ನವದೆಹಲಿ: ನಿರೀಕ್ಷೆಯಂತೆ ಇಂದು ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್, ʼಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಯನ್ನು ಮಂಡಿಸಿದ್ದಾರೆ. ಈ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಸಮಾಜವಾದಿ ಪಕ್ಷದ ಸಂಸದ ಧರ್ಮೇಂದ್ರ ಯಾದವ್ ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ಏಕೆ ಮಾಡಲಿಲ್ಲ. ಆಗ ಮಾಡಲು ಸಾಧ್ಯವಾಗದೇ ಇದ್ದದ್ದು ಈಗ ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸದಸ್ಯ ಮನೀಷ್ ತಿವಾರಿ, ಇದು ಪ್ರಜಾಪ್ರಭುತ್ವ ವಿರೋಧಿ ಮಸೂದೆ. ಇದು ಒಕ್ಕೂಟ ವ್ಯವಸ್ಥೆಯ ವಿರೋಧಿ ಮಸೂದೆಯಾಗಿದ್ದು ಸಂವಿಧಾನದ ಮೇಲಿನ ದಾಳಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಸೂದೆಗೆ ಕಾಂಗ್ರೆಸ್, ಎಸ್ ಪಿ, ಡಿಎಂಕೆ, ಟಿಎಂಸಿ ಪಕ್ಷಗಳೂ ವಿರೋಧ ವ್ಯಕ್ತಪಡಿಸಿವೆ.