ಬಜೆಟ್ ಅಧಿವೇಶನ: ‘ಎಪಿಕ್’ ವಿಷಯ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷ ಸಜ್ಜು

Most read

ನವದೆಹಲಿ: ಸಂಸತ್‌ ನ ಬಜೆಟ್ ಅಧಿವೇಶನವು ಇಂದಿನಿಂದ ಪುನರಾರಂಭವಾಗುತ್ತಿದ್ದು, ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಆರೋಪವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ವಿರೋಧ ಪಕ್ಷಗಳು ಸಜ್ಜಾಗಿವೆ.

ಜತೆಗೆ ಮಣಿಪುರದಲ್ಲಿ ಮತ್ತೆ ಮರುಕಳಿಸಿರುವ ಹಿಂಸಾಚಾರ, ಅಮೆರಿಕದ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತದ ಕೆಲವು ತೀರ್ಮಾನಗಳನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ಇರಿಸಿದ ಹೆಜ್ಜೆಗಳನ್ನು ಕೂಡ ಪ್ರಸ್ತಾಪಿಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ.

ಬಜೆಟ್‌ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು, ಮಣಿಪುರ ಬಜೆಟ್‌ಗೆ, ವಕ್ಫ್‌ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಪಡೆದುಕೊಳ್ಳುವುದು ಕೇಂದ್ರ ಸರ್ಕಾರದ ಆದ್ಯತೆಯ ಕಾರ್ಯಕ್ರಮಗಗಳಾಗಿರಲಿವೆ. ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತಂದಿರುವುದಕ್ಕೆ ಸಂಸತ್ತಿನ ಒಪ್ಪಿಗೆ ಪಡೆಯುವುದಕ್ಕೆ ಗೃಹ ಸಚಿವ ಅಮಿತ್ ಶಾ ಅವರು ನಿರ್ಣಯ ಮಂಡಿಸುವ ಸಾದ್ಯತೆಗಳಿವೆ.

ಮತದಾರರ ಗುರುತಿನ ಚೀಟಿಯಲ್ಲಿ ಇರುವ ‘ಎಪಿಕ್’ ಸಂಖ್ಯೆಗಳು ಒಂದೇ ಆಗಿರುವ ನಿದರ್ಶನಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಾಗಿ ವಿರೋಧ ಪಕ್ಷಗಳು ಹೇಳಿವೆ. ‘ಎಪಿಕ್’ ವಿಚಾರವಾಗಿ ಟಿಎಂಸಿ ನಾಯಕರು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಸೋಮವಾರ ಭೇಟಿ ಮಾಡಲಿದ್ದಾರೆ. ‘ಎಪಿಕ್’ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ಕಾಂಗ್ರೆಸ್, ಡಿಎಂಕೆ, ಶಿವಸೇನಾ (ಯುಬಿಟಿ) ಪಕ್ಷಗಳಿಗೆ ಟಿಎಂಸಿ ಮನವಿ ಮಾಡಿಕೊಂಡಿದೆ.

ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯದ ಹಲವು ಸಮಸ್ಯೆಗಳನ್ನು ಪರಿಹರಿಸಲಿರುವ ಕಾರಣಕ್ಕೆ, ಈ ಮಸೂದೆಗೆ ಸಂಸತ್ತಿನ ಒಪ್ಪಿಗೆಯನ್ನು ಆದಷ್ಟುಬೇಗ ಪಡೆದುಕೊಳ್ಳಲು ಸರ್ಕಾರ ಬಯಸಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಆದರೆ, ವಕ್ಫ್‌ ಮಸೂದೆಗೆ ಒಟ್ಟಾಗಿ ವಿರೋಧ ದಾಖಲಿಸಲು ವಿರೋಧ ಪಕ್ಷಗಳು ವ್ಯಾಪಕ ಸಮಾಲೋಚನೆ ನಡೆಸಲಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ. ಬಜೆಟ್ ಅಧಿವೇಶನದ ಮುಂದುವರಿದ ಭಾಗವು ಏಪ್ರಿಲ್‌ 4ರವರೆಗೆ ನಡೆಯಲಿದೆ.

More articles

Latest article