ನವದೆಹಲಿ: ಮಣಿಪುರದಲ್ಲಿ ಒಂದೂವರೆ ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರ ನಡೆಯುತ್ತಲೇ ಇರುವ ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಯ ಸಿಕ್ಕಿಲ್ಲ ಏಕೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ರಾಜ್ಯಸಭೆಯಲ್ಲಿ ಭಾರತ ಸಂವಿಧಾನದ 75 ವರ್ಷಗಳ ವೈಭವಯುತ ಪ್ರಯಾಣ ಕುರಿತ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಖರ್ಗೆ, ಮಣಿಪುರದಲ್ಲಿ ಹಿಂಸಾಚಾರ ಮತ್ತು ಅಶಾಂತಿ ಮುಂದುವರಿದಿದೆ. ಆದರೆ, ಅಲ್ಲಿನ ಪರಿಸ್ಥಿತಿಯ ಬಗ್ಗೆ ಅವಲೋಕಿಸಲು ಪ್ರಧಾನಿ ಅವರಿಗೆ ಈ ಒಂದೂವರೆ ವರ್ಷದಲ್ಲಿ ಸಮಯವೇ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2023ರ ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದಿದ್ದು, ಇಲ್ಲಿಯವರೆಗೆ ಕುಕಿ, ಮೈತೇಯಿ ಸಮುದಾಯಗಳ ಸದಸ್ಯರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ 220ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆಗಿನಿಂದಲೂ ಪ್ರಧಾನಿ ಮೋದಿ ಅಲ್ಲಿಗೆ ಭೇಟಿ ನೀಡದಿರುವುದಕ್ಕೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.