ಮಂಡ್ಯ: ಮಂಡ್ಯದ ಜನ ಒರಟರಂತೆ ಕಂಡರೂ, ಸಹಾಯ ಸ್ಮರಿಸುವ ಹೃದಯವಂತರು. ನಾಡಿಗೆ ಕೃಷಿ ಮೂಲಕ ಅನ್ನ ಕೊಡುವ ಅನ್ನದಾತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲ್ಲೂಕು ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಹಾಸ್ಟೆಲ್ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ನೂತನ ಹಾಸ್ಟೆಲ್ ಕೇವಲ ಕುರುಬರ ಮಕ್ಕಳಿಗೆ ಮಾತ್ರವಲ್ಲ, ಎಲ್ಲಾ ಜಾತಿಯ ಬಡವರಿಗೂ ಅವಕಾಶ ಇರುತ್ತದೆ. ದಾನಿಗಳು ಕೊಟ್ಟಷ್ಟು ಕೊಡಲಿ. ನಾನೂ ಸಹಾಯ ಮಾಡುತ್ತೇನೆ. ಮಂಡ್ಯದ ಜನ ಹತ್ತಾರು ವರ್ಷಗಳಿಂದ ನನಗೆ ಬಂಬಲ ಕೊಡುತ್ತಲೇ ಬರುತ್ತಿದ್ದಾರೆ ಎಂದರು. ನಾಲ್ವಡಿ ಅರಸರನ್ನು ನಾವು ಸದಾ ಸ್ಮರಿಸಬೇಕು. ಮಂಡ್ಯದ ಪ್ರಗತಿಯಲ್ಲಿ ಇವರ ಕೊಡುಗೆ ಅಪಾರ ಎಂದರು.
ನಮ್ಮ ಸರ್ಕಾರ ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್ ಬಿಲ್, ದಂಡ ಎರಡನ್ನೂ ಮನ್ನಾ ಮಾಡಿದ್ದೇವೆ ಎಂದು ಹೇಳಿದರು.
ನಾನು ಮಂಡ್ಯದ ಈ ಹಾಸ್ಟೆಲ್ ಕಟ್ಟಡ ಶಿಥಿಲ ಆಗಿದ್ದನ್ನು ನೋಡಿದ್ದೆ. ಅನುದಾನ ಕೊಡಲು ಸರ್ಕಾರ ಸಿದ್ದವಿದೆ ಎಂದು ಹೇಳಿದ್ದೆ. ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶ ಈಡೇರಬೇಕಾದರೆ ಹಾಸ್ಟೆಲ್ ಗಳ ಅಗತ್ಯವಿದೆ. ಹಳ್ಳಿಗಾಡಿನ ಮಕ್ಕಳೂ ವೈದ್ಯರು, ಎಂಜಿನಿಯರ್ ಗಳಾಗಬೇಕು. ಕೇವಲ ಒಂದು ವರ್ಗದವರು ಮಾತ್ರ ಆಗಬಾರದು, ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದರು.
ಇವತ್ತೇನಾದರೂ ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಉಳಿದಿದ್ದರೆ, ವೈದ್ಯ ಕಾಲೇಜು, ಕೃಷಿ ವಿವಿ ಬಂದಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಸರ್ಕಾರದ ಸಚಿವ ಚಲುವರಾಯಸ್ವಾಮಿ ಅವರ ಕಾಳಜಿ, ಶ್ರಮ ಕಾರಣ ಎಂದು ಸ್ಪಷ್ಟಪಡಿಸಿದರು. ಕಳೆದ ವರ್ಷ ಮಳೆ-ಬೆಳೆ ಚನ್ನಾಗಿ ಆಗಿದೆ. ಸಿದ್ದರಾಮಯ್ಯ ಅವರ ಕಾಲಗುಣ ಸರಿ ಇಲ್ಲ ಎಂದು ಟೀಕಿಸುತ್ತಿದ್ದ ಬಿಜೆಪಿ-ಜೆಡಿಎಸ್ ನವರಿಗೆ ಮಳೆಯೇ ಉತ್ತರ ಕೊಟ್ಟಿದೆ. ಈ ವರ್ಷವೂ ಉತ್ತಮ ಮಳೆ ಬೆಳೆ ಆಗುವ ಭರವಸೆ ಇದೆ ಎಂದರು.
ಬಿಜೆಪಿ ನಿರಂತರವಾಗಿ ಸುಳ್ಳು ಹೇಳಿಕೊಂಡು ತಿರುಗುತ್ತಿದೆ. ಸರ್ಕಾರದ ಬೊಕ್ಕಸ ಖಾಲಿ ಎನ್ನುತ್ತಿದ್ದಾರೆ. 1 ಲಕ್ಷದ 35 ಸಾವಿರ ಕೋಟಿ ರೂಪಾಯಿಯನ್ನು ಅಭಿವೃದ್ಧಿಗೆ ತೆಗೆದಿರಿಸಿದ್ದೇವೆ. ಇದು ಜನರಿಗೆ ಕಾಣುತ್ತದೆ, ಬಿಜೆಪಿಯವರಿಗೆ ಕಾಣುತ್ತಿಲ್ಲ ಎಂದರು. ಯಾರು ಯಾರು ಅಕ್ಷರ ಸಂಸ್ಕೃತಿ ಮತ್ತು ಸಾಮಾಜಿಕ ಅವಕಾಶಗಳಿಂದ ವಂಚಿತರಾಗಿದ್ದಾರೋ ಅವರೆಲ್ಲರ ಪರವಾಗಿ ನಮ್ಮ ಸರ್ಕಾರ ಇರುತ್ತದೆ ಭರವಸೆ ನೀಡಿದರು.