ಬೆಂಗಳೂರು: “ವರ್ಡ್ ಪವರ್ ಈಸ್ ವರ್ಲ್ಡ್ ಪವರ್ (ಮಾತಿನ ಶಕ್ತಿಯೇ ವಿಶ್ವದ ಶಕ್ತಿ). ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶ, ರಾಷ್ಟ್ರಪತಿ, ನಾನು ಸೇರಿದಂತೆ ಯಾರೇ ಆದರೂ ಕೊಟ್ಟ ಮಾತಿಗೆ ತಕ್ಕಂತೆ ನಡೆದು ಸಾಗಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.
ಸಂವಿಧಾನ ಪ್ರಜಾಪ್ರಭುತ್ವದ ಆತ್ಮ:
“ಸಂವಿಧಾನ ಪ್ರಜಾಪ್ರಭುತ್ವದ ಆತ್ಮ. ಸಂವಿಧಾನಕ್ಕೆ ನಮ್ಮನ್ನು ನಾವು ಸಮರ್ಪಿಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಂಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರ ಎದೆಯ ಮೇಲೆ ತ್ರಿವರ್ಣ ಧ್ವಜ, ಎದೆಯೊಳಗೆ ಸಂವಿಧಾನವಿದೆ. ನೂರು ವರ್ಷಗಳ ಹಿಂದೆ ಮಹಾತ್ಮಾ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿದರು. ಗಾಂಧೀಜಿ ಅವರ ನೇತೃತ್ವದ ಬೆಳಗಾವಿ ಎಐಸಿಸಿ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ ಬೆಳಗಾವಿಯಲ್ಲಿ ನಾವು ಗಾಂಧಿ ಭಾರತ ಕಾರ್ಯಕ್ರಮ ಮಾಡಿದೆವು. ಆಗ ನಡೆಸಿದ ಸಮಾವೇಶಕ್ಕೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಹೆಸರಿಟ್ಟು, ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದೇವೆ” ಎಂದು ತಿಳಿಸಿದರು.
224 ಕ್ಷೇತ್ರಗಳಲ್ಲಿ ಲೀಗಲ್ ಬ್ಯಾಂಕ್ ಸ್ಥಾಪಿಸಲು ನಿರ್ದೇಶನ:
“ಎರಡು ತಿಂಗಳ ಹಿಂದೆ ದೆಹಲಿಯಲ್ಲಿ ಎಐಸಿಸಿ ಕಾನೂನು ಘಟಕದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಂದು ರಾಹುಲ್ ಗಾಂಧಿ ಅವರು ಮನದಾಳದ ಮಾತುಗಳನ್ನಾಡಿದ್ದರು. ನೀವೆಲ್ಲರೂ ಅದನ್ನು ಕೇಳಬೇಕು. ಮತಕಳ್ಳತನ ನಡೆಯುತ್ತಿರುವ ಸಧ್ಯದ ಪರಿಸ್ಥಿತಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಬ್ಲಡ್ ಬ್ಯಾಂಕ್ ಮಾದರಿಯಲ್ಲಿ ಲೀಗಲ್ ಬ್ಯಾಂಕ್ ಸ್ಥಾಪಿಸಬೇಕು ಎಂದು ಕರೆ ನೀಡಿದರು. ನಾನು ರಾಜ್ಯ ಕಾನೂನು ಘಟಕದ ಅಧ್ಯಕ್ಷರಾದ ಧನಂಜಯ ಅವರಿಗೆ ಆರು ತಿಂಗಳು ಕಾಲಾವಕಾಶ ನೀಡಿದ್ದು, 224 ಕ್ಷೇತ್ರಗಳಲ್ಲಿ ಕನಿಷ್ಠ 10 ವಕೀಲರಿರುವ ಲೀಗಲ್ ಬ್ಯಾಂಕ್ ಅನ್ನು ಸ್ಥಾಪಿಸಬೇಕು ಎಂದು ನಿರ್ದೇಶನ ನೀಡಿದ್ದೇನೆ. ಈ ವಕೀಲರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷದ ಆಚಾರ ವಿಚಾರ ರಕ್ಷಣೆಗೆ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಸಮಿತಿ ರಚಿಸಬೇಕು” ಎಂದು ತಿಳಿಸಿದರು.
“ವಕೀಲರು ಏನೇ ವಾದ ಮಾಡಿದರೂ ಸಂವಿಧಾನ ಪುಸ್ತಕ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಮೇಲೆ ಮಂಡಿಸುತ್ತಾರೆ. ಇದೆಲ್ಲವನ್ನು ಕೊಟ್ಟಿರುವುದು ಕಾಂಗ್ರೆಸ್ ಪಕ್ಷ. ಇದನ್ನು ಉಳಿಸಿಕೊಳ್ಳಬೇಕು. ಅದಕ್ಕಾಗಿ ಲೀಗಲ್ ಬ್ಯಾಂಕ್ ಸ್ಥಾಪಿಸಬೇಕಿದೆ” ಎಂದರು.
ಕಾಲೇಜು ಚುನಾವಣೆ ನಡೆಸುವ ಬಗ್ಗೆ ಅಧ್ಯಯನಕ್ಕೆ ಸಮಿತಿ ರಚನೆ:
“ನನ್ನ ಹೋರಾಟ ಗಮನಿಸಿದ ಪಕ್ಷವು ನಾನು ಅಂತಿಮ ವರ್ಷದ ಪದವಿಯಲ್ಲಿದ್ದಾಗಲೇ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿತು. ಹೀಗಾಗಿ ನನಗೆ ವಕೀಲನಾಗುವ ಹಾಗೂ ಪದವಿ ಪಡೆಯುವ ಅವಕಾಶ ಸಿಗಲಿಲ್ಲ. ನಮ್ಮ ಕಾಲದಲ್ಲಿ ವಿದ್ಯಾರ್ಥಿ ನಾಯಕತ್ವ ಬಲಿಷ್ಠವಾಗಿತ್ತು. ಈಗ ಅದು ಇಲ್ಲವಾಗಿದೆ. ನಾನು, ವಿನಯ್ ಕುಮಾರ್ ಸೊರಕೆ, ವೆಂಕಟೇಶ್, ರೇವಣ್ಣ ಅವರೆಲ್ಲ ವಿದ್ಯಾರ್ಥಿ ನಾಯಕತ್ವದಿಂದ ಬಂದವರು. ನಮಗೆ ಕಾಲೇಜು ಚುನಾವಣೆ ಎಂದರೆ ದೊಡ್ಡ ಹೋರಾಟ. ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ರಾಹುಲ್ ಗಾಂಧಿ ಅವರು ಪತ್ರ ಬರೆದು, ಕಾಲೇಜು ಚುನಾವಣೆ ಬಗ್ಗೆ ಆಲೋಚಿಸುವಂತೆ ಮಾರ್ಗದರ್ಶನ ನೀಡಿದ್ದಾರೆ. ಈ ಹಿಂದೆ ವಿದ್ಯಾರ್ಥಿ ಚುನಾವಣೆಗಳಲ್ಲಿ ಇದ್ದ ಕ್ರಿಮಿನಲ್ ಚಟುವಟಿಕೆ ನಿಯಂತ್ರಿಸಿ ಹೇಗೆ ಕಾಲೇಜು ಚುನಾವಣೆ ನಡೆಸಬಹುದು, ಇದರ ಸಾಧಕ, ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಗುವುದು. ನಾಯಕರನ್ನು ಹುಟ್ಟು ಹಾಕುವವನೆ ನಿಜವಾದ ನಾಯಕ ಎಂದು ನಂಬಿರುವವರು ನಾವು. ಇದಕ್ಕಾಗಿ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ನಮ್ಮ ಸಂವಿಧಾನ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಜಾತ್ಯಾತೀತತೆ, ಧರ್ಮ ಉಳಿಸಿಕೊಳ್ಳುವ ಹಕ್ಕನ್ನು ಕೊಟ್ಟಿದೆ. ಸಂವಿಧಾನದ ಜಾತ್ಯಾತೀತ ತತ್ವಕ್ಕೆ ನಮ್ಮ ಪಕ್ಷ ಬದ್ಧವಾಗಿದೆ” ಎಂದು ತಿಳಿಸಿದರು.
ಪೊನ್ನಣ್ಣಗೆ ಟಿಕೆಟ್ ನೀಡಬೇಡಿ ಎಂದಿದ್ದ ಬಿಜೆಪಿ ನಾಯಕ:
“ರಾಜ್ಯ ಕಾನೂನು ಘಟಕಕ್ಕೆ ಎ.ಎಸ್ ಪೊನ್ನಣ್ಣ ಅವರನ್ನು ಆಯ್ಕೆ ಮಾಡುವಾಗ ಅನೇಕರು ಅವರ ತಂದೆ ಆರ್ ಎಸ್ಎಸ್ ಹಾಗೂ ಬಿಜೆಪಿ ಹಿನ್ನಲೆ ಹೊಂದಿದ್ದಾರೆ ಎಂದು ಪ್ರಶ್ನೆ ಮಾಡಿದರು. ಆದರೆ ನಾನು ಅವರು ಕಾಂಗ್ರೆಸ್ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದೆ. ಅವರು ಪಕ್ಷದ ಪರವಾಗಿ ಕೆಲಸ ಮಾಡಿದರು. ಈಗ ವಿರಾಜಪೇಟೆಯಲ್ಲಿ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿದ್ದಾರೆ. ಅನೇಕ ಕಾನೂನು ಸಂಕಟಗಳಲ್ಲಿ ನಮಗೆ ಸಹಾಯ ಮಾಡುತ್ತಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಚುನಾವಣೆಗೂ ಮುನ್ನ ಸಚಿವರಾಗಿದ್ದ ಬಿಜೆಪಿ ನಾಯಕರೊಬ್ಬರು ನನಗೆ ಕರೆ ಮಾಡಿ, ನನಗೆ ನಿಮ್ಮಿಂದ ಒಂದು ಸಹಾಯವಾಗಬೇಕು ಎಂದು ಹೇಳಿ, ಪೊನ್ನಣ್ಣ ಅವರಿಗೆ ಟಿಕೆಟ್ ನೀಡಬೇಡಿ ಎಂದು ಕೇಳಿದರು. ಆಗ ನಾನು ನಿಮ್ಮ ಸಲಹೆ ನನಗೆ ಶಕ್ತಿ ಕೊಟ್ಟಿದೆ ಎಂದು ಹೇಳಿದೆ” ಎಂದರು.
ನಾನು ಏನೇ ಮಾಡಿದರೂ, ಮಾತನಾಡಿದರೂ ಮಾಧ್ಯಮಗಳು ಬೇರೆ ರೀತಿ ಚರ್ಚೆ ಮಾಡುತ್ತವೆ:
“ನಾನು ಬೇರೆ ವಿಚಾರವಾಗಿ ಮಾತನಾಡಲು ಹೋಗುವುದಿಲ್ಲ. ನಾನು ಏನೇ ಹೇಳಿದರೂ ಅದನ್ನು ಬೇರೆ ರೀತಿ ತಿರುಗಿಸಿ ಅರ್ಧ ಗಂಟೆ ಚರ್ಚೆ ಮಾಡುತ್ತಾರೆ. ನಾನು ಇಂದಿರಾ ಗಾಂಧಿ ಅವರ ಕಾರ್ಯಕ್ರಮದ ವೇಳೆ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿದೆ. ಅದರ ಮೇಲೆ ಅರ್ಧ ಗಂಟೆ ಚರ್ಚೆ ಮಾಡಿದರು. ನಂತರ ವಿಶ್ವ ಮೀನುಗಾರಿಕೆ ದಿನದ ಕಾರ್ಯಕ್ರಮದಲ್ಲಿ ನನಗೆ ಗಾಳ ಹಾಕಿ ಮೀನು ಹಿಡಿಯುವುದು ಗೊತ್ತು ಎಂದು ಹೇಳಿದ್ದನ್ನು ಮತ್ತೊಂದು ರೀತಿ ಚರ್ಚೆ ಮಾಡಿದರು. ನಾನು ಆ ಕಡೆ ನೋಡಿದರೆ ಒಂದು ರೀತಿ, ಈ ಕಡೆ ನೋಡಿದರೆ ಒಂದು ರೀತಿ, ದಿಟ್ಟಿಸಿ ನೋಡಿದರೆ ಮತ್ತೊಂದು ಅರ್ಥ, ನಕ್ಕರೆ ಮಗದೊಂದು ಅರ್ಥ ಕಲ್ಪಿಸುತ್ತಿದ್ದಾರೆ. ಅವರಿಗೂ ಒಳ್ಳೆಯ ಟಿಆರ್ ಪಿ ಸಿಗುತ್ತಿದೆ. ನೀವುಗಳು ಟಿಆರ್ ಪಿಯಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದೀರಿ” ಎಂದರು ಚಟಾಕಿ ಹಾರಿಸಿದರು.
“ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸರಿ ಕೈ ಗಟ್ಟಿಯಾಯಿತು. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಮಾನತೆ ಹಾಗೂ ಗ್ಯಾರಂಟಿ ಯೋಜನೆಗಳನ್ನು ನೀಡಿ ಬದುಕಿಗೆ ರಕ್ಷಣೆ ನೀಡಿದೆ” ಎಂದು ತಿಳಿಸಿದರು.

