ಛಾಯಾಗ್ರಾಹಕರು ಏಕ ಕಾಲಕ್ಕೆ ಕಲಾವಿದರು ಮತ್ತು ಚರಿತ್ರಕಾರರೂ ಹೌದು: ಕೆ.ವಿ.ಪ್ರಭಾಕರ್

Most read

ಬೆಂಗಳೂರು: ” ಸ್ಮೈಲ್ ಪ್ಲೀಸ್” ಎನ್ನುವ ಮೂಲಕ ಎಲ್ಲರ ಮುಖದಲ್ಲಿ ನಗು ತರಿಸುವ ಫೋಟೋಗ್ರಾಫರ್ ಗಳ ಮುಖದಲ್ಲಿ ಸದಾ ಸ್ಮೈಲ್ ಇರಬೇಕು. ಛಾಯಾಗ್ರಾಹಕರು ಏಕ ಕಾಲಕ್ಕೆ ಕಲಾವಿದರೂ ಮತ್ತು ಚರಿತ್ರಕಾರರೂ ಆಗಿರುತ್ತಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.

ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕ ಛಾಯಾಗ್ರಾಹಕರ 7 ನೇ ವರ್ಷದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಹಳೆ ತಂತ್ರಜ್ಞಾನ ಸಾಯಬಹುದು. ಆದರೆ ಹಳೆ ಫೋಟೋಗಳು ಸಾಯುವುದಿಲ್ಲ. ನನ್ನ ಮಕ್ಕಳಿಗೆ ನನ್ನ ಅಜ್ಜ, ಅಜ್ಜಿಯನ್ನು ತೋರಿಸಲು ಇರುವ ಏಕೈಕ ಮಾರ್ಗ ಫೋಟೋಗಳು ಎಂದು ತಮ್ಮ ಹಳೆಯ ನೆನಪುಗಳನ್ನು ಸ್ಮರಿಸಿದರು.

ಛಾಯಾಗ್ರಾಹಕರು ಏಕ ಕಾಲಕ್ಕೆ ಕಲಾವಿದರೂ ಮತ್ತು ಚರಿತ್ರಕಾರರೂ ಆಗಿರುತ್ತಾರೆ. ಸಾವಿರ ಅಕ್ಷರಗಳು ಹೇಳಲಾಗದ್ದನ್ನು ಒಂದು ಫೋಟೋ ಹೇಳುತ್ತದೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಸಾವಿರಾರು ಪುಟಗಳು ಹೇಳಬಹುದಾದದ್ದನ್ನು ಹತ್ತು ಫೋಟೋಗಳು ಹೇಳುತ್ತವೆ ಎಂದು ವಿವರಿಸಿದರು. ಸ್ವಾತಂತ್ರ್ಯ ಬಂದಾಗ 75 ವರ್ಷಗಳ ಹಿಂದೆ ಈ ಅರಮನೆ ಮೈದಾನ ಹೇಗಿತ್ತು ಅಂತ ಒಂದು ಫೋಟೋ ಹೇಳಿ ಬಿಡುತ್ತದೆ. ಒಂದು ಕಾಲದಲ್ಲಿ ಫೋಟೋ ತೆಗೆಸುವುದು ಬಹಳ ಭಾವನಾತ್ಮಕ ಕ್ರಿಯೆಯಾಗಿತ್ತು. ಮದುವೆ ಒಪ್ಪಿಗೆಯಿಂದ ಹಿಡಿದು, ವರದಕ್ಷಿಣೆ ತಟ್ಟೆಯಿಂದ ಗಟ್ಟಿಮೇಳದವರೆಗೂ ಫೋಟೋಗಳ ಜೊತೆಗೆ ನೆನಪುಗಳ ನದಿಯೇ ನಮ್ಮಲ್ಲಿ ಹರಿಯುತ್ತಿತ್ತು. ಹುಟ್ಟಿನಿಂದ ಸಾವಿನವರೆಗೂ ಫೋಟೋಗಳು ನೆನಪಿನ ಮಾಲೆ ಸೃಷ್ಟಿಸುತ್ತವೆ ಎಂದರು.

ಇವತ್ತು ಕೈಯಲ್ಲಿ ಮೊಬೈಲ್ ಹಿಡಿದ ಎಲ್ಲರೂ ಫೋಟೋ ತೆಗೆಯಬಹುದು. ಆದರೆ ಎಲ್ಲರೂ ಛಾಯಾಗ್ರಾಹಕರಾಗಲು, ಛಾಯಾಗ್ರಹಣದ ಕಲೆ ಕಲಿಯಲು ಸಾಧ್ಯವಿಲ್ಲ. ಯಾವುದೇ ಕ್ಯಾಪ್ಷನ್ ಇಲ್ಲದೆ ಫೋಟೋ ಏನು ಹೇಳುತ್ತಿದೆ ಎನ್ನುವುದು ಅರ್ಥ ವಾದರೆ ಆತ ಉತ್ತಮ ಫೋಟೋ ಜರ್ನಲಿಸ್ಟ್ ಅಂತ ನಾವು ಹೇಳ್ತಾ ಇದ್ದೆವು ಎಂದರು.

ಅಂಬೇಡ್ಕರ್ ಅವರ ‘ಚರಿತ್ರೆ ಅರಿಯದವರು ಇತಿಹಾಸ ನಿರ್ಮಿಸಲಾರರು’ ಎನ್ನುವ ಮಾತು ಉಲ್ಲೇಖಿಸಿದ ಪ್ರಭಾಕರ್ ಅವರು ಚರಿತ್ರೆಯನ್ನು ದಾಖಲಿಸುವ ಛಾಯಾಗ್ರಾಹಕರ ಸಮಸ್ಯೆಗಳಿಗೆ ಸರ್ಕಾರದ ಸ್ಪಂದನೆ ಸದಾ ಇರುತ್ತದೆ. ಛಾಯಾಗ್ರಾಹಕರ ಅಕಾಡೆಮಿ‌ ರಚಿಸಬೇಕು ಎನ್ನುವ ಬೇಡಿಕೆ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ‌ ಸಚಿವರ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

More articles

Latest article