ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾದ ಪಟ್ಲ ಬೆಟ್ಟದಿಂದ ಹಿಂದಿರುಗುತ್ತಿದ್ದ ಬೈಕರ್ಸ್‌ಗಳ ಮೇಲೆ ಸ್ಥಳೀಯ ಚಾಲಕರ ಗುಂಪು ಹಲ್ಲೆ ನಡೆಸಿದ ಬೆನ್ನಲ್ಲೇ ಪಟ್ಲ ಬೆಟ್ಟ ಅರಣ್ಯ ಪ್ರದೇಶವಾಗಿದ್ದು, ಖಾಸಗಿ ವಾಹನಗಳು ಓಡಾಟಕ್ಕೆ ನಿರ್ಮಿಸಿಕೊಂಡಿರುವ ರಸ್ತೆ ಅಧಿಕೃತವೇ ಹಾಗೂ ವಾಹನ ಓಡಾಟಕ್ಕೆ ಅನುಮತಿ ಪಡೆಯಲಾಗಿದೆಯೇ ನೋಡಿ ಕ್ರಮ ಕೈಗೊಳ್ಳಿ ಎಂದು ಸಚಿವ ಈಶ್ವರ್ ಖಂಡ್ರೆ ಖಡಕ್ ಸೂಚನೆ ನೀಡಿದ್ದಾರೆ.
ಈ ಕುರಿತು ಆದೇಶ ಹೊಡಿಸಿರುವ ಸಚಿವರು, ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಬಿಸಲೆ ಅರಣ್ಯ ವ್ಯಾಪ್ತಿಯ ಪಟ್ಲ ಬೆಟ್ಟಕ್ಕೆ ಬೈಕ್ ನಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯಲ್ಲಿ ಅರಣ್ಯ ಪ್ರದೇಶದಲ್ಲಿ ಅನುಮತಿ ಇಲ್ಲದೆ ವಾಹನ ಓಡಾಟಕ್ಕೆ ಖಾಸಗಿಯಾಗಿ ರಸ್ತೆ ನಿರ್ಮಿಸಲಾಗಿದೆ, ರಸ್ತೆಗಾಗಿ ಅನಧಿಕೃತವಾಗಿ ಮರ ಕಡಿಯಲಾಗಿದೆ ಎಂದೂ ಉಲ್ಲೇಖಿಸಲಾಗಿದೆ.
ಪಟ್ಟ ಬೆಟ್ಟಕ್ಕೆ ನಿರ್ಮಿಸಲಾಗಿರುವ ರಸ್ತೆ ಅಧಿಕೃತವೇ, ನಿಯಮಾನುಸಾರ ಫಾರೆಸ್ಟ್ ಕ್ಲಿಯರೆನ್ಸ್ ಪಡೆಯಲಾಗಿದೆಯೇ, ಇಲ್ಲಿ ರಸ್ತೆ ನಿರ್ಮಾಣಕ್ಕೆ ಮರ ಕಡಿಯಲು ಅನುಮತಿ ಪಡೆಯಲಾಗಿತ್ತೋ ಇಲ್ಲವೋ ಎಂಬ ಸ್ಥಳಕ್ಕೆ ಭೇಟಿ ನೀಡಿ, 3 ದಿನಗಳ ಒಳಗಾಗಿ ವರದಿ ನೀಡುವಂತೆ ಮತ್ತು ಒಂದೊಮ್ಮೆ ಅನುಮತಿ ಇಲ್ಲದೆ ರಸ್ತೆ ನಿರ್ಮಿಸಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಮತ್ತು ಕರ್ತವ್ಯ ಲೋಪ ಎಸಗಿರುವ ಅರಣ್ಯ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲು ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ನಿರ್ದೇಶಿಸಲು ಈ ಮೂಲಕ ಸೂಚಿಸಲಾಗಿದೆ.
ಜೀಪ್ ಚಾಲಕರ ಗುಂಪು, ಪ್ರವಾಸಿಗರಿಗೆ ಬೈಕ್‌ಗಳಲ್ಲಿ ಹೋಗಬೇಡಿ ಎಂದಿದ್ದಾರೆ. ಬೆಟ್ಟಕ್ಕೆ ತೆರಳಬೇಕಾದರೆ ಬಾಡಿಗೆ ಜೀಪಿನಲ್ಲೇ ಹೋಗಬೇಕು. ಬೇರೆ ವಾಹನಗಳನ್ನು ಬಿಡುವುದಿಲ್ಲ ಎಂದು ಬೈಕ್ ಸವಾರರ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಕೆಲವು ಸ್ಥಳೀಯ ಡ್ರೈವರ್ಗಳು ಏಕಾಏಕಿ ಬೈಕ್ ಸವಾರರ ಮೇಲೆ ಹಲ್ಲೆ ನಡೆಸಿದ್ದಾರೆ.
ಜೂನ್ 23 ರಂದು ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಬೈಕರ್ ಭುವಿತ್ ಪೂಜಾರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸೋಮವಾರ ಚಾಲಕರಾದ ಗಗನ್, ಕಿರಣ್, ನಿಶಾಂತ್, ಮದನ್ ಎಂಬುವವರ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.