ಗಲಭೆಗೆ ಪ್ರಚೋದನೆ ನೀಡಿದ ವಿಪಕ್ಷ ನಾಯಕ ಅಶೋಕ್‌ ಅವರನ್ನೂ ಅಮಾನತ್ತು ಮಾಡಬೇಕು; ರಮೇಶ್‌ ಬಾಬು ಆಗ್ರಹ

Most read

ಬೆಂಗಳೂರು: 21-03-2025 ರಂದು ವಿಧಾನಸಭೆಯಲ್ಲಿ ಬಿಜೆಪಿಯ ನಿಯೋಜಿತ ಗಲಭೆ ಮತ್ತು ಸದನಕ್ಕೆ ಅಗೌರವ ತೋರಲು ಪ್ರಚೋದನೆ ನೀಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನೂ ಸಹ ತಕ್ಷಣದಿಂದ ಜಾರಿಗೆ ಬರುವಂತೆ ಸದನದಿಂದ ಅಮಾನತುಗೊಳಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗ ಅಧ್ಯಕ್ಷ, ವಿಧಾನಪರಿಷತ್‌ ಮಾಜಿ ಸದಸ್ಯ ರಮೇಶ್‌ ಬಾಬು ಅವರು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ವಿಧಾನಸಭೆಯ ಅಧಿವೇಶನದಲ್ಲಿ ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿದ ಮತ್ತು ಅಶಿಸ್ತಿನಿಂದ ನಡೆದುಕೊಂಡ ಸದಸ್ಯರನ್ನು ಅಮಾನತ್ತುಗೊಳಿಸುವ ಸಂದರ್ಭದಲ್ಲಿ ಅಶೋಕ್‌ ವಿರುದ್ಧ  ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಒಂದು ಲೋಪವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ಸದನದಲ್ಲಿ  ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ ಪ್ರಸ್ತಾವನೆಯ ಮೇಲೆ ಬಿಜೆಪಿಯ 18 ವಿಧಾನಸಭಾ ಸದಸ್ಯರನ್ನು 6 ತಿಂಗಳ ಕಾಲ ಅಮಾನತ್ತುಗೊಳಿಸಿರುವುದು ಸರಿಯಾದ ಕ್ರಮವಾಗಿರುತ್ತದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ವಿಧಾನಸಭೆಯ ಯಾವುದೇ ಸದಸ್ಯರು ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ನೀಡುವ ರೀತಿಯಲ್ಲಿ ಅಥವಾ ಅಶಿಸ್ತಿನಿಂದ ನಡೆದುಕೊಳ್ಳಲು, ಕಾರ್ಯ ಕಲಾಪಗಳಿಗೆ ದುರುದ್ದೇಶದಿಂದ ಅಡ್ಡಿಪಡಿಸಲು ಅವಕಾಶ ಇರುವುದಿಲ್ಲ. ಕರ್ನಾಟಕದ ವಿಧಾನಸಭೆಯು ಸಂಸದೀಯ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಇತರೆ ರಾಜ್ಯಗಳಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಮಾದರಿಯಾಗಿರುತ್ತದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ 24-02-2021 ರಂದು ಅಂದಿನ ಸಭಾಧ್ಯಕ್ಷರು ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಒಂದು ಆತ್ಮಾವಲೋಕನ ಕಾರ್ಯಾಗಾರವನ್ನು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಸಿದ್ದರು. ಈ ಕಾರ್ಯಾಗಾರದ ನಂತರ ಕರ್ನಾಟಕದ ಬಿಜೆಪಿ ಶಾಸಕರು ಮತ್ತು ನಾಯಕರು ಸಂಸದೀಯ ಮೌಲ್ಯಗಳನ್ನು ಹೆಚ್ಚಿಸುವಲ್ಲಿ  ಆತ್ಮಾವಲೋಕನ ಮಾಡಿಕೊಂಡಿದ್ದಾರೆಂದು ರಾಜ್ಯದ ಜನ ಭಾವಿಸಿದ್ದರು! ಆದರೆ ಹಾಗಾಗಲಿಲ್ಲ.

ಒಬ್ಬ ವಿರೋಧ ಪಕ್ಷದ ನಾಯಕರಾಗಿ ಸದನದ ಪೀಠಕ್ಕೆ ನುಗ್ಗುವಂತೆ ಪ್ರಚೋದಿಸುವ ಅವರ ಹೇಳಿಕೆ ಮಾಧ್ಯಮಗಳಲ್ಲಿ ಬಹಳ ಸ್ಪಷ್ಟವಾಗಿ ದಾಖಲಾಗಿರುತ್ತದೆ. ಸದನದ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯಬೇಕಾಗಿದ್ದ ಹಾಗೂ ಸಭಾಧ್ಯಕ್ಷರ ಪೀಠಕ್ಕೆ ಗೌರವ ನೀಡಬೇಕಾಗಿದ್ದ ಇವರೇ ನಿಯಮಗಳನ್ನು ಮೀರಿ ಇಡೀ ಘಟನಾವಳಿಗೆ ಕಾರಣಕರ್ತರಾಗಿರುತ್ತಾರೆ. ಸಧನವು ಶಿಸ್ತುಕ್ರಮದ ಪ್ರಸ್ತಾವನೆಯನ್ನು ಮಂಡಿಸುವ ಸಂದರ್ಭದಲ್ಲಿ ಇವರ ಹೆಸರನ್ನು ಪರಿಗಣಿಸದೆ ಇರುವುದು ಸರಿ ಅಲ್ಲವೆಂದು ಮತ್ತು ಲೋಪದಿಂದ ಕೂಡಿದೆ. ಆದ್ದರಿಂದ ತಾವು ವಿಧಾನಸಭೆಯ ನಡವಳಿಕೆಗಳ ನಿಯಮಾವಳಿ 348 ರ ಅಡಿಯಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಸದನದಿಂದ ಅಮಾನತುಗೊಳಿಸಬೇಕು. ಈ ಮೂಲಕ 21-03-2025 ರಂದು ಸದನ ಅಂಗೀಕರಿಸಿರುವ ಪ್ರಸ್ತಾವದಲ್ಲಿ ಆಗಿರಬಹುದಾದ ತಪ್ಪನ್ನು ಸರಿಪಡಿಸಿ, ಸದನದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯಲು ಮತ್ತು ಸದಸ್ಯರ ಅಶಿಸ್ತನ್ನು ಮೊಟಕುಗೊಳಿಸಲು ಅಶಿಸ್ತಿನಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ರಮೇಶ್‌ ಬಾಬು ಪತ್ರದಲ್ಲಿ ವಿವರಿಸಿದ್ದಾರೆ.

More articles

Latest article