ಶ್ರೀನಗರ: ಪಾಕಿಸ್ತಾನ ಪ್ರಾಯೋಜಿತ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಉಗ್ರ ಸಂಘಟನೆಗಳ ಒಂಬತ್ತು ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಎಂಬ ಸೇನಾ ಕಾರ್ಯಾಚರಣೆಯನ್ನು ನಡೆಸಿದೆ. ಇದರ ಪರಿಣಾಮ ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ಉದ್ದಕ್ಕೂ ಉದ್ವಿಗ್ನತೆ ಹೆಚ್ಚಿರುವ ಪರಿಣಾಮ ಜಮ್ಮು, ಸಾಂಬಾ, ಕಥುವಾ, ರಜೌರಿ ಮತ್ತು ಪೂಂಚ್ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಪಾಕಿಸ್ತಾನದ ಮೇಲೆ ಭಾರತದ ದಾಳಿಯ ನಂತರ ಜಮ್ಮು ಮತ್ತು ಕಾಶ್ಮೀರ, ಅಮೃತಸರ, ಚಂಡಿಗಢ, ಧರ್ಮಶಾಲಾ, ಲೇಹ್ ನ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ವಿಮಾನಯಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ. ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾರು ಏನೆಂದರು?
ಪಹಲ್ಗಾಮ್ ದಾಳಿಯಲ್ಲಿ ಮೃತರಾದ ಕರ್ನಾಟಕದ ಮಂಜುನಾಥ್ ರಾವ್ ಅವರ ತಾಯಿ ಸುಮತಿ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗನ ತ್ಯಾಗ ವ್ಯರ್ಥವಾಗಲಿಲ್ಲ ಎಂದಿದ್ದಾರೆ.
ಉಗ್ರರ ದಾಳಿಯಲ್ಲಿ ಮೃತರಾದ ಬೆಂಗಳೂರಿನ ಭರತ್ ಭೂಷಣ್ ಸಹೋದರ ಪ್ರೀತಮ್, ‘ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿರಿಸಿಕೊಂಡಿರುವುದರಿಂದ ನಾವು ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದಿದ್ದಾರೆ.
ಮೃತ ಉದ್ಯಮಿ ಶುಭಂ ದ್ವಿವೇದಿ ಅವರ ಪತ್ನಿ ಮಾತನಾಡಿ, ನನ್ನ ಪತಿಯ ಸಾವಿಗೆ ಕಾರಣರಾದವರ ವಿರುದ್ಧ ಪ್ರತೀಕಾರ ತೀರಿಸಿದ್ದಕ್ಕೆ ಕೇಂದ್ರ ಸರಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಈ ದಾಳಿ ನನ್ನ ಪತಿಯ ಸಾವಿಗೆ ಸಿಕ್ಕ ಗೌರವಾಗಿದೆ. ಅವರು ಎಲ್ಲಿದ್ದರೂ ಅವರಿಗೆ ಇಂದು ಶಾಂತಿ ದೊರಕಿದೆ ಎಂದು ತಿಳಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಮೃತಪಟ್ಟ ಪುಣೆಯ ಸಂತೋಷ್ ಜಗದಲೆ ಅವರ ಪುತ್ರಿ ಪ್ರತಿಕ್ರಿಯಿಸಿ ‘ಆಪರೇಷನ್‌ನ ಹೆಸರು ಕೇಳಿ ಅತೀವ ಸಂತೋಷದಿಂದ ಕಣ್ಣೀರು ಸುರಿಸಿದ್ದೇನೆ. ಉಗ್ರರ ಗುಂಡಿಗೆ ಬಲಿಯಾದವರಿಗೆ ಇಂದು ನ್ಯಾಯ ಸಿಕ್ಕಂತಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ನೌಕಾಪಡೆ ಅಧಿಕಾರಿ ವಿನಯ್ ನರ್‌ವಾಲ್ ಅವರ ತಾಯಿ ಆಶಾ ನರ್‌ವಾಲ್ ಮಾತನಾಡಿ, ಈ ದಾಳಿ ಹೀಗೆಯೇ ಮುಂದುವರೆಯಬೇಕು ಮತ್ತು ಮುಂದುವರೆಸಿ ಎಂದು ಸಶಸ್ತ್ರ ಪಡೆಗಳಿಗೆ ಹೇಳುತ್ತೇನೆ, ಪಹಲ್ಗಾಮ್‌ನಲ್ಲಿ ಜೀವತೆತ್ತ ಪ್ರತಿಯೊಬ್ಬರಿಗೂ ಇಂದು ನ್ಯಾಯ ಸಿಕ್ಕಿದೆ ಎಂದಿದ್ದಾರೆ. ವಿವಾಹವಾದ ನಂತರ ಪತ್ನಿ ಹಿಮಾಂಶಿಯೊಂದಿಗೆ ವಿನಯ್ ಹನಿಮೂನ್ ಗೆ ತೆರಳಿದ್ದರು. ಆಗ ವಿನಯ್ ಉಗ್ರರ ಗುಂಡೇಟಿಗೆ ಸಿಲುಕಿ ಮೃತಪಟ್ಟಿದ್ದರು. ಮದುವೆಯಾದ ಆರು ದಿನಕ್ಕೆ ಪತಿಯನ್ನು ಕಳೆದುಕೊಂಡ ಹಿಮಾಂಶಿ ಮೃತದೇಹದ ಪಕ್ಕ ಮೂಕಳಾಗಿ ಕುಳಿತಿದ್ದ ಫೋಟೊ ಇಡೀ ದೇಶದ ಜನರ ಮನ ಕಲಕಿತ್ತು.