ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಮತ್ತು ಎಸ್ ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್ ದೂರು ಆಧರಿಸಿ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತಿತರರ ವಿರುದ್ಧ ಯಾವುದೇ ರೀತಿಯ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ನ ಮತ್ತೊಂದು ನ್ಯಾಯಪೀಠ ತಡೆಯಾಜ್ಞೆ ನೀಡಿದೆ.
ಸಾಯಿ ವೆಂಕಟೇಶ್ವರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಂಜೂರಾಗಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಬಾರದು. ಈಗಾಗಲೇ ರದ್ದುಪಡಿಸುವಂತೆ ಕೋರಿದ್ದರೆ ಅದರಲ್ಲಿ ಮುಂದುವರಿಯದಂತೆ ಪ್ರಾಸಿಕ್ಯೂಷನ್ ಅನ್ನು ನಿರ್ಬಂಧಿಸಲಾಗಿದೆ ಎಂಬ ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶವನ್ನು ಮಾರ್ಪಾಡು ಮಾಡಬೇಕು ಎಂದು ಕೋರಿ ಎಸ್ ಐ ಟಿ ಮಧ್ಯಂತರ ಅರ್ಜಿ ಸಲ್ಲಿಸಿತ್ತು.
ಈ ಮಧ್ಯಂತರ ಅರ್ಜಿಯನ್ನು, ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ವಿಚಾರಣೆ ನಡೆಸಿ, ಸಮನ್ವಯ ನ್ಯಾಯಪೀಠದ 2024ರ ನ.6ರ ಆದೇಶದಲ್ಲಿ ಮಾರ್ಪಾಡು ಮಾಡಿದರು.
ಲೋಕಾಯುಕ್ತ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಾಡಲಾಗಿರುವ ನಿರ್ಬಂಧದ ಆದೇಶ ಇಂದಿನಿಂದ ಚಾಲ್ತಿಯಲ್ಲಿ ಇರುವುದಿಲ್ಲ. ಎಸ್ ಐ ಟಿ 2014ರಲ್ಲಿ ದಾಖಲಿಸಿರುವ ಜಂತಕಲ್ ಗಣಿಗಾರಿಕೆ ಪ್ರಕರಣದ ಭಾಗವಾದ ಸಾಯಿ ವೆಂಟೇಶ್ವರ ಅಕ್ರಮ ಗಣಿಗಾರಿಕೆ ಪ್ರಕರಣದ ಬಗ್ಗೆ ಇನ್ನು ಮುಂದೆ ಮಾತನಾಡುವುದಿಲ್ಲ. ಸಂಜಯನಗರ ಠಾಣೆಯಲ್ಲಿ ದಾಖಲಾಗಿರುವ ಬೆದರಿಕೆ ಪ್ರಕರಣಕ್ಕೆ ಮಾತ್ರವೇ ಸೀಮಿತವಾಗಿ ಮಾತನಾಡಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾಯಿ ವೆಂಕಟೇಶ್ವರ ಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧದ ತನಿಖಾ ಪ್ರಕ್ರಿಯೆಗೆ ಎಸ್ ಐ ಟಿಗೆ ಇದ್ದ ಅಡ್ಡಿ ನಿವಾರಣೆಯಾದಂತಾಗಿದೆ. ಕುಮಾರಸ್ವಾಮಿ ಪರ ಹಿರಿಯ ವಕೀಲ ಹಷ್ಮತ್ ಪಾಷ, ಲೋಕಾಯುಕ್ತ ಪರ ವೆಂಕಟೇಶ್ ಅರಬಟ್ಟಿ ಹಾಗೂ ಪ್ರಾಸಿಕ್ಯೂಷನ್ ಪರ ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ವಾದ ಮಂಡಿಸಿದರು.