ಆಪರೇಷನ್‌ ಸಿಂಧೂರ: ಬಿಜೆಪಿಗಿಂತ ಕಾಂಗ್ರೆಸ್‌ ದೇಶವನ್ನು ಸಮರ್ಥಿಸಿಕೊಳ್ಳುವಲ್ಲಿ ಮುಂದಿದೆ; ಪವನ್‌ ಖೇರಾ

Most read

ನವದೆಹಲಿ: ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತದ ಶೇನೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿದ ನಂತರ ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿದೇಶಗಳಿಗೆ ಕಳುಹಿಸಿರುವ ಸರ್ವ ಪಕ್ಷಗಳ ನಿಯೋಗಗಳ ಪೈಕಿ ವಿರೋಧ ಪಕ್ಷಗಳು ಹೆಚ್ಚು ಪರಿಣಾಮಕಾರಿಯಾಗಿ ಭಾರತದ ನಿಲುವನ್ನು ವ್ಯಕ್ತಪಡಿಸಿವೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಆಡಳಿತಾರೂಢ ಎನ್‌ ಡಿಎ ಪಕ್ಷದ ಸಂಸದರು ಪ್ರವಾಸಿ ತಾಣಗಳಿಗೆ ಪ್ರವಾಸ ಕೈಗೊಂಡಿದ್ದಾರೆ ಎಂದೂ ಟೀಕಿಸಿದೆ.

ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಆಡಳಿತ ಪಕ್ಷದ ಸಂಸದರಿಗಿಂತ ವಿರೋಧ ಪಕ್ಷದ ಸದಸ್ಯರು ಭಾರತದ ಹಿತಾಸಕ್ತಿಗಳನ್ನು ಬಹಳ ಪರಿಣಾಮಕಾರಿಯಾಗಿ ವಿವಿಧ ರಾಷ್ಟ್ರಗಳ ಮುಂದಿಡುತ್ತಿದ್ದಾರೆ. ಬಿಜೆಪಿ ಮತ್ತು ವಿರೋಧ ಪಕ್ಷದ ಸಂಸದರು ಹೇಗೆ ಕಾರ್ಯಪ್ರವೃತ್ತರಾಗಿದ್ದಾರೆ ಎಂಬುವುದನ್ನು ಜನರು ಗಮನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಕೆಲವು ಸಂಸದರು ಪ್ರವಾಸಿ ತಾಣಗಳಿಗೆ ಹೋಗಿ ಟ್ವೀಟ್ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಸಂಸದರು ಆಪರೇಷನ್ ಸಿಂಧೂರದ ಕಾರ್ಯಾಚರಣೆಯ ಕುರಿತು ಭಾರತದ ಅಭಿಪ್ರಾಯಗಳನ್ನು ಇತರೆ ದೇಶಗಳ ಮುಂದೆ ವ್ಯಕ್ತಪಡಿಸುವ ರೀತಿಯನ್ನು ಗಮನಿಸಿ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೆಸರನ್ನು ಉಲ್ಲೇಖಿಸದೆ ಆಡಳಿತ ಪಕ್ಷದ ವಿರುದ್ಧ ಖೇರಾ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಟ್ರೋಲ್‌ಗಳಿಂದ ಸ್ಫೂರ್ತಿ ಪಡೆಯುತ್ತಿದೆ. ಅದೇ ರೀತಿ ನಿರ್ವಹಿಸುತ್ತಿದೆ. ಪ್ರಧಾನಿ ಮಂತ್ರಿಯೇ ಟ್ರೋಲ್ ಭಾಷೆಗಳಲ್ಲಿ ಮಾತನಾಡುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಬಿಜೆಪಿ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಧಾರ್ಮಿಕ ಉನ್ಮಾದವನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ಖೇರಾ ಗಂಭೀರ ಆರೋಪ ಮಾಡಿದ್ದಾರೆ.

ಪಹಲ್ಗಾಮ್ ನಲ್ಲಿ ಭಯೋತ್ಪಾದಕರ ದಾಳಿ ಮತ್ತು ‘ಆಪರೇಷನ್ ಸಿಂಧೂರ’ದ ನಂತರ ಭಾರತವು, ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದನ್ನು ವಿಶ್ವದ ಮುಂದೆ ಪ್ರತಿಪಾದಿಸಲು ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ಸರ್ವ ಪಕ್ಷಗಳ ಸಂಸದರ ನೇತೃತ್ವದಲ್ಲಿ ನಿಯೋಗಗಳನ್ನು ವಿವಿಧ ದೇಶಗಳಿಗೆ ಕಳುಹಿಸಿಕೊಡಲಾಗಿದೆ.

More articles

Latest article