Wednesday, September 25, 2024

ಮೂಡಾ ತನಿಖೆಗೆ ಅನುಮತಿ; ತಪ್ಪಿಲ್ಲವಾದರೆ ಯಾಕಿರಬೇಕು ಭೀತಿ

Most read

ಈಗ ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡುತ್ತಿರುವ ಪ್ರತಿಪಕ್ಷದ ನಾಯಕರುಗಳೆಲ್ಲಾ ಶುದ್ಧ ಚಾರಿತ್ರ್ಯವನ್ನು ಹೊಂದಿದವರಲ್ಲ. ಎಲ್ಲರ ಮೇಲೂ ಭ್ರಷ್ಟಾಚಾರ ಆರೋಪಗಳಿವೆ, ಬೇಕಾದಷ್ಟು ಹಗರಣಗಳು ಸುತ್ತಿಕೊಂಡಿವೆ. ಕೆಲವರು ಬೇಲ್ ಮೇಲೆ ಇದ್ದರೆ, ಮತ್ತೆ ಕೆಲವರು ಜೈಲಿಗೂ ಹೋಗಿ ಬಂದವರಿದ್ದಾರೆ. ನೈತಿಕತೆಯ ಲವಲೇಶವೂ ಇಲ್ಲದ ಇವರು ನೈತಿಕತೆಗೆ ಆಗ್ರಹಿಸುತ್ತಿದ್ದಾರೆ. ಭ್ರಷ್ಟಾಚಾರದ ಕೊಚ್ಚೆಯಲ್ಲಿ ಮುಳುಗಿರುವವರು ಮತ್ತೊಬ್ಬರ ಮುಖಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಲೇ ಇದ್ದಾರೆಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಮೂಡಾ ಹಗರಣ ವಿಚಾರಣೆ ಕುರಿತು ಕರ್ನಾಟಕದ ರಾಜ್ಯಪಾಲರು ತಮ್ಮ ವಿವೇಚನೆಯ ಆಧಾರದಲ್ಲಿ ತೆಗೆದುಕೊಂಡ ಆದೇಶವನ್ನು ಸಿಎಂ ಸಿದ್ದರಾಮಯ್ಯನವರು ಹೈಕೋರ್ಟಲ್ಲಿ ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಅತಿರಥ ಮಹಾರಥ ಖ್ಯಾತನಾಮ ವಕೀಲರುಗಳು ವಾದ ಮಂಡಿಸಿದ್ದರು. ವಾದಗಳೆಲ್ಲವನ್ನೂ ಆಲಿಸಿ ಪರಿಶೀಲಿಸಿದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಂ.ನಾಗಪ್ರಸನ್ನರವರು ಸೆ.24 ರಂದು ಮಹತ್ವದ ತೀರ್ಪು ನೀಡಿದ್ದು ಮುಖ್ಯಮಂತ್ರಿಗಳ ಮೇಲೆ ಬಂದಿರುವ ಆರೋಪದ ತನಿಖೆಗೆ ಅನುಮತಿಸಿದ್ದಾರೆ.

ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಮೂರ್ತಿಗಳ ನಿರ್ಧಾರ ಸರಿಯಾದದ್ದೇ ಆಗಿದೆ. ಯಾವುದೇ ಪ್ರಜಾಪ್ರತಿನಿಧಿ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ ತನಿಖೆಯಾಗಿ ಸತ್ಯಾಸತ್ಯತೆ ಹೊರಗೆ ಬರಬೇಕು ಎಂದು ಕಾನೂನು ಹೇಳುತ್ತದೆ. ತನಿಖೆ ಆಗಲೇಬಾರದು ಎನ್ನುವುದು ಸರಿಯಾದ ಕ್ರಮವಲ್ಲ. 

ಆದರೆ ಸಿದ್ದರಾಮಯ್ಯನವರಿಗೆ ” ಮೈಸೂರಿನ ಮೂಡಾ ಪ್ರಾಧಿಕಾರವು ತಮ್ಮ ಮಡದಿಗೆ ಹಂಚಿಕೆ ಮಾಡಲಾದ ಬದಲಿ ನಿವೇಶನ ಪಡೆಯುವಲ್ಲಿ ತಮ್ಮ ಪಾತ್ರವಿಲ್ಲ, ಯಾವುದೇ ಶಿಫಾರಸ್ಸು ಮಾಡಿಲ್ಲ, ಎಲ್ಲಿಯೂ ಸಹಿ ಮಾಡಿಲ್ಲವಾದ್ದರಿಂದ ತಮ್ಮ ತಪ್ಪು ಏನೂ ಇಲ್ಲವಾದ್ದರಿಂದ ಯಾವುದೇ ತನಿಖೆಯ ಅಗತ್ಯವಿಲ್ಲ” ಎನ್ನುವ ಕಾನ್ಫಿಡೆನ್ಸ್. ಅವರ ಕಾನೂನು ಸಲಹೆಗಾರರೂ ಸಹ ದಾಖಲೆಗಳ ಆಧಾರದಲ್ಲಿ ಹೈಕೋರ್ಟ್ ಸಿದ್ದರಾಮಯ್ಯನವರ ಪರವಾಗಿ ತೀರ್ಪು ಕೊಡುತ್ತದೆ ಎಂಬ ಭರವಸೆಯನ್ನು ಸಿಎಂ ರವರಿಗೆ ಕೊಟ್ಟಿದ್ದರು. ಇದೆಲ್ಲದರಿಂದಾಗಿ ರಾಜ್ಯಪಾಲರು ಅವಸರದಲ್ಲಿ ತೆಗೆದುಕೊಂಡ ನಿರ್ಧಾರದ ವಿರುದ್ಧ ಸಿದ್ದರಾಮಯ್ಯನವರು ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.

ಆದರೆ.. ನ್ಯಾಯಾಲಯಕ್ಕೆ ವಾದ ವಿವರ ದಾಖಲೆಗಳ ಅಗತ್ಯವೇ ಇರಲಿಲ್ಲ. ಜನನಾಯಕನ ಮೇಲೆ ಅಧಿಕಾರ ದುರುಪಯೋಗದ ಆರೋಪ ಬಂದಿದೆ, ಅದಕ್ಕೆ ವಿವೇಚನಾಧಿಕಾರ ಬಳಸಿ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದಾರೆ, ಹೀಗಾಗಿ ತನಿಖೆ ಆಗಲಿ ಎನ್ನುವುದು ನ್ಯಾಯಮೂರ್ತಿಗಳ ಅಭಿಪ್ರಾಯ ಮತ್ತು ಆದೇಶ.

ಹೌದು, ರಾಜ್ಯಪಾಲರ ತುರ್ತು ಆದೇಶದ ಹಿಂದೆ ರಾಜಕೀಯ ಇದೆ, ರಾಜ್ಯಪಾಲರ ಕಚೇರಿಯನ್ನು ಬಿಜೆಪಿ ತನ್ನ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದೆ, ಬಿಜೆಪಿ ಪಕ್ಷಕ್ಕೆ ಅಡೆತಡೆಯಾಗಿರುವ ಸಿದ್ದರಾಮಯ್ಯನವರನ್ನು ಸಿಎಂ ಪಟ್ಟದಿಂದ ಇಳಿಸಲು ವಿಪಕ್ಷಗಳು ಶಡ್ಯಂತ್ರ ಮಾಡುತ್ತಿವೆ. ಯಾವುದೋ ಒಂದು ಹಗರಣದಲ್ಲಿ ಸಿಲುಕಿಸಿ ಸಿದ್ದರಾಮಯ್ಯನವರ ಚರಿತ್ರೆಗೆ ಕಳಂಕ ತರಲು ಪ್ರಯತ್ನಿಸುತ್ತಿವೆ ಎನ್ನುವ ಕಾಂಗ್ರೆಸ್ಸಿಗರ ವಾದ ನಿಜವೇ ಇರಬಹುದು. ಆದರೆ ಆರೋಪ ಬಂದಾಗ ತನಿಖೆ ಆಗಲಿ ಬಿಡಿ ಎಂದು ಹೇಳಿಕೆ ನೀಡಿ ವಿಚಾರಣೆಗೆ ಸಹಕರಿಸಿದ್ದರೆ ಸಿದ್ದರಾಮಯ್ಯನವರು ಇನ್ನೂ ಹೆಚ್ಚು ಗೌರವಕ್ಕೆ ಪಾತ್ರರಾಗುತ್ತಿದ್ದರು. 

“ಯಾವ ತಪ್ಪೂ ಮಾಡಿಲ್ಲ, ತನಿಖೆಯೇ ಬೇಕಾಗಿಲ್ಲ” ಎನ್ನುವ ಹಠಕ್ಕೆ ಸಿದ್ದರಾಮಯ್ಯನವರು ಬಿದ್ದಿದ್ದರಿಂದ ಹೈಕೋರ್ಟ್ ತನಿಖೆಗೆ ಆದೇಶಿಸಬೇಕಾಗಿ ಬಂತು. ಆರೋಪ ಬಂದ ತಕ್ಷಣ ಇಲ್ಲವೇ ತನಿಖೆಗೆ ಕೋರ್ಟ್ ಆದೇಶಿಸಿದ ಕೂಡಲೇ ಸಿಎಂ ರಾಜೀನಾಮೆ ಕೊಡಬೇಕು ಎಂದೇನೂ ಕಾನೂನಿಲ್ಲ. ಹಾಗಾಗಿಯೇ ನೈತಿಕತೆ ಆಧಾರದಲ್ಲಿ ರಾಜೀನಾಮೆ ಕೊಡಲೇಬೇಕೆಂದು ವಿಪಕ್ಷಗಳು ಆಗ್ರಹಿಸುತ್ತಿವೆ ; ಅದು ಪ್ರತಿಪಕ್ಷಗಳ ಕೆಲಸ.

ಹೈಕೋರ್ಟ್ ತನಿಖೆಗೆ ಆದೇಶ ಕೊಟ್ಟ ಮರುದಿನವೇ ಪ್ರಜಾಪ್ರತಿನಿಧಿಗಳ ವಿಶೇಷ ಕೋರ್ಟ್ ಸಹ “ಲೋಕಾಯುಕ್ತ ಸಂಸ್ಥೆಯ ಮೂಲಕ ಮೂಡಾ ಪ್ರಕರಣದ ತನಿಖೆ ಆಗಬೇಕು ಹಾಗೂ ಮೂರು ತಿಂಗಳ ಒಳಗಾಗಿ ವಿಚಾರಣೆ ಮುಗಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು” ಎಂದು ಆದೇಶಿಸಿದೆ. ಅಸಲಿ ಕಾನೂನಾತ್ಮಕ ಆಟ ಈಗ ಶುರುವಾಗಿದೆ. ಭೂಮಿ ಖರೀದಿ ಹಾಗೂ ನಿವೇಶನ ಹಂಚಿಕೆಯಲ್ಲಿ ತಮ್ಮ ಪಾತ್ರ ಯಾವುದೂ ಇಲ್ಲವೆಂದು ಸಾಕ್ಷ್ಯಾಧಾರಗಳ ಸಮೇತ ಸಾಬೀತು ಪಡಿಸುವ ಅವಕಾಶ ಸಿದ್ದರಾಮಯ್ಯನವರ ಮುಂದಿದೆ. ಸಾಬೀತು ಪಡಿಸುವಲ್ಲಿ ಸೋತರೆ ರಾಜೀನಾಮೆ, ಗೆದ್ದರೆ ಸಿಎಂ ಗಿರಿ ಅಬಾಧಿತ. 

ಈ ಆರೋಪ ಪ್ರಕರಣ ಹಗರಣಗಳಿಗೂ ಹಾಗೂ ರಾಜಕೀಯಕ್ಕೂ ಅವಿನಾಭಾವ ಸಂಬಂಧ. ತಪ್ಪು ಮಾಡಲಿ ಮಾಡದೇ ಇರಲಿ ಆರೋಪಗಳು ಬಂದೇ ಬರುತ್ತವೆ. ಅವುಗಳನ್ನು ಎದುರಿಸುವ ಧೈರ್ಯ ಹಾಗೂ ಚಾಕಚಕ್ಯತೆ ಇದ್ದವರು ಮಾತ್ರ ರಾಜಕೀಯದಲ್ಲಿ ಮುಂದುವರೆಯುತ್ತಾರೆ. ಸಿದ್ದರಾಮಯ್ಯನವರು ಅನುಭವಿ ರಾಜಕಾರಣಿಯಾಗಿದ್ದು ಕ್ಲೀನ್ ಇಮೇಜ್ ಮೇಂಟೇನ್ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ತಾವು ಸ್ವಚ್ಛ ಚಾರಿತ್ರ್ಯದವರು ಎಂದು ಹೇಳಿಕೊಂಡಷ್ಟೂ ಮಸಿ ಎರ ಚುವವರು ಇದ್ದೇ ಇರುತ್ತಾರೆ. ಎರಚಿದ ಕಪ್ಪನ್ನು ತೊಳೆದು ಕೊಳ್ಳುತ್ತಾ ಮುಂದೆ ಸಾಗುವುದೇ ರಾಜಕೀಯ. 

ಈಗ ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡುತ್ತಿರುವ ಪ್ರತಿಪಕ್ಷದ ನಾಯಕರುಗಳೆಲ್ಲಾ ಶುದ್ಧ ಚಾರಿತ್ರ್ಯವನ್ನು ಹೊಂದಿದವರಲ್ಲ. ಎಲ್ಲರ ಮೇಲೂ ಭ್ರಷ್ಟಾಚಾರ ಆರೋಪಗಳಿವೆ, ಬೇಕಾದಷ್ಟು ಹಗರಣಗಳು ಸುತ್ತಿಕೊಂಡಿವೆ. ಕೆಲವರು ಬೇಲ್ ಮೇಲೆ ಇದ್ದರೆ, ಮತ್ತೆ ಕೆಲವರು ಜೈಲಿಗೂ ಹೋಗಿ ಬಂದವರಿದ್ದಾರೆ. ನೈತಿಕತೆಯ ಲವಲೇಶವೂ ಇಲ್ಲದ ಇವರು ನೈತಿಕತೆಗೆ ಆಗ್ರಹಿಸುತ್ತಿದ್ದಾರೆ. ಭ್ರಷ್ಟಾಚಾರದ ಕೊಚ್ಚೆಯಲ್ಲಿ ಮುಳುಗಿರುವವರು ಮತ್ತೊಬ್ಬರ ಮುಖಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಲೇ ಇದ್ದಾರೆ. ಹೀಗಾಗಿ ರಾಜಕೀಯ ಎನ್ನುವುದೇ ಹೊಲಸೆದ್ದು ಹೋಗಿದೆ. ಇಲ್ಲಿ ನೈತಿಕತೆ, ಮೌಲ್ಯಾಧಾರಿತ ರಾಜಕೀಯ ಎನ್ನುವುದು ಬರೀ ಹೇಳುವುದಕ್ಕೇ ಹೊರತು ಆಚರಿಸುವುದಕ್ಕಲ್ಲ ಎಂಬುದು ಪ್ರತಿ ಸಾರಿಯೂ ಸಾಬೀತಾಗುತ್ತಲೇ ಬಂದಿದೆ.

ಯಾರೇ ಮುಖ್ಯಮಂತ್ರಿ ಇರಲಿ ಆರೋಪಗಳಿಂದ ಮುಕ್ತಿಯಿಲ್ಲ. ದೇವರಾಜ ಅರಸುರವರಿಂದ ಹಿಡಿದು ಸಿದ್ದರಾಮಯ್ಯನವರ ವರೆಗೆ ಎಲ್ಲರೂ ಆರೋಪಗಳನ್ನು ಎದುರಿಸಿದವರೇ. ಆಳುವ ಪಕ್ಷ ಹಾಗೂ ಪ್ರತಿಪಕ್ಷಗಳ ಆರೋಪ ಪ್ರತ್ಯಾರೋಪ, ಹಗರಣಗಳಲ್ಲಿ ಜನಪರ ಹಿತಾಸಕ್ತಿ, ಮತ್ತು ಅಭಿವೃದ್ಧಿಪರ ಆಸಕ್ತಿಗಳು ಮರೆಯಾಗುತ್ತಿರುವುದೇ ಪ್ರಜಾಪ್ರಭುತ್ವದ ದುರಂತ. ಜನರೂ ಸಹ ಈ ರಾಜಕೀಯದವರ ಬೃಹನ್ನಾಟಕಗಳನ್ನು ಎಂದೂ ಮುಗಿಯದ ಧಾರಾವಾಹಿಗಳನ್ನು ವೀಕ್ಷಿಸಿದಂತೆ ಮನರಂಜನೆ ಪಡೆಯುತ್ತಿದ್ದಾರೆಯೇ ಹೊರತು ತಮ್ಮ ಬಡತನ ನಿರುದ್ಯೋಗ ಬೆಲೆಯೇರಿಕೆ ವಿರುದ್ಧ ಸಂಘಟಿತ ಹೋರಾಟ ಮಾಡುತ್ತಿಲ್ಲ. ಬಿಡಿ ಹೋರಾಟಗಳಿಂದ ಈ ರಾಜಕಾರಣಿಗಳನ್ನು ಮಣಿಸಲು ಸಾಧ್ಯವಿಲ್ಲ. ಹೀಗಾಗಿ “ಇವರ್ನ ಬಿಟ್ಟು ಅವರ್ಯಾರು, ಅವರ್ನ ಬಿಟ್ಟು ಇವರ್ಯಾರು” ಎನ್ನುವಂತೆ ಆಳುವ ಪಕ್ಷಗಳನ್ನು, ಪ್ರಜಾಪ್ರತಿನಿಧಿಗಳನ್ನು ಬದಲಾಯಿಸುತ್ತಾ ಪ್ರಜಾಪ್ರಭುತ್ವದ ನಾಟಕಕ್ಕೆ ಜನತೆ ಪ್ರೇಕ್ಷಕರಾಗಿಯೇ ಉಳಿದಿದ್ದಾರೆ. ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ತಮ್ಮ “ನಾ ಕೊಡೆ ನೀ ಬಿಡೆ” ಎನ್ನುವ ನಾಟಕ ಮುಂದುವರೆಸಿದ್ದಾರೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಮುಡಾ ಪ್ರಕರಣ | ಶೂದ್ರ ಶಕ್ತಿಯ ರಾಜಕೀಯ ಮುನ್ನಡೆ  ಹತ್ತಿಕ್ಕುವ  ಮಹಾಪಿತೂರಿ

More articles

Latest article