ವಿಮಾನ ಅಪಘಾತ: ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸೇರಿ 169 ಭಾರತೀಯರು;ಒಟ್ಟು 242 ಪ್ರಯಾಣಿಕರು

Most read

ಅಹಮದಾಬಾದ್:‌ ಗುಜರಾತ್ ನ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ವಿಮಾನದಲ್ಲಿ 242 ಪ್ರಯಾಣಿಕರಿದ್ದು ಇವರಲ್ಲಿ 169 ಭಾರತೀಯರು, 11 ಮಕ್ಕಳು, ಎರಡು ಹಸುಗೂಸು. 53 ಬ್ರಿಟಿಷ್‌ ನಾಗರಿಕರು, 7 ಪೋರ್ಚುಗಲ್‌, ಓರ್ವ ಕೆನಡಾ ಪ್ರಜೆ ವಿಮಾನದಲ್ಲಿದ್ದ ಮಾಹಿತಿ ಲಭ್ಯವಾಗಿದೆ. 45 ಮಂದಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾವಿನ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.  

ಮೇಘಾನಿ ವಸತಿ ಪ್ರದೇಶದಲ್ಲಿ ವಿಮಾನ ಅಪಘಾತವಾಗಿದ್ದು, ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್‌ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆದಿದೆ. ಹಾಸ್ಟೆಲ್‌ ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಅನುಮಾನವಿದೆ.

ಗುಜರಾತ್‌ ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಏದ ಇಂಡಿಯಾ ವಿಮಾನ ಪತನವಾಗಿದೆ. ದುರಂತಕ್ಕೀಡಾದ ವಿಮಾನದಲ್ಲಿ ಸುಮಾರು 242 ಪ್ರಯಾಣಿಕರು ಇದ್ದರು ಎಂದೆನ್ನಲಾಗಿದೆ. ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರೂ ಈ ವಿಮಾನದಲ್ಲಿ ಲಂಡನ್‌ ಗೆ ಹೊರಟಿದ್ದರು. ಅವರು ಈ ತಿಂಗಳ 30ರಂದು ದೇಶಕ್ಕೆ ಮರಳುವವರಿದ್ದರು.

ಏರ್ ಇಂಡಿಯಾಗೆ ಸೇರಿದ AI-171 ವಿಮಾನವು ಗುರುವಾರ ಮಧ್ಯಾಹ್ನ 1.17ಕ್ಕೆ ಅಹಮದಾಬಾದ್ ವಿಮಾನನಿಲ್ದಾಣದಿಂದ ಟೇಕ್‌ ಆಫ್ ಆಗಿತ್ತು. ಪತನವಾಗುವ ಸಂದರ್ಭದಲ್ಲಿ ವಿಮಾನ ನೆಲಮಟ್ಟದಿಂದ ಕೇವಲ 825 ಅಡಿ ಎತ್ತರದಲ್ಲಿತ್ತು ಎಂದು ತಿಳಿದು ಬಂದಿದೆ.

ವಿಮಾನ ಪತನಗೊಂಡಿರುವ ಅಹಮದಾಬಾದ್‌ನ ಮೇಘಾನಿನಗರ ಪ್ರದೇಶದಲ್ಲಿ ದಟ್ಟ ಹೊಗೆ ಅವರಿಸಿದ್ದು, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ಮುಚ್ಚಲಾಗಿದೆ. ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದ್ದು, ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳ ಮತ್ತು ಅಂಬುಲೆನ್ಸ್‌ ಗಳು ಧಾವಿಸಿವೆ. ವಿಮಾನ ಅಪಘಾತದ ಕುರಿತ ಮಾಹಿತಿಯನ್ನು ಕಾಲಕಾಲಕ್ಕೆ ನೀಡುವುದಾಗಿ ಏರ್‌ ಇಂಡಿಯಾ ಪ್ರಕಟಣೆ ನೀಡಿದೆ.

More articles

Latest article