ಪಟ್ನಾ: ನವಂಬರ್ ನಲ್ಲಿ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ 65 ಲಕ್ಷ ಮತದಾರರನ್ನು ಮತದಾನದಿಂದ ಹೊರಗಿಟ್ಟಿರುವ ಚುನಾವಣಾ ಆಯೋಗದ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ʼಮತ ಅಧಿಕಾರ ಯಾತ್ರೆ’ಹಮ್ಮಿಕೊಂಡಿದೆ.
ಪಕ್ಷದ ವರಿಷ್ಠ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಯಾತ್ರೆ ನಡೆಯಲಿದೆ. ನಾಳೆ ಭಾನುವಾರದಿಂದ ಸೆಪ್ಟೆಂಬರ್ 1ರವರೆಗೆ ಈ ಯಾತ್ರೆ ನಡೆಯಲಿದ್ದು, ರಾಹುಲ್ ಗಾಂಧಿ ಅವರು 15 ದಿನಗಳ ಕಾಲ ಬಿಹಾರದಲ್ಲೇ ಉಳಿದುಕೊಂಡು ಈ ಯಾತ್ರೆಯನ್ನು ಮುನ್ನೆಡೆಸಲಿದ್ದಾರೆ. ಯಾತ್ರೆಯ ಅಂತಿಮ ಬೃಹತ್ ಸಮಾವೇಶ ಪಟ್ನಾದಲ್ಲಿ ನಡೆಯಲಿದೆ.
ಬಿಹಾರದ 25 ಜಿಲ್ಲೆಗಳಲ್ಲಿ ಮತ ಅಧಿಕಾರ ಯಾತ್ರೆ ಸಾಗಲಿದೆ. ಆಗಸ್ಟ್ 20, 25 ಮತ್ತು 31ರಂದು ಯಾತ್ರೆಗೆ ಬಿಡುವು ಇರಲಿದೆ. ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆಗೆ ಬಿಹಾರ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಹಾಗೂ ಇಂಡಿಯಾ ಮೈತ್ರಿಕೂಟದ ಎಲ್ಲಾ ನಾಯಕರು ಭಾಗವಹಿಸಲಿದ್ದಾರೆ.
ರಾಹುಲ್ ಗಾಂಧಿ ಅವರು ಸಸರಾಂನಿಂದ ಯಾತ್ರೆ ಆರಂಭಿಸಲಿದ್ದಾರೆ. ಈ ಯಾತ್ರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸುತ್ತದೆ ಎಂದೂ ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಲಿದೆ.