ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಹುಲ್ಲುಗಾವಲಿನಲ್ಲಿ ನೆರೆದಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಈ ದಾಳಿಯ ಬಗೆಗೆ ಹಲವು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ. ಹಿಂದೂ ವರ್ಸಸ್ ಮುಸ್ಲಿಂ ದ್ವೇಷ ಹರಡಲು ಯತ್ನಿಸಲಾಗುತ್ತಿದೆ. ಈ ಬಗ್ಗೆ ಹರಡಿರುವ ಸುಳ್ಳುಗಳು ಮತ್ತು ವಾಸ್ತವಾಂಶಗಳನ್ನು ಮುಂದಿಡುವ ಪ್ರಯತ್ನ ಇಲ್ಲಿದೆ – ಮುತ್ತುರಾಜು, ಸಂಪಾದಕರು, Kannadafactcheck.com
ಏಪ್ರಿಲ್ 22, 2025 ರಂದು, ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಹುಲ್ಲುಗಾವಲಿನಲ್ಲಿ ನೆರೆದಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ವಿದೇಶಿಯರು ಸೇರಿ 26 ಜನರು ಮೃತಪಟ್ಟಿದ್ದಾರೆ. ಕರ್ನಾಟಕದ ಮಂಜುನಾಥ್ ರಾವ್, ಮಧುಸೂಧನ್ ಮತ್ತು ಭರತ್ ಭೂಷಣ್ ಎಂಬುವವರು ಪ್ರಾಣ ಕಳೆದುಕೊಂಡಿದ್ದಾರೆ. ಇಡೀ ದೇಶಾದ್ಯಂತ ಶೋಕಾಚರಣೆ ನಡೆಸಲಾಗುತ್ತಿದೆ. ಮೃತರ ಕುಟುಂಬಸ್ಥರಿಗೆ ಸಂತಾಪಗಳನ್ನು ಸಲ್ಲಿಸಲಾಗಿದೆ. ಕಾಶ್ಮೀರದ ಸ್ಥಳೀಯರು ಈ ಕೃತ್ಯವನ್ನು ಖಂಡಿಸಿ ಬಂದ್ ಆಚರಿಸಿದ್ದಾರೆ. ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ಸ್ಥಳೀಯ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ವಹಿಸಿಕೊಂಡಿದೆ. ಈ ದಾಳಿಯು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಭಾರತವು ಇಂಡಸ್ ವಾಟರ್ ಒಪ್ಪಂದವನ್ನು ರದ್ದುಗೊಳಿಸಿದೆ. ಗೃಹ ಸಚಿವ ಅಮಿತ್ ಶಾ ನಿನ್ನೆ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಈ ದಾಳಿಯ ಬಗೆಗೆ ಹಲವು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ. ಹಿಂದೂ ವರ್ಸಸ್ ಮುಸ್ಲಿಂ ದ್ವೇಷ ಹರಡಲು ಯತ್ನಿಸಲಾಗುತ್ತಿದೆ. ಈ ಬಗ್ಗೆ ಹರಡಿರುವ ಸುಳ್ಳುಗಳು ಮತ್ತು ವಾಸ್ತವಾಂಶಗಳನ್ನು ಮುಂದಿಡುವ ಪ್ರಯತ್ನ ಇಲ್ಲಿದೆ.
ಇದು ಹಿಂದೂಗಳ ನರಮೇಧ ಅಲ್ಲ
ಸುಳ್ಳು: ಕನ್ನಡದ ಸುವರ್ಣ ನ್ಯೂಸ್ ಸೇರಿದಂತೆ ಹಲವು ಟಿವಿ ಚಾನೆಲ್‌ಗಳು ಇದು ಕೇವಲ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿ. ಇದು ಹಿಂದೂಗಳ ನರಮೇಧ ಎಂಬ ಟೈಟಲ್‌ನಲ್ಲಿ ವರದಿ ಪ್ರಸಾರ ಮಾಡಿವೆ.
ಸತ್ಯ: ದಾಳಿಕೋರ ಉಗ್ರರು ಪ್ರವಾಸಿಗರ ಹೆಸರು ಕೇಳಿ ಹಿಂದೂಗಳನ್ನು ಕೊಲ್ಲಲು ಬಯಸಿದ್ದರು ಎಂದು ಕೆಲ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಉಗ್ರರು ನೇಪಾಳದ ಸುಂದೀಪ್ ನೇವ್ಪಾನೆ ಮತ್ತು UAE ಯ ಪ್ರದೀಪ್ ಕುಮಾರ್ ಉದ್ವಾನಿ ಎಂಬ ಇಬ್ಬರು ವಿದೇಶಿಗರನ್ನು ಕೊಂದಿದ್ದಾರೆ. ಅಲ್ಲದೇ ಉಗ್ರರ ದಾಳಿ ವಿರೋಧಿಸಿ, ಅವರಿಂದ ಗನ್ ಕಿತ್ತುಕೊಂಡು ಪ್ರವಾಸಿಗರನ್ನು ರಕ್ಷಿಸಲು ಹೋಗಿ ಸ್ಥಳೀಯ ಕುದುರೆ ಸವಾರ ಸೈಯದ್ ಆದಿಲ್ ಹುಸೈನ್ ಶಾ(28) ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ. ಹಾಗಾಗಿ ಇದನ್ನು ಕೇವಲ ಹಿಂದೂಗಳ ನರಮೇಧ ಎನ್ನುವುದು ಸರಿಯಲ್ಲ.
ಈ ದಾಳಿಯಿಂದ ಕಾಂಗ್ರೆಸ್ ಮುಖಂಡರಿಗೆ ಆನಂದ ಆಗಿದೆ ಎಂಬುದಕ್ಕೆ ಆಧಾರವಿಲ್ಲ
ಸುಳ್ಳು: ಕನ್ನಡದ ಪಬ್ಲಿಕ್ ಟಿವಿಯ ಸಂಪಾದಕರಾದ ಎಚ್.ಆರ್ ರಂಗನಾಥ್‌ರವರು ಮುಂಬೈ ದಾಳಿ ನಡೆದಾಗ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಕಿಲೋಮೀಟರ್ ಗಟ್ಟಲೆ ನಾಲಿಗೆ ಹರಿಬಿಟ್ಟಿದ್ದರು. ಪುಲ್ವಾಮ ದಾಳಿ ಆದಾಗ ಕುಣಿದಾಡಿದರು. ಈಗ ಈ ದಾಳಿಯಿಂದ ಕಾಂಗ್ರೆಸ್ ಮುಖಂಡರಿಗೆ ಆನಂದ ಆಗಿದ್ದರೆ ಹಾಲು ಕುಡಿಯಿರಿ ಎಂದು ಮಾತನಾಡಿದ್ದಾರೆ.
ಸತ್ಯ: ದಿಗ್ವಿಜಯ್ ಸಿಂಗ್ ಅವರು 2010ರಲ್ಲಿ, ಮುಂಬೈ ದಾಳಿಯ ಸಂದರ್ಭದಲ್ಲಿ ಮೃತಪಟ್ಟ ಮಹಾರಾಷ್ಟ್ರ ಎಟಿಎಸ್ (ಆಂಟಿ-ಟೆರರಿಸ್ಟ್ ಸ್ಕ್ವಾಡ್) ಮುಖ್ಯಸ್ಥ ಹೇಮಂತ್ ಕರ್ಕರೆಯವರು ದಾಳಿಗೆ ಕೆಲವು ಗಂಟೆಗಳ ಮೊದಲು ತಮ್ಮೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದು, “ಕರ್ಕರೆಯವರು 2008ರ ಮಾಲೇಗಾಂವ್ ಸ್ಫೋಟದ ತನಿಖೆಯಲ್ಲಿ ಹಿಂದೂ ಉಗ್ರಗಾಮಿ ಗುಂಪುಗಳ ವಿರುದ್ಧ ಕ್ರಮ ಕೈಗೊಂಡಿದ್ದರಿಂದ, ಅವರಿಗೆ “ಹಿಂದೂ ಉಗ್ರವಾದಿಗಳಿಂದ” ಜೀವ ಬೆದರಿಕೆ ಒಡ್ಡಲಾಗಿತ್ತು ಎಂದು ಸಿಂಗ್ ಆರೋಪಿಸಿದ್ದರು. ಅದು ವಿವಾದಕ್ಕೆ ಕಾರಣವಾಯಿತು. ಆನಂತರ 26/11 ದಾಳಿಯಲ್ಲಿ ಪಾಕಿಸ್ತಾನದ ಉಗ್ರಗಾಮಿಗಳ ಪಾತ್ರವನ್ನು ತಾವು ಎಂದಿಗೂ ತಳ್ಳಿಹಾಕಿಲ್ಲ ಎಂದು ದಿಗ್ವಿಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆದರೆ, ಆರ್‌ಎಸ್‌ಎಸ್ ಮತ್ತು ಹಿಂದೂ ಉಗ್ರಗಾಮಿಗಳ ಮೇಲಿನ ದಾಳಿಯನ್ನೂ ಸಹ ಖಂಡನೆ ಮಾಡಿದ್ದಾರೆ.
ಇನ್ನು ಪುಲ್ವಾಮ ದಾಳಿ ಆದಾಗ ಕುಣಿದಿದ್ದು ಬಲಪಂಥೀಯ ಪತ್ರಕರ್ತ ಅರ್ನಬ್ ಗೋಸ್ವಾಮಿ ಹೊರತು ಕಾಂಗ್ರೆಸಿಗರಲ್ಲ. ಸದ್ಯ ಪಹಲ್ಗಾಮ್ ದಾಳಿಯನ್ನು ಎಲ್ಲಾ ಕಾಂಗ್ರೆಸ್ ಮುಖಂಡರು ಖಂಡಿಸಿದ್ದಾರೆ. ಮೃತರಿಗೆ ಸಾಂತ್ವ ನ ಹೇಳಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸುವುದಾಗಿ ಘೋಷಿಸಿದ್ದಾರೆ. ಉಗ್ರರ ಹೆಡೆಮುರಿ ಕಟ್ಟಿ ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ. ಜೊತೆಗೆ ಇದು ಭದ್ರತಾ ವೈಫಲ್ಯ ಎಂದು ಪ್ರಶ್ನಿಸಿದ್ದಾರೆ. ಆದರೆ ಪಬ್ಲಿಕ್ ಟಿವಿ ರಂಗನಾಥ್ ಆಧಾರರಹಿತ ಆರೋಪ ಮಾಡಿದ್ದಾರೆ. ಆ ಮೂಲಕ ಗುಪ್ತಚರ ವೈಫಲ್ಯವನ್ನು ಪ್ರಶ್ನಿಸದೇ ವಿರೋಧ ಪಕ್ಷಗಳ ವಿರುದ್ಧ ಮಾತನಾಡಿದ್ದಾರೆ.
ದಾಳಿಯಿಂದ ಮೃತಪಟ್ಟವರನ್ನು ಅಣಕಿಸಿ ಮುಸ್ಲಿಂ ಯುವಕ ಪೋಸ್ಟ್ ಹಾಕಿಲ್ಲ
ಸುಳ್ಳು: TheSquind ಎಂಬ ಟ್ವಿಟರ್ ಹ್ಯಾಂಡಲ್‌ನಲ್ಲಿ “ಈ ಪೋಸ್ಟ್ ಹಾಕಿರುವ ಜೀಶಾನ್ ಖಾನ್ ಎಂಬ ಈ ದೇಶದ್ರೋಹಿಯನ್ನು ಬಂಧಿಸಿ, ಆತ ಭೋಪಾಲ್‌ನಲ್ಲಿದ್ದಾನೆ ಎಂದು ಸ್ಕ್ರೀನ್ ಶಾಟ್ ಒಂದನ್ನು ಟ್ವೀಟ್ ಮಾಡಲಾಗಿದೆ. ಆ ಸ್ಕ್ರೀನ್ ಶಾಟ್‌ನಲ್ಲಿ ಉಗ್ರರ ದಾಳಿಯಲ್ಲಿ ಸಾವನಪ್ಪಿದ ಪತಿಯ ಶವದ ಮುಂದೆ ಮಹಿಳೆ ರೋಧಿಸುತ್ತಾ ಇರುವ ಚಿತ್ರದ ಪಕ್ಕದಲ್ಲಿ ‘ಎದ್ದೇಳು ಆರ್‌ಸಿಬಿ ಫೈನಲ್ ಗೆದ್ದಿತು’ ಎಂದು ಬರೆಯಲಾಗಿದೆ.
https://twitter.com/zoo_bear/status/1914767747445350808
ಸತ್ಯ: ಆ ಫೋಟೊ ಪೋಸ್ಟ್ ಮಾಡಿರುವುದು ಜೀಶಾನ್ ಖಾನ್ ಅಲ್ಲ. ಬದಲಿಗೆ Doteswar Ranchiwala ಎಂಬ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆ. ಅದರ ಸ್ಕ್ರೀನ್ ಶಾಟ್ ಅನ್ನು ಜೀಶಾನ್ ಖಾನ್ ಹಂಚಿಕೊಂಡು ಇಂತಹ ವಿಷಯಗಳಲ್ಲಿ ಜೋಕ್ ಮಾಡಬಾರದು. ಕ್ರಿಕೆಟ್‌ಗಾಗಿ ಇಷ್ಟು ಮರ್ಯಾದೆ ಬಿಡಬಾರದು ಎಂದು ಟೀಕಿಸಿ ಪೋಸ್ಟ್ ಮಾಡಲಾಗಿದೆ. ಆದರೆ ಜೀಶಾನ್ ಖಾನ್ ಮುಸ್ಲಿಂ ಎಂಬ ಕಾರಣಕ್ಕೆ ಆತನ ವಿರುದ್ಧವೇ ಸುಳ್ಳು ಹರಿಬಿಡಲಾಗಿದೆ.
ಸಾವನಪ್ಪಿದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿಯ ಕೊನೆಯ ವಿಡಿಯೋ ಇದಲ್ಲ
ಸುಳ್ಳು: ಸಾವನಪ್ಪಿದ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿಯ ಕೊನೆಯ ವಿಡಿಯೋ ಇದು.
ಸತ್ಯ: ಈ ವಿಡಿಯೋದಲ್ಲಿರುವವರು ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಅಲ್ಲ. ಬದಲಿಗೆ ಇವರು ಆಶಿಶ್ ಮತ್ತು ಯಾಶಿಕಾ ಶೆರಾವತ್ ಎಂಬ ದಂಪತಿ. ಇವರೇ ವಿಡಿಯೋ ಮಾಡಿ ತಮ್ಮ ವಿಡಿಯೋವನ್ನು ತಪ್ಪಾಗಿ ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಹಿಂದೂಗಳ ಪ್ಯಾಂಟ್ ಬಿಚ್ಚಿಸಿದರು ಎಂಬುದಕ್ಕೆ ಆಧಾರಗಳಿಲ್ಲ
ಹೆಸರು ಕೇಳಿ ಕೊಂದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಆದರೆ ಪ್ಯಾಂಟ್ ಬಿಚ್ಚಿಸಿ ಕೊಂದರು ಎಂಬುದಕ್ಕೆ ಆಧಾರಗಳಿಲ್ಲ. ಅಷ್ಟು ಸಮಯವೂ ಉಗ್ರರ ಬಳಿ ಇರಲಿಲ್ಲ.
ಮೃತ ಪ್ರವಾಸಿಗರ ಪತ್ನಿಯರು ಅಲ್ಲಿನ ಸ್ಥಳೀಯರು ನಮಗೆ ಸಹಾಯ ಮಾಡಿದರು, ನನ್ನ ಮಗನನ್ನು ಹೊತ್ತು ತಂದರು. ಸುರಕ್ಷಿತ ಸ್ಥಳಕ್ಕೆ ರವಾನಿಸಿದರು ಎಂದು ಮಾತನಾಡಿರುವುದನ್ನು ನಾವು ನೋಡಬಹುದಾಗಿದೆ.
ಒಟ್ಟಾರೆಯಾಗಿ ಈ ದುರಂತದ ಸಂದರ್ಭದಲ್ಲಿ ಭಾರತೀಯರೆಲ್ಲರು ಒಟ್ಟಾಗಿ ನಿಲ್ಲಬೇಕಿದೆ. ಇಲ್ಲಿ ಧರ್ಮಗಳನ್ನು ಎಳೆದು ತರುವುದು ತರವಲ್ಲ. ರಕ್ಷಣಾ ವ್ಯವಸ್ಥೆ ಎಲ್ಲಿ ಎಡವಿದೆ ಎಂಬುದನ್ನು ನೋಡಿಕೊಳ್ಳಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಉಗ್ರರಿಗೆ ತಕ್ಕ ಪಾಠ ಕಲಿಸಬೇಕಿದೆ.
ಮುತ್ತುರಾಜು
ಸಂಪಾದಕರು, Kannadafactcheck.com
ಇದನ್ನೂ ಓದಿ-ಕಾಶ್ಮೀರದಲ್ಲಿ ಉಗ್ರರ ದಾಳಿ; ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯ; ಸಿಎಂ ಸಿದ್ದರಾಮಯ್ಯ ಆರೋಪ