ಬೆಂಗಳೂರು: ಮುಡಾ ಸೈಟು ಹಂಚಿಕೆ ಪ್ರಕರಣ ಸಂಬಂಧಿಸಿದಂತೆ ವಿಧಾನಸಭೆಯಲ್ಲಿಅಹೋರಾತ್ರಿ ಧರಣಿ ನಡೆಸುತ್ತಿರುವ ವಿರೋಧಪಕ್ಷಗಳ ಶಾಸಕರು ಮನರಂಜನೆಗಾಗಿ ಹಾಡು, ಭಜನೆ, ಹರಿಕಥೆಗಳ ಮೊರೆ ಹೋದರು.
ರಾತ್ರಿ ಊಟ ಮುಗಿಸಿದ ನಂತರ ಪ್ರತಿಭಟನೆಯ ಘೋಷಣೆಗಳನ್ನು ಮರೆತ ಶಾಸಕರು ಹಾಡು-ಹರಟೆ ಹೊಡೆಯುತ್ತ ಸಮಯ ಕಳೆದರು.
ಬೆಳಗ್ಗೆ ಎದ್ದ ನಂತರ ಹಲವು ಶಾಸಕರು ಬೆಳಗಿನ ವಾಯುವಿಹಾರಕ್ಕೆ ತೆರಳಿದರು. ಮತ್ತೆ ಕೆಲವರು ವ್ಯಾಯಾಮ ಮಾಡಿದರು.
ಇಂದು ಮಳೆಗಾಲದ ಅಧಿವೇಶನ ಪೂರ್ಣಗೊಳ್ಳಲಿದ್ದು, ಬೆಳಿಗ್ಗೆ 9 ಗಂಟೆಗೆ ಅಧಿವೇಶನ ಆರಂಭವಾಗಬೇಕಿದೆ. ಅಧಿವೇಶನ ಆರಂಭವಾಗುತ್ತಿದ್ದಂತೆ ಮತ್ತೆ ಸದನದ ಬಾವಿಗಿಳಿದು ಪ್ರತಿಭಟಿಸಲಿರುವ ಬಿಜೆಪಿ- ಜೆಡಿಎಸ್ ಶಾಸಕರು ಸುಗಮ ಕಲಾಪ ನಡೆಯದಂತೆ ಅಡ್ಡಿಯೊಡ್ಡಲಿದ್ದಾರೆ.
ವಿಧಾನಸಭೆಯಲ್ಲಿ ಚರ್ಚಿಸಲು ಸಾಕಷ್ಟು ಗಂಭೀರ ವಿಷಯಗಳು ಇವೆ. ರಾಜ್ಯಾದ್ಯಂತ ಮಳೆಯಿಂದ ಸಾಕಷ್ಟು ಅವಾಂತರಗಳು ಆಗಿವೆ. ಆದರೆ ಬಿಜೆಪಿಯವರು ಈ ಕುರಿತು ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಟೀಕಿಸಿದ್ದಾರೆ.
ಮುಡಾ ಪ್ರಕರಣ ಕುರಿತು ನ್ಯಾಯಾಂಗ ತನಿಖೆ ನಡೆಯುವಾಗ ಬಿಜೆಪಿಯವರೇಕೆ ಅನವಶ್ಯಕವಾಗಿ ಧರಣಿ ಮಾಡುತ್ತಿದ್ದಾರೆ ಎಂದು ಸವದಿ ಪ್ರಶ್ನಿಸಿದ್ದಾರೆ.