ನವದೆಹಲಿ: ಕಳೆದ ಹಲವು ವರ್ಷಗಳಿಂದ ಭಯೋತ್ಪಾದಕರಿಗೆ ತರಬೇತಿ ಹಾಗೂ ಹಣಕಾಸಿನ ನೆರವು ನೀಡುತ್ತಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದ್ದು, ಈ ಮೂಲಕ ಆ ದೇಶದ ನಿಜ ಬಣ್ಣ ಬಯಲಾಗಿದೆ. ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಭಾರತ ಆಪಾದಿಸಿದೆ.
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬೆನ್ನಲ್ಲೇ ಭಯೋತ್ಪಾದಕರಿಗೆ ಉತ್ತೇಜನ ಆರ್ಥಿಕ ನೆರವು ನೀಡುತ್ತಿರುವುದನ್ನು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಒಪ್ಪಿಕೊಂಡಿದ್ದರು. ಈ ವಿಷಯವನ್ನೂ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಉಪಪ್ರತಿನಿಧಿಯಾಗಿರುವ ಯೋಜನಾ ಪಟೇಲ್ ವಿಶ್ವಸಂಸ್ಥೆಯ ಗಮನಕ್ಕೆ ತಂದಿದ್ದಾರೆ.
ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿಯಲ್ಲಿ ‘ವಿಕ್ಟಿಮ್ಸ್ ಆಫ್ ಟೆರರಿಸಂ ಅಸೋಸಿಯೇಷನ್ ನೆಟ್ವರ್ಕ್‘ ಕಾರ್ಯಕ್ರಮದಲ್ಲಿ ಭಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ.
‘ಭಯೋತ್ಪಾದಕರಿಗೆ ನೆರವು ನೀಡುತ್ತಿರುವುದನ್ನು ಪಾಕಿಸ್ತಾನದ ರಕ್ಷಣಾ ಸಚಿವರು ಬಹಿರಂಗವಾಗಿ ಒಪ್ಪಿಕೊಂಡಿರುವುದು ಯಾವುದೇ ಅಚ್ಚರಿಯನ್ನುಂಟು ಮಾಡಿಲ್ಲ. ಅಂತರರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಭಯೋತ್ಪಾದನೆಯನ್ನು ಉತ್ತೇಜಿಸುವ ಹಾಗೂ ಪ್ರದೇಶವನ್ನು ಅಸ್ಥಿರಗೊಳಿಸಿ ಭದ್ರತೆಗೆ ಭೀತಿಯನ್ನಂಟು ಮಾಡುತ್ತಿದೆ. ಜಗತ್ತು ಇನ್ನು ಮುಂದೆ ಕುರುಡಾಗಲು ಸಾಧ್ಯವಿಲ್ಲ. ಇದಕ್ಕಿಂತ ಹೆಚ್ಚೇನು ಹೇಳುವ ಅಗತ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಸ್ಕೈ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಮತ್ತು ಬ್ರಿಟನ್ ಒಳಗೊಂಡಂತೆ ಪಶ್ಚಿಮದ ರಾಷ್ಟ್ರಗಳಿಗಾಗಿ ನಾವು ಸುಮಾರು ಮೂರು ದಶಕಗಳಿಂದ ಈ ಕೊಳಕು ಕೆಲಸ ಮಾಡುತ್ತಿದ್ದೇವೆ ಎಂದು ಖ್ವಾಜಾ ಆಸಿಫ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.