆಚ್ಚಾಗಿತ್ತು ಎಂದು ಹೇಳಿದ್ದಾರೆ.

ನಿರುದ್ಯೋಗ ಬಡವರ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದೆ. ಮೋದಿ ಅವರು ಉಲ್ಲೇಖಿಸಿರುವ ಗ್ಯಾನ್ ವರ್ಗದಲ್ಲಿ ಬಡವರು, ಯುವಕರು, ಅನ್ನದಾತ, ನಾರಿ ಸಮುದಾಯಗಳಿದ್ದು ಅದರಲ್ಲಿ ಯುವ ವರ್ಗವನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಮೋದಿ ಅವರು ಕೇವಲ ಮಾತನಾಡುತ್ತಿದ್ದಾರೆ. ಆದರೆ ಯಾವುದು ಜಾರಿಗೆ ಬರುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಅಗ್ನಿಪತ್ ಯೋಜನೆಯ ನ್ಯೂನ್ಯತೆ ಬೂಗ್ಗೆ ಮಾಜಿ ಸೈನಿಕರು ಬಹಿರಂಗಪಡಿಸಿದ್ದಾರೆ. ಈ ಯೋಜನೆಯಿಂದ ದೇಶದ ಸೈನಿಕರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಈ ಆಂದೋಲನದ ಮೂಲಕ ಅಗ್ನಿಪತ್ ಯೋಜನೆಯಿಂದ ಸಮಸ್ಯೆ ಎದುರಿಸಿರುವ ಯುವಕರಿಗೆ ನೆರವಾಗಲು ಮುಂದಾಗಿದ್ದೇವೆ. ಇವರಿಗೆ ನ್ಯಾಯ ಸಿಗುವಂತೆ ಮಾಡಬೇಕು. ಈ ಆಂದೋಲನದಲ್ಲಿ 30 ಲಕ್ಷ ಅಗ್ನಿಪತ್ ಸಂತ್ರಸ್ತ ಕುಟುಂಬಗಳನ್ನು ಸಂಪರ್ಕ ಮಾಡಲಾಗುವುದು. ಮುಂದಿನ ಹಂತದಲ್ಲಿ ಸತ್ಯಾಗ್ರಹ ಮಾಡಿ ಪ್ರತಿಭಟನೆ ನಡೆಸಲಾಗುವುದು. ಇದರಲ್ಲಿ ಮಾಜಿ ಸೈನಿಕರ ನೇತೃತ್ವದಲ್ಲಿ ದೇಶದ ಎಲ್ಲಾ ನಗರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು.

ನಂತರ ಮೂರನೇ ಹಂತದಲ್ಲಿ ಯಾತ್ರೆಗಳನ್ನು ಮಾಡಲಾಗುವುದು. ಪ್ರತಿ ಜಿಲ್ಲೆಯಲ್ಲಿ 50 ಕಿ.ಮೀ ನಷ್ಟು ಯಾತ್ರೆ ಮಾಡಲಾಗುವುದು. ಇದರ ಹೊರತಾಗಿ, ಜಾಲತಾಣದಲ್ಲಿ ನೋಂದಣಿ ಹಾಗೂ ಮಿಸ್ ಕಾಲ್ ಮೂಲಕ ನ್ಯಾಯ ಆಗ್ರಹಿಸಿ ನಡೆಯುತ್ತಿರುವ ಆಂದೋಲನದಲ್ಲಿ ಭಾಗವಹಿಸಬಹುದು.

ಅಗ್ನಿಪತ್ ಯೋಜನೆ ಒಂದು ಬೋಗಸ್ ಯೋಜನೆ. ಈ ಯೋಜನೆ ಬಂದ ನಂತರ ದೇಶದ ಯುವಕರು ಸೇನೆಗೆ ಸೇರುವ ಉತ್ಸಾಹ ಕಳೆದುಕೊಂಡಿದ್ದಾರೆ. ಈ ಯೋಜನೆ ಜಾರಿಗೂ ಮುನ್ನ 2021-22ರಲ್ಲಿ ಸೇನೆ ಸೇರಲು 34 ಲಕ್ಷ ಯುವಕರು ಅರ್ಜಿ ಹಾಕುತ್ತಿದ್ದರು, 2023-24ರಲ್ಲಿ ಸೇನೆಗೆ ಸೇರಲು ಅರ್ಜಿ ಹಾಕಿದವರ ಪ್ರಮಾಣ ಕೇವಲ 10 ಲಕ್ಷ. ಈ ಯೋಜನೆ ಸೇನೆಗೆ ಸೇರುವ ಆಕರ್ಷಣೆಯನ್ನು ನಾಶಪಡಿಸಿದೆ. ಈ ಯೋಜನೆ ಮೂಲಕ ಸೇನೆಗೆ ಸೇರಿದರೆ, ಆರೋಗ್ಯದ ನೆರವು, ತುಟ್ಟಿಭತ್ಯೆ, ಸಹಾಯಧನ, ಮಾಜಿ ಸೈನಿಕರಿಗೆ ಸಿಗುವ ಸೌಲಭ್ಯ, ಯುದ್ಧದಲ್ಲಿ ಸತ್ತರೆ ಹುತಾತ್ಮರಿಗೆ ಸಿಗುವ ಸೌಲಭ್ಯ ಸಿಗುವುದಿಲ್ಲ. ಇನ್ನು ವೇತನ ಅರ್ಧದಷ್ಟು ಕಡಿಮೆ ಇದೆ. ಇಂತಹ ಸಂದರ್ಭದಲ್ಲಿ ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಹೊರಬರುವ ಯುವಕರಿಗೆ ಕೆಲಸ ಸಿಗುವುದಿಲ್ಲ, ಬೇರೆ ಉದ್ಯೋಗ ಅವಕಾಶಗಳು ಇಲ್ಲವಾಗಿದೆ ಎಂದು ಹೇಳಿದ್ದಾರೆ.

ಹೀಗಾಗಿ ಈ ಯೋಜನೆ ಯುವಕರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಇನ್ನು ದೇಶದ ಬಡವರ ವಿಚಾರವಾಗಿ ಮೋದಿ ಅವರು ಕೇವಲ ಸುಳ್ಳುಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ದೇಶದ 25 ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲಕ್ಕೆ ಏತ್ತಲಾಗಿದೆ ಎಂಬ ಸುಳ್ಳನ್ನು ಮೋದಿ ಅವರು ಹೇಳಿದ್ದಾರೆ. ನೋಟ್ಯಂತರ, ಜಿಎಸ್ಟಿ ಜಾರಿ ಹಾಗೂ ಕೋವಿಡ್ ಲಾಕ್ ಡೌನ್ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಬಡತನದಿಂದ ಮೇಲೆರಿದ್ದಾರೆ ಎಂಬುದು ಸುಳ್ಳು ಎಂಧು ಆರೋಪಿಸಿದ್ದಾರೆ.

ಹೀಗಾಗಿ ಕಾಂಗ್ರೆಸ್ ಪಕ್ಷ ಯುವ ನ್ಯಾಯ ಆಂದೋಲನ ಹಮ್ಮಿಕೊಂಡಿದೆ. ನಮ್ಮ ಪ್ರತಿಭಟನೆಯಲ್ಲಿ ಸೇನೆಯಲ್ಲಿ ಹಳೇ ನೇಮಕಾತಿ ಪ್ರಕ್ರಿಯೆ ಮರು ಜಾರಿ ಹಾಗೂ ಈಗ ಅಗ್ನಿಪತ್ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ ಯುವಕರಿಗೆ ನ್ಯಾಯ ಒದಗಿಸುವಂತೆ ಮಾಡಬೇಕು ಎಂಬ ಎರಡು ಆಗ್ರಹ ಮಾಡಲಾಗುವುದು ಎಂದಿದ್ದಾರೆ.

More articles

Latest article