ಡೆಹ್ರಾಡೂನ್: ಆರಂಭದಲ್ಲಿ ಆಪರೇಷನ್ ಸಿಂದೂರ್ ಕಾರ್ಯಾಚರಣೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಉತ್ತರಾಖಂಡ್ ಪ್ರದೇಶ ಕಾಂಗ್ರೆಸ್ ಟೀಕಿಸಿದೆ.
ಆಪರೇಷನ್ ಸಿಂದೂರ್ ಹೆಸರಿನಲ್ಲಿ ಬಿಜೆಪಿ ಆರಂಭಿಸಿರುವ ‘ತಿರಂಗ ಯಾತ್ರೆ’ಯನ್ನು ಪ್ರದೇಶ ಕಾಂಗ್ರಸ್ ಕಟುವಾಗಿ ಟೀಕಿಸಿದೆ. ಬಿಜೆಪಿ ಯಾತ್ರೆಗೆ ಪ್ರತಿಕ್ರಿಯಿಸಿದ ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ್ ಧಸ್ಮಣ, ಗಡಿಯಲ್ಲಿ ಮತ್ತು ಗಡಿಯಾಚೆಗಿನ ಶತ್ರುಗಳ ವಿರುದ್ಧ ಸೇನೆಯು ಸಕ್ರಿಯವಾಗಿ ಹೋರಾಡುತ್ತಿದ್ದಾಗ ಕಾಂಗ್ರೆಸ್ ಪಕ್ಷವು ಬಿಜೆಪಿಗಿಂತ ಮೊದಲು ದೇಶಾದ್ಯಂತ ತಿರಂಗ ಯಾತ್ರೆಗಳನ್ನು ನಡೆಸಿತ್ತು ಎಂದು ಹೇಳಿದ್ದಾರೆ.
ಸೈನಿಕರ ಮನೋಸ್ಥೈರ್ಯವನ್ನು ಹೆಚ್ಚಿಸುವ ಮತ್ತು ಸಂಪೂರ್ಣ ರಾಷ್ಟ್ರೀಯ ಬೆಂಬಲವನ್ನು ಪ್ರದರ್ಶಿಸುವ ಗುರಿಯನ್ನು ಮಾತ್ರ ಅಂತಹ ಯಾತ್ರೆಗಳು ಹೊಂದಿವೆ. ರಾಜ್ಯ ರಾಜಧಾನಿ ಡೆಹ್ರಾಡೂನ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಇಂತಹ ತಿರಂಗಾ ಜೈ ಹಿಂದ್ ಯಾತ್ರೆಗಳನ್ನು ನಡೆಸುವ ಮೂಲಕ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕರ್ತವ್ಯವನ್ನು ಪೂರೈಸಿದ್ದಾರೆ ಎಂದಿದ್ದಾರೆ.
ಜನರ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆಗೆ ಬಿಜೆಪಿ ಮತ್ತು ದೇಶದ ಪ್ರಧಾನ ಮಂತ್ರಿ ಉತ್ತರಿಸಬೇಕು. ಭಾರತದ ಭದ್ರತೆ, ಸ್ವರಕ್ಷಣೆ ಮತ್ತು ಸಾರ್ವಭೌಮತ್ವವನ್ನು ನಿರ್ಧರಿಸುವ ಹಕ್ಕನ್ನು ಅಮೆರಿಕಕ್ಕೆ ಯಾರು ನೀಡಿದರು ಎಂಬ ಪ್ರಶ್ನೆಗೆ ಇದುವರೆಗೂ ಪ್ರಧಾನಿ ಮೋದಿ ಮತ್ತು ಬಿಜೆಪಿ ಉತ್ತರಿಸಿಲ್ಲ ಎಂದು ಟೀಕಿಸಿದ್ದಾರೆ.