ರಾಜ್ಯಪಾಲರು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕು ಅಂತೇನಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್

Most read

ಪ್ರಥಮ ಬಾರಿಗೆ ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಆದರೆ, ರಾಜ್ಯಪಾಲರು ಕೇಳುವ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುವ ಅನಿವಾರ್ಯತೆ ಇಲ್ಲ. ಯಾವುದಕ್ಕೆ ಉತ್ತರ‌ ಕೊಡಬೇಕು ಖಂಡಿತವಾಗಿಯೂ ಕೊಡುತ್ತೇವೆ. ಎಲ್ಲದಕ್ಕು ಉತ್ತರಿಸಬೇಕು ಅಂತೇನು ಇಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಯಾವ ಉದ್ದೇಶಕ್ಕೆ ಹೀಗೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಅವರು ಏಕಾಏಕಿಯಾಗಿ ಚುನಾಯಿತ ಜನಪ್ರತಿನಿಧಿ ಮುಖ್ಯಮಂತ್ರಿಗಳಿಗೆ ಶೋಕಾಸ್ ನೋಟಿಸ್ ನೀಡಿರುವುದನ್ನು ತಪ್ಪು ಅಂತ ಹೇಳಿ ಪ್ರತಿಭಟನೆ ನಡೆಸಿದ್ದೇವೆ. ಸುಮ್ಮನೇ ಪ್ರತಿಭಟನೆ‌ ನಡೆಸಿಲ್ಲ. ತನಿಖೆ‌ಯಾಗಿಲ್ಲ, ಯಾವುದೇ ವರದಿಯು ಇಲ್ಲ. ಯಾರೋ ದೂರು ನೀಡಿದರು ಎಂದ ಮಾತ್ರಕ್ಕೆ  ಪರಿಶೀಲನೆ ನಡೆಸದೆಯೇ ಶೋಕಾಸ್ ನೋಟಿಸ್ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂವಿಧಾನದ ಆಶಯಗಳನ್ನು ಯಾವ ರೀತಿ ರಕ್ಷಣೆ ಮಾಡಬೇಕು ಎಂಬುದು ರಾಜ್ಯಪಾಲರ ಜವಾಬ್ದಾರಿಯಾಗಿದೆ. ದಿನನಿತ್ಯ ಆಡಳಿತ ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ಮತ್ತು ಸರ್ಕಾರಕ್ಕೆ ಇದೆ. ಆದರೆ, ಪ್ರಥಮಬಾರಿಗೆ ರಾಜ್ಯಪಾಲರು, ಸರ್ಕಾರದ ದಿನನಿತ್ಯದ ಆಡಳಿತದ ಬಗ್ಗೆ ಮಾಹಿತಿ ಕೇಳುವುದಾಗಲಿ ಅಥವಾ ಮಧ್ಯಪ್ರವೇಶಿಸುವುದನ್ನಾಗಲಿ ಎಲ್ಲಿಯೂ ಕೇಳಿಲ್ಲ‌. ಕಳೆದ 35 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಇಲ್ಲಿಯವರೆಗೆ ಅನೇಕ ರಾಜ್ಯಪಾಲರನ್ನು ಮತ್ತು ಮುಖ್ಯಮಂತ್ರಿಗಳನ್ನು ನಾವೆಲ್ಲ ನೋಡಿದ್ದೇವೆ. ಇಂತಹ ಸಂದರ್ಭ ಯಾವತ್ತು ಬಂದಿಲ್ಲ. ರಾಜ್ಯಪಾಲರು ಸರ್ಕಾರದ ಪ್ರತಿನಿತ್ಯದ ಕೆಲಸಗಳು ಮತ್ತು ತೀರ್ಮಾನಗಳ ಬಗ್ಗೆ ಮಾಹಿತಿ ಕೊಡಿ ಅಂತ ಕೇಳಿದ್ದ ಉದಾಹರಣೆಗಳೇ ಇಲ್ಲ ಎಂದು ಹೇಳಿದರು.

ಯಾವಾಗಲಾದರೂ ಒಮ್ಮೆ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಅಥವಾ ಕಾನೂನು ಸುವ್ಯವಸ್ಥೆಯ ವಿಚಾರ ಇದ್ದರೆ ಗೃಹ ಸಚಿವರು ಹೋಗಿ ರಾಜ್ಯಪಾಲರಿಗೆ ವಿವರಿಸುತ್ತಾರೆ. ಸಂಬಂಧಪಟ್ಟ ಸಚಿವರನ್ನು ಕರೆಸಿ ಕೇಳುವುದಕ್ಕೆ ರಾಜ್ಯಪಾಲರಿಗೆ ಹಕ್ಕು ಇದೆ. ಆದರೆ, ದಿನನಿತ್ಯ ಪತ್ರ ಬರೆದು, ಪತ್ರದ ಮುಖಾಂತರ ಮಾಹಿತಿ ಕೊಡಿ ಅಂತ ಕೇಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ರಾಜ್ಯಪಾಲರು ಮತ್ತು ಸರ್ಕಾರದ ನಡುವೆ ಒಳ್ಳೆಯ ಸಂಬಂಧವಿರಬೇಕು. ಆಂದಾಗ ರಾಜ್ಯದ ಮತ್ತು ಜನಗಳ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಏನು ತೀರ್ಮಾನ ತಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು ಎಂದರು.

More articles

Latest article