ಈಗ ಭಾರತದ್ದು ʼಅತ್ತ ದರಿ ಇತ್ತ ಪುಲಿʼ ಎಂಬಂತಹ ಸ್ಥಿತಿ. ಇದರಿಂದ ಪಾರಾಗಲು ಎಚ್ಚರದ ಹೆಜ್ಜೆ ಅನಿವಾರ್ಯ. ಪಾಕಿಸ್ತಾನಕ್ಕೆ ಪಾಠವನ್ನೂ ಕಲಿಸಬೇಕು. ಆದರೆ ಅದರಿಂದ ಭಾರತದ ಆರ್ಥಿಕ, ಅಂತಾರಾಷ್ಟ್ರೀಯ ಸಂಬಂಧ ಸಹಿತ ಹಿತಾಸಕ್ತಿಗಳಿಗೂ ದೂರಗಾಮಿ ಹಾನಿಯಾಗಬಾರದು. ಈ ನಾಜೂಕಿನ ಪರಿಸ್ಥಿತಿಯನ್ನ ಅರ್ಥಮಾಡಿಕೊಂಡು ಭಾರತ ಸರಕಾರ ಎಚ್ಚರದ ಹೆಜ್ಜೆಯನ್ನು ಇರಿಸುತ್ತದೆ ಮತ್ತು ರಾಯಭಾರ ದೃಷ್ಟಿಯಿಂದ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯವಾಗಿ ಪ್ರತ್ಯೇಕಿಸಿ ಅದು ಹೆಚ್ಚು ಪರಿಣಾಮಕಾರಿಯಾದ ಮತ್ತು ದೀರ್ಘಾವಧಿಯ ಪಾಠ ಕಲಿಯುವಂತೆ ಮಾಡುವುದಕ್ಕೆ ಹೆಚ್ಚು ಒತ್ತು ನೀಡುತ್ತದೆ ಎಂದು ಆಶಿಸೋಣ – ಶ್ರೀನಿವಾಸ ಕಾರ್ಕಳ, ಚಿಂತಕರು.
ಕಾಶ್ಮೀರದ ಪಹಲ್ಗಾಮ್ ನ ಬೈಸಾರನ್ ಹುಲ್ಲುಗಾವಲಿನಲ್ಲಿ ಕಳೆದ ಮಂಗಳವಾರ 22 ಎಪ್ರಿಲ್ 2025 ರಂದು ನಡೆದುದು ನಿಜಕ್ಕೂ ಭಯಾನಕ. ಬೈಸಾರನ್ ಆಲ್ಪೈನ್ ಹುಲ್ಲುಗಾವಲನ್ನು ʼಮಿನಿ ಸ್ವಿಜರ್ ಲ್ಯಾಂಡ್ʼ ಎಂದು ಕರೆಯುವುದೂ ಇದೆ. ಎಂದೇ ಅದು ಪ್ರವಾಸಿಗರ ವಿಶೇಷ ಆಕರ್ಷಣೆಯ ಸ್ಥಳ. ಕುದುರೆ ಸವಾರಿ, ಪಿಕ್ನಿಕ್ ಗೆ ಹೇಳಿ ಮಾಡಿಸಿದ ತಾಣಗಳು, ಹೀಗಾಗಿ ಶಾಲಾ ಪ್ರವಾಸದ ಮಕ್ಕಳೂ ಅಲ್ಲಿಗೆ ಬರುವುದಿದೆ. ಪಹಲ್ಗಾಮ್ ಬೇರೆ ಅಮರನಾಥ ಯಾತ್ರೆಯ ದಾರಿಯ ಹೆಬ್ಬಾಗಿಲು.
ಕಾಶ್ಮೀರದಲ್ಲಿ ನಿಧಾನಕ್ಕೆ ಪರಿಸ್ಥಿತಿ ಶಾಂತಿಗೆ ಮರಳುತ್ತಿದೆ ಎಂದು ಸರಕಾರವೂ ಹೇಳುತ್ತಿತ್ತು, ಮಾಧ್ಯಮಗಳೂ ಹೇಳುತ್ತಿದ್ದವು. ಆದ್ದರಿಂದ ಅಲ್ಲಿಗೆ ಪ್ರವಾಸಿಗರ ಭೇಟಿಯೂ ಹೆಚ್ಚಲಾರಂಭಿಸಿತ್ತು. ಎಪ್ರಿಲ್ ತಿಂಗಳ ಕೊನೆಯ ದಿನಗಳಲ್ಲವೇ, ಮೊನ್ನೆ ದೇಶದ ಪ್ರತಿಯೊಂದು ಬಿಸಿಲಿನ ರಾಜ್ಯಗಳಿಂದ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ತಣ್ಣಗಿನ ಕಾಶ್ಮೀರಕ್ಕೆ ಬರಲಾರಂಭಿಸಿದ್ದರು. ಬೈಸಾರನ್ ಬಯಲಿನಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರಿದ್ದರು. ಎಲ್ಲರೂ ಪ್ರದೇಶದ ಖುಷಿಯನ್ನು ಅನುಭವಿಸುತ್ತಿದ್ದ ಮಧ್ಯಾಹ್ನದ ಹೊತ್ತಿನಲ್ಲಿಯೇ ಏಕಾಏಕಿಯಾಗಿ ಉಗ್ರರು ನಾಲ್ಕೂ ಮೂಲೆಗಳಿಂದ ಮುಗಿಬಿದ್ದರು. ಪ್ರವಾಸಿಗರ ಮೇಲೆ ಯದ್ವಾತದ್ವಾ ಗುಂಡು ಹಾರಿಸಿದರು. ಪರಿಣಾಮವಾಗಿ 28 ಮಂದಿ ನಿರಾಯುಧರೂ ಅಮಾಯಕರೂ ಆದ ಪ್ರವಾಸಿಗಳು ಅನ್ಯಾಯವಾಗಿ ಜೀವ ಕಳೆದುಕೊಂಡರು. ಜೀವ ಉಳಿಸಿಕೊಳ್ಳಲು ಕಣಿವೆಯಲ್ಲಿ ಓಡಿದ ಅನೇಕರು ಕೈ ಕಾಲು ಮುರಿದುಕೊಂಡರು. ಸುದ್ದಿ ಕೇಳಿ ಇಡೀ ದೇಶ ದಿಗ್ಭ್ರಾಂತವಾಯಿತು.
ಉಗ್ರರ ಅಟ್ಟಹಾಸದ ಪ್ರಶ್ನೆಯ ಜತೆಯಲ್ಲಿ ಕಾಶ್ಮೀರ ಭಯೋತ್ಪಾದನಾ ಚಟುವಟಿಕೆಗಳ ಕೇಂದ್ರ ಸ್ಥಳವಾಗಿರುವಾಗ ಸಾವಿರಾರು ಸಂಖ್ಯೆಯ ಪ್ರವಾಸಿಗರನ್ನು ರಕ್ಷಿಸಲು ಅಲ್ಲಿ ಒಬ್ಬನೇ ಒಬ್ಬ ಭದ್ರತಾ ಸಿಬ್ಬಂದಿ ಇರದುದು ಹೇಗೆ? ಇದು ಗುಪ್ತಚರ ವೈಫಲ್ಯವಲ್ಲವೇ? ಭದ್ರತಾ ಕಣ್ಗಾವಲು ಕಡಿಮೆ ಗೊಳಿಸಿದ್ದು ಯಾಕೆ? ಅಮರನಾಥದ ಹೆಬ್ಬಾಗಿಲಿನಲ್ಲಿ ಭದ್ರತಾ ಪಡೆ ಇನ್ನೂ ಹೆಚ್ಚು ಎಚ್ಚರದಿಂದ ಇರಬೇಡವೇ? ಭಾರತ ಹೆಮ್ಮೆಯಿಂದ ಹೇಳಿಕೊಳ್ಳುವ ಡ್ರೋನ್ ಗಳು, ಎಲೆಕ್ಟ್ರಾನಿಕ್ ಕಣ್ಗಾವಲು ವ್ಯವಸ್ಥೆಗಳು ಏನಾದವು? ಇದು ಕೇಂದ್ರ ಸರಕಾರದ ಬಹುದೊಡ್ಡ ವೈಫಲ್ಯವಲ್ಲವೇ ಎಂಬ ಗಂಭೀರ ಪ್ರಶ್ನೆಗಳೂ ಮುನ್ನೆಲೆಗೆ ಬಂದವು (ಕೇಂದ್ರಾಡಳಿತ ಪ್ರದೇಶವಾದ ಕಾಶ್ಮೀರದಲ್ಲಿ ಪೊಲೀಸ್ ಸಹಿತ ಭದ್ರತಾ ವ್ಯವಸ್ಥೆ ಕೇಂದ್ರದ ಜವಾಬ್ದಾರಿ).
ಈ ಭಯೋತ್ಪಾದನಾ ಕೃತ್ಯದ ಹಿಂದೆ ಪಾಕಿಸ್ತಾನ ಸೇನೆಯ ಕೈವಾಡವಿದೆ ಎನ್ನುವುದನ್ನು ಹೇಳಲು ವಿಶೇಷ ಬುದ್ಧಿಮತ್ತೆಯ ಅಗತ್ಯವೇನೂ ಇಲ್ಲ. ಪಾಕಿಸ್ತಾನದ ತರಬೇತಿ, ಶಸ್ತ್ರಾಸ್ತ್ರ ನೆರವು ಇಲ್ಲದೆ ಈ ಭಯೋತ್ಪಾದಕರು ಹೀಗೆ ಭಾರತದೊಳಗೆ ನುಗ್ಗಿ ಹಿಂಸಾಕೃತ್ಯ ನಡೆಸುವುದು ಸಾಧ್ಯವೇ ಇಲ್ಲ. ಎಂದೇ, ಪಾಕಿಸ್ತಾನಕ್ಕೆ ಈ ವಿಷಯದಲ್ಲಿ ಪಾಠ ಕಲಿಸುವುದು ಅನಿವಾರ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ಹೀಗೆ ಪಾಠ ಕಲಿಸುವುದು ಅಷ್ಟೊಂದು ಸುಲಭವೇ? ಪಾಕಿಸ್ತಾನ ಚೀನಾದ ಪರಮಾಪ್ತ ರಾಷ್ಟ್ರ. ಅಲ್ಲದೆ ಅಮೆರಿಕಾದ ಬೆಂಬಲವೂ ಅದಕ್ಕಿದೆ. ಪಾಕಿಸ್ತಾನಕ್ಕೆ ಅಮೆರಿಕ ನೆರವಾಗದಿರಬಹುದು ಆದರೆ ಸಂಕಟದ ಸಂದರ್ಭದಲ್ಲಿ ಕೈಯನ್ನಂತೂ ಬಿಡಲಾರದು. ಅಲ್ಲದೆ ಪಾಕಿಸ್ತಾನಕ್ಕೆ ಬಹುತೇಕ ಮುಸ್ಲಿಮ್ ರಾಷ್ಟ್ರಗಳ ಬೆಂಬಲವೂ ಇದೆ. ಈ ಅರ್ಥದಲ್ಲಿ ಭಾರತ ಏಕಾಂಗಿ. ಹಾಗಾಗಿ ಪಾಕಿಸ್ತಾನಕ್ಕೆ ಬಾಂಬು ಹಾಕಿ ಎಂದು ಉದ್ವೇಗದ ಭರದಲ್ಲಿ ಜನರು, ಹಾಗೆಯೇ ಗೋದಿ ಮಾಧ್ಯಮಗಳು ಹೇಳಬಹುದು. ಆದರೆ ಎರಡೂ ದೇಶಗಳು ಅಣ್ವಸ್ತ್ರ ಹೊಂದಿರುವ ದೇಶಗಳು. ಒಮ್ಮೆ ಪರಿಸ್ಥಿತಿ ಕೈಮೀರಿದ ಮೇಲೆ ಅದನ್ನು ನಿಯಂತ್ರಿಸುವುದು ಸುಲಭವಲ್ಲ. ಇಷ್ಟಾಗಿಯೂ ಕಾರ್ಯಸಾಧ್ಯ ಮಿಲಿಟರಿ ಕ್ರಮದ ಯೋಚನೆಯೂ ಈಗಿನ ಕೇಂದ್ರ ಸರಕಾರಕ್ಕಿರಬಹುದು. ಆದರೆ ಮೊದಲ ಪ್ರತಿಕ್ರಿಯಾತ್ಮಕ ಕ್ರಮಗಳಾಗಿ ಸರಕಾರ ಐದು ನಿರ್ಧಾರಗಳನ್ನು ಘೋಷಿಸಿದೆ.
ಭಾರತ ಸರಕಾರ ಘೋಷಿಸಿದ ತಕ್ಷಣದ ಕ್ರಮಗಳು
1. ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದವನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವುದು.
2. ಅಟ್ಟಾರಿ ಚೆಕ್ ಪೋಸ್ಟ್ ಅನ್ನು ಬಂದ್ ಮಾಡುವುದು.
3. ಮೇ 1 ರ ಮೊದಲು ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ಬಿಡಲು ಆದೇಶ.
4. ವಿಶೇಷ ವೀಸಾ ರದ್ಧತಿ.
5. ರಾಯಭಾರ ಸಿಬ್ಬಂದಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದು
ಪಾಕಿಸ್ತಾನ ಘೋಷಿಸಿದ ಕ್ರಮಗಳು
ಭಾರತದ ಈ ಕ್ರಮಗಳಿಗೆ ಪ್ರತೀಕಾರಾತ್ಮಕ ಕ್ರಮಗಳನ್ನು ಘೋಷಿಸಿರುವ ಪಾಕಿಸ್ತಾನ ಈ ಕೆಳಗಿನ ನಿರ್ಧಾರಗಳನ್ನು ಪ್ರಕಟಿಸಿದೆ.
1. ಭಾರತದ ವಿಮಾನಗಳಿಗೆ ಪಾಕಿಸ್ತಾನ ವಾಯು ಪ್ರದೇಶ ನಿರ್ಬಂಧ
2. ವಾಘಾ ಗಡಿ ಬಂದ್
3. ಭಾರತದೊಂದಿನ ವ್ಯಾಪಾರ ವಹಿವಾಟು ಸ್ಥಗಿತ
4. ಭಾರತದ ರಕ್ಷಣಾ, ನೌಕಾಪಡೆ ಮತ್ತು ವಾಯುಪಡೆಯ ಸಲಹೆಗಾರರಿಗೆ ಪಾಕಿಸ್ತಾನ ತೊರೆಯಲು ಗಡುವು.
5. ರಾಯಭಾರ ಸಿಬ್ಬಂದಿ 55 ರಿಂದ 30 ಕ್ಕೆ ಕಡಿತ
ಅಲ್ಲದೆ ಸಿಂಧೂ ನದಿಯ ಹರಿವನ್ನು ತಡೆಯುವುದು ಯುದ್ಧ ಕೃತ್ಯಕ್ಕೆ ಸಮ, ಸಿಮ್ಲಾ ಒಪ್ಪಂದವನ್ನು ನಾವು ಬದಿಗಿರಿಸಬೇಕಾಗಬಹುದು ಎಂದೂ ಅದು ಎಚ್ಚರಿಕೆ ನೀಡಿದೆ.
ಪ್ರತಿಕಾರಾತ್ಮಕ ಕ್ರಮಗಳ ಪರಿಣಾಮಗಳು
ಈ ಕ್ರಮ ಮತ್ತು ಪ್ರತಿಕ್ರಮಗಳಲ್ಲಿ ಕೆಲವು ಅಂತಹ ದೊಡ್ಡ ಪರಿಣಾಮವನ್ನೇನೂ ಬೀರವು. ಆದರೆ ನದಿ ನೀರಿನ ಒಪ್ಪಂದದ ವಿಷಯ ಮತ್ತು ಭಾರತದ ವಿಮಾನಯಾನಗಳಿಗೆ ಪಾಕಿಸ್ತಾನ ವಾಯುಪ್ರದೇಶ ನಿರ್ಬಂಧ ಬಹಳ ಗಂಭೀರ ವಿಷಯ.
ಮೇಲ್ನೋಟಕ್ಕೆ ಸಿಂಧೂ ನೀರನ್ನು ತಡೆಯುವುದರಿಂದ ಪಾಕಿಸ್ತಾನ ನರಳುವಂತೆ ಮಾಡಬಹುದು ಎಂದು ಅನೇಕರಿಗೆ ಅನಿಸಬಹುದು. ಆದರೆ ಇಲ್ಲಿ ಎರಡು ಸಮಸ್ಯೆಗಳಿವೆ.
1. 1960 ರ ಈ ಒಪ್ಪಂದವನ್ನು ರದ್ದುಗೊಳಿಸುವುದು ಅಷ್ಟು ಸುಲಭವಲ್ಲ. 1960ರ ಈ ಒಪ್ಪಂದದ ಹಿಂದೆ ಇರುವುದು ವಿಶ್ವಬ್ಯಾಂಕ್. ಆರ್ಟಿಕಲ್ XII ಪ್ರಕಾರ ಒಪ್ಪಂದವನ್ನು ರದ್ದುಗೊಳಿಸಲು ಎರಡು ರಾಷ್ಟ್ರಗಳ ಒಮ್ಮತ ಬೇಕಾಗುತ್ತದೆ. ಹಾಗಾಗಿ ಭಾರತದ ಈ ನಿರ್ಧಾರ ರಾಜಕೀಯ ಗಿಮಿಕ್ ಅನ್ನಬಹುದೇ ಹೊರತು, ಕಾನೂನು ಅಥವಾ ಕಾರ್ಯಸಾಧ್ಯತೆಯ ದೃಷ್ಟಿಯಿಂದ ಕಾರ್ಯಸಾಧುವಲ್ಲ.
2. ನದಿಯ ನೀರು ಹರಿದು ಹೋಗಲೇಬೇಕು. ಅದನ್ನು ತಡೆಯುವುದು ಸುಲಭವಲ್ಲ. ಪ್ರವಾಹದ ಸಮಸ್ಯೆಯೂ ಇರುತ್ತದೆ. ಒಂದು ವೇಳೆ ಸಿಂಧೂ ನದಿ ನೀರು ಪಾಕಿಸ್ತಾನಕ್ಕೆ ಹೋಗದಂತೆ ಮಾಡಬೇಕಾದರೆ (ಸಿಂಧೂ ನದಿ ನೀರು ತಡೆದರೆ ಪಾಕಿಸ್ತಾನ ವಿಲ ವಿಲ ಒದ್ದಾಡುವುದು ಖಂಡಿತಾ. ಯಾಕೆಂದರೆ, ಆ ದೇಶದ 80% ನೀರಿನ ಅಗತ್ಯವನ್ನು ಸಿಂಧೂ ನದಿ ಈಡೇರಿಸುತ್ತದೆ), ಹೆಚ್ಚುವರಿ ನೀರನ್ನು ಬಳಸಬೇಕಾದರೆ ಭಾರತದ ಬಳಿ ದೊಡ್ಡ ಪ್ರಮಾಣದ ಮೂಲಸೌಕರ್ಯಗಳು ಇರಬೇಕು. ಅಣೆಕಟ್ಟುಗಳನ್ನು ಕಟ್ಟಲು ಅಪಾರ ಹಣಬೇಕು ಮತ್ತು ಕಡಿಮೆ ಎಂದರೆ ಹತ್ತು ವರ್ಷಗಳು ಬೇಕು.
ಒಟ್ಟಿನಲ್ಲಿ ಸಿಂಧೂ ನದಿ ನೀರು ತಡೆಯುವುದು ಅಪಾರ ರಿಸ್ಕ್ ಒಳಗೊಂಡಿರುವ ಒಂದು ಹೆಜ್ಜೆ. ಇದರಿಂದ ಬಿಕ್ಕಟ್ಟು ಇನ್ನಷ್ಟು ಉಲ್ಬಣವಾಗಬಹುದು ಮತ್ತು ಅಂತಾರಾಷ್ಟ್ರ ಜಲ ವಿಷಯವಾಗಿರುವುದರಿಂದ ಜಾಗತಿಕ ಕೆಂಗಣ್ಣಿಗೆ ಭಾರತ ಗುರಿಯಾಗಬಹುದು.
ವಾಯುಪ್ರದೇಶ ನಿರ್ಬಂಧದಿಂದ ನಷ್ಟ
ಭಾರತದ ಕ್ರಮಗಳಿಗೆ ಪಾಕಿಸ್ತಾನ ಘೋಷಿಸಿರುವ ಪ್ರತೀಕಾರಾತ್ಮಕ ಕ್ರಮಗಳಲ್ಲಿ ಭಾರತವನ್ನು ಆರ್ಥಿಕವಾಗಿ ಕಂಗೆಡುವಂತೆ ಮಾಡುವುದು ವಾಯು ಪ್ರದೇಶ ನಿರ್ಬಂಧ. ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನ ಒಂದು ಸಣ್ಣ ದೇಶ. ವಿಮಾನ ಯಾನ ನಿರ್ಬಂಧಗಳನ್ನು ಅದರ ಮೇಲೆ ಹೇರಿದರೆ ಅಂತಹ ನಷ್ಟವೇನೂ ಆಗದು. ಆದರೆ ಭಾರತಕ್ಕೆ ಹಾಗಲ್ಲ. ಉತ್ತರ ಭಾರತದಿಂದ ಕೊಲ್ಲಿ ರಾಷ್ಟ್ರ, ಮಧ್ಯ ಪ್ರಾಚ್ಯ, ಯುರೋಪ್, ಉತ್ತರ ಅಮೆರಿಕಾಗಳಿಗೆ ಸಂಚರಿಸುವ ಅಸಂಖ್ಯ ಭಾರತೀಯ ವಿಮಾನಗಳು ಪಾಕಿಸ್ತಾನ ವಾಯುಪ್ರದೇಶ ತಪ್ಪಿಸಿ ಹಾರಬೇಕೆಂದರೆ ಅಪಾರ ಇಂಧನ ವ್ಯಯ ಮತ್ತು ಸಮಯ ನಷ್ಟವಾಗುತ್ತದೆ. ಭಾರತದ ವಿಮಾನಯಾನ ತಜ್ಞರ ಪ್ರಕಾರ ಪಾಕಿಸ್ತಾನದ ಸದ್ಯದ ನಿರ್ಧಾರದಿಂದ ಭಾರತದ ವಿಮಾನಗಳು ತಿಂಗಳಿಗೆ 500 ದಶಲಕ್ಷ ಡಾಲರ್ ನಷ್ಟ ಅನುಭವಿಸಬಹುದು.
2019 ರಲ್ಲಿ ಐದು ತಿಂಗಳು ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದಾಗ ಆದ ನಷ್ಟಕ್ಕೆ ಹೋಲಿಸಿದರೆ ಈಗ ವಾರ್ಷಿಕ 2000 ಕೋಟಿ ರುಪಾಯಿ ನಷ್ಟವಾಗಬಹುದು. ಏರ್ ಇಂಡಿಯಾವು ಖಂಡಾಂತರಗಳ ದೂರ ಪ್ರಯಾಣಗಳನ್ನು ಕೈಗೊಳ್ಳುವುದರಿಂದ ಅದು ಗರಿಷ್ಠ ನಷ್ಟ ಅನುಭವಿಸಬಹುದು. ಆನಂತರದ ಸರದಿ ಇಂಡಿಗೋ, ಸ್ಪೈಸ್ ಜೆಟ್ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ಮತ್ತು ಆಕಾಶಾ ಏರ್ ನಂತಹವುಗಳದ್ದು.
2019 ರಲ್ಲಿ ಫೆಬ್ರವರಿ 26 ರಿಂದ ಜುಲೈ ಮಧ್ಯದ ವರೆಗೆ ಪಾಕಿಸ್ತಾನ ತನ್ನ ವಾಯುಪ್ರದೇಶ ನಿರ್ಬಂಧಿಸಿದಾಗ ಭಾರತದ ವಿಮಾನಗಳು ಅರಬ್ಬಿ ಸಮುದ್ರದ ಮೇಲೆ ಬದಲಿ ದಾರಿಗಳನ್ನು ಕಂಡುಕೊಳ್ಳಬೇಕಾಯಿತು. ಇಂಧನ ವೆಚ್ಚವೂ ಹೆಚ್ಚಿತು, ಪ್ರಯಾಣ ವೇಳೆಯಲ್ಲಿ 15- 90 ನಿಮಿಷಗಳ ಏರಿಕೆಯಾಯಿತು.
ಇಂಡಿಯನ್ ಏರ್ ಲೈನ್ಸ್ 2019 ರಲ್ಲಿ ಒಟ್ಟಾರೆಯಾಗಿ ನಾಲ್ಕೂವರೆ ತಿಂಗಳ ಅವಧಿಯಲ್ಲಿ 550- 700 ಕೋಟಿ ನಷ್ಟ ಅನುಭವಿಸಿತು. ಏರ್ ಇಂಡಿಯಾ 491 ಕೋಟಿ, ಇಂಡಿಗೋ 25 ಕೋಟಿ, ಸ್ಪೈಸ್ ಜೆಟ್ 30.74 ಕೋಟಿ, ಗೋ ಏರ್ 2.1 ಕೋಟಿ ರುಪಾಯಿ ನಷ್ಟ ಅನುಭವಿಸಿದವು. ಭಾರತದ ವಿಮಾನ ಯಾನ ಸಂಸ್ಥೆಗಳು ಒಟ್ಟಾರೆಯಾಗಿ ಎಷ್ಟು ನಷ್ಟ ಅನುಭವಿಸಬಹುದು ಎಂಬುದು ವಾಯು ಯಾನ ನಿರ್ಬಂಧ ಎಷ್ಟು ಕಾಲ ಮುಂದುವರಿಯುತ್ತದೆ ಎನ್ನುವುದನ್ನು ಅವಲಂಬಿಸಿದೆ.
ಪಾಕಿಸ್ತಾನವೂ ಈ ವಿಷಯದಲ್ಲಿ ನಷ್ಟ ಅನುಭವಿಸಿತು. ಪಾಕಿಸ್ತಾನದ ಸಿವಿಲ್ ಅಥಾರಿಟಿ ಮತ್ತು ವಿಮಾನ ಯಾನ ಸಂಸ್ಥೆಗಳಿಗೆ 8.5 ಬಿಲಿಯ ರುಪಾಯಿ ನಷ್ಟವಾಯಿತು.
ಹೀಗೆ ನೆರೆಯ ರಾಷ್ಟ್ರವೊಂದರೊಂದಿಗೆ ಕ್ರಮ ಜರುಗಿಸಿದಾಗ ಅದರ ಪರಿಣಾಮ ನಮ್ಮ ಮೇಲೂ ಇರುತ್ತದೆ. ಮಾಜಿ ಪ್ರಧಾನಿ ವಾಜಪೇಯಿ ಹೇಳುತ್ತಿದ್ದಂತೆ ನಾವು ಸ್ನೇಹಿತರನ್ನು ಬದಲಿಸಬಹುದು ಆದರೆ ನೆರೆಯವರನ್ನಲ್ಲ. ನಾವು ಅವರೊಂದಿಗೆ ಬದುಕುವುದು ಅನಿವಾರ್ಯ. ಆದರೆ ಭಯೋತ್ಪಾದನೆಯನ್ನು ಪ್ರಾಯೋಜಿಸುವ ಪಾಕಿಸ್ತಾನದಂತಹ ದೇಶಗಳೊಂದಿಗೆ ಸ್ನೇಹದೊಂದಿಗೆ ಬದುಕುವುದಾದರೂ ಹೇಗೆ? ಹಾಗಾಗಿ ಈಗ ಭಾರತದ್ದು ʼಅತ್ತ ದರಿ ಇತ್ತ ಪುಲಿʼ ಎಂಬಂತಹ ಸ್ಥಿತಿ. ಇದರಿಂದ ಪಾರಾಗಲು ಎಚ್ಚರದ ಹೆಜ್ಜೆ ಅನಿವಾರ್ಯ. ಪಾಕಿಸ್ತಾನಕ್ಕೆ ಪಾಠವನ್ನೂ ಕಲಿಸಬೇಕು. ಆದರೆ ಅದರಿಂದ ಭಾರತದ ಆರ್ಥಿಕ, ಅಂತಾರಾಷ್ಟ್ರೀಯ ಸಂಬಂಧ ಸಹಿತ ಹಿತಾಸಕ್ತಿಗಳಿಗೂ ದೂರಗಾಮಿ ಹಾನಿಯಾಗಬಾರದು. ಈ ನಾಜೂಕಿನ ಪರಿಸ್ಥಿತಿಯನ್ನ ಅರ್ಥಮಾಡಿಕೊಂಡು ಭಾರತ ಸರಕಾರ ಎಚ್ಚರದ ಹೆಜ್ಜೆಯನ್ನು ಇರಿಸುತ್ತದೆ ಮತ್ತು ರಾಯಭಾರ ದೃಷ್ಟಿಯಿಂದ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯವಾಗಿ ಪ್ರತ್ಯೇಕಿಸಿ ಅದು ಹೆಚ್ಚು ಪರಿಣಾಮಕಾರಿಯಾದ ಮತ್ತು ದೀರ್ಘಾವಧಿಯ ಪಾಠ ಕಲಿಯುವಂತೆ ಮಾಡುವುದಕ್ಕೆ ಹೆಚ್ಚು ಒತ್ತು ನೀಡುತ್ತದೆ ಎಂದು ಆಶಿಸೋಣ.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ- ಪಹಲ್ಗಾಮ್ ಉಗ್ರರ ದಾಳಿ| ಹರಡಿದ ಸುಳ್ಳು ಸುದ್ದಿಗಳು