ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕು : ಕೆಎನ್‌ ರಾಜಣ್ಣ

Most read

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ಕೂಗು ಮುನ್ನೆಲೆಗೆ ಬಂದಿದೆ. ಸಚಿವ ಮಹಾದೇಪ್ಪ ಮಾತಿಗೆ ಸಚಿವ ಕೆ.ಎನ್ ರಾಜಣ್ಣ ಧ್ವನಿಗೂಡಿಸಿದ್ದಾರೆ.

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಬೇಕು ಅನ್ನೋದು ಬಹುಪಾಲು ಶಾಸಕರ ಅಭಿಪ್ರಾಯವಿದೆ, ಆದರೆ ಒಂದು ವೇಳೆ ಬದಲಾವಣೆ ಮಾಡಬೇಕು ಎಂದು ಹೈಕಮಾಂಡ್ ಚಿಂತನೆ ಮಾಡಿದರೆ ಅದು ದಲಿತರ ಆಯ್ಕೆ ಆಗಲಿ ಎಂದು ಸಚಿವ ರಾಜಣ್ಣ ಹೇಳಿದರು.

ತುಮಕೂರಲ್ಲಿ ಮಾತನಾಡಿದ ಅವರು, ಸಿಎಂ ಆಗಲು ಜಿ.ಪರಮೇಶ್ವರ್ ಅರ್ಹತೆಯುಳ್ಳವರು, ಸಿಎಂ ಆಗುವ ಅರ್ಹತೆ ಪರಮೇಶ್ವರಗೆ ಎಲ್ಲವೂ ಇದೆ, ಅವರು ಸಿಎಂ ಆಗಬೇಕು ಅನ್ನೊದು ನನ್ನ ಅಭಿಲಾಷೆ, ಹಾಗೇ ಡಿ.ಕೆ.ಶಿವಕುಮಾರ್ ಕೂಡ ಸಿಎಂ ಆಗಬಾರದು ಅಂತಲ್ಲ, ಅವರು ಕೂಡ ಆಗಲಿ, ಮಹಾದೇವಪ್ಪಕ್ಕಿಂತ ಮೊದಲೇ ನಾವು ಪ್ರಸ್ತಾಪ ಮಾಡಿದ್ದೇವೆ. ಈಗ ಚುನಾವಣೆ ಇರೋದ್ರಿಂದ ನಾವು ಇಂಥಹ ವಿಚಾರ ಎತ್ತೋದಿಲ್ಲ. ನಮಗೆ ನಾವೇ ನಿರ್ಬಂಧ ಹಾಕಿಕೊಂಡಿದ್ದೇವೆ ಎಂದು ಹೇಳಿದರು.

ದಲಿತ ಸಿಎಂ ನಮ್ಮ ಹಕ್ಕು, ನಮ್ಮ ಹಕ್ಕನ್ನ ಕೇಳೋದ್ರಲ್ಲಿ ಯಾರ ಆಕ್ಷೇಪ ಇರಬಾರದು. ಈಗಿನಿಂದಲೇ ದಲಿತ ಸಿಎಂ ಕೂಗು ಹೊರಹಾಕಿದ್ದರೆ ಯಾವತ್ತೋ ಒಂದು ದಿನ ಯಶಸ್ವಿಯಾಗುತ್ತದೆ. ಬೆಳಗ್ಗೆ ಕೇಳಿದ್ರೆ ಸಂಜೆಗೆ ದಲಿತ ಸಿಎಂ ಕೊಟ್ಟುಬಿಡುತ್ತಾರಾ?, ಅದಕ್ಕೆ ಈಗಿ‌ನಿಂದಲೇ ಬೇಡಿಕೆ ಇಡುತಿದ್ದೇವೆ. ಡಿಕೆಶಿ ಅವರ ಕೇಸ್ ವಜಾ ಆಗಿದ ತಕ್ಷಣ ನಾವು ದಲಿತ ಸಿಎಂ ಕೇಳುತಿದ್ದೇವೆ ಅನ್ನೋದು ತಪ್ಪು. ಈ ಹಿಂದೆ ಹಲವು ಬಾರಿ ಕೇಳಿದ್ದೇವೆ ಎಂದು ಹೇಳಿದರು.

ತುಮಕೂರು ಲೋಕಸಭಾ ಟಿಕೆಟ್ ವಿಚಾರಕ್ಕೆ ಮಾತನಾಡಿ, ಕಾಂಗ್ರೆಸ್ ನಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್‌ ಆಗಲಿದೆ ಎಂದು ನಾನು ನಂಬಿದ್ದೇನೆ. ಹಾಗೆನೇ‌ ಬಿಜೆಪಿಯಲ್ಲಿ ವಿ.ಸೋಮಣ್ಣಗೆ ಟಿಕೆಟ್ ಆಗಲಿದೆ. ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡುತ್ತಾರೆ. ಅವರಿಗೆ ಕೊಟ್ಟನಂತರ ನಾವು ಅವರಿಗೇ‌ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

More articles

Latest article