ಆಪರೇಷನ್ ಸಿಂಧೂರ್ ಮತ್ತು ಮಹಿಳೆ

Most read

ಹಿಮಾಂಶಿಯವರು ಕಾಶ್ಮೀರಿ ಮತ್ತು ಮುಸ್ಲಿಂರನ್ನು ಗುರಿಮಾಡಬೇಡಿ ಎಂಬ ಶಾಂತಿ ಸಂದೇಶ ನೀಡಿದ ಅವರ ಉದಾತ್ತತೆಯನ್ನಾಗಲಿ, ಅಥವಾ ಶಿವಮೊಗ್ಗದ ಮಂಜುನಾಥ್ ಪತ್ನಿ ಪಲ್ಲವಿಯವರು ನನ್ನ ಗಂಡನನ್ನು ಕೊಲ್ಲುವಾಗ ಆತಂಕವಾದಿಗಳು ಧರ್ಮ ಕೇಳಲಿಲ್ಲವೆಂದು ನುಡಿದ ಸತ್ಯವನ್ನಾಗಲಿ ಅನೇಕರಿಗೆ ಜಿರ್ಣಿಸಿಕೊಳ್ಳಲಾಗುತ್ತಿಲ್ಲ. ಗಂಡನಿಲ್ಲದ ತಮ್ಮ ಜೀವನ ಮುಗಿಯಿತೆಂದು ರೋಧಿಸುತ್ತಾ, ಇನ್ನು ನನಗಾರು ಎಂಬ ಧೀನತೆಯನ್ನು ವ್ಯಕ್ತಪಡಿಸುವ ರೂಢಿಗತ ವರ್ತನೆಯ ಬದಲು, ಈ ಮಹಿಳೆಯರು ದುಃಖವನ್ನು ಅದುಮಿಟ್ಟು  ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಆತ್ಮವಿಶ್ವಾಸದಿಂದ ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದು ಪಿತೃಪ್ರಧಾನ ವ್ಯವಸ್ಥೆಗೆ ವಿರುದ್ಧವಾದ ಕಾರಣ ಇದು ಅನೇಕರಿಗೆ  ಮಹಾಪರಾಧವಾಗಿ ಕಂಡಿತು ಲತಾಮಾಲಾ.

“ಶೆಲ್ ದಾಳಿಯಿಂದ ನಮ್ಮನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ತಂದೆಯು ಹೆಣವಾಗಿದ್ದಾನೆ. ಪೆಹಲ್ಗಾಮದ ಅನ್ಯಾಯಕ್ಕೆ ಮಿಷನ್ ಸಿಂಧೂರ್ ಸಾರಿದಿರಿ, ಈಗ ನಮಗೆ ನ್ಯಾಯ ಕೊಡಿಸಲು ಯಾವ ಮಿಷನ್ ಕೈಗೊಳ್ಳುತ್ತಿರಿ?” ಇದು ಪೂಂಚ್‍ನಲ್ಲಿ ಪಾಕಿಸ್ತಾನದ ಶೆಲ್ ದಾಳಿಯಲ್ಲಿ ಸತ್ತ ತಂದೆಯ ಮಗಳೊಬ್ಬಳ ಪ್ರಶ್ನೆಯಾಗಿದೆ. ಗಡಿಯಿಂದ ದೂರದ ಸುರಕ್ಷಿತ ಸ್ಥಳದಲ್ಲಿ ಬೆಚ್ಚಗೆ ಕೂತು ಯದ್ಧ ಬೇಕೆಂದು ಹಪಹಪಿಸಿದವರು ಈ ಮಗಳಿಗೆ ಉತ್ತರಿಸಬಲ್ಲರೇ? ಜಮ್ಮು ಪ್ರದೇಶದ ಪೂಂಚ್ ಮತ್ತು ರಜೋರಿ ಜಿಲ್ಲೆಗಳಲ್ಲಿ ಸುಮಾರು 13 ಜನರು ದಾಳಿಯಲ್ಲಿ ಮರಣ ಹೊಂದಿದ್ದು, ಸುಮಾರು 50ಕ್ಕೂ  ಹೆಚ್ಚು ಜನರು ಗಾಯಗೊಂಡು, ಮನೆಗಳು ಉರುಳಿವೆ ಎಂಬುದಾಗಿ ವರದಿಯಾಗಿದೆ.  ಅಳಿಸಿದ ‘ಸಿಂಧೂರ್’ಗಾಗಿ ಪ್ರತಿಕಾರ, ಪ್ರತಿಯಾಗಿ ಪ್ರತ್ಯುತ್ತರ – ಮತ್ತಷ್ಟು ವಿಧುರರು, ವಿಧವೆಯರು, ಮತ್ತು ಅನಾಥ ಮಕ್ಕಳು!!

ಮಹಿಳೆಯರೇ ಯುದ್ಧಕ್ಕೆ ಮೂಲವೆನ್ನುವ ಮಾತು ಎಷ್ಟು ದಿಟವೆಂಬುದು ಗೊತ್ತಿಲ್ಲ. ಆದರೆ, ಯುದ್ಧದ ಮೊದಲ ಬಲಿಪಶುಗಳು ಅವರೇ ಎಂಬುದಂತೂ ಖಚಿತ.  ರಾಮಾಯಣಕ್ಕೆ ರಾಮನ ಪಿತೃಭಕ್ತಿಯು ಮೂಲವಾದರೂ, ಅದರಿಂದ ಬಯಲಿಗೆ ಬರುವ ಸೀತೆಯನ್ನು ರಾಮ-ರಾವಣರ ಕದನಕ್ಕೆ ಕಾರಣ ಮಾಡಲಾಗುತ್ತದೆ. ದಾಯಾದಿ ಜಗಳ, ಆಸ್ತಿ ಪಾಲು,  ಜೂಜಿನ ಲೋಲುಪತನಕ್ಕೆ ದ್ರೌಪದಿಯನ್ನು ಪಣವಿಟ್ಟು, ಕುರುಕ್ಷೇತ್ರಕ್ಕೆ ಕಾರಣಗೊಳಿಸಿ, ಅವಳು ಅದರೊಳಗೆ ಬೇಯುತ್ತಲೇ ಬದುಕುವಂತೆ ಮಾಡಿದ ಈ ಪಿತೃಪ್ರಧಾನ ವ್ಯವಸ್ಥೆಯ ಶಾಸ್ತ್ರವಿಧಿತ ಅನುಕೂಲ ಸಿಂಧು ಗೆರೆಗಳು ಮಹಿಳೆಯನ್ನು ನಿಯಂತ್ರಿಸಲು ಹಿಂಬಾಲಿಸುತ್ತಲೇ ಇವೆ. ಬೇಕಾದಾಗ ಬಲಾತ್ಕರಿಸುವ, ಬೇಡವಾದಾಗ ಮೂಗು ಕುಯ್ಯುವ, ಅದರ ಪ್ರತೀಕಾರಕ್ಕೆ ಮತ್ತೊಬ್ಬಳನ್ನು ಹೊತ್ತೊಯ್ಯುವ, ಮತ್ತವಳನ್ನು ರಕ್ಷಿಸಲು ದಂಡು ಹೊರಡುವ ಮನಸ್ಥಿತಿಯಲ್ಲಿ ಅಂದಿಗೂ, ಇಂದಿಗೂ ಯಾವ ವ್ಯತ್ಯಾಸವೂ ಇಲ್ಲ. ಈ ಮುಂದುವರಿದ ಕಾಲಘಟ್ಟದಲ್ಲಿಯೂ ಆಪರೇಷನ್ ಸಿಂಧೂರ್‌ನಂತಹ ಗಂಭೀರ ಸಂದರ್ಭಗಳಲ್ಲಿ ಮಹಿಳೆಯರನ್ನು ಪಿತೃಪ್ರಧಾನ ಮಾನಸಿಕತೆಯು ಕಾಡುತ್ತಿರುವ ಬಗೆಯು ಆತಂಕ ಹುಟ್ಟಿಸುತ್ತದೆ.

ಹಿಮಾಂಶಿ ನರ್ವಾಲ್‌

ಯುದ್ಧವೇ ಆಗುತ್ತಿದೆ ಎಂಬ ಭ್ರಮೆಯಲ್ಲಿ ಮಜವನ್ನು ಆನಂದಿಸುತ್ತಿದ್ದ ಈ ಪಿತೃಪ್ರಧಾನ ವ್ಯವಸ್ಥೆಯ ಠೇಕೆದಾರರ ಟ್ರೋಲ್ ಮುಂದುವರೆದು ಮತ್ತೊಂದು ಹಂತಕ್ಕೆ ಕುಸಿಯುತ್ತದೆ. ಕದನವಿರಾಮದ ಸುದ್ದಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರನ್ನು ದೇಶದ್ರೋಹಿ, ಗದ್ದಾರ್ ಎಂದೆಲ್ಲಾ ಹೀಯಾಳಿಸಿ, ಮತ್ತೂ ಸಮಾಧಾನವಿಲ್ಲದ ಟ್ರೋಲಿಗರು ಅವರ ಮಗಳ ಚಾರಿತ್ರ್ಯವಧೆಗೂ ಇಳಿಯುತ್ತಾರೆ. ಮಿಸ್ರಿಯವರು ಸರ್ಕಾರದ ತೀರ್ಮಾನವನ್ನು ಜನತೆಗೆ ತಿಳಿಸುವ ತಮ್ಮ ಕರ್ತವ್ಯವನ್ನು ಪಾಲಿಸಿದ್ದರಷ್ಟೇ. ಆದರೆ, ಅವರು ಜಮ್ಮು-ಕಾಶ್ಮೀರದ ಮೂಲದವರು ಅನ್ನುವುದೇ ಈ ಟ್ರೋಲ್‌ಗೆ ಕಾರಣವಾಗುತ್ತದೆ. ಯಾವುದೇ ಜಗಳದಲ್ಲಿಯೂ ಸರ್ವೆಸಾಮಾನ್ಯವಾಗಿ ಅನೇಕ ಗಂಡಸರು ತನ್ನ ಎದುರಾತನನ್ನು ಹೀನಾಯವಾಗಿ ನಿಂದಿಸಲು ಘಟನೆಗೆ ಸಂಬಂಧವೇ ಇರದ ಆತನ ಅಮ್ಮ, ಅಕ್ಕ, ತಂಗಿ, ಮಗಳು, ಹೆಂಡತಿಯನ್ನು ಕೊಳಕು ಮಾತುಗಳಿಂದ ಎಳೆತಂದು ತಮ್ಮ ಪುರುಷತನದ ಗರಿಮೆಯನ್ನು ಮೆರೆಯುವ ಭಂಡತನದಂತೆ ಇಲ್ಲಿಯೂ ಅಧಿಕಾರಿಗಳ ತಂಗಿಯನ್ನು ಗುರಿಮಾಡಲಾಗುತ್ತದೆ.  ಒಬ್ಬ ಪುರುಷನ ಘನತೆಗೌರವಗಳ ಅಪವಾದವನ್ನು  ಆತನ ಕುಟುಂಬದ ಹೆಣ್ಣುಗಳು ಹೊರಬೇಕೆಂಬ ಇರಾದೆ ಇದಾಗಿದೆ. ಅತ್ಯಂತ ಹಿರಿಯ ಅಧಿಕಾರಿ ಮನೆಯ ಮಹಿಳೆಯೂ ಸಹ ಪುರುಷರ ಇಂತಹ ಕೀಳು ಮಾನಸಿಕತೆಯಿಂದ ಇಂದಿಗೂ ತಪ್ಪಿಸಿಕೊಳ್ಳಲಾಗಿಲ್ಲ. ಯುದ್ಧಗಳಲ್ಲಿ ಗೆದ್ದವರೂ ಸಹ ಮೊದಲು ಅರಸಿ ಹೋಗುವುದು ಶತ್ರು ಕುಟುಂಬದ ಮಹಿಳೆಯರನ್ನು; ಅವರನ್ನು ಬಲಾತ್ಕರಿಸುವುದು, ಲಿಂಗಸಂಕೇತ ಅಂಗಗಳನ್ನು ಕತ್ತರಿಸುವುದು, ಅಥವಾ ಎಳೆದೊಯ್ದು ವೇಶ್ಯಾಗೃಹಕ್ಕೆ ತಳ್ಳಿರುವಂತಹ ಕ್ರೌರ್ಯಕ್ಕೆ ಇತಿಹಾಸ ಸಾಕ್ಷಿಯಾಗಿದೆ.

ಇದೇ ಸಮಯದಲ್ಲಿ, ಬಚ್ಚಲುಬಾಯಿ ಎನಿಸಿಕೊಂಡ ನಾಯಕರ ಹೇಳಿಕೆಯೊಂದು ಲೆ.ಕರ್ನಲ್ ಸೋಫಿಯಾ ಖುರೇಶಿಯವರ ಕುರಿತಾಗಿ ಕೇಳಿಬರುತ್ತದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮಾಹಿತಿ ನೀಡಲು  ಕ. ಸೋಫಿಯಾರನ್ನು ಮತ್ತು  ವ್ಯೋಮಿಕಾ ಸಿಂಗ್ ಎಂಬ ವಾಯುಪಡೆ ಅಧಿಕಾರಿಯನ್ನು ಸೇನೆಯು ತನ್ನ ವಕ್ತಾರರಾಗಿ  ನಿಯೋಜಿಸಿದ್ದು ಸರಿಯಷ್ಟೆ. ಆತಂಕವಾದಿಗಳು ಭಾರತದೊಳಗೆ ಕೋಮುಗಲಭೆ ಸೃಷ್ಟಿಸಿ ಆಂತರಿಕ ಒಡಕು ಮೂಡಿಸುವ ಉದ್ದೇಶದಿಂದ ಧರ್ಮವನ್ನು ಕೇಳಿ, ಹಿಂದೂ ಪುರುಷರನ್ನು ಹತ್ಯೆಗೈದ  ಹಿನ್ನೆಲೆಯಲ್ಲಿ ಈ ಇಬ್ಬರು ಮಹಿಳಾ ಅಧಿಕಾರಿಗಳನ್ನು (ಒಬ್ಬರು ಮುಸ್ಲಿಂ ಮತ್ತೊಬ್ಬರು ಹಿಂದೂ) ಹಿಂದೂ-ಮುಸ್ಲಿಂ ಒಗ್ಗಟ್ಟಿನ ಪ್ರತೀಕವಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮಾಹಿತಿ ನೀಡಲು ಆಯ್ಕೆ ಮಾಡಿರಬಹುದು ಎಂಬುದು ಜನರ ಭಾವನೆಯಾಗಿತ್ತು. ಬಹುಶಃ ಸೇನೆಯ ಉದ್ದೇಶ ಇದೇ ಆಗಿದ್ದಿರಬಹುದು. ಆದರೆ, ಮಧ್ಯಪ್ರದೇಶದ ಬಿಜೆಪಿ ಹಿರಿಯ ಸಚಿವ ಕುನ್ವರ್ ವಿಜಯ್ ಶಾ ಅವರ ಅತ್ಯಂತ ಕೀಳು ಮಟ್ಟದ ಹೇಳಿಕೆಯು ಬೇರೆಯದನ್ನೇ ಸೂಚಿಸುತ್ತದೆ. ಈ ಮಹಾಶಯರು ತಮ್ಮದೊಂದು ಭಾಷಣದ ನಡುವೆ, ‘ನಮ್ಮ ಸಹೋದರಿಯನ್ನು ವಿಧವೆ ಮಾಡಿದ ನಿಮಗೆ ತಕ್ಕ ಪಾಠ ಕಲಿಸಲು ನಿಮ್ಮದೇ ಸಮುದಾಯದ ಸಹೋದರಿಯನ್ನು ಮೋದಿಯವರು ಕಳಿಸಿದರು’ ಎಂದು ರೋಷಾವೇಷದಿಂದ ಗುಡುಗಿರುತ್ತಾರೆ. ಅಂದರೆ ಸೋಫಿಯಾರವರು ಮುಸ್ಲಿಂ ಆದ ಕಾರಣ, ಅವರು ಆತಂಕವಾದಿಗಳ ಸಹೋದರಿ ಎಂಬ ಅರ್ಥದಲ್ಲಿ ಬಳಸಿದ್ದು, ಅವರ ಅಹಂಕಾರವನ್ನು ಮುರಿಯಲು ಮತ್ತು ಪೆಹಲ್ಗಾಮ್ ದಾಳಿಗೆ ಪ್ರತೀಕಾರವನ್ನು ಅವರದೇ ಧರ್ಮದ ಒಂದು ಯಕಶ್ಚಿತ್ ಹೆಂಗಸಿನ ಮೂಲಕ ಉತ್ತರ ನೀಡಿದ್ದೇವೆ ಎಂಬರ್ಥದ ಹೀನಾಯ ಹೇಳಿಕೆ ಇದಾಗಿದೆ. ಮನೆಯ ಸೊಸೆಯನ್ನು ಮುಂದಿಟ್ಟುಕೊಂಡು, ಅವಳ ತವರಿನವರನ್ನು ಹಿಂಸಿಸುವ ಮಾನಸಿಕತೆ ಇದಾಗಿದೆ. 

ಲೆ. ಕರ್ನಲ್‌ ಸೋಫಿಯಾ ಖುರೇಷಿ

ಇಲ್ಲಿ ಸೋಫಿಯಾರವರ ವೃತ್ತಿಪರತೆ, ಅನುಭವ, ಕ್ಷಮತೆ ಮತ್ತವರ ಅಧಿಕಾರ ಯಾವುದಕ್ಕೂ ಮನ್ನಣೆ ಇಲ್ಲದಂತೆ, ಕೇವಲ ಧರ್ಮ ಮತ್ತು ಲಿಂಗದ ಆಧಾರದ ಮೇಲೆ ಅವರ ಯೋಗ್ಯತೆಯನ್ನು ಗುರುತಿಸಿ ವಕ್ತಾರಿಕೆಯ ಜವಾಬ್ದಾರಿ ನೀಡಲಾಗಿತ್ತು ಎಂಬಂತೆ ಬಿಂಬಿಸುವ ಈ ಹೇಳಿಕೆಯು ಸಚಿವರ ತುಕ್ಕುಹಿಡಿದ ಕೋಮುವಾದಿ-ಲಿಂಗಾಧಾರಿತ ಮನೋಭಾವದ ಕನ್ನಡಿಯಾಗಿದೆ. ಇದು ಸೇನೆಯ ಮಹತ್ವದ ತೀರ್ಮಾನವನ್ನು ಅವಮಾನಿಸುವುದಷ್ಟೇ ಅಲ್ಲ,  ಇಡೀ ದೇಶಕ್ಕೆ ಕಳಂಕ ತರುವ ಅತಿ ಅಗ್ಗದ ಹೇಳಿಕೆಯಾಗಿದೆ. ಈ ಸಚಿವರ ಪಿತೃಪ್ರಧಾನ ಕೋಮುವಾದಿ ಮನಸ್ಸು ಸೋಫಿಯಾರವರನ್ನು ಭಾರತೀಯ ಸೇನೆಯ ಜವಾಬ್ದಾರಿಯುತ ಅಧಿಕಾರಿಯಾಗಿ ಗುರುತಿಸಲು ಒಪ್ಪುವುದಿಲ್ಲ, ಬದಲಿಗೆ ಅವರಲ್ಲಿ ಮುಸ್ಲಿಂ ಮಹಿಳೆಯನ್ನು ಕಾಣುತ್ತದೆ. ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಇವರ ವಿರುದ್ಧ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ತಕ್ಷಣವೇ ಈ ವ್ಯಕ್ತಿಯ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಆದೇಶ ನೀಡಿದೆ. ಮಹಾಶಯರು ಈಗ ಕ್ಷಮೆ ಯಾಚಿಸಿದ್ದು, ಅದನ್ನು ಸುಪ್ರಿಂ ಕೋರ್ಟ್ ತಿರಸ್ಕರಿಸಿದೆ ಮತ್ತು  ವಿಶೇಷ ತನಿಖಾ ತಂಡವನ್ನು ರಚಿಸಿ ಇವರ ಎಫ್‍ಐಆರ್ ಕುರಿತು ತನಿಖೆ ನಡೆಸಲು ಆದೇಶಿಸಿದೆ. ಇಷ್ಟೆಲ್ಲಾ ನಡೆದರೂ ಬಿಜೆಪಿಯು ಈ ಬಗ್ಗೆ ಮರಣಮೌನ ವಹಿಸಿದ್ದು, ಇವರ ಸಚಿವ ಸ್ಥಾನವನ್ನು ಮುಂದುವರೆಸಿದೆ!

ಸಮಾಜವು ವ್ಯಕ್ತಿಗಳಿಗೆ ಲಿಂಗಾಧಾರಿತವಾದ ಪಾತ್ರ ಮತ್ತು ಜವಾಬ್ದಾರಿಯನ್ನು ನಿಗದಿಸಿದೆ. ಅದರಂತೆ ಅಯಾ ಲಿಂಗಿಗಳು ತಮ್ಮ ವರ್ತನೆ, ನಡವಳಿಕೆ, ಉಡುಗೆ ತೊಡುಗೆ, ಸಂವಹನ ಮತ್ತು ರೂಢಿಗಳ ಮೂಲಕ ತಮ್ಮ ಪಾತ್ರವನ್ನು ನಿರ್ವಹಿಸುವಂತೆ ಬಯಸುತ್ತದೆ.  ಹೆಣ್ಣು ಅತಿ ಭಾವುಕಳು, ನವಿರು ಮನಸ್ಸಿನವಳು, ಕೋಮಲ ಶರೀರೆ, ಮಮತಾಮಯಿ, ಅಬಲೆ ಎಂಬಿತ್ಯಾದಿ  ಊಹೆಗಳ ಆಧಾರದಲ್ಲಿ ಅವಳು ಜೀವನ ಪೂರ್ತಿ ಪುರುಷನ (ತಂದೆಯ, ಗಂಡನ, ಮತ್ತು ಗಂಡು ಮಕ್ಕಳ) ರಕ್ಷಣೆಯಲ್ಲಿರಬೇಕೆಂಬ ಸಾಮಾಜಿಕ ನಿಯಮವನ್ನು ಹೇರಿದೆ. ಈ ನಿಯಮಗಳ ಅಳವಡಿಕೆಯು ಹುಟ್ಟಿನಿಂದಲೇ  ವ್ಯಕ್ತಿಯ ದೈನಂದಿನ ಕಲಿಕಾ ವ್ಯವಸ್ಥೆಯ ಭಾಗವಾಗಿದ್ದು,  ವ್ಯಕ್ತಿ ಮತ್ತು ಸಮಾಜದ ಭಾವದೊಳಗೆ ಬೇರಿಳಿಸಿದೆ.  ಆದ್ದರಿಂದಲೇ ಮಹಿಳೆಯನ್ನು ಒಂದು ವ್ಯಕ್ತಿಯಾಗಿ ನೋಡದೆ, ತಮ್ಮ ಅನುಕೂಲಕ್ಕಾಗಿ ಹೇರಿದ ನಿಯಮಗಳನುಸಾರ ಅವಳನ್ನು ಪುರುಷನ/ಸಮಾಜದ ಆಸ್ತಿಯಂತೆ ಭಾವಿಸಲಾಗಿದೆ. ಅದಕ್ಕಾಗಿಯೇ ಭೂಮಿ, ದೇಶ, ಒಡವೆಯಂತೆ ಅವಳನ್ನೊಂದು ಆಸ್ತಿಯಾಗಿ ರಕ್ಷಿಸುವ ವಿಚಾರವು ಬೆಳೆದು ಬಹು ಸಾಮಾನ್ಯವೆಂಬಂತೆ ಒಪ್ಪಿತ ವಿಷಯವಾಗಿದೆ.

ನನ್ನ ತಾಯಿ ನಮ್ಮನ್ನು (ನಾನು ಮತ್ತು ಅಕ್ಕಂದಿರು) ಶಾಲೆಗೆ ಸೇರಿಸಲು ತಿರ್ಮಾನಿಸಿದಾಗಲೆಲ್ಲಾ ಹತ್ತಿರದ ಹಿರಿಯ ಸಂಬಂಧಿಗಳು ‘ಹೆಣ್ಣು ಮಕ್ಕಳು ಚಿನ್ನವಿದ್ದಂತೆ, ಅದನ್ನು ಪೆಟ್ಟಿಗೆಯಲ್ಲಿಟ್ಟು ಜೋಪಾನ ಮಾಡದೆ, ಬೀದಿಗಿಟ್ಟು ಕಳ್ಳರಿಗೆ ಹಾದಿ ಮಾಡಿದ್ದಿಯಾ’ ಎಂದು ಬೈಯ್ಯುತ್ತಿದ್ದರಂತೆ. ಈಗ, ನನ್ನ ಪರಿಚಯಸ್ಥರು ತಮ್ಮ ಮಗಳ ಮದುವೆ ಸಂದರ್ಭದಲ್ಲಿ, ಅವರ ಬೀಗರಿಗೆ ಮಗಳ ಕುರಿತಾಗಿ ಹೇಳುತ್ತಾ  ‘ಮಗಳನ್ನು ಜೋಪಾನವಾಗಿ ಬಂಗಾರದಂತೆ ಬೆಳೆಸಿದ್ದೆವೆ, ಕತ್ತಲಾಗುವುದರೊಳಗೆ ಮನೆ ಸೇರಿಬಿಡುವ ಅಭ್ಯಾಸ ಮಾಡಿಸಿದ್ದೇವೆ’ ಎಂದರು; ಭಾಷೆ ಬದಲಾಗಿದೆ, ಭಾವ ಬದಲಾಗಿಲ್ಲ ಅಷ್ಟೇ! ಮಹಿಳೆಯನ್ನು ಒಂದು ವ್ಯಕ್ತಿಯನ್ನಾಗಿ ಗುರುತಿಸದೆ, ಒಂದು ವಸ್ತುವಾಗಿ ನೋಡಿದಾಗ, ಅವಳ ಕುರಿತಾಗಿ ನೀಡುವ ಸಂದೇಶ, ಸಂಕೇತ, ಕ್ರಿಯೆ ಎಲ್ಲವೂ ರಕ್ಷಣೆ ಅಥವಾ ನಾಶವನ್ನು ಬಯಸುವ ಪಿತೃಪ್ರಧಾನತೆಯ ಅಲೋಚನೆಗಳೇ ಆಗಿರುತ್ತವೆ. ಅಂದರೆ ನಮ್ಮ ಮಹಿಳೆಯರು ನಮ್ಮ ವಸ್ತು, ಹಾಗಾಗಿ ಅವರ ರಕ್ಷಣೆ ಮುಖ್ಯ, ಅಂತೆಯೇ ಶತ್ರುವಿನ ಮಹಿಳೆಯರು ಅವರ ವಸ್ತುವಾದ ಕಾರಣ ಅವರನ್ನು ನಾಶ ಮಾಡಬಹುದು ಎನ್ನುವ ವಿಚಾರವಾಗಿದೆ. 

ಮಹಿಳೆ ಮತ್ತು ಪುರುಷರ ಪಾತ್ರಗಳನ್ನು ಸಮಾಜವು ಇಂತಹ ಅನೇಕ ನಿರ್ದೇಶಿತ ನಿಯಮಗಳಿಂದ ನಿರ್ಧರಿಸಿದ್ದು, ಪ್ರತಿಯೊಬ್ಬರ ಜೀವನದ ಪ್ರತಿ ಕ್ಷಣದಲ್ಲೂ ಅದರ ಅಳವಡಿಕೆಗಳು ನಿರಂತರ ನಡೆದು, ಇವು ವಂಶವಾಹಿಗಳೇನೋ ಎಂಬಷ್ಟೆ ಬಹು ಪ್ರಖರವಾಗಿ ವ್ಯಕ್ತಿಯ ಭಾವನೆ ಮತ್ತು ನಡವಳಿಕೆಗಳನ್ನು ಒಂದು ಪಿಳಿಗೆಯಿಂದ ಮತ್ತೊಂದು ಪಿಳಿಗೆಯನ್ನು ಪ್ರಭಾವಿಸುತ್ತಾ, ವ್ಯಕ್ತಿಗಳು ಅದರಂತೆ ತಮ್ಮ  ಪಾತ್ರಗಳನ್ನು ರೂಪಿಸಿಕೊಳ್ಳುವಂತೆ ಪ್ರಭಾವಿಸುತ್ತವೆ. ಇವು ಬಹು ಆಳವಾಗಿ ಬೇರಿಳಿದ ವ್ಯವಸ್ಥೆಯಾಗಿದ್ದು, ಈ ಸಂಪ್ರದಾಯವಾದಿ ವಿಚಾರಗಳಿಗಿಂತ  ಭಿನ್ನ  ವಿಚಾರಗಳು ಸತ್ಯವಾದರೂ ಅಷ್ಟು ಸುಲಭಕ್ಕೆ ಜೀರ್ಣವಾಗುವುದಿಲ್ಲ.

ಮಹಿಳೆಯರ ರಕ್ಷಣೆ ಎಂಬ ವಿಚಾರದಲ್ಲಿ ತಪ್ಪೇನಿದೆ ಎಂಬ ಪ್ರಶ್ನೆ ಸಹಜವಾಗಿದೆ.  ರಕ್ಷಣೆ ಒಳ್ಳೆಯದೇ, ಅದು ಎಲ್ಲರಿಗೂ ಬೇಕಿದೆ; ಮುಖ್ಯವಾಗಿ ಮಕ್ಕಳಿಗೆ ಇದರ ಅಗತ್ಯವಿದೆ. ಆದರೆ, ಪಿತೃಪ್ರಧಾನ ವ್ಯವಸ್ಥೆಯು ಮಹಿಳೆಯ ವ್ಯಕ್ತಿತ್ವ ಬೆಳವಣಿಗೆ, ಸಾಮರ್ಥ್ಯ, ಅವಕಾಶಗಳನ್ನು ನಿರ್ಬಂಧಿಸುತ್ತದೆ. ಅವಳನ್ನು ವಸ್ತುವಿನ ಸ್ಥಾನಕ್ಕೆ ಸೀಮಿತಗೊಳಿಸಿ, ವ್ಯಕ್ತಿತ್ವಕ್ಕೆ ಕಡಿವಾಣ ಹಾಕುವ ಮೂಲಕ ಸಂಪೂರ್ಣ ಹಿಡಿತ ಸಾಧಿಸಲು ಪ್ರಯತ್ನಿಸುತ್ತದೆ. ಈಗಾಗಲೇ ಆಗಿರುವಂತೆ, ಮಹಿಳೆಯರ ಮೇಲಿನ ಹಿಂಸೆಯನ್ನು ಸಾಮಾನ್ಯೀಕರಿಸುವ ಮತ್ತು ಸಹಿಸುವ ಸಂಸ್ಕೃತಿಯನ್ನು ಬೆಳೆಸುವ ಕಾರಣ ಇಂದು ಮಹಿಳೆಯರೂ ಸಹ ಮಹಿಳೆಯರ ಪರವಾಗಿ ನಿಲ್ಲದಂತಾಗಿದೆ.

ನಿಜಕ್ಕೂ ಮಹಿಳೆ ಕೋಮಲ ಶರೀರದವಳೇ, ಸೂಕ್ಷ್ಮಳೇ, ಭಾವುಕಳೇ? ಅಲ್ಲವೆನ್ನುತ್ತವೆ ಹಲವು ಸಂಶೋಧನೆಗಳು. ಹೆಚ್ಚಿನಂಶ ಮಹಿಳೆಯರು ತಂದೆ, ಗಂಡ, ಮಗ, ಮಾವ ಅತ್ತೆಯರಿಂದ ಪ್ರತಿದಿನ ಹೊಡೆತ ತಿನ್ನುವುದು, ಮಾನಸಿಕ ಜರ್ಜರತೆಯ ಬದುಕಿನಲ್ಲಿ ಮಕ್ಕಳನ್ನು ಹೆರುವ, ಹೊಟ್ಟೆಬಟ್ಟೆಗೆ ದುಡಿಯುವ ಜೊತೆಗೆ ಇನ್ನಿಲ್ಲದ ಸಾಮಾಜಿಕ ಒತ್ತಡಗಳನ್ನು ಸಹಿಸಿಕೊಂಡು ಗಟ್ಟಿಗರಾಗಿ ಪುರುಷರಷ್ಟೇ ಅಥವಾ ಅದಕ್ಕೂ ಹೆಚ್ಚು ವರ್ಷಗಳು ಬದುಕುತ್ತಿರುವುದನ್ನು ಕಾಣುತ್ತಿದ್ದೇವೆ. ದೈಹಿಕವಾಗಿ, ಪುರುಷರು ಹೆಚ್ಚಿನ ಸ್ನಾಯು ದ್ರವ್ಯರಾಶಿಯನ್ನು ಹೊಂದಿದ್ದರೂ, ಒಟ್ಟು ದೇಹದ ಸಂಯೋಜನೆಗೆ ಅನುಗುಣವಾಗಿ ಬಲವನ್ನು ಸರಿಹೊಂದಿಸಿದಾಗ ದೈಹಿಕ ವ್ಯತ್ಯಾಸಗಳೂ ಸಹ ಕಡಿಮೆ ಎನ್ನುತ್ತದೆ ವಿಜ್ಞಾನ.  ಮಹಿಳೆಯರು ಹೆಚ್ಚಿನ ನೋವನ್ನು ಸಹಿಸಬಲ್ಲ ಮತ್ತು ಸಂಕಷ್ಟ ಸ್ಥಿತಿಯಲ್ಲಿ ಬದುಕುಳಿಯುವ ಸಾಮರ್ಥ್ಯ ಹೊಂದಿದ್ದಾರೆನ್ನುವುದು ಮತ್ತೊಂದು ವಾಸ್ತವ ಸಂಗತಿ. ಸಂತಾನೋತ್ಪತ್ತಿ ಅಂಗಗಳು, ಹಾರ್ಮೋನುಗಳು, ಮೂಳೆ ಮತ್ತು ಸ್ನಾಯುಗಳಲ್ಲಿ ಕೆಲ ನೈಸರ್ಗಿಕ ಭಿನ್ನತೆಗಳು ಇದ್ದು,  ಉಳಿದೆಲ್ಲಾ ವ್ಯತ್ಯಾಸಗಳು, ವರ್ತನೆ, ನಡವಳಿಕೆ, ಭಾವನೆ ನಾವೇ ನಿಗದಿಸಿಕೊಂಡ ನಿಯಮಗಳಾಗಿವೆ – ಅಂದರೆ ನಾವೇ ಬಿಟ್ಟುಕೊಂಡ ತಲೆಯ ಹುಳುಗಳು ಅಷ್ಟೆ. ಒಟ್ಟಾರೆ, ಗಂಡು ಮತ್ತು ಹೆಣ್ಣು ಅಥವಾ ತೃತಿಯ ಲಿಂಗಿಗಳೆಲ್ಲರೂ ವಿಶಿಷ್ಟವಾದ ದೈಹಿಕ ಮತ್ತು ಭಾವನಾತ್ಮಕ ಸಾಮರ್ಥ್ಯಗಳನ್ನು ಹೊಂದಿದ್ದು, ಅವು ವ್ಯಕ್ತಿಯ ಸ್ಥಿತಿಸ್ಥಾಪಕತೆ ಮತ್ತು ಸಾಮರ್ಥ್ಯಕ್ಕೆ ಸಮಾನ ಕೊಡುಗೆ ನೀಡುತ್ತವೆ ಎಂಬುದು ಮುಖ್ಯವಾಗಿದೆ.

ಲತಾಮಾಲಾ

ಲೇಖಕರು

ಇದನ್ನೂ ಓದಿ- ಯುದ್ಧದ ದಿನಗಳಲ್ಲಿ ಸೂರ್ಯೋದಯವಾಗುವುದಿಲ್ಲ..

More articles

Latest article