ಇಂದಿರಾಗಾಂಧಿ ಮಾದರಿಯಲ್ಲಿ ಪಾಕಿಸ್ತಾನವನ್ನು ಎದುರಿಸಬೇಕು: ಈಶ್ವರ್ ಖಂಡ್ರೆ ಸಲಹೆ

Most read

ದಾವಣಗೆರೆ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಮಾದರಿಯಲ್ಲಿ ಪಾಕಿಸ್ತಾನವನ್ನು ಎದುರಿಸಬೇಕಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದರು. ಇದೇ ರೀತಿ ಕ್ರಮ ಕೈಗೊಳ್ಳಲು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಸಲಹೆ ನೀಡಿದ್ದಾರೆ. ಆದರೂ ಏಕೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ದುರಂತಕ್ಕೆ ಭದ್ರತಾ ವೈಫಲ್ಯವೇ ಕಾರಣ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ. ಕಂದಹಾರ ವಿಮಾನ ಅಪಹರಣ, ಸಂಸತ್, ಅಕ್ಷರಧಾಮದ ಮೇಲಿನ ದಾಳಿ ಎಲ್ಲ ಗಂಭೀರ ಪ್ರಕರಣಗಳು ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿವೆ. ಹಾಗಾಗಿ ಭದ್ರತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ನೈತಿಕತೆಯನ್ನು ಬಿಜೆಪಿ ಉಳಿಸಿಕೊಂಡಿಲ್ಲ. ಕರಾವಳಿಯಲ್ಲಿ ನಡೆದ ಅಪರಾಧ ಕೃತ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಪರಾಧಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಸಮಾಜ ಘಾತುಕ ಶಕ್ತಿಗಳಿಗೆ ಜಾತಿ, ಧರ್ಮ ಇರುವುದಿಲ್ಲ. ಕೊಲೆಗಡುಕರು, ದುಷ್ಕರ್ಮಿಗಳನ್ನು ಬಗ್ಗು ಬಡಿಯುವುದು ರಾಜ್ಯ ಸರ್ಕಾರಕ್ಕೆ ತಿಳಿದಿದೆ. ಭದ್ರತೆ ಹೆಚ್ಚು ಮಾಡಲು ಹಾಗೂ ಬೇಹುಗಾರಿಕೆ ಇನ್ನಷ್ಟು ಬಿಗಿಗೊಳಿಸಲು ಬಿಜೆಪಿ ಸಲಹೆ ನೀಡುವುದನ್ನು ಬಿಟ್ಟು ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಜನಗಣತಿ ಜತೆಗೆ ಜಾತಿ ಗಣತಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಜತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ಮಾಡಿದರೆ ಒಳ್ಳೆಯದು. ರಾಜ್ಯದಲ್ಲಿ ನಡೆದ ಜಾತಿ ಗಣತಿಯಲ್ಲಿ ಸಣ್ಣ ಸಮುದಾಯಗಳು ಕಣ್ತಪ್ಪಿ ಹೋಗಿವೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಮೇ 9 ರಂದು ಸಚಿವ ಸಂಪುಟದ ಸಭೆ ನಡೆಯಲಿದ್ದು, ಸಚಿವನಾಗಿ ನನ್ನ ಅಭಿಪ್ರಾಯವನ್ನು ಸಂಪುಟದ ಮುಂದೆ ಇಡುವುದಾಗಿ ಸಚಿವ ಖಂಡ್ರೆ ಹೇಳಿದರು.

More articles

Latest article