ದೇವನಹಳ್ಳಿ: ಬೆಂಗಳೂರು, ಚೆನ್ನೈ ಹಾಗೂ ಕೇರಳದ ವಿಮಾನ ನಿಲ್ದಾಣಗಳಿಗೆ ಬಂದಿಳಿಯುವ ವಿಮಾನಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆಸುವುದಾಗಿ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಯು ಇ ಮೇಲ್ ನಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರವೊಂದನ್ನು ಬರೆದಿದ್ದೇನೆ. ಅದಕ್ಕೆ ಅವರು ಉತ್ತರ ನೀಡದಿದ್ದರೆ ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ.
ಮಹಾಂತೇಶ್ ಎಂಬಾತನ ಹೆಸರಿನಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಇ-ಮೇಲ್ ತಲುಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯು ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.