ನಮ್ಮ ಆಹಾರ ನಮ್ಮ ಆಯ್ಕೆ; ಮಾಂಸಾಹಾರ ನಿಷೇಧ ಯಾಕೆ?

Most read

ಹಿಂದುತ್ವವಾದಿಗಳಿಂದ ಧಾರ್ಮಿಕ ಆಚರಣೆ ನೆಪದಲ್ಲಿ ಮಾಂಸಾಹಾರ ನಿಷೇಧ ಮಾಡುವುದನ್ನು ಮಾಂಸಾಹಾರಿ ಹಿಂದೂಗಳೇ ಮೊದಲು ವಿರೋಧಿಸಬೇಕಿದೆ. ಹಬ್ಬ ಯಾವುದೇ ಇರಲಿ, ಸಂಪ್ರದಾಯ ಎಂತಹುದೇ ಇರಲಿ, ಬೇಕಾದವರು ತಮ್ಮ ಆಯ್ಕೆಯ ಆಹಾರವನ್ನು ಸೇವಿಸಲು ಸ್ವತಂತ್ರರು. ಜನರ ಆಹಾರದ ಹಕ್ಕನ್ನು ನಿರ್ಬಂಧಿಸಲು ಈ ಸಸ್ಯಾಹಾರ ಶ್ರೇಷ್ಟತೆಯ ವ್ಯಸನ ಪೀಡಿತರಿಗೆ ಅಧಿಕಾರ ಕೊಟ್ಟವರು ಯಾರು? ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಶ್ರೀ ರಾಮನವಮಿ ಆಚರಣೆ ಮುಗಿಯಿತು. ಪಾನಕ ಮಜ್ಜಿಗೆ ಕೋಸಂಬರಿ ಸೇವಿಸಿ ಸಂಭ್ರಮಿಸಿದ್ದೂ ಆಯ್ತು. ರಾಮದೇವರ ಭಕ್ತರು ಭಕ್ತಿಯಿಂದಲೋ ಭ್ರಮೆಯಿಂದಲೋ ಶ್ರೀರಾಮನ ಮೆರವಣಿಗೆ ಮಾಡಿದ್ದೂ ಆಯ್ತು. ದೇವರ ಮೇಲಿನ ಭಕ್ತಿಗಿಂತ ಅನ್ಯ ಧರ್ಮ ದ್ವೇಷವನ್ನ ವ್ಯಕ್ತಪಡಿಸಲು ಕತ್ತಿ ಮಚ್ಚುಗಳ ಸಮೇತ ಪ್ರಚೋದನಾತ್ಮಕ ಮೆರವಣಿಗೆ ಮಾಡಿದ ಕೆಲವರು ಮತಾಂಧತೆಯನ್ನು ಪ್ರದರ್ಶಿಸಿದ್ದೂ ಆಯ್ತು. ಶ್ರೀರಾಮನವಮಿಯ ನೆಪದಲ್ಲಿ, ಉದ್ದೇಶ ಪೂರ್ವಕವಾಗಿ ಮಸೀದಿಗಳ ಮುಂದೆಯೇ ಮೆರವಣಿಗೆ ಮಾಡಿ ಡಿಜೆ ಸೌಂಡಿಗೆ ಕುಣಿದು ಧರ್ಮಾಂಧತೆಯನ್ನೂ ಮೆರೆದಿದ್ದೂ ಆಯ್ತು. ಇಂತವೆಲ್ಲಾ ಕಳೆದ ಹತ್ತಾರು ವರ್ಷಗಳಿಂದ ಹಿಂದೂ ಧರ್ಮದ ನಂಬಿಕೆ ಹಾಗೂ ಹಿಂದೂಗಳ ಭಾವನೆಗಳ ಹೆಸರಲ್ಲಿ ನಡೆಯುತ್ತಲೇ ಇದೆ.

ಆದರೆ ಶ್ರೀ ರಾಮನವಮಿಯ ದಿನ ಮಾಂಸಾಹಾರವನ್ನು ನಿಷೇಧಿಸಿದ್ದು ಯಾಕೆ? ಎನ್ನುವ ಪ್ರಶ್ನೆ ಕಾಡುತ್ತಿದೆ. ಕರ್ನಾಟಕದಲ್ಲಿ ಈಗ ರಾಮನ ಆರಾಧಕ ಪಕ್ಷದ ಕೋಮುವಾದಿ ಸರಕಾರ ಇಲ್ಲ. ಜ್ಯಾತ್ಯತೀತ ಹಾಗೂ ಸಂವಿಧಾನಬದ್ಧ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರಕಾರ ಇದೆ. ಆದರೂ ಶ್ರೀ ರಾಮನವಮಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ಹಾಗೂ ಪ್ರಾಣಿವಧೆಯನ್ನು ನಿಷೇಧಿಸಿದ್ದು ಯಾಕೆ? ಯಾರನ್ನು ಮೆಚ್ಚಿಸಲಿಕ್ಕೆ?

ಜನರ ಆಹಾರ ಸಂಸ್ಕೃತಿಯನ್ನು ಹೀಗೆ ನಿರ್ಬಂಧಿಸುವುದೇ ಸಂವಿಧಾನಕ್ಕೆ ಮಾಡುವ ಅಪಚಾರ. ನಮ್ಮ ಸಂವಿಧಾನದ 21 ನೇ ವಿಧಿಯು ಎಲ್ಲರಿಗೂ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಅದರಲ್ಲಿ ಆಹಾರ ಸ್ವಾತಂತ್ರ್ಯವೂ ಸೇರಿದೆ. ಹೀಗಿರುವಾಗ ಸಂವಿಧಾನವನ್ನು ಒಪ್ಪದ ಸಂಘ ಪರಿವಾರದ ಅಂಗ ಬಿಜೆಪಿ ಪಕ್ಷ ಸಂವಿಧಾನ ವಿರೋಧಿ ಧೋರಣೆ ತೋರಿ ಧರ್ಮದ ಹೆಸರಲ್ಲಿ ಜನರ ಆಹಾರದ ಹಕ್ಕಿಗೆ ಧಕ್ಕೆ ತರುವುದು ಆ ಪಕ್ಷದ ಸಿದ್ಧಾಂತಕ್ಕೆ ಪೂರಕವಾಗಿದೆ. ಆದರೆ ಸಂವಿಧಾನಕ್ಕೆ ಬದ್ಧವಾಗಿರುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ಸರಕಾರವೇ ಮಾಂಸದಂಗಡಿ ಬಂದ್ ಮಾಡಲು ಆದೇಶಿಸಿದ್ದು ಪ್ರಶ್ನಾರ್ಹವಾಗಿದೆ.

ಇಷ್ಟಕ್ಕೂ ಶ್ರೀರಾಮನಿಗೂ ಮಾಂಸಾಹಾರಕ್ಕೂ ಏನಕೇನ ಸಂಬಂಧ? ಶ್ರೀರಾಮ ಸಸ್ಯಾಹಾರಿಯಾಗಿದ್ದ ಎಂದು ಯಾವ ರಾಮಾಯಣದಲ್ಲಿ ದಾಖಲಾಗಿದೆ? ಸಸ್ಯಾಹಾರ ಎನ್ನುವುದು ವೈದಿಕಶಾಹಿ ಹುಟ್ಟು ಹಾಕಿದ ಕಟ್ಟುಪಾಡು. ಆದರೆ ಕ್ಷತ್ರಿಯ ರಾಜನಾದ ರಾಮ ಯಾಕೆ ಸಸ್ಯಾಹಾರಿ?

ವಾಲ್ಮೀಕಿ ರಾಮಾಯಣದಲ್ಲಿ, ಶ್ರೀರಾಮನು ವನವಾಸದ ಸಮಯದಲ್ಲಿ ಮಾಂಸವನ್ನು ಸೇವಿಸಿದ್ದಾನೆ ಎಂಬ ಸೂಚನೆಗಳಿವೆ. ರಾಮಾಯಣದ ಅರಣ್ಯಕಾಂಡದಲ್ಲಿ, ರಾಮ ಮತ್ತು ಲಕ್ಷ್ಮಣರು ಬೇಟೆಯಾಡಿ ಪ್ರಾಣಿಗಳನ್ನು ಕೊಂದು ಆಹಾರಕ್ಕಾಗಿ ಬಳಸಿದ್ದಾರೆ ಎಂಬ ವಿವರಣೆ ಕಂಡುಬರುತ್ತದೆ. ಒಂದು ಶ್ಲೋಕದಲ್ಲಿ (ಅರಣ್ಯಕಾಂಡ, ಸರ್ಗ 71 ಶ್ಲೋಕ 25-26), ರಾಮ ಮತ್ತು ಲಕ್ಷ್ಮಣರು ಮೃಗಗಳನ್ನು ಬೇಟೆಯಾಡಿ, ಆಹಾರವನ್ನು ಸಿದ್ಧಪಡಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಸ್ವತಃ ಶ್ರೀರಾಮಚಂದ್ರನೇ ಮಾಂಸಾಹಾರಿ ಆಗಿದ್ದಾಗ, ಈಗಿನ ರಾಮಭಕ್ತರ ತಕರಾರೇನು? ಹೋಗಲಿ ಶ್ರೀರಾಮನವಮಿ ಆಚರಿಸುವ, ರಾಮನನ್ನು ಪೂಜಿಸುವವರಲ್ಲಿ ಅದೆಷ್ಟು ಭಕ್ತರು ಮಾಂಸಾಹಾರಿಗಳಿಲ್ಲ. ಹಿಂದುತ್ವ ಹಿಂದೂ ಸಂಸ್ಕೃತಿ ಎನ್ನುವವರಲ್ಲಿ ಎಷ್ಟು ಜನ ಮಾಂಸಾಹಾರ ಸೇವಿಸುವುದಿಲ್ಲ?

ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗದಷ್ಟು ಜನರು ಮಾಂಸಾಹಾರಿಗಳಾಗಿದ್ದಾರೆ. ವೈದಿಕಶಾಹಿ ಹುಟ್ಟು ಹಾಕಿರುವ ಸಸ್ಯಾಹಾರ ಶ್ರೇಷ್ಟತೆಯ ವ್ಯಸನಪೀಡಿತರು ಅಲ್ಪ ಸಂಖ್ಯಾತರಾಗಿದ್ದಾರೆ. ಈ ಅಲ್ಪಸಂಖ್ಯಾತ ಸಸ್ಯಾಹಾರಿಗಳು ಬಹುಸಂಖ್ಯಾತ ಮಾಂಸಾಹಾರಿಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಅದರ ಭಾಗವಾಗಿಯೇ ಹಿಂದೂ ಧಾರ್ಮಿಕ ಆಚರಣೆಗಳಾದ ಗಣೇಶ ಚತುರ್ಥಿ, ಶ್ರೀ ರಾಮನವಮಿಗಳಂದು ಮಾಂಸಾಹಾರ ನಿಷೇಧಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಅಚ್ಚರಿಯ ಸಂಗತಿ ಎಂದರೆ ಸಂವಿಧಾನದ ಪ್ರಕಾರ ಆಹಾರ ಸಂಸ್ಕೃತಿಯನ್ನು ಕಾಪಾಡಬೇಕಾದ ಸರಕಾರಗಳೇ  ಇಂತಹ ನಿಷೇಧಗಳನ್ನು ಹೇರುತ್ತಿವೆ.

ಆಹಾರ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆಯ್ಕೆ. ಅದನ್ನು ನಿರ್ಬಂಧಿಸುವುದಾಗಲೀ ಇಲ್ಲವೇ ಹೇರುವುದಾಗಲೀ ಮಾಡುವುದೇ ಅಮಾನವೀಯ ಕ್ರಮ. ಒಂದು ಧಾರ್ಮಿಕ ಸಮುದಾಯದ ಒಂದು ವರ್ಗದ ನಂಬಿಕೆಯನ್ನು ಧಾರ್ಮಿಕತೆಯ ಹೆಸರಲ್ಲಿ ಎಲ್ಲಾ ಜಾತಿ ಧರ್ಮೀಯರ ಮೇಲೆ ಹೇರುವುದು ಅಕ್ಷಮ್ಯ. ನಮ್ಮದು ಬಹುಧರ್ಮೀಯ ಹಾಗೂ ವೈವಿಧ್ಯಮಯ ಸಂಸ್ಕೃತಿಯ ದೇಶವಾಗಿದೆ. ಇಲ್ಲಿ ಎಲ್ಲಾ ಕುಲ ಮತ ಧರ್ಮ ಸಮುದಾಯದವರಿಗೂ ಅವರವರ ಸಂಪ್ರದಾಯಗಳನ್ನು ಆಚರಿಸುವ ಸ್ವಾತಂತ್ರ್ಯವಿದೆ. ಆದರೆ ಅದು ಮತ್ತೊಬ್ಬರ ಮೇಲೆ ಎಂದೂ ಹೇರಿಕೆಯಾಗಬಾರದು. ಕೆಲವರ ನಂಬಿಕೆ ಹಲವರ ಹಕ್ಕನ್ನು ಕಸಿದುಕೊಳ್ಳುವುದು ದಮನ ಎನ್ನಿಸಿಕೊಳ್ಳುತ್ತದೆ. ಅಂತಹ ದಮನವನ್ನು ಯಾರೇ ಮಾಡಿದರೂ ಅದು ಸಂವಿಧಾನ ವಿರೋಧಿತನ ಮಾತ್ರವಲ್ಲ ಮಾನವೀಯತೆಯ ವಿರೋಧಿತನವಾಗುತ್ತದೆ.

ಒಂದು ದಶಕದಿಂದ ವಿಜೃಂಭಿಸುತ್ತಿರುವ ಮನುವಾದಿ ಶಕ್ತಿಗಳು ಹಿಂದೂ ಧರ್ಮದ ಹೆಸರಲ್ಲಿ ಹಿಂದುತ್ವವನ್ನು ಹೇರುವ ಪ್ರಯತ್ನದಲ್ಲಿ ನಿರತವಾಗಿವೆ. ಹಿಂದೂಗಳ ಭಾವನೆಗಳನ್ನು ಪ್ರಚೋದಿಸಿ ಅನ್ಯ ಧರ್ಮೀಯರ ಮೇಲೆ ದ್ವೇಷದ ವಾತಾವರಣವನ್ನು ಹುಟ್ಟಿಸಲಾಗುತ್ತಿದೆ. ಇದಕ್ಕೆ ಹಿಂದೂಗಳು ಅಂದರೆ ಸಸ್ಯಾಹಾರಿಗಳು ಎಂದು ನಂಬಿಸುವ ಯತ್ನಗಳು ಧರ್ಮದ ಹೆಸರಲ್ಲಿ ನಿರಂತರವಾಗಿ ನಡೆಯುತ್ತಿವೆ. ಹಿಂದುತ್ವವಾದಿ ವೈದಿಕಶಾಹಿಗಳ ಈ ಹುನ್ನಾರವನ್ನು ಹಿಂದೂ ಸಮುದಾಯದವರು ಅರ್ಥ ಮಾಡಿಕೊಳ್ಳಬೇಕಾಗಿದೆ. “ನಮ್ಮ ಆಹಾರ ನಮ್ಮ ಹಕ್ಕು” ಎಂದು ಪ್ರತಿಪಾದಿಸಬೇಕಾಗಿದೆ.  ಯಾಕೆಂದರೆ ಹಿಂದೂಗಳು ಎಂದು ಹೇಳಲಾಗುವ ಬಹುಸಂಖ್ಯಾತ ದಲಿತರು, ಶ್ರಮಿಕರು, ಹಿಂದುಳಿದ ವರ್ಗದವರು, ಆದಿವಾಸಿಗಳೆಲ್ಲಾ ಮಾಂಸಾಹಾರಿಗಳೇ ಆಗಿದ್ದಾರೆ. ಹೀಗೆ ಹಿಂದುತ್ವವಾದಿಗಳಿಂದ ಧಾರ್ಮಿಕ ಆಚರಣೆ ನೆಪದಲ್ಲಿ ಮಾಂಸಾಹಾರ ನಿಷೇಧ ಮಾಡುವುದನ್ನು ಮಾಂಸಾಹಾರಿ ಹಿಂದೂಗಳೇ ಮೊದಲು ವಿರೋಧಿಸಬೇಕಿದೆ. ಹಬ್ಬ ಯಾವುದೇ ಇರಲಿ, ಸಂಪ್ರದಾಯ ಎಂತಹುದೇ ಇರಲಿ, ಬೇಕಾದವರು ತಮ್ಮ ಆಯ್ಕೆಯ ಆಹಾರವನ್ನು ಸೇವಿಸಲು ಸ್ವತಂತ್ರರು. ಜನರ ಆಹಾರದ ಹಕ್ಕನ್ನು ನಿರ್ಬಂಧಿಸಲು ಈ ಸಸ್ಯಾಹಾರ ಶ್ರೇಷ್ಟತೆಯ ವ್ಯಸನ ಪೀಡಿತರಿಗೆ ಅಧಿಕಾರ ಕೊಟ್ಟವರು ಯಾರು?

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು  

ಇದನ್ನೂ ಓದಿ- ಪ್ರತಿಸುಂಕ : ಟ್ರಂಪ್‌ ವಿರುದ್ಧ ದಿಟ್ಟವಾಗಿ ಎದ್ದು ನಿಲ್ಲಬೇಡವೇ  ಭಾರತ?

More articles

Latest article