ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 400ಕ್ಕೆ ಏರಿಕೆಯಾಗಿದೆ ಎಂದು ಅಫ್ಘಾನ್ ಸರ್ಕಾರದ ಉಪ ವಕ್ತಾರ ಹಮ್ದುಲ್ಲಾ ಫಿತರತ್ ತಿಳಿಸಿದ್ದಾರೆ. ಈ ಘಟನೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಮೃತಪಟ್ಟವರಲ್ಲಿ ಹೆಚ್ಚಿನವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಓಮಿದ್ ಎಂಬ ಹೆಸರಿನ ಈ ಸರ್ಕಾರಿ ಆಸ್ಪತ್ರೆಯಲ್ಲಿ ದಾಳಿಯ ಸಮಯದಲ್ಲಿ ಸುಮಾರು 3,000 ರೋಗಿಗಳಿದ್ದರು ಎಂದು ತಾಲಿಬಾನ್ ಆರೋಗ್ಯ ಸಚಿವಾಲಯದ ವಕ್ತಾರ ಶರಾಫತ್ ಜಮಾನ್ ಹೇಳಿದ್ದಾರೆ.
ಆದರೆ ಈ ಆರೋಪಗಳನ್ನು ಪಾಕಿಸ್ತಾನವು ಸಂಪೂರ್ಣವಾಗಿ ತಿರಸ್ಕರಿಸಿದ್ದು ತಾವು ಕೇವಲ ಭಯೋತ್ಪಾದಕ ನೆಲೆಗಳು ಮತ್ತು ಮಿಲಿಟರಿ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಸಮರ್ಥಿಸಿಕೊಂಡಿದೆ. ಮಾದಕ ವ್ಯಸನಿಗಳ ಆಸ್ಪತ್ರೆಯ ಮೇಲಿನ ದಾಳಿಯ ವರದಿಗಳು ಸುಳ್ಳು ಮತ್ತು ದಾರಿ ತಪ್ಪಿಸುವಂತಿವೆ ಎಂದು ಇಸ್ಲಾಮಾಬಾದ್ ಹೇಳಿದೆ. ಘಟನೆಯ ಸ್ಥಳದಲ್ಲಿ ಬೆಂಕಿ ಮತ್ತು ಅವಶೇಷಗಳ ನಡುವೆ ರಕ್ಷಣಾ ಕಾರ್ಯಕರ್ತರು ಬದುಕುಳಿದವರಿಗಾಗಿ ಶೋಧ ನಡೆಸುತ್ತಿದ್ದಾರೆ. ಆಸ್ಪತ್ರೆಯಲ್ಲಿದ್ದ ಪ್ರತ್ಯಕ್ಷದರ್ಶಿಗಳು ಇದು ಪ್ರಳಯದಂತಹ ದೃಶ್ಯವಾಗಿತ್ತು ಎಂದು ಬಣ್ಣಿಸಿದ್ದು ವಾರ್ಡ್ಗಳ ಒಳಗೆ ಹೊಗೆ ಮತ್ತು ಧೂಳು ತುಂಬಿಕೊಂಡಿದ್ದರಿಂದ ರೋಗಿಗಳು ಭಯಭೀತರಾಗಿ ಓಡುತ್ತಿದ್ದರು ಎಂದು ವಿವರಿಸಿದ್ದಾರೆ.
ವಿಶ್ವಸಂಸ್ಥೆಯ ವಿಶೇಷ ವರದಿಗಾರ ರಿಚರ್ಡ್ ಬೆನೆಟ್ ಅವರು ಈ ನಾಗರಿಕ ಸಾವುನೋವುಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು ಉಭಯ ದೇಶಗಳು ಸಂಯಮ ಕಾಯ್ದುಕೊಳ್ಳಬೇಕು ಮತ್ತು ಅಂತರಾಷ್ಟ್ರೀಯ ಕಾನೂನಿನಂತೆ ಆಸ್ಪತ್ರೆಗಳಂತಹ ನಾಗರಿಕ ಕೇಂದ್ರಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

