‘ಒಂದು ರಾಷ್ಟ್ರ ಒಂದು ಚುನಾವಣೆ’ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ; ತೀವ್ರ ಕಳವಳಕಾರಿ ವಿಚಾರ: ಎನ್ ಎಸ್ ಬೋಸರಾಜು

Most read

ಬೆಂಗಳೂರು: ಯಾವ ರಾಜ್ಯ ಸರ್ಕಾರಗಳ ಜೊತೆಗೂ ಸಮಾಲೋಚನೆ ನಡೆಸದೆ, ವಿರೋಧ ಪಕ್ಷಗಳ ಜೊತೆಗೂ ಚರ್ಚಿಸದೆ ‘ಒಂದು ರಾಷ್ಟ್ರ ಒಂದು ಚುನಾವಣೆ’ ಎಂಬ ದೇಶದ ಮೇಲೆ ಭಾರಿ ಪರಿಣಾಮವನ್ನು ಬೀರುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ತೀವ್ರ ಕಳವಳಕಾರಿ ವಿಚಾರವಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎಂ ಎನ್ ಎಸ್ ಬೋಸರಾಜು ಹೇಳಿದ್ದಾರೆ.

ಈ ಮಸೂದೆಯ ಹಿಂದೆ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ಅಡಗಿದೆ. ಪ್ರಾದೇಶಿಕ ಅಸ್ಮಿತೆಗೆ ಕೊಡಲಿ ಏಟು ಹಾಕುವ ಪ್ರಯತ್ನ ಇದಾಗಿದೆ. ವಿವಿಧತೆಗಳಲ್ಲಿ ಏಕತೆ ಹೊಂದಿರುವ ನಮ್ಮ ದೇಶದ ಸದಾಶಯವನ್ನೇ ಬುಡಮೇಲು ಮಾಡುವ ಚಿಂತನೆ ಇದರ ಹಿಂದಿದೆ. ಏಕಚಕ್ರಾಧಿಪತ್ಯವನ್ನು ಹೇರುವ ದುಷ್ಟ ಆಲೋಚನೆ ಇದಾಗಿದೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ಸಂಪೂರ್ಣ ವಿರುದ್ಧವಾಗಿದ್ದು, ದೇಶದ ಸಾರ್ವಭೌಮತ್ವವನ್ನು ಅಪಾಯಕ್ಕೆ ಒಡ್ಡುವ ಧೋರಣೆಯಾಗಿದೆ ಎಂದಿದ್ದಾರೆ.

ಮತದಾರರ ತಮ್ಮನ್ನು ಆರಿಸದಿದ್ದರೂ ಆಪರೇಷನ್‌ ಕಮಲ ಎಂಬ ಅತ್ಯಂತ ಕೆಳಮಟ್ಟದ ರಾಜಕಾರಣದ ಮೂಲಕ ಕುದುರೆ ವ್ಯಾಪಾರ ನಡೆಸಿ ಬಿಜೆಪಿ ಅಧಿಕಾರವನ್ನು ಕಸಿದುಕೊಳ್ಳುತ್ತಿದೆ. ಆಡಳಿತದಲ್ಲಿ ಸಂಪೂರ್ಣ ವಿಫಲಗೊಂಡರೂ ದೇಶದ ಜನರನ್ನು ಧರ್ಮ ಅಪಾಯದಲ್ಲಿರುವುದಾಗಿ ಹಸಿಹಸಿ ಸುಳ್ಳುಗಳನ್ನು ಬಿತ್ತಿ, ಅಧಿಕಾರವನ್ನು ಪಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಏಕಕಾಲದಲ್ಲಿ ಎಲ್ಲ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ನಡೆಸುವ ಚಿಂತನೆಯು ಪರೋಕ್ಷವಾಗಿ ಸರ್ವಾಧಿಕಾರವನ್ನು ಹೇರಲು ಬಿಜೆಪಿ ಕಂಡುಕೊಂಡಿರುವ ವಾಮಮಾರ್ಗವಾಗಿದೆ ಎಂದು ಕಿಡಿ ಕಾರಿದ್ದಾರೆ.

ಸಂವಿಧಾನ, ಪ್ರಜಾಪ್ರಭುತ್ವ, ರಾಜ್ಯಗಳ ಅಸ್ಮಿತೆಯನ್ನು ಕೊನೆಗೊಳಿಸುವ ಬಿಜೆಪಿ ಯತ್ನಕ್ಕೆ ನಾವು ಅವಕಾಶವನ್ನು ಕೊಡುವುದಿಲ್ಲ. ದಿಟ್ಟ ಹೋರಾಟದ ಮೂಲಕ ಹಿಮ್ಮೆಟ್ಟಿಸುತ್ತೇವೆ. ಅಂತಹ ಬ್ರಿಟಿಷನ್ನೇ ದೇಶದಿಂದ ಒದ್ದು ಓಡಿಸಿದ ಪಕ್ಷ ನಮ್ಮದು. ‘ಒಂದು ರಾಷ್ಟ್ರ ಒಂದು ಚುನಾವಣೆ’ ಬಗ್ಗೆ ಯಾವ ಸದಾಶಯವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇತ್ತೀಚೆಗೆ ನಡೆದ ಮಹಾರಾಷ್ಟ್ರ, ಹರಿಯಾಣ ಎರಡು ರಾಜ್ಯಗಳ ಚುನಾವಣೆಯನ್ನೇ ಏಕಕಾಲದಲ್ಲಿ ಸರಿಯಾಗಿ ನಿರ್ವಹಣೆ ಮಾಡಲಾಗಿಲ್ಲ, ಇಡೀ ಚುನಾವಣೆ ಪ್ರಕ್ರಿಯೆಯೇ ಅಧ್ವಾನದಿಂದ ಕೂಡಿತ್ತು. ಮಹಾರಾಷ್ಟ್ರದ ಫಲಿತಾಂಶದ ಮೇಲೆ ಇಡೀ ದೇಶವೇ ಅನುಮಾನ ವ್ಯಕ್ತಪಡಿಸುತ್ತಿದೆ. ಇವಿಎಂ ಬಳಕೆ ಬಗ್ಗೆ ಸಾಕಷ್ಟು ವಿರೋಧವಿದೆ. ಕೇಂದ್ರ ಚುನಾವಣಾ ಆಯೋಗವೂ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಬೆಟ್ಟದಷ್ಟಿವೆ. ಕೆಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳೇ ಗೋಲ್‌ಮಾಲ್‌ ಮಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇಂತಹ ಹಲವಾರು ದೋಷಗಳಿರುವಾಗ ಈಗಿನ ಚುನಾವಣಾ ವ್ಯವಸ್ಥೆಯನ್ನು ಸುಧಾರಣೆಗೊಳಿಸುವ ನಿಟ್ಟಿನಲ್ಲಿ ಚಿಂತಸಬೇಕೆ ವಿನಃ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳುಗೆಡವುವ ಯತ್ನವನ್ನು ನಡೆಸಬಾರದು ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ 10 ವರ್ಷಗಳಿಂದ ಹತ್ತುಹಲವು ಮಾರಾಕ ನಿರ್ಧಾರಗಳನ್ನು ಕೈಗೊಳ್ಳುತ್ತ ದೇಶದ ಜನತೆಯನ್ನು ಸಂಕಷ್ಟಕ್ಕೆ ದೂಡುತ್ತಿದೆ. ನೋಟು ನಿಷೇಧದಿಂದ ಬಿರುಬಿಸಿಲಲ್ಲಿ ಎಟಿಎಂಗಳ ಮುಂದೆ ಸರದಿ ನಿಂತು ಜನರು ಸಾಯುವಂತೆ ಮಾಡಿದ್ದು, ಕೋವಿಡ್‌ ಸಂದರ್ಭ ದೇಶವನ್ನೇ ಮೌಢ್ಯಕ್ಕೆ ತಳ್ಳಿ ಅಪಾರ ಸಾವುನೋವುಗಳನ್ನು ಸಂಭವಿಸುವಂತೆ ಮಾಡಿದ್ದು, ಅವೈಜ್ಞಾನಿಕ ಜಿಎಸ್‌ಟಿ ಹೇರಿ ಬಡವರು, ಮಧ್ಯಮ ವರ್ಗದವರು ತತ್ತರಿಸುವಂತೆ ಮಾಡಿದ್ದು, ನಿರುದ್ಯೋಗ ತಾಂಡವವಾಡುತ್ತಿದ್ದರೂ ಯುವಕರಿಗೆ ಬರೆ ಹಾಕುವಂತೆ ಅಗ್ನಿವೀರರೆಂಬ ಬಿರುದುಕೊಟ್ಟಿದ್ದು ಹೀಗೆ ಸಾಲು ಸಾಲು ಅವಾಂತರಗಳನ್ನು ಎಸಗಿರುವ ಮೋದಿ ಸರ್ಕಾರ ಈಗ ಮತ್ತೊಂದು ಅನಾಹುತವನ್ನು ಮಾಡಲು ಹೊರಟಿದೆ. ಇದಕ್ಕೆ ನಾವು ಅವಕಾಶವನ್ನು ಕೊಡುವುದಿಲ್ಲ. ಅಗತ್ಯ ಬಿದ್ದರೆ ಕೇರಳ ಸರ್ಕಾರದಂತೆ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವವನ್ನು ವಿರೋಧಿಸಿ ಗೊತ್ತುವಳಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.

More articles

Latest article