ನವದೆಹಲಿ: ಕಾಶ್ಮೀರದ ಪಹಲ್ಗಾಮ್ ಉದ್ಯಾನವನದಲ್ಲಿ ಗುಂಡಿನ ಮಳೆಗೆರದು 26 ಮಂದಿಯ ಸಾವಿಗೆ ಕಾರಣವಾದ ಭಯೋತ್ಪಾದಕರ ದಾಳಿಯನ್ನು ಜಮೈತ್ ಮುಖ್ಯಸ್ಥ ಮೌಲಾನಾ ಅರ್ಷದ್ ಮದನಿ ಖಂಡಿಸಿದ್ದಾರೆ. ಅಮಾಯಕರ ಜೀವ ತೆಗೆಯುವವರು ಉಗ್ರಗಾಮಿಗಳೇ ಹೊರತು ಮನುಷ್ಯರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಮೈತ್ (ಅರ್ಷದ್ ಮದನಿ ಬಣ) ಎರಡು ದಿನಗಳ ಕಾರ್ಯಕಾರಿ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೌಲಾನಾ ಅರ್ಷದ್ ಮದನಿ, ‘ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಕೊಂದ ಭಯೋತ್ಪಾದಕರನ್ನು ಮನುಷ್ಯರೆಂದು ಪರಿಗಣಿಸಲಾಗುವುದಿಲ್ಲ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಇಡೀ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಟೀಕಿಸುವುದು ತಪ್ಪು ಎಂದರು.
ಪಹಲ್ಗಾಮ್ ಮೇಲೆ ದಾಳಿ ಮಾಡಿದ ಉಗ್ರರಿಗೆ ಇಸ್ಲಾಂ ಧರ್ಮ ಕುರಿತು ಏನೂ ತಿಳಿದಿಲ್ಲ. ಅಮಾಯಕ ಜನರ ಹಯೆಯನ್ನು ಇಸ್ಲಾಂ ಅನುಮತಿಸುವುದಿಲ್ಲ. ಇದು ಗಂಭೀರ ಪಾಪ. ಅಂತಹ ಕೃತ್ಯಗಳನ್ನು ಮಾಡುವವರನ್ನು ಮನುಷ್ಯರೆಂದು ಪರಿಗಣಿಸಲಾಗುವುದಿಲ್ಲ. ಪಹಲ್ಗಾಮ್ ದಾಳಿಯ ನಂತರ ದೇಶಾದ್ಯಂತ ಮುಸ್ಲಿಮರನ್ನು, ವಿಶೇಷವಾಗಿ ಕಾಶ್ಮೀರಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಲಾಗುತ್ತಿದೆ. ಜತೆಗೆ ಸರ್ಕಾರದ ದ್ವೇಷ ನೀತಿಯಿಂದಾಗಿ ದ್ವೇಷಭಾವನೆ ಹೆಚ್ಚುತ್ತಿದೆ ಎಂದು ಅವರು ಆರೋಪಿಸಿದರು.
ಸಂಪೂರ್ಣ ಭದ್ರತಾ ವೈಫಲ್ಯ:
ಪಹಲ್ಗಾಮ್ ದುರಂತಕ್ಕೆ ಭದ್ರತಾ ವೈಫಲ್ಯವೇ ಕಾರಣ ಎಂದು ಆಪಾದಸಿದ ಮದನಿ, ನಮ್ಮ ಗಡಿಯೊಳಗೆ ಇಷ್ಟು ದೊಡ್ಡ ದಾಳಿ ಹೇಗೆ ನಡೆಯಿತು ಎಂಬುದರ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಮತ್ತು 3,000 ಕ್ಕೂ ಪ್ರವಾಸಿಗರಿದ್ದ ಸ್ಥಳದಲ್ಲಿ ಭದ್ರತಾ ವ್ಯವಸ್ಥೆ ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಹೆಜ್ಜೆ ಹೆಜ್ಜೆಗೂ ಸೇನೆ ಮತ್ತು ಬಿ ಎಸ್ ಎಫ್ ಸೈನಿಕರು ಕಾವಲು ಕಾಯುತ್ತಿದ್ದರೂ ಉಗ್ರರು ಇಷ್ಟು ಸುಲಭವಾಗಿ ಪ್ರವಾಸಿ ತಾಣವನ್ನು ಹೇಗೆ ತಲುಪಿದರು ಎಂದು ಮದನಿ ಪ್ರಶ್ನಿಸಿದರು.
ಇದೇ ವೇಳೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧದ ಕ್ರಮವನ್ನು ಅವರು ಸಮರ್ಥಿಸಿಕೊಂಡರು. ಆದರೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರದ ಬಂಗಾಳಿ ಮಾತನಾಡುವ ಜನರಿಗೆ ಕಿರುಕುಳ ನೀಡಬಾರದು ಎಂದು ಹೇಳಿದರು.
ಯುದ್ಧ ಪರಿಹಾರವಲ್ಲ:
ಪಾಕಿಸ್ತಾನದ ಜತೆ ಸಂಭಾವ್ಯ ಯುದ್ಧ ಕುರಿತು ಅಭಿಪ್ರಾಯ ಹಂಚಿಕೊಂಡ ಮದನಿ, ಯುದ್ಧದಿಂದ ಆರ್ಥಿಕ ದುಷ್ಪರಿಣಾಮ ಉಂಟಾಗುತ್ತದೆ. ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರ ಸರಿಯಲ್ಲ. ಚೆನಾಬ್, ರಾವಿ, ಝೀಲಂ, ಬಿಯಾಸ್ ಮತ್ತು ಸಟ್ಲೆಜ್ ನದಿಗಳು ಸಾವಿರಾರು ವರ್ಷಗಳಿಂದ ಹರಿಯುತ್ತಿವೆ ಮತ್ತು ಅಲ್ಲಿ ಸಿಂಧೂ ಆಗುತ್ತದೆ. ನೀವು ಈ ನೀರನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತೀರಿ? ಇದು ಸುಲಭದ ಕೆಲಸವಲ್ಲ” ಎಂದು ಅಭಿಪ್ರಾಯಪಟ್ಟರು.