ನವದೆಹಲಿ: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನಾ ದಾಳಿ ಕುರಿತು ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರದಿದ್ದಾರೆ.
ಈ ಘಟನೆ ಕುರಿತು ಸಾಮೂಹಿಕ ಅಭಿಪ್ರಾಯಗಳನ್ನು ಪ್ರತಿಕ್ರಿಯೆಯನ್ನು ಆಲಿಸಲು ಸಂಸತ್ ನ ಎರಡೂ ಸದನಗಳ ವಿಶೇಷ ಅಧಿವೇಶನ ಕರೆಯಬೇಕು. ಅಧಿವೇಶನವು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು, ಬೆದರಿಕೆಗಳನ್ನು ಎದುರಿಸಲು, ದೇಶದ ಬಗ್ಗೆ ದೃಢ ಸಂಕಲ್ಪ ಪ್ರದರ್ಶಿಸಲು ನೆರವಾಗುತ್ತದೆ ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.
ಈ ವಿಷಮ ಪರಿಸ್ಥಿತಿಯಲ್ಲಿ ಏಕತೆ ಮತ್ತು ಒಗ್ಗಟ್ಟು ಬಹಳ ಮುಖ್ಯವಾಗಿದ್ದು ಆದಷ್ಟು ಬೇಗ ವಿಶೇಷ ಅಧಿವೇಶನ ಕರೆಯಬೇಕು ಎಂದು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ನಿರ್ಣಾಯಕ ಕ್ಷಣದಲ್ಲಿ ಭಾರತವು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಂತಿದೆ ಎಂಬುದನ್ನು ಪ್ರದರ್ಶಿಸಬೇಕು. ಆದ್ದರಿಂದ ವಿಶೇಷ ಅಧಿವೇಶನ ಅನಿವಾರ್ಯ ಎಂದು ಪ್ರತಿಪಾದಿಸಿದ್ದಾರೆ.